ಮೋದಿ ವಿಷ ಸರ್ಪ: ಕಾಂಗ್ರೆಸ್ ಇಂಥ ವಿವಾದಾತ್ಮಕ ಹೇಳಿಕೆ ನೀಡಿದ್ದು ಇದೇ ಮೊದಲಲ್ಲ

Published : Apr 28, 2023, 09:18 AM IST
ಮೋದಿ ವಿಷ ಸರ್ಪ: ಕಾಂಗ್ರೆಸ್ ಇಂಥ ವಿವಾದಾತ್ಮಕ ಹೇಳಿಕೆ ನೀಡಿದ್ದು ಇದೇ ಮೊದಲಲ್ಲ

ಸಾರಾಂಶ

ಚುನಾವಣೆಗಳು ಬಂದಾಗ ವಿವಾದಾತ್ಮಹ ಹೇಳಿಕೆಗಳನ್ನ ನೀಡುವ ಮೂಲಕ ಕಾಂಗ್ರೆಸ್‌ ಬಿಜೆಪಿಗೆ ಪ್ರಬಲ ಅಸ್ತ್ರವನ್ನು ನೀಡಿ ಎಡವಟ್ಟು ಮಾಡಿಕೊಂಡ ಹಲವು ನಿದರ್ಶನಗಳು ಇವೆ.

ನವದೆಹಲಿ(ಏ.28): ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರು ಹೇಳಿಕೆ ನೀಡುವ ಭರದಲ್ಲಿ ವಿವಾದ ಮೈಮೇಲೆ ಎಳೆದುಕೊಳ್ಳುವುದರ ಜತೆಗೆ ಬಿಜೆಪಿಗೆ ಪ್ರಬಲ ಅಸ್ತ್ರವನ್ನು ನೀಡಿ ಎಡವಟ್ಟು ಮಾಡಿಕೊಂಡ ಹಲವು ನಿದರ್ಶನಗಳು ಇವೆ.

2007: ಮೌತ್‌ ಕಾ ಸೌದಾಗರ್‌

ಅದು 2007ರ ಗುಜರಾತ್‌ ಚುನಾವಣೆ ಸಂದರ್ಭ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮೋದಿ ಅವರನ್ನು ಗುಜರಾತ್‌ ಗಲಭೆ ಹಿನ್ನೆಲೆಯಲ್ಲಿ ‘ಮೌತ್‌ ಕಾ ಸೌದಾಗರ್‌’ (ಸಾವಿನ ವ್ಯಾಪಾರಿ) ಎಂದು ಕರೆದರು. ತಮ್ಮ ವಾಕ್ಚಾತುರ್ಯಕ್ಕೆ ಹೆಸರಾಗಿದ್ದ ಮೋದಿ ಇದನ್ನೇ ಬಂಡವಾಳ ಮಾಡಿಕೊಂಡರು. ಗುಜರಾತ್‌ನಲ್ಲಿ 182 ಸ್ಥಾನಗಳಲ್ಲಿ 117 ಸ್ಥಾನಗಳನ್ನು ಗೆದ್ದು ಬಿಜೆಪಿ ಮತ್ತೆ ಸರ್ಕಾರ ರಚಿಸಿತು. ಕಾಂಗ್ರೆಸ್‌ ಹೀನಾಯವವಾಗಿ ಸೋತಿತು.

News Hour: ಕಾಂಗ್ರೆಸ್‌ ಕೊರಳಿಗೆ ಮೋದಿ 'ವಿಷಸರ್ಪ' ಕಟ್ಟಿದ ಮಲ್ಲಿಕಾರ್ಜುನ!

2014: ಮೋದಿ ಚಾಯ್‌ವಾಲಾ

2014ರ ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್‌ ನಾಯಕ ಮಣಿಶಂಕರ ಅಯ್ಯರ್‌ ಅವರು, ಮೋದಿ ಅವರ ಚಹಾ ಮಾರುವ ಹಿನ್ನೆಲೆ ಪ್ರಸ್ತಾಪಿಸಿದರು. ‘ಚಾಯ್‌ವಾಲಾ (ಚಹಾ ಮಾರಾಟಗಾರ) ಯಾವತ್ತೂ ಪ್ರಧಾನಿ ಆಗಲು ಸಾಧ್ಯವಿಲ್ಲ. ಬೇಕೆಂದರೆ ಆತ ಕಾಂಗ್ರೆಸ್‌ ಸಮಾವೇಶದಲ್ಲಿ ಚಹಾ ಮಾರಬಹುದು’ ಎಂದು ಮೂದಲಿಸಿದರು. ಮೋದಿ ಇದನ್ನೇ ಬಂಡವಾಳ ಮಾಡಿಕೊಂಡರು. ಚುನಾವಣಾ ಪ್ರಚಾರದಾದ್ಯಂತ ‘ಚಾಯ್‌ ಪೇ ಚರ್ಚಾ’ ನಡೆಸಿದರು. ‘ಚಹಾ ಮಾರುವವ ಪ್ರಧಾನಿ ಆಗಬಾರದೇ?’ ಎಂದು ಜನಸಾಮಾನ್ಯರನ್ನು ಬಡಿದೆಬ್ಬಿಸಿದರು. ಕಾಂಗ್ರೆಸ್‌ ಆ ಚುನಾವಣೆಯಲ್ಲಿ ಇನ್ನಿಲ್ಲದಂತೆ ಮಣ್ಣುಮುಕ್ಕಿತು. ಸ್ವಂತ ಬಲದಿಂದ ಬಿಜೆಪಿ ಅಧಿಕಾರಕ್ಕೆ ಬಂತು.

2017: ಮೋದಿ ನೀಚ ಆದ್ಮಿ

ಮಣಿಶಂಕರ್‌ ಅಯ್ಯರ್‌ ಅವರು ತಮ್ಮ ಹಿಂದಿನ ತಪ್ಪು ತಿದ್ದಿಕೊಳ್ಳದೇ 2017ರ ಗುಜರಾತ್‌ ಚುನಾವಣೆಯಲ್ಲಿ ಮೋದಿ ಅವರನ್ನು ‘ನೀಚ್‌ ಆದ್ಮಿ’ ಎಂದು ಸಂಬೋಧಿಸಿದರು. ‘ನೀಚ್‌’ ಎಂದರೆ ಹಿಂದಿಯಲ್ಲಿ ಕೆಳಜಾತಿಗಳಿಗೆ ಬಳಸುವ ಪದ. ಬಿಜೆಪಿಗೆ ಅನುಕಂಪದ ಅಲೆಯನ್ನು ಸೃಷ್ಟಿಸಲು ಹಾಗೂ ಜಾತಿವಾದಿ ನಿಂದನೆಗೆ ತಿರುಗಿಸಲು ಮೋದಿ ಈ ಹೇಳಿಕೆಯನ್ನು ಬಳಸಿಕೊಂಡರು. ತತ್ಪರಿಣಾಮ 2017ರ ಚುನಾವಣೆಯಲ್ಲಿ ಪಾಟೀದಾರ್‌ ಆಂದೋಲನದ ಪ್ರತಿರೋಧದ ಹೊರತಾಗಿಯೂ ಬಿಜೆಪಿ 99 ಸ್ಥಾನ ಗಳಿಸಿ ಅಧಿಕಾರಕ್ಕೆ ಬಂದಿತು.

Party Rounds: ಟೀಕಿಸುವ ಭರದಲ್ಲಿ ಮೋದಿಯನ್ನು ವಿಷದ ಹಾವಿಗೆ ಹೋಲಿಸಿದ ಖರ್ಗೆ! ಬಳಿಕ ಯೂಟರ್ನ್!

2019: ಚೌಕಿದಾರ್‌ ಚೋರ್‌ ಹೈ

2019ರ ಲೋಕಸಭೆ ಚುನಾವಣೆ ವೇಳೆ ರಫೇಲ್‌ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್‌ ಭಾರಿ ಹುಯಿಲೆಬ್ಬಿಸಿತು. ತಮ್ಮನ್ನು ತಾವು ಮೋದಿ ಅವರು, ‘ಚೌಕಿದಾರ್‌’ (ದೇಶರಕ್ಷಕ) ಎಂದು ಕರೆದುಕೊಳ್ಳುತ್ತಿದ್ದುದನ್ನೇ ಬಳಸಿಕೊಂಡ ಕಾಂಗ್ರೆಸ್‌, ‘ಚೌಕಿದಾರ್‌ ಚೋರ್‌ ಹೈ’ (ಈತ ದೇಶರಕ್ಷಕನಲ್ಲ, ಕಳ್ಳ) ಎಂಬ ಹರಿತ ಪ್ರಚಾರ ಆರಂಭಿಸಿತು. ಆದರೆ ಲೋಕಸಭೆಯಲ್ಲಿ ಬಿಜೆಪಿ 353 ಸ್ಥಾನಗಳ ಜನಾದೇಶದೊಂದಿಗೆ ಪ್ರಚಂಡ ವಿಜಯವನ್ನು ದಾಖಲಿಸಿತು. ಕಾಂಗ್ರೆಸ್‌ ಐತಿಹಾಸಿಕ ಸೋಲನ್ನು ಅನುಭವಿಸಿತು.

2022: ಮೋದಿ 10 ತಲೆಯ ರಾವಣ

2022ರ ಗುಜರಾತ್‌ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 10 ತಲೆಯ ರಾವಣನಿಗೆ ಹೋಲಿಸಿದರು. ‘ಬರೀ ನನ್ನ ಮುಖ ನೋಡಿ ಮತ ಹಾಕಿ ಎನ್ನುವ ಮೋದಿಗೆ ರಾವಣನ ರೀತಿ 10 ಮುಖ ಇವೆಯೇ’ ಎಂದಿದ್ದರು. ಬಿಜೆಪಿ ಇದನ್ನೇ ದೊಡ್ಡದು ಮಾಡಿ ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಪ್ರಚಾರ ಮಾಡಿತ್ತು. ಗುಜರಾತ್‌ನಲ್ಲಿ ಕಾಂಗ್ರೆಸ್‌ ಸೋತಿತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ