ಬಿಜೆಪಿ-ಕಾಂಗ್ರೆಸ್‌ ಮಧ್ಯೆ ಮುತಾಲಿಕ್‌ ಆಟ: ಸುನಿಲ್‌ ಅಂತರದಲ್ಲಿ ಕುಸಿತವೆಷ್ಟು?

By Kannadaprabha News  |  First Published May 3, 2023, 9:02 AM IST

ಭವಿಷ್ಯದ ಮುಖ್ಯಮಂತ್ರಿ ಎಂದು ಬೆಂಬಲಿಗರಿಂದ ಕರೆಯಲ್ಪಡುತ್ತಿರುವ ಸಚಿವ ವಿ.ಸುನಿಲ್‌ ಕುಮಾರ್‌ 4ನೇ ಬಾರಿ ಕಣಕ್ಕಿಳಿದಿರುವ ಕಾರ್ಕಳ ವಿಧಾನಸಭಾ ಕ್ಷೇತ್ರ ಈ ಬಾರಿ ರಾಜ್ಯದ ಸ್ಟಾರ್‌ವಾರ್‌ ಕ್ಷೇತ್ರಗಳಲ್ಲೊಂದಾಗಿ ಗಮನ ಸೆಳೆಯುತ್ತಿದೆ. 


ಸುಭಾಶ್ಚಂದ್ರ ಎಸ್‌.ವಾಗ್ಳೆ

ಕಾರ್ಕಳ (ಮೇ.03): ಭವಿಷ್ಯದ ಮುಖ್ಯಮಂತ್ರಿ ಎಂದು ಬೆಂಬಲಿಗರಿಂದ ಕರೆಯಲ್ಪಡುತ್ತಿರುವ ಸಚಿವ ವಿ.ಸುನಿಲ್‌ ಕುಮಾರ್‌ 4ನೇ ಬಾರಿ ಕಣಕ್ಕಿಳಿದಿರುವ ಕಾರ್ಕಳ ವಿಧಾನಸಭಾ ಕ್ಷೇತ್ರ ಈ ಬಾರಿ ರಾಜ್ಯದ ಸ್ಟಾರ್‌ವಾರ್‌ ಕ್ಷೇತ್ರಗಳಲ್ಲೊಂದಾಗಿ ಗಮನ ಸೆಳೆಯುತ್ತಿದೆ. ಪ್ರಖರ ಹಿಂದುತ್ವವಾದಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಇದ್ದಕ್ಕಿದ್ದಂತೆ ಯಾವುದೋ ಪ್ರೇರಣೆ ಎಂಬಂತೆ ಕಾರ್ಕಳವನ್ನೇ ಆರಿಸಿಕೊಂಡು, ಇಲ್ಲಿ ಸ್ವತಂತ್ರವಾಗಿ ಸ್ಪರ್ಧೆಗಿಳಿದಿದ್ದಾರೆ. ಭ್ರಷ್ಟಾಚಾರ ಮತ್ತು ಹಿಂದುತ್ವ ಎಂಬೆರಡು ಕಾರಣಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಅವರಿಬ್ಬರ ನಡುವೆ ಕಾಂಗ್ರೆಸ್‌ ಪಕ್ಷದ ಗುತ್ತಿಗೆದಾರ ಉದಯಕುಮಾರ್‌ ಶೆಟ್ಟಿಮುನಿಯಾಲು ಅದೃಷ್ಟಪರೀಕ್ಷೆಗಿಳಿದಿದ್ದಾರೆ. 

Tap to resize

Latest Videos

undefined

ಇಬ್ಬರು ಹಿಂದುತ್ವವಾದಿಗಳ ನಡುವೆ ಬಿಜೆಪಿ ಮತಗಳು ಹಂಚಿ ಹೋಗುವ ಸಂಭವದ ನಡುವೆ, ಅವರು ಸಾಂಪ್ರದಾಯಿಕ ಕಾಂಗ್ರೆಸ್‌ ಮತಗಳನ್ನು ಕ್ರೋಢೀಕರಿಸುವ ಪ್ರಯತ್ನ ನಡೆಸಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಕದನ ನಡೆಯುತ್ತಿದ್ದರೂ ನಡುವೆ, ನಾನೂ ಇದ್ದೀನಿ ಎಂದು ಮುತಾಲಿಕ್‌ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಮುತಾಲಿಕ್‌ ಬಿಜೆಪಿಯ ಎಷ್ಟುಮತಗಳನ್ನು ಒಡೆಯುತ್ತಾರೆ ಎಂಬುದರ ಮೇಲೆ ಈ ಬಾರಿ ಕಾರ್ಕಳದ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆ ಇದೆ. ಯಾವುದೇ ಸ್ಟಾರ್‌ ಪ್ರಚಾರಕರನ್ನು ಕರೆಸದೇ ಖುದ್ದು ತಾವೇ ಗ್ರಾಮಗ್ರಾಮಗಳಲ್ಲಿ ಪ್ರಚಾರಕ್ಕಿಳಿದಿರುವ ಸುನಿಲ್‌ ಕುಮಾರ್‌, ಪ್ರತಿ ಬೂತ್‌ಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಬಿಜೆಪಿಗೆ ಸೇರಿಸಿಕೊಂಡು, ಕಾಂಗ್ರೆಸ್‌ ಅನ್ನು ದುರ್ಬಲಗೊಳಿಸುತ್ತಿದ್ದಾರೆ. 

ಯಡಿಯೂರಪ್ಪ ಕಾಲಿಟ್ಟ ಕಡೆ ಮಳೆ: ಸಚಿವ ಸೋಮಣ್ಣ ಬಣ್ಣನೆ

ಮುತಾಲಿಕ್‌ ಒಡೆಯುತ್ತಿರುವ ಬಿಜೆಪಿಯನ್ನು ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ 3 ಸಾವಿರ ಕೋಟಿ ರು.ಗೂ ಹೆಚ್ಚು ಅಭಿವೃದ್ಧಿ ಕಾಮಗಾರಿ, 236 ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಯಕ್ಷ ರಂಗಾಯಣ, ಪರಶುರಾಮ ಥೀಮ್‌ ಪಾರ್ಕ್, ಆಡಳಿತ ಸೌಧ, 2600 ಹಕ್ಕು ಪತ್ರ ವಿತರಣೆ, ನ್ಯಾಯಾಲಯ ಕಟ್ಟಡ ಇತ್ಯಾದಿ ಸಾಧನೆಗಳ ಜೊತೆಗೆ ಮುಂದೆ ಸ್ವರ್ಣ ಕಾರ್ಕಳ ನಿರ್ಮಾಣದ ಕನಸನ್ನು ಜನರ ಮುಂದಿಟ್ಟು ಮತ ಕೇಳುತ್ತಿದ್ದಾರೆ.

ಅತ್ತ ಕಾಂಗ್ರೆಸ್‌ನಲ್ಲಿ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಜಿಪಂ ಮಾಜಿ ಸದಸ್ಯ ಮಂಜುನಾಥ ಪೂಜಾರಿ ಅವರು ಕಾರ್ಕಳದ ಕಾಂಗ್ರೆಸ್‌ ಟಿಕೆಟ್‌ ಮಾರಾಟವಾಗಿದೆ ಎಂದು ನೇರವಾಗಿ ಸ್ವಪಕ್ಷದ ವಿರುದ್ಧವೇ ಆರೋಪಿಸಿದ್ದಾರೆ. ಇದು ಕಾಂಗ್ರೆಸ್‌ಗೆ ಮುಜುಗರಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಕಾರ್ಕಳದಲ್ಲಿ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಮಾಜಿ ಸಿಎಂ ವೀರಪ್ಪ ಮೊಯ್ಲಿ ಕೂಡ ಕಾರ್ಕಳಕ್ಕೆ ಬಾರದೇ ದೂರ ಉಳಿದಿದ್ದಾರೆ. ಈ ನಡುವೆ ಮುತಾಲಿಕ್‌ ಅವರ ಹಿಂದುತ್ವದ ಟ್ರಂಪ್‌ ಕಾರ್ಡ್‌ ವರ್ಕೌಟ್‌ ಆದರೆ, ಸುನಿಲ್‌ ಕುಮಾರ್‌ ಕಳೆದ ಬಾರಿ ಗೆದ್ದಿದ್ದ 42,566 ಮತಗಳ ಅಂತರದಲ್ಲಿ ಒಂದಿಷ್ಟುಕುಸಿತ ಆಗಬಹುದು. ಇದು ಕಾಂಗ್ರೆಸ್‌ಗೆ ಲಾಭವೂ ಆಗಬಹುದು.

ಮೂರು ದಶಕಗಳ ಹಿಂದೆ ಒಂದೆರಡು ಸಾವಿರದಷ್ಟಿದ್ದ ಮಂಗಳವಾದ್ಯ ನುಡಿಸುವ ದೇವಾಡಿಗ ಜನಾಂಗದ ವೀರಪ್ಪ ಮೊಯ್ಲಿ ಅವರನ್ನು ಜಾತಿ, ಧರ್ಮದ ಹಂಗಿಲ್ಲದೆ 6 ಬಾರಿ ಗೆಲ್ಲಿಸಿದ, ಸಿಎಂ ಮಾಡಿದ ಕ್ಷೇತ್ರ ಎಂಬ ಹೆಗ್ಗಳಿಕೆ ಇದ್ದ ಕಾರ್ಕಳದ ಎಣ್ಣೆಹೊಳೆ ನದಿಯಲ್ಲಿ ಸಾಕಷ್ಟುನೀರು ಹರಿದಿದೆ. ಜಾತಿ ನೋಡಿ ಮತ ಹಾಕುವ ಸಂಪ್ರದಾಯ ಇಲ್ಲೂ ಆರಂಭವಾಗಿದೆ. ಬಿಲ್ಲವ, ಬಂಟ, ಬ್ರಾಹ್ಮಣ, ಅಲ್ಪಸಂಖ್ಯಾತ ಜಾತಿ ಲೆಕ್ಕಾಚಾರ ಅನಿವಾರ್ಯವಾಗಿದೆ. ಬಿಲ್ಲವ ಸಮುದಾಯದ ಸುನಿಲ್‌ ಕುಮಾರ್‌, ಬಂಟ ಸಮುದಾಯದ ಉದಯಕುಮಾರ್‌ ಹೆಗ್ಡೆ ಅವರಲ್ಲಿ ಯಾರು ಗೆಲ್ಲಬೇಕಾದರೂ ಈ ಕ್ಷೇತ್ರದಲ್ಲಿ ಸುಮಾರು 35 ಸಾವಿರದಷ್ಟಿರುವ ಬ್ರಾಹ್ಮಣರು, 10 ಸಾವಿರದಷ್ಟಿರುವ ಜೈನರು ಮನಸ್ಸು ಮಾಡಬೇಕು.

ಜಾತಿ ಲೆಕ್ಕಚಾರ: ಬಿಲ್ಲವರು 45 ಸಾವಿರ, ಬಂಟರು, 40 ಸಾವಿರ, ಬ್ರಾಹ್ಮಣರು 35 ಸಾವಿರ, ಅಲ್ಪಸಂಖ್ಯಾತರು 28 ಸಾವಿರ, ಹಿಂ.ವರ್ಗ 25 ಸಾವಿರ, ಎಸ್ಸಿ- ಎಸ್ಟಿ10 ಸಾವಿರದಷ್ಟು ಮತದಾರಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಭ್ರಷ್ಟಾಚಾರ ರಹಿತ ಸರ್ಕಾರ ಕಾಂಗ್ರೆಸ್‌ನ ಗುರಿ: ಡಿ.ಕೆ.ಶಿವಕುಮಾರ್‌

2018ರ ಫಲಿತಾಂಶ
ವಿ. ಸುನಿಲ್‌ ಕುಮಾರ್‌ (ಬಿಜೆಪಿ) 91,245
ಗೋಪಾಲ ಭಂಡಾರಿ (ಕಾಂಗ್ರೆಸ್‌) 48,679

click me!