ಕಾಂಗ್ರೆಸ್ ನ ಹಿರಿಯ ನಾಯಕ ಮುಖಂಡ ಮಾಜಿ ಶಾಸಕ ವಾಸು ನಿಧನರಾಗಿದ್ದಾರೆ.
ಮೈಸೂರು (ಮಾ.9): ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಶಾಸಕ ವಾಸು (72) ನಿಧನರಾಗಿದ್ದಾರೆ. ಮೈಸೂರಿನ ಜಯಲಕ್ಷ್ಮೀಪುರಂ ನಿವಾಸದಲ್ಲಿ ವಾಸು ನಿಧನರಾಗಿದ್ದು, ಕಳೆದ ಬಾರಿ ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಇವರು ಟಿಕೆಟ್ ವಂಚಿತರಾಗಿದ್ದರು. ಮೈಸೂರು ಮೇಯರ್ ಆಗಿದ್ದ ವಾಸು ಬಳಿಕ ಶಾಸಕರಾದರು. ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಮಾಲೀಕರಾಗಿರುವ ಇವರು ‘ಪ್ರಜಾನುಡಿ’ ಪತ್ರಿಕೆ ಮಾಲೀಕರಾಗಿದ್ದರು. ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದರು. 2013ರಿಂದ 2018ರವರೆಗೆ ಶಾಸಕರಾಗಿ ಅಭಿವೃದ್ಧಿ ಕಾರ್ಯಗಳ ಮೂಲಕ ಗಮನ ಸೆಳೆದಿದ್ದರು.
ಮಾಜಿ ಶಾಸಕ ವಾಸು ನಿಧನ ಹಿನ್ನೆಲೆ ರೆಡಿಯೆಂಟ್ ಆಸ್ಪತ್ರೆಗೆ ಶಾಸಕ ಜಿಟಿ ದೇವಗೌಡ ಭೇಟಿ ನೀಡಿ ವಾಸು ನಿಧನಕ್ಕೆ ಸಂತಾಪ ಸೂಚಿಸಿದರು. ನಾವು ಅವರು ಬೇರೆ ಬೇರೆ ಪಕ್ಷದಲ್ಲಿದ್ರೂ ಕೂಡ ನಮ್ಮ ಅವರ ಸಂಬಂಧ ಉತ್ತಮವಾಗಿತ್ತು. ವಾಸು ಶಿಕ್ಷಣ ಪ್ರೇಮಿ, ಶಿಕ್ಷಣ ಕ್ಷೇತ್ರವನ್ನ ಕಟ್ಟಿದ್ದಾರೆ, ಬೆಳೆಸಿದ್ದಾರೆ. ವಾಸು ನಿಧನ ನಮಗೆ ತುಂಬಾ ನೋವುಂಟು ಮಾಡಿದೆ. ವಾಸುರವರ ಸಾವಿನ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಸಂತಾಪ ಸೂಚಿಸಿದರು.
undefined
ಖಾಸಗಿ ಆಸ್ಪತ್ರೆಯಿಂದ ವಾಸು ನಿವಾಸಕ್ಕೆ ಮೃತ ದೇಹ ರವಾನೆ ಮಾಡಲಾಗಿದ್ದು, ಮನೆಯಲ್ಲಿ ಸಾರ್ವಜನಿಕರಿಗೆ ಸಂಜೆಯವರೆಗೂ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದೆ. ನಾಳೆ ಮದ್ಯಾಹ್ನ 2 ಗಂಟೆಯ ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂದು ವಾಸು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ನಾಳೆಯ ವರೆಗೂ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. ತಮ್ಮ ದೇಹದಾನಕ್ಕೆ ವಾಸು ವಿಲ್ ಬರೆದಿಟ್ಟಿದ್ದು, ಸದ್ಯ ದೇಹದಾನ ಮಾಡುವ ಬಗ್ಗೆ ಇನ್ನೂ ನಿರ್ಧಾರವನ್ನು ಕೂಡ ಕುಟುಂಬಸ್ಥರು ಮಾಡಿಲ್ಲ. ಸ್ವಲ್ಪ ಸಮಯದ ಬಳಿಕ ಕುಟುಂಬಸ್ಥರೊಂದಿಗೆ ಚರ್ಚಿಸಿ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್ ಎಂ ಆಗಲಿ ಎಂದು ಬಹಿರಂಗ ಹೇಳಿಕೆ ಕೊಟ್ಟಿದ್ದ ಮಾಜಿ ಶಾಸಕ ವಾಸುಗೆ ಚಾಮರಾಜ ಕ್ಷೇತ್ರದ ಟಿಕೆಟ್ ಕೈ ತಪ್ಪಿಸಿ ತಮ್ಮ ಬೆಂಬಲಿಗನಿಗೆ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದರು. ಹೀಗಾಗಿ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ಕೈತಪ್ಪಿದ ನಂತರ ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಶಾಸಕ ವಾಸು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು.