ಈ ಹಿಂದೆ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದ ಕಾಂಗ್ರೆಸ್ ಇಂದು ಅದೇ ಅಂಬೇಡ್ಕರ್ ಹೆಸರನ್ನು ಬಳಸಿಕೊಂಡು ಚುನಾವಣೆಗಳನ್ನು ಮಾಡುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ (ಏ.15): ಈ ಹಿಂದೆ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದ ಕಾಂಗ್ರೆಸ್ ಇಂದು ಅದೇ ಅಂಬೇಡ್ಕರ್ ಹೆಸರನ್ನು ಬಳಸಿಕೊಂಡು ಚುನಾವಣೆಗಳನ್ನು ಮಾಡುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ತಾಲೂಕು ಬಿಜೆಪಿ ವತಿಯಿಂದ ಚುನಾವಣಾ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 133ನೇ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಭಾರತಕ್ಕೆ ಇಡೀ ವಿಶ್ವವೇ ಮೆಚ್ಚುವಂತಹ ಸಂವಿಧಾನ ನೀಡಿದವರು ಅಂಬೇಡ್ಕರ್. ಅವರು ದೇಹತ್ಯಾಗ ಮಾಡಿದ ಸಂದರ್ಭ ಅಂದಿನ ಕಾಂಗ್ರೆಸ್ ಸರ್ಕಾರಗಳು ಅಂತ್ಯಸಂಸ್ಕಾರಕ್ಕೂ ಜಾಗ ನೀಡಿರಲಿಲ್ಲ. ಆದರೆ, ಇಂದು ಕಾಂಗ್ರೆಸ್ ಅಂಬೇಡ್ಕರ್ ಹೆಸರನ್ನು ಚುನಾವಣೆಗಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಬುದ್ದ, ಬಸವ, ಕನಕ, ಅಂಬೇಡ್ಕರ್ ಅವರಂಥ ಇನ್ನೂ ಅನೇಕ ಮಹಾಪುರುಷರನ್ನು ಒಂದು ಜಾತಿ, ವರ್ಗಕ್ಕೆ ಯಾರೇ ಆಗಲಿ ಸೀಮಿತಗೊಳಿಸಬಾರದು. ಅವರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.
Lok Sabha Election 2024: ದೇಶದಲ್ಲಿ ಧರ್ಮ-ಅಧರ್ಮಗಳ ನಡುವೆ ಚುನಾವಣೆ: ಸಚಿವ ಮುನಿಯಪ್ಪ
ಮುಖಂಡ ಕೆ.ಪಿ.ಕುಬೇಂದ್ರಪ್ಪ ಮಾತನಾಡಿ, ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಸಂವಿಧಾನದ ಸೌಲಭ್ಯಗಳನ್ನು ಕೇವಲ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳದೇ, ಇಡೀ ಸಮಾಜದ ಒಳಿತಾಗಿ ಪ್ರಜೆಗಳಾದ ನಾವೆಲ್ಲರೂ ಕೂಡ ಬಳಸಿಕೊಳ್ಳಬೇಕಿದೆ ಎಂದು ಹೇಳಿದರು. ಬಿಜೆಪಿ ಮಂಡಲ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್ ಮಾತನಾಡಿದರು. ಚಂದಪ್ಪ, ಚೀಲೂರು ಅಜ್ಜಯ್ಯ, ಬೇಲಿಮಲ್ಲೂರು ಉಮೇಶ್ ಮಾತನಾಡಿದರು. ಮುಖಂಡರಾದ ನೆಲಹೊನ್ನೆ ಮಂಜುನಾಥ, ಎಂ.ಎಸ್. ಫಾಲಾಕ್ಷಪ್ಪ, ಕೆ.ರಂಗಪ್ಪ, ಸುರೇಂದ್ರ ನಾಯ್ಕ, ಮಾರುತಿ ನಾಯ್ಕ, ಹಲವಾರು ಮುಖಂಡರು ಇದ್ದರು.
ಬಿಜೆಪಿಗೆ 400ಕ್ಕೂ ಹೆಚ್ಚಿನ ಸ್ಥಾನ: ಪ್ರಸ್ತುತ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಪ್ರಚಾರ ಕಾರ್ಯಕ್ಕಾಗಿ ಚುನಾವಣಾ ಕಾರ್ಯಾಲಯವನ್ನು ಏ.11 ಗುರುವಾರ ಬೆಳಗ್ಗೆ 11 ಗಂಟೆಗೆ ಹೊನ್ನಾಳಿ ಪಟ್ಟಣದ ಹೊನ್ನಾಳಿ-ಶಿವಮೊಗ್ಗ ಮುಖ್ಯ ರಸ್ತೆಯ ಪಕ್ಕದ ಕಟ್ಟಡದಲ್ಲಿ ಆರಂಭಿಸಲಾಗುವುದು ಎಂದು ಪಕ್ಷದ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್ ತಿಳಿಸಿದರು. ಪಕ್ಷದ ಕಚೇರಿಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಕಾರ್ಯಾಲಯದ ಉದ್ಘಾಟನೆಗಾಗಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಸಂಸದ ಜಿ.ಎಂ.ಸಿದ್ದೇಶ್ವರ, ಚುನಾವಣಾ ಉಸ್ತುವಾರಿ ಎಸ್.ಎ.ರವೀಂದ್ರನಾಥ, ಜಿಲ್ಲಾಧ್ಯಕ್ಷ ರಾಜಶೇಖರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು, ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಏ.11 ಗುರುವಾರ ಪಕ್ಷದ ನೂತನ ಚುನಾವಣಾ ಕಾರ್ಯಾಲಯ ಉದ್ಘಾಟನೆ ಬಳಿಕ ಕಟ್ಟಡ ಪಕ್ಕದ ಅವರಣದಲ್ಲಿ ತಾಲೂಕುಗಳ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ಕೂಡ ಕರೆಯಲಾಗಿದೆ.
ಮೋದಿಗೆ ಅಧಿಕಾರ ಸಿಕ್ಕರೆ ರಾಜ್ಯದ ಪ್ರಗತಿ ಕುಂಠಿತ: ಸಿಎಂ ಸಿದ್ದರಾಮಯ್ಯ
400ಕ್ಕೂ ಹೆಚ್ಚಿನ ಸ್ಥಾನ ನಿಶ್ಚಿತವಾಗಿ ಬೆಜಿಪಿ ಗೆಲ್ಲಲಿದೆ: ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಹಾಗೂ ಚುನಾವಣಾ ತಾಲೂಕು ಸಂಚಾಲಕ ಎಂ.ಪಿ.ರೇಣುಕಾಚಾರ್ಯ ಅವರು ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದಲ್ಲಿ ಸುಮಾರು 400ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲವು ಸಾಧಿಸಿ ಮೋದಿ ಅವರು 3ನೇ ಬಾರಿಗೆ ಮತ್ತೊಮ್ಮೆ ದೇಶದ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದರು.