ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ ಮಾದರಿಯಲ್ಲಿ ದೆಹಲಿಯಲ್ಲಿ 'ಪ್ಯಾರಿ ದಿದಿ ಯೋಜನಾ' ಘೋಷಣೆ ಮಾಡಿದ ಕಾಂಗ್ರೆಸ್. ಚುನಾವಣೆಯಲ್ಲಿ ಗೆದ್ದರೆ ಪ್ರತಿ ತಿಂಗಳು ಗೃಹಿಣಿಯರಿಗೆ 2,500 ರೂ. ನೀಡುವ ಭರವಸೆ.
ನವದೆಹಲಿ: ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಮೂಲಕ ಆ ಯೋಜನೆಗಳನ್ನು ಜಾರಿಗೆ ತಂದು ಅದರಲ್ಲಿ ಯಶಸ್ವಿಯೂ ಆಗಿರುವ ಕಾಂಗ್ರೆಸ್ ಈಗ ದೆಹಲಿ ವಿಧಾನಸಭಾ ಚುನಾವಣೆಯಲ್ಲೂ ಈ ಗ್ಯಾರಂಟಿ ಯೋಜನೆಯ ಪ್ರಯೋಗಕ್ಕೆ ಮುಂದಾಗಿದೆ. ದೆಹಲಿ ಚುನಾವಣೆಯಲ್ಲಿ ಹೆಂಗೆಳೆಯರ ಮನ ಗೆಲ್ಲುವುದಕ್ಕಾಗಿ ಕಾಂಗ್ರೆಸ್ ಈಗ ರಾಜ್ಯದ ಗೃಹಲಕ್ಷ್ಮಿ ಯೋಜನೆಯಂತೆ ದೆಹಲಿಯಲ್ಲಿ 'ಪ್ಯಾರಿ ದಿದಿ ಯೋಜನಾ' ಹೆಸರಿನ ಯೋಜನೆಯನ್ನು ಘೋಷಣೆ ಮಾಡಿದೆ. ಇದರ ಪ್ರಕಾರ ದೆಹಲಿಯಲ್ಲಿ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು ರಾಜ್ಯದಲ್ಲಿರುವ ಗೃಹಣಿಗೆ 2,500 ರೂಪಾಯಿ ಹಣ ಸಹಾಯ ಸಿಗಲಿದೆ.
ದೆಹಲಿ ಮತದಾರರನ್ನು ಸೆಳೆಯುವುದಕ್ಕಾಗಿ ದೆಹಲಿ ಕಾಂಗ್ರೆಸ್ ವಿಭಾಗವೂ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಕೂಡ ತನ್ನ ಸುದ್ದಿಗೋಷ್ಠಿಗೆ ಕರೆದಿದ್ದು, ಅಲ್ಲಿ ಅವರು ಈ ಯೋಜನೆ ಕರ್ನಾಟಕದಲ್ಲಿ ಯಶಸ್ವಿಯಾದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಈ ಯೋಜನೆಯನ್ನು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಕೂಡ ಫಾಲೋ ಮಾಡಿದ್ದಾಗಿ ವಿವರಿಸಿದ್ದಾರೆ.
ದೆಹಲಿಯ ಕಾಂಗ್ರೆಸ್ ಗೆಲುವು ಸಾಧಿಸಿದ ನಂತರ ನಡೆಯುವ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಈ 'ಪ್ಯಾರಿ ದೀದಿ ಯೋಜನೆ'ಗೆ ಅನುಮೋದನೆ ನೀಡಲಾಗುವುದು ಎಂದ ಡಿಕೆ ಶಿವಕುಮಾರ್ ಕರ್ನಾಟಕ ಮಾದರಿಯಲ್ಲಿ ಜನರ ಮತ ಸೆಳೆಯಲು ಮುಂದಾಗಿದ್ದಾರೆ. ಮಹಿಳೆಯರಿಗೆ ಮಾಸಿಕ ಆರ್ಥಿಕ ನೆರವು ಮತ್ತು ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇರಿದಂತೆ ತಮ್ಮ(ಕರ್ನಾಟಕ) ರಾಜ್ಯದಲ್ಲಿ ಜಾರಿಗೆ ತಂದಿರುವ ಕಾಂಗ್ರೆಸ್‌ನ ಕಲ್ಯಾಣ ಮಾದರಿಯ ವಿವರಗಳನ್ನು ಅವರು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡರು. ಅಲ್ಲದೇ ಕಾಂಗ್ರೆಸ್ ದೇಶದ ಯಾವುದೇ ಭಾಗದಲ್ಲಿ ನೀಡಿದ ಯಾವುದೇ ಭರವಸೆಯನ್ನು ಈಡೇರಿಸಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಯೋಜನೆಯಿಂದ ಕರ್ನಾಟಕ ಸರ್ಕಾರ ದಿವಾಳಿಯಾಗುತ್ತದೆ ಎಂದು ಕಾಂಗ್ರೆಸ್‌ನ ಯೋಜನೆಗಳನ್ನು ಬಿಜೆಪಿ ಅಪಹಾಸ್ಯ ಮಾಡಿತ್ತು. ಆದರೆ ನಂತರ ಅದೇ ಕೇಸರಿ ಪಕ್ಷವು ನಂತರ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ ಅದೇ ಮಾದರಿಯನ್ನು ನಕಲು ಮಾಡಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ನೀಡುತ್ತಿರುವ ಆರ್ಥಿಕ ನೆರವು ಬೆಲೆ ಏರಿಕೆಯ ವಿರುದ್ಧ ಹೋರಾಡಲು ಜನರಿಗೆ ಸಹಾಯ ಮಾಡುತ್ತದೆ ಮತ್ತು ತೊಂದರೆಗೊಳಗಾದ ಕುಟುಂಬಗಳಿಗೆ ಪರಿಹಾರವನ್ನು ನೀಡಲು ಸಹಾಯ ಮಾಡುತ್ತದೆ, ಕಾಂಗ್ರೆಸ್ ದಶಕಗಳಿಂದ ದೇಶಕ್ಕೆ ಸೇವೆ ಸಲ್ಲಿಸಿದೆ ಮತ್ತು ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಡಿಕೆಶಿ ಹೇಳಿದ್ದಾರೆ. ದೆಹಲಿ ಕಾಂಗ್ರೆಸ್ ಘಟಕದ ಎಐಸಿಸಿ ಉಸ್ತುವಾರಿ ಖಾಜಿ ನಿಜಾಮುದ್ದೀನ್ ಮಾತನಾಡಿ, ಕಾಂಗ್ರೆಸ್ ತನ್ನ ವಿಶ್ವಾಸಾರ್ಹತೆಯನ್ನು ಹೊಂದಿದೆ ಮತ್ತು ಇಂದು ಅದು ತನ್ನ ಮೊದಲ ಸಾಮಾಜಿಕ ಯೋಜನೆಯನ್ನು ಪ್ರಾರಂಭಿಸುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ ಸಮಾಜ ಕಲ್ಯಾಣಕ್ಕೆ ಹೆಸರುವಾಸಿಯಾಗಿದ್ದು, ಆದರೆ ಬಿಜೆಪಿಯು ಪ್ರತಿ ನಾಗರಿಕರ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡುವುದು ಅಥವಾ ಉದ್ಯೋಗ ಸೃಷ್ಟಿಸುವುದು ಸೇರಿದಂತೆ ಸುಳ್ಳು ಭರವಸೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದರು.