
ಬೆಂಗಳೂರು: ಮಲ್ಲಿಕಾರ್ಜುನ್ ಖರ್ಗೆ ಕಾಂಗ್ರೆಸ್‌ನ ನಿಷ್ಠ ನಾಯಕ. ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ಕೂಡ ಇಲ್ಲದ ಪ್ರಾಮಾಣಿಕ ನಾಯಕ. ಪಕ್ಷಕ್ಕಾಗಿ, ಗಾಂಧಿ ಕುಟುಂಬಕ್ಕಾಗಿ ಸರ್ವಸ್ವವನ್ನೇ ತ್ಯಾಗಮಾಡಬಲ್ಲದಷ್ಟು ನಿಷ್ಠ. ಇದೇ ಕಾರಣಕ್ಕೆ ಪಕ್ಷದ ಸದಸ್ಯರು ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಇದೇ ತಿಂಗಳ 26ನೇ ತಾರೀಕು ಖರ್ಗೆ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 24 ವರ್ಷಗಳ ನಂತರ ಗಾಂಧಿಯೇತರ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಖರ್ಗೆ ಅಧಿಕಾರ ಸ್ವೀಕರಿಸಲಿದ್ದಾರೆ. ಜತೆಗೆ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೇರುವ ಎರಡನೇ ಕನ್ನಡಿಗ ಕೂಡ ಮಲ್ಲಿಕಾರ್ಜುನ್ ಖರ್ಗೆ. ಈ ಹಿಂದೆ ಎಸ್ ನಿಜಲಿಂಗಪ್ಪ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು.
ಮಲ್ಲಿಕಾರ್ಜುನ್ ಖರ್ಗೆ ಯಾವ ಮಟ್ಟಿಗೆ ಗಾಂಧಿ ಕುಟುಂಬದ ನಿಷ್ಠರೆಂದರೆ ತಮ್ಮ ಮಗನಿಗೆ ಪ್ರಿಯಾಂಕಾ ಗಾಂಧಿಯವರ ಹೆಸರಿಟ್ಟರು. ಹೌದು, ಪ್ರಿಯಾಂಕ್ ಖರ್ಗೆ ಅವರ ಹೆಸರು ಪ್ರಿಯಾಂಕಾ ಗಾಂಧಿ ಅವರಿದಂಲೇ ಪ್ರೇರಿತವಾಗಿದೆ. ಸೋನಿಯಾ ಗಾಂಧಿಯವರ ಮಗಳು ಪ್ರಿಯಾಂಕಾ ಗಾಂಧಿ ಅವರ ಹೆಸರನ್ನು ಮಲ್ಲಿಕಾರ್ಜುನ್ ಖರ್ಗೆ ತಮ್ಮ ಮಗನಿಗೆ ಇಟ್ಟರು. ಇದು ಕಟ್ಟು ಕಥೆಯಲ್ಲ. ಸತ್ಯವಾಗಿಯೂ ಗಾಂಧಿ ಕುಟುಂಬದ ಮೇಲಿನ ಪ್ರೀತಿಯಿಂದಲೇ ಖರ್ಗೆ ಅವರು ಈ ಹೆಸರನ್ನು ಇಟ್ಟರು.
ಖರ್ಗೆ ಗೆಲುವಿಗೆ ಸಂಭ್ರಮ:
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗೆಲುವು ಸಾಧಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಬುಧವಾರ ಪಟ್ಟಣದಲ್ಲಿ ದಲಿತ ಮುಖಂಡರು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮಾಶಂಕರ ಮೂರಮನ ನೇತೃತ್ವದಲ್ಲಿ ಅಂಬೇಡ್ಕರ್ ಹಾಗೂ ಬಸವೇಶ್ವರ ವೃತ್ತಕ್ಕೆ ತೆರಳಿ ಅಂಬೇಡ್ಕರ್ ಹಾಗೂ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ದಲಿತ ಹಿರಿಯ ಮುಖಂಡ ಭೀಮಾಶಂಕರ ಮೂರಮನ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರು ಬದುಕಿನ ಎಲ್ಲ ದಿನಗಳು ಕಾಂಗ್ರೆಸ್ ಪಕ್ಷಕ್ಕಾಗಿ ನಿಸ್ವಾರ್ಥದಿಂದ ದುಡಿದು ಸ್ವಾಭಿಮಾನದ ಬದುಕು ಸಾಗಿಸಿದ್ದಾರೆ. ಪಕ್ಷಕ್ಕಾಗಿ ನಿಸ್ವಾರ್ಥದಿಂದ ದುಡಿದದಕ್ಕಾಗಿಯೇ ಇಂದು ಅವರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹುದ್ದೆ ಬಂದಿದ್ದು, ಇದು ಪಕ್ಷದ ನಿಷ್ಠಾವಂತರಿಗೆ ದೊರೆತ ಗೌರವವಾಗಿದೆ ಎಂದು ತಿಳಿಸಿದರು.
ದಲಿತ ಮುಖಂಡರಾದ ತುಕಾರಾಮ ಗುನ್ನಾಪೂರ, ಕಲ್ಲಪ್ಪ ಅಂಜುಟಗಿ, ದಸಂಸ ಸ.ಸಂಚಾಲಕ ರಮೇಶ ನಿಂಬಾಳ, ಧರೆಪ್ಪ ಮಂದೋಲಿ, ಶೇಖರ ಅಹಿರಸಂಗ, ಧರ್ಮು ಸಾಲೋಟಗಿ, ಬಾಬು ಗುಡಮಿ, ಅಶೋಕ ಶಿರಗೂರ, ವಿಠಲ ಗಾಯಕವಾಡ, ಚಿದಾನಂದ ಹೊಸಮನಿ, ಆಕಾಶ ಎಂಟಮಾನ, ರಾಜಕುಮಾರ ಚಿಕ್ಕಮಣೂರ ಮೊದಲಾದವರು ಇದ್ದರು.
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ದಲಿತ ಮುಖಂಡರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಂಭ್ರಮಿಸಿದರು.
ಖರ್ಗೆ ಆಯ್ಕೆ ಕನ್ನಡಿಗರ ಹೆಮ್ಮೆ ಎಂದ ಸಿದ್ದರಾಮಯ್ಯ:
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾಗಿರುವುದು ಕಾಂಗ್ರೆಸ್ಸಿಗರಿಗೆ ಮಾತ್ರವಲ್ಲದೆ ಕನ್ನಡಿಗರಿಗೂ ಹೆಮ್ಮೆಯ ವಿಷಯ. ಪ್ರತಿಭೆ ಮತ್ತು ಅನುಭವವನ್ನು ಮೈಗೂಡಿಸಿಕೊಂಡಿರುವ ಖರ್ಗೆ ಅವರಿಗೆ ಕಾಂಗ್ರೆಸ್‌ನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವ ಶಕ್ತಿಯಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ ಖರ್ಗೆ ಅವರನ್ನು ಅಭಿನಂದಿಸಿರುವ ಸಿದ್ದರಾಮಯ್ಯ, ‘ಕಠಿಣ ಪರಿಶ್ರಮ, ಕಾರ್ಯಕರ್ತರ ಪ್ರೀತಿ ಮತ್ತು ಪಕ್ಷದ ಹಿರಿಯರ ಬೆಂಬಲ ಬಲದಿಂದ ಎತ್ತರದ ಸ್ಥಾನಕ್ಕೆ ಏರಿದ ಖರ್ಗೆಯವರು ಇನ್ನಷ್ಟುಎತ್ತರಕ್ಕೆ ಬೆಳೆಯಲಿ’ ಎಂದು ಹಾರೈಸಿದ್ದಾರೆ.
‘ನಮ್ಮೆಲ್ಲರ ಸಹಕಾರ ಅವರಿಗೆ ಇರುತ್ತದೆ. ಖರ್ಗೆಯವರು ಕನ್ನಡಿಗರು ಎನ್ನುವುದು ನಮ್ಮೆಲ್ಲರ ಸಂತಸವನ್ನು ಇಮ್ಮಡಿಗೊಳಿಸಿದೆ’ ಎಂದು ತಿಳಿಸಿದ್ದಾರೆ. ಚುನಾವಣೆಯ ಮೂಲಕವೇ ಅಧ್ಯಕ್ಷರ ಆಯ್ಕೆ ಮಾಡುವ ನಿರ್ಧಾರ ಕೈಗೊಂಡ ಹಾಗೂ ತನ್ಮೂಲಕ ಆಂತರಿಕ ಪ್ರಜಾಪ್ರಭುತ್ವ ಎತ್ತಿ ಹಿಡಿಯಲಾಗಿದೆ ಎಂದು ಪಕ್ಷದ ಅಧ್ಯಕ್ಷರಾಗಿದ್ದ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ಅವರನ್ನು ಅಭಿನಂದಿಸಿದ್ದಾರೆ. ಕಷ್ಟಕಾಲದಲ್ಲಿ ನಾಯಕತ್ವ ವಹಿಸಿ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿದ ಸೋನಿಯಾಗಾಂಧಿ ಅವರಿಗೆ ಧನ್ಯವಾದ ಹೇಳಿದ್ದಾರೆ.
ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆ: ಕರ್ನಾಟಕ ಕಾಂಗ್ರೆಸ್‌ಗೆ ‘ಭೀಮ’ ಬಲ..!
ಖರ್ಗೆ ಗೆಲುವಿಗೆ ಕೆಪಿಸಿಸಿಯಲ್ಲಿ ಸಂಭ್ರಮ: ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಚಂಡ ಬಹುಮತದೊಂದಿಗೆ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬುಧವಾರ ಕೆಪಿಸಿಸಿ ಕಚೇರಿ ಎದುರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. ಬುಧವಾರ ಮಲ್ಲಿಕಾರ್ಜುನ ಖರ್ಗೆ ಅವರ ಗೆಲುವು ಅಂತಿಮಗೊಳ್ಳುತ್ತಿದ್ದಂತೆ ಕೆಪಿಸಿಸಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಖರ್ಗೆ ಪರ ಘೋಷಣೆಗಳನ್ನು ಕೂಗುತ್ತಾ ವಿಜಯೋತ್ಸವ ಆಚರಿಸಿದರು. ಈ ವೇಳೆ ಪರಸ್ಪರ ಸಿಹಿ ತಿನ್ನಿಸಿ, ಪಟಾಕಿ ಸಿಡಿಸಿ ನೃತ್ಯ ಮಾಡುತ್ತಾ ಸಂಭ್ರಮಿಸಿದರು.
ಮಧ್ಯಾಹ್ನ 3 ಗಂಟೆಗೆ ಕಾರ್ಯಕರ್ತರ ಸಂಭ್ರಮದಲ್ಲಿ ಭಾಗಿಯಾದ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ರಾಮಲಿಂಗಾರೆಡ್ಡಿ ಸೇರಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಸಿಹಿ ಹಂಚಿದರು. ಈ ವೇಳೆ ಮತ್ತೊಮ್ಮೆ ಶಿವಕುಮಾರ್ ಸಮ್ಮುಖದಲ್ಲಿ ಕೆಪಿಸಿಸಿ ರಸ್ತೆಯಲ್ಲಿ ಪಟಾಕಿ ಸಿಡಿಸಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಈ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ, ಮಲ್ಲಿಕಾರ್ಜುನ ಖರ್ಗೆ ಅವರ ಗೆಲುವಿನಿಂದ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತಷ್ಟುಬಲಗೊಳ್ಳಲಿದೆ. ಕಾಂಗ್ರೆಸ್‌ನಲ್ಲಿ ಯಾವುದೇ ಶಕ್ತಿ ಕೇಂದ್ರಗಳಿಲ್ಲ. ಪಕ್ಷದ ಹೈಕಮಾಂಡ್ ಎಂಬುದೇ ಶಕ್ತಿ ಕೇಂದ್ರ.
ಎಲ್ಲ ಶಕ್ತಿಗಳೂ ಸೇರಿ ಕಾಂಗ್ರೆಸ್‌ನ ಶಕ್ತಿ ಕೇಂದ್ರವಾಗಿ ಕೆಲಸ ಮಾಡಲಿವೆ. ತನ್ಮೂಲಕ ಪಕ್ಷ ಅಧಿಕಾರಕ್ಕೆ ತರಲು ಎಲ್ಲರೂ ದುಡಿಯಲಿದ್ದಾರೆ ಎಂದರು. ಇನ್ನು ಖರ್ಗೆ ಅವರ ಆಯ್ಕೆ ಖಚಿತವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ಗುಂಡೂರಾವ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ನಾಯಕರು ಖರ್ಗೆ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿದರು.
ಎಐಸಿಸಿ ಅಧ್ಯಕ್ಷ: ಖರ್ಗೆ ಆಯ್ಕೆಯಿಂದ ಭಾರತಕ್ಕೇ ಶಕ್ತಿ, ಡಿಕೆಶಿ
ಪಕ್ಷಕ್ಕೆ ಬಲ- ಹರಿಪ್ರಸಾದ್: ಈ ಬಗ್ಗೆ ಟ್ವೀಟ್ ಮಾಡಿರುವ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ ಅವರ ಗೆಲುವು ಖುಷಿ ತಂದಿದೆ. ಪಕ್ಷ ನಿಷ್ಠೆ, ತತ್ವ ಸಿದ್ಧಾಂತಕ್ಕೆ ಬದ್ಧರಾಗಿ, ಜ್ಯಾತ್ಯಾತೀತ ಮೌಲ್ಯಗಳನ್ನು ಖರ್ಗೆ ಅವರು ಅಳವಡಿಸಿಕೊಂಡಿದ್ದಾರೆ. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟುಬಲಗೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.