ತೀವ್ರ ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿರುವ ಜಾತಿ ಗಣತಿ ಮಂಡನೆಗೆ ಗುರುವಾರದ ಮುಹೂರ್ತ

By Kannadaprabha News  |  First Published Jan 6, 2025, 8:55 AM IST

ತೀವ್ರ ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿರುವ, ಬಹುನಿರೀಕ್ಷಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿಗಣತಿ) ವರದಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದ್ದು, ವರದಿ ಅನುಷ್ಠಾನ ಕುರಿತು ಸಚಿವ ಸಂಪುಟ ಸಭೆ ಯಾವ ತೀರ್ಮಾನ ಮಾಡಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.


ಬೆಂಗಳೂರು (ಜ.06): ತೀವ್ರ ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿರುವ, ಬಹುನಿರೀಕ್ಷಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿಗಣತಿ) ವರದಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದ್ದು, ವರದಿ ಅನುಷ್ಠಾನ ಕುರಿತು ಸಚಿವ ಸಂಪುಟ ಸಭೆ ಯಾವ ತೀರ್ಮಾನ ಮಾಡಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಜ.9ರಂದು ಸಚಿವ ಸಂಪುಟ ಸಭೆ ನಡೆಯುವ ಸಾಧ್ಯತೆ ಇದೆ. ಈ ವೇಳೆ ಬರೋಬ್ಬರಿ 169 ಕೋಟಿ ರು. ವೆಚ್ಚದಲ್ಲಿ ಸಿದ್ಧಪಡಿಸಿರುವ ಈ ವರದಿಯಲ್ಲಿರುವ ಅಂಶಗಳ ಬಗ್ಗೆ ಮುಖ್ಯಮಂತ್ರಿಗಳು ಸದಸ್ಯರೊಂದಿಗೆ ಚರ್ಚಿಸಲಿದ್ದಾರೆ. 

ಜಾತಿ ಗಣತಿ ವರದಿಯನ್ನು ಸದನದಲ್ಲಿ ಮಂಡಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆಯೂ ಸಂಪುಟ ಸಭೆಯಲ್ಲೇ ತೀರ್ಮಾನಿಸಲಾಗುವುದು. ಆಯೋಗದ ವರದಿಯಾಗಿರುವುದರಿಂದ ಸದನದಲ್ಲಿ ಮಂಡಿಸುವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದರೆ, ಸಚಿವ ಸಂಪುಟ ಸಭೆಯಲ್ಲೇ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದಿಂದ ವರದಿ ಅನುಷ್ಠಾನಕ್ಕೆ ವಿರೋಧ ವ್ಯಕ್ತವಾಗಿದೆ. ಸ್ವಪಕ್ಷೀಯರೇ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಯಾವ ನಡೆ ಅನುಸರಿಸಲಿದೆ ಎಂಬ ಬಗ್ಗೆ ಕುತೂಹಲ ಮೂಡಿದೆ.

Tap to resize

Latest Videos

ಚಲುವರಾಯಸ್ವಾಮಿಗೆ ಅಧಿಕಾರ, ಹಣದ ಮದ ಬಡವರ ಕಷ್ಟ, ವಾಸ್ತವಾಂಶ ಅರ್ಥವಾಗಲ್ಲ: ಎಚ್‌ಡಿಕೆ

10 ವರ್ಷಗಳ ಇತಿಹಾಸ: ಜಾತಿಗಣತಿ ನಡೆಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಅವಧಿಯಲ್ಲಿ (2014) ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಎಚ್.ಕಾಂತರಾಜು ಅವರನ್ನು ನೇಮಿಸಿದ್ದರು. ಹತ್ತು ವರ್ಷಗಳ ಬಳಿಕ ಕಳೆದ ವರ್ಷ ಪೂರ್ಣ ಪ್ರಮಾಣದ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್‌ ಹೆಗ್ಡೆ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಕೆ ಮಾಡಿದೆ. ಇದರ ಬೆನ್ನಲ್ಲೇ ವೀರಶೈವ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ವರದಿ ವೈಜ್ಞಾನಿಕವಾಗಿಲ್ಲ. ಮನೆ-ಮನೆಗೂ ಹೋಗಿ ಸಮೀಕ್ಷೆ ನಡೆಸಿಲ್ಲ. ಜತೆಗೆ ಮೂಲ ವರದಿ ನಾಪತ್ತೆಯಾಗಿದ್ದು, ವರದಿಯಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರ ಸಹಿ ಇಲ್ಲ ಎಂಬೆಲ್ಲ ಆರೋಪಗಳು ಕೇಳಿ ಬಂದಿದ್ದವು. ಸಿದ್ದರಾಮಯ್ಯ ಅವರು ವರದಿ ಜಾರಿಗೆ ಮುಂದಾದಾಗ ಸ್ವಪಕ್ಷೀಯ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದರು. ಮಾಜಿ ಸಂಸದ ಡಿ.ಕೆ. ಸುರೇಶ್‌ ಅವರು ಸಿದ್ದರಾಮಯ್ಯ ಈ ವಿಚಾರದಲ್ಲಿ ಆತುರದ ಕ್ರಮ ಬೇಡ. ಕೇಂದ್ರ ಜಾತಿಗಣತಿ ನಡೆಸಲಿ. ಅದರ ಆಧಾರದ ಮೇಲೆ ಮುಂದುವರೆಯೋಣ ಎಂದು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದರು.

ಪದೇ ಪದೇ ಮುಂದೂಡಿಕೆ: 2024 ಅಕ್ಟೋಬರ್‌ನಲ್ಲಿ ಬಿಜೆಪಿ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌, ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಸೇರಿ ಹಿಂದುಳಿದ ವರ್ಗಗಳ 30 ಮಂದಿ ಸಚಿವರು, ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವರದಿ ಅನುಷ್ಠಾನಕ್ಕೆ ಮನವಿ ಮಾಡಿದ್ದರು. ಈ ವೇಳೆ ಅ.18 ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಮಂಡಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಬಳಿಕ ಅ.25 ರ ಸಂಪುಟದಲ್ಲಿ ಮಂಡಿಸುವುದಾಗಿ ಮುಂದೂಡಿದರು. ಇದರ ಬೆನ್ನಲ್ಲೇ ಉಪ ಚುನಾವಣೆ ನೀತಿ ಸಂಹಿತೆ ಘೋಷಣೆಯಾಗಿದ್ದರಿಂದ ಸಿದ್ದರಾಮಯ್ಯ ಅವರು ತಟಸ್ಥರಾದರು. ಇದೀಗ ಮುಖ್ಯಮಂತ್ರಿ ಕಚೇರಿ ಮೂಲಗಳು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ವರದಿ ಮಂಡನೆಯಾಗಲಿದೆ. ಮೊದಲ ಬಾರಿಗೆ ವರದಿಯನ್ನು ತೆರೆಯಲಿದ್ದು, ಎಲ್ಲಾ ಅಂಶಗಳನ್ನು ಚರ್ಚಿಸಿ ಮುಂದಿನ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ತಿಳಿಸಿವೆ.

ವರದಿ ಅವೈಜ್ಞಾನಿಕವಲ್ಲ-ಕಾಂತರಾಜು: ವರದಿ ಅವೈಜ್ಞಾನಿಕ ಎಂಬ ಟೀಕೆಗಳಿಗೆ ಇತ್ತೀಚೆಗೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜು ಪ್ರತಿಕ್ರಿಯಿಸಿ, ಜಾತಿಗಣತಿ ವರದಿ ಅವೈಜ್ಞಾನಿಕ ಎಂಬುದು ತಪ್ಪು. ಸರ್ವೋಚ್ಚ ನ್ಯಾಯಾಲಯದ ಮಾನದಂಡಗಳನ್ನು ಅನುಸರಿಸಿಯೇ ಸಮೀಕ್ಷೆ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದರು.

- ಸಚಿವ ಸಂಪುಟ ಸಭೆಯ ಮುಂದಕ್ಕೆ ಮೊದಲ ಬಾರಿಗೆ ವರದಿ- ವರದಿಯನ್ನು ಸಂಪುಟ ಒಪ್ಪುತ್ತಾ? ಅಧಿವೇಶನಕ್ಕೆ ಒಯ್ಯುತ್ತಾ?- ಸಿದ್ದು ಸರ್ಕಾರದ ಮುಂದಿನ ನಡೆ ಬಗ್ಗೆ ರಾಜ್ಯದಲ್ಲಿ ಕುತೂಹಲ

- ಜಾತಿಗಣತಿ ಸಲುವಾಗಿ 2014ರಲ್ಲಿ ಸಿದ್ದರಾಮಯ್ಯ ಅವರಿರಿಂದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಕಾಂತರಾಜು ನೇಮಕ

- 2023ರಲ್ಲಿ ಪೂರ್ಣ ಪ್ರಮಾಣದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ

- ವರದಿ ಅವೈಜ್ಞಾನಿಕ. ಮನೆ-ಮನೆಗೂ ಹೋಗಿ ಸಮೀಕ್ಷೆ ನಡೆಸಿಲ್ಲ ಎಂದು ವೀರಶೈವ ಲಿಂಗಾಯತ, ಒಕ್ಕಲಿಗ ಸಮುದಾಯಗಳ ವಿರೋಧ

- ವರದಿ ಜಾರಿಗೆ ಸಿಎಂ ಸಿದ್ದರಾಮಯ್ಯ ಮುಂದಾದಾಗ ಸ್ವಪಕ್ಷೀಯರಿಂದಲೇ ಆಕ್ಷೇಪ. ಕೇಂದ್ರ ಜಾತಿಗಣತಿ ವರದಿಗೆ ಕಾಯುವಂತೆ ಸಲಹೆ

- ಈ ಹಿಂದೆ ಅ.18ರಂದು ಸಂಪುಟದಲ್ಲಿ ವರದಿ ಮಂಡನೆ ಬಗ್ಗೆ ಸಿಎಂ ಘೋಷಣೆ. ಬಳಿಕ ಅ.25ಕ್ಕೆ ಮುಂದೂಡಿಕೆ. ಉಪ ಚುನಾವಣೆ ಹಿನ್ನೆಲೆ ಬ್ರೇಕ್‌

- ಇದೀಗ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆ ಮಾಡಲು ರಾಜ್ಯ ಸರ್ಕಾರದಿಂದ ಸಿದ್ಧತೆ. ಮುಂದಿನ ನಡೆ ಬಗ್ಗೆ ಸಸ್ಪೆನ್ಸ್‌

ಸಚಿವ ಸಂಪುಟಏನು ಮಾಡಬಹುದು?: ಜ.9ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಅಲ್ಲಿ ಮೊದಲ ಬಾರಿಗೆ ವರದಿಯನ್ನು ತೆರೆಯಲಾಗುತ್ತದೆ ಎನ್ನಲಾಗಿದೆ. ಜಾತಿ ಗಣತಿ ವರದಿಯನ್ನು ಸದನದಲ್ಲಿ ಮಂಡಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆಯೂ ಸಂಪುಟ ಸಭೆಯಲ್ಲೇ ತೀರ್ಮಾನಿಸಲಾಗುವುದು. ಆಯೋಗದ ವರದಿಯಾಗಿರುವುದರಿಂದ ಸದನದಲ್ಲಿ ಮಂಡಿಸುವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದರೆ, ಸಚಿವ ಸಂಪುಟ ಸಭೆಯಲ್ಲೇ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ನನ್ನ ರಾಜೀನಾಮೆ ಕೇಳುವುದು ಕಾಮಿಡಿ ಸಿನೆಮಾದಂತಿದೆ: ಸಚಿವ ಪ್ರಿಯಾಂಕ್ ಖರ್ಗೆ

ಜಾತಿ ಜನಗಣತಿ ಪರವಾಗಿ ನಾನಿದ್ದೇನೆ. ಕಾಂತರಾಜ ಆಯೋಗದ ವರದಿ ಅನುಷ್ಠಾನಕ್ಕೆ ನಾನು ಬದ್ಧನಿದ್ದೇನೆ. ಮುಂದಿನ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚಿಸುವ ಉದ್ದೇಶವೂ ಇದೆ. ಒಳಮೀಸಲಾತಿ ನೀಡುವಂತೆ ಸುಪ್ರೀಂಕೋರ್ಟ್‌ ಹೇಳಿದೆ. ಪ್ರಾಯೋಗಿಕ ಮಾಹಿತಿ ಇಲ್ಲದ ಕಾರಣಕ್ಕೆ ನಾಗಮೋಹನ ದಾಸ್‌ ನೇತೃತ್ವದ ಸಮಿತಿ ರಚಿಸಲಾಗಿದೆ. ಒಳಮೀಸಲಾತಿ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ.
-ಸಿದ್ದರಾಮಯ್ಯ, ಸಿಎಂ

click me!