ಧ್ರುವನಾರಾಯಣ ಪುತ್ರಗೆ ಅನುಕಂಪ ‘ಕಾಂಗ್ರೆಸ್‌’ ಹಿಡಿಯುವುದೇ?: ಬಿಜೆಪಿಯಿಂದ ಹರ್ಷವರ್ಧನ್‌ ಸ್ಪರ್ಧೆ

By Kannadaprabha News  |  First Published Mar 24, 2023, 9:38 AM IST

ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ನಂಜನಗೂಡು ಕ್ಷೇತ್ರದಿಂದ ಬಿಜೆಪಿಯ ಹಾಲಿ ಶಾಸಕ, ಬಿ.ಹರ್ಷವರ್ಧನ್‌ ಅವರು ಮತ್ತೊಮ್ಮೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಕಾಂಗ್ರೆಸ್‌ನಿಂದ ಮಾಜಿ ಸಂಸದ ದಿ. ಆರ್‌.ಧ್ರುವನಾರಾಯಣ ಅವರ ಪುತ್ರ ಸ್ಪರ್ಧಿಸುವುದು ಬಹುತೇಕ ಖಚಿತ. 


ಅಂಶಿ ಪ್ರಸನ್ನಕುಮಾರ್‌

ಮೈಸೂರು (ಮಾ.24): ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ನಂಜನಗೂಡು ಕ್ಷೇತ್ರದಿಂದ ಬಿಜೆಪಿಯ ಹಾಲಿ ಶಾಸಕ, ಬಿ.ಹರ್ಷವರ್ಧನ್‌ ಅವರು ಮತ್ತೊಮ್ಮೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಕಾಂಗ್ರೆಸ್‌ನಿಂದ ಮಾಜಿ ಸಂಸದ ದಿ. ಆರ್‌.ಧ್ರುವನಾರಾಯಣ ಅವರ ಪುತ್ರ ಸ್ಪರ್ಧಿಸುವುದು ಬಹುತೇಕ ಖಚಿತ. ಹರ್ಷವರ್ಧನ್‌ ಅವರು ಚಾಮರಾಜನಗರದ ಹಾಲಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಅವರ ಅಳಿಯ. ಇಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್‌.ಧ್ರುವನಾರಾಯಣ ಹಾಗೂ ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪನವರು ಪ್ರಬಲ ಪೈಪೋಟಿ ನಡೆಸಿದ್ದರು. 

Tap to resize

Latest Videos

ಧ್ರುವನಾರಾಯಣ ಅವರು ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದು, ಅನುಕಂಪದ ಲಾಭ ಪಡೆಯುವ ಉದ್ದೇಶದಿಂದ ಧ್ರುವನಾರಾಯಣ ಅವರ ಪುತ್ರ ದರ್ಶನ್‌ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ನಾಯಕರು ಮುಂದಾಗಿದ್ದಾರೆ. ಜೆಡಿಎಸ್‌ನಿಂದ ಆರ್‌.ಮಾದೇಶ್‌ ಹಾಗೂ ಬೆಳವಾಡಿ ಶಿವಕುಮಾರ್‌ ಟಿಕೆಟ್‌ ಆಕಾಂಕ್ಷಿಗಳು. 1952ರಲ್ಲಿ ದ್ವಿ ಸದಸ್ಯ ಕ್ಷೇತ್ರವಾಗಿದ್ದಾಗ ಪಕ್ಷೇತರರಾಗಿ ಸ್ಪರ್ಧಿಸಿದ್ದ ಹೆಜ್ಜಿಗೆ ಎಂ.ಲಿಂಗಣ್ಣ ಹಾಗೂ ಕಾಂಗ್ರೆಸ್‌ನ ಎಂ.ಮಾದಯ್ಯ ವಿಧಾನಸಭೆಗೆ ಆಯ್ಕೆಯಾದರು. 1957ರಲ್ಲಿ ಇದು ಏಕಸದಸ್ಯ ಕ್ಷೇತ್ರವಾಯಿತು. ಆಗ ಕಾಂಗ್ರೆಸ್‌ನ ಪಿ.ಮಹದೇವಯ್ಯ ಆಯ್ಕೆಯಾದರು. 

ದಾವಣಗೆರೆ ಬಿಜೆಪಿ ಮಹಾಸಂಗಮಕ್ಕೆ ನಾಳೆ ಮೋದಿ: 10 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ

ಅವರ ನಿಧನದಿಂದ ನಡೆದ ಉಪ ಚುನಾವಣೆಯಲ್ಲಿ ಪಿಎಸ್‌ಪಿಯ ಜೆ.ಬಿ.ಮಲ್ಲಾರಾಧ್ಯ ಆಯ್ಕೆಯಾದರು. 1962ರಲ್ಲಿ ಕಾಂಗ್ರೆಸ್‌ನ ಎನ್‌. ರಾಚಯ್ಯ, 1967 ರಲ್ಲಿ ಪಕ್ಷೇತರರಾದ ಎಲ್‌.ಶ್ರೀಕಂಠಯ್ಯ, 1972ರಲ್ಲಿ ಕಾಂಗ್ರೆಸ್‌ ಹಾಗೂ 1978ರಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಕೆ.ಬಿ.ಶಿವಯ್ಯ ಸತತ ಎರಡು ಬಾರಿ ಆಯ್ಕೆಯಾದರು. 1983ರಲ್ಲಿ ಕಾಂಗ್ರೆಸ್‌ನ ಎಂ.ಮಹದೇವ್‌, 1985ರಲ್ಲಿ ಜನತಾಪಕ್ಷದ ಡಿ.ಟಿ.ಜಯಕುಮಾರ್‌, 1989ರಲ್ಲಿ ಕಾಂಗ್ರೆಸ್‌ನ ಎಂ.ಮಹದೇವ್‌, 1994ರಲ್ಲಿ ಜನತಾದಳದ ಡಿ.ಟಿ.ಜಯಕುಮಾರ್‌, 1999ರಲ್ಲಿ ಕಾಂಗ್ರೆಸ್‌ನ ಎಂ.ಮಹದೇವ್‌, 2004ರಲ್ಲಿ ಜೆಡಿಎಸ್‌ನ ಡಿ.ಟಿ.ಜಯಕುಮಾರ್‌ ಆಯ್ಕೆಯಾದರು.

ನಂಜನಗೂಡು ತಾಲೂಕು ಈ ಹಿಂದೆ ನಂಜನಗೂಡು, ಟಿ.ನರಸೀಪುರ ಹಾಗೂ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿ ಹೋಗಿತ್ತು. ಈಗಲೂ ಕೂಡ ನಂಜನಗೂಡು ಹಾಗೂ ವರುಣ ಕ್ಷೇತ್ರಗಳಲ್ಲಿ ಹಂಚಿ ಹೋಗಿದೆ. ನಂಜನಗೂಡು ಕ್ಷೇತ್ರದಿಂದ ತಲಾ ಮೂರು ಬಾರಿ ಆಯ್ಕೆಯಾಗಿರುವ ಡಿ.ಟಿ.ಜಯಕುಮಾರ್‌, ಎಂ.ಮಹದೇವ್‌, ತಲಾ ಎರಡು ಬಾರಿ ಆಯ್ಕೆಯಾಗಿರುವ ಕೆ.ಬಿ.ಶಿವಯ್ಯ, ವಿ.ಶ್ರೀನಿವಾಸಪ್ರಸಾದ್‌ ಸಚಿವರಾಗುವ ಅವಕಾಶ ಕೂಡ ಪಡೆದರು. ಶ್ರೀನಿವಾಸಪ್ರಸಾದ್‌ ಐದು ಬಾರಿ ಸಂಸದರಾಗಿ, ಕೇಂದ್ರದಲ್ಲಿಯೂ ಸಚಿವರಾಗಿ ಕೆಲಸ ಮಾಡಿದ್ದಾರೆ.

ಕ್ಷೇತ್ರ ಹಿನ್ನೆಲೆ: ಶ್ರೀಕಂಠೇಶ್ವರ ನೆಲೆ ನಿಂತ ಸ್ಥಾನ, ದಕ್ಷಿಣ ಕಾಶಿ ಎಂದೇ ಹೆಸರಾದ ನಂಜನಗೂಡು ಕ್ಷೇತ್ರ, ಕಪಿಲಾ ನದಿಯ ಅಸುಪಾಸು ವ್ಯಾಪಿಸಿಕೊಂಡಿದೆ. ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಈ ಕ್ಷೇತ್ರ ಅಸ್ತಿತ್ವದಲ್ಲಿದೆ. ಮೊದಲ ಬಾರಿ ದ್ವಿಸದಸ್ಯ, ನಂತರ ಏಕ ಸದಸ್ಯ ಕ್ಷೇತ್ರವಾಯಿತು. ಮೊದಲಿಗೆ ಸಾಮಾನ್ಯವಾಗಿದ್ದ ಈ ಕ್ಷೇತ್ರ 2008ರಿಂದ ಪರಿಶಿಷ್ಟಜಾತಿಗೆ ಮೀಸಲಾಗಿದೆ. ಬಳಿಕ ನಡೆದ ಚುನಾವಣೆಗಳಲ್ಲಿ 2008 ಹಾಗೂ 2013ರಲ್ಲಿ ಕಾಂಗ್ರೆಸ್‌ನ ವಿ.ಶ್ರೀನಿವಾಸಪ್ರಸಾದ್‌ ಸತತ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. 2017ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಲೆ ಕೇಶವಮೂರ್ತಿ ಜಯಭೇರಿ ಬಾರಿಸಿದರು. 2018ರಲ್ಲಿ ಬಿಜೆಪಿಯ ಬಿ.ಹರ್ಷವರ್ಧನ್‌ ಗೆಲುವಿನ ನಗೆ ಬೀರಿದ್ದಾರೆ.

ಶಶಿಕಲಾಗೆ ವಿಶೇಷ ಸೌಲಭ್ಯ ಕೇಸ್‌: ನಿವೃತ್ತ ಡಿಜಿಪಿ ಸತ್ಯನಾರಾಯಣ ಪಾರು

ಜಾತಿ ಲೆಕ್ಕಾಚಾರ: ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ 2,10,051 ಮತದಾರರಿದ್ದು, ವೀರಶೈವ-ಲಿಂಗಾಯತರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಪ್ರಾಬಲ್ಯವಿದೆ. ಪ.ಜಾ.ಯವರು ಶೇ.22ರಷ್ಟು, ಪರಿಶಿಷ್ಟ ಪಂ.ದವರು ಶೇ.13ರಷ್ಟುಇದ್ದಾರೆ. ನಂತರದ ಸ್ಥಾನಗಳಲ್ಲಿ ಉಪ್ಪಾರರು, ಒಕ್ಕಲಿಗರು, ಕುರುಬರು, ಮುಸ್ಲಿ ಸಮುದಾಯದವರು ಬರುತ್ತಾರೆ.

click me!