ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ, ದುರಾಡಳಿತ ಈ ಎಲ್ಲದರ ನಡುವೆ ನನ್ನ ಗೆಲುವು ಹಾಗೂ ಗೆಲುವಿನ ಅಂತರ ಹೆಚ್ಚಲು ಕಾರಣ ಎಂದು ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅಭಿಪ್ರಾಯಪಟ್ಟರು.
ಗುಂಡ್ಲುಪೇಟೆ (ಮೇ.19): ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ, ದುರಾಡಳಿತ ಈ ಎಲ್ಲದರ ನಡುವೆ ನನ್ನ ಗೆಲುವು ಹಾಗೂ ಗೆಲುವಿನ ಅಂತರ ಹೆಚ್ಚಲು ಕಾರಣ ಎಂದು ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅಭಿಪ್ರಾಯಪಟ್ಟರು. ಕನ್ನಡಪ್ರಭದೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಅತಿ ಹೆಚ್ಚಾಗಿ ಕಾಣಿಸಿತ್ತು. 36 ಸಾವಿರಕ್ಕೂ ಹೆಚ್ಚು ಮತದ ಅಂತರ ನಿರೀಕ್ಷೆ ಮಾಡಿರಲಿಲ್ಲ. ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇಷ್ಟೊಂದು ಇರುತ್ತೆ ಎಂದು ಗೊತ್ತಿರಲಿಲ್ಲ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಮತ್ತಷ್ಟುಮತ ನನಗೆ ಬೀಳಲು ಪ್ರಮುಖ ಕಾರಣ ಎಂದರು.
ಕ್ಷೇತ್ರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕಾಡಿದೆ. ನನ್ನ ಅಧಿಕಾರದ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಕೊಡಲು ಬಿಡುವುದಿಲ್ಲ. ಕ್ಷೇತ್ರದ ಅಧಿಕಾರಿಗಳು ಕೂಡ ತಮ್ಮ ಮಿತಿಯಲ್ಲಿ ನಡೆದುಕೊಂಡು ಕೆಲಸ ಮಾಡಬೇಕು ಎಂಬುದು ನನ್ನ ಸಲಹೆ ಎಂದರು. ಕ್ಷೇತ್ರದ ಜನರ ನಿರೀಕ್ಷೆಗೂ ಮೀರಿ ಕೆಲಸ ಮಾಡಬೇಕು ಎಂಬುದು ನನ್ನ ಬಯಕೆ. ಚುನಾವಣೆಯಲ್ಲಿ ಪ್ರಚಾರ ಸಮಯದಲ್ಲಿ ಸಾಕಷ್ಟು ಸಮಸ್ಯೆ ಕಣ್ಣಿಗೆ ಬಿದ್ದಿವೆ. ಜನರ ಸಮಸ್ಯೆಗಳ ಜೊತೆಗೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿತು. ಅಂದು ಮತ ನೀಡಿದ ಜನತೆ ಈ ಚುನಾವಣೆಯಲ್ಲಿ ಮತ ನೀಡಿದ್ದು, ಗೆಲುವಿನ ಅಂತರ ಹೆಚ್ಚಲು ಮತ್ತೊಂದು ಕಾರಣ ಎಂದರು.
undefined
ರೇಷ್ಮೆನಗರಿ ರಾಮನಗರ ಜಿಲ್ಲೆಗೆ ಮೊದಲ ಬಾರಿ ಡಿಸಿಎಂ ಹುದ್ದೆ!
ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಪಕ್ಷದ ಸಂಘಟನೆಯಲ್ಲೂ ಭಾಗಿಯಾಗಿದ್ದೆ. ಅಲ್ಲದೆ, ಕ್ಷೇತ್ರದ ಜನರ ಕಷ್ಟಸುಖಗಳಿಗೆ ಸಹಾಯ ಮಾಡಿದ್ದೆ. ಇದು ಗೆಲುವಿಗೆ ಪೂರಕ ಎಂದರು. ಕ್ಷೇತ್ರದ ಗ್ರಾಮೀಣ ರಸ್ತೆ ಹಾಗೂ ಸಂಪರ್ಕ ರಸ್ತೆಗಳ ಅಭಿವೃದ್ಧಿ ಹಾಗೂ ಶಾಲಾ ಕೊಠಡಿಗಳ ದುರಸ್ತಿ, ಗುಂಡ್ಲುಪೇಟೆಯಲ್ಲಿ ಕುಡಿವ ನೀರಿನ ಸಮಸ್ಯೆಗೆ ಮೊದಲ ಆದ್ಯತೆಯಲ್ಲಿ ಮಾಡಲಾಗುವುದು ಎಂದರು. ನಾಟಕ: ಜನರ ಸಮಸ್ಯೆ ಬಗೆಹರಿಸಲು ಗ್ರಾಮ ವಾಸ್ತವ್ಯ ಒಂದು ನಾಟಕ. ಗ್ರಾಮದಲ್ಲಿ ಒಂದು ದಿನ ಮಲಗಿ ಹೋದರೆ ಜನರ ಸಮಸ್ಯೆ ಬಗೆಹರಿಯುವುದಿಲ್ಲ. ನಾನು, ಗ್ರಾಪಂ ಮಟ್ಟದಲ್ಲಿ ಸಭೆ ನಡೆಸಿ ಜನರ ಸಮಸ್ಯೆ ಬಗೆಹರಿಸುವ ಚಿಂತನೆ ಇದೆ ಎಂದರು.
ಗಾರ್ಮೆಂಟ್ ತರಲು ಚಿಂತನೆ: ಕ್ಷೇತ್ರದಲ್ಲಿ ಮೂಲ ಸೌಕರ್ಯಗಳ ಜೊತೆಗೆ ಯುವಕ, ಯುವತಿಯರಿಗೆ ನಿರುದ್ಯೋಗ ಸಮಸ್ಯೆ ಇದೆ. ನಿರುದ್ಯೋಗ ಸಮಸ್ಯೆ ಬಗೆಹರಿಸಲು ಗಾರ್ಮೆಂಟ್ ತೆರೆಯಲಿ ಚಿಂತನೆ ಹೊಂದಿದ್ದೇನೆ ಎಂದು ನೂತನ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಹೇಳಿದರು. ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಖಾಸಗಿ ಕಂಪನಿಗಳೊಂದಿಗೆ ಮಾತನಾಡಿ, ಗಾರ್ಮೆಂಟ್ ಆರಂಭಿಸುವ ಯೋಜನೆ ಇಟ್ಟುಕೊಂಡಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಂಜುಂಡೇಶ್ವರನ ದರ್ಶನ: ನೂತನ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ನಂಜನಗೂಡು ನಂಜುಂಡೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಹರಕೆ ತೀರಿಸಿದರು. ಬೆಳಗ್ಗೆ ಪತ್ನಿ ವಿದ್ಯಾ ಗಣೇಶ್, ಪುತ್ರ ಇಷ್ಟಾರ್ಥಪ್ರಸಾದ್, ಚಿಕ್ಕಮ್ಮ ರೂಪ ನಂಜುಂಡಪ್ರಸಾದ್ ಅವರೊಂದಿಗೆ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ನಂತರ ನೂತನ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ತಲಾಭಾರ ನಡೆಸುವ ಮೂಲಕ ಹರಕೆಯನ್ನು ತೀರಿಸಿದರು. ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.
ಹಾರ, ತುರಾಯಿ, ಹೂಗುಚ್ಛ, ಶಾಲು ಬೇಡ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಸಭೆ, ಸಮಾರಂಭದಲ್ಲಿ ಹಾರ ತುರಾಯಿ, ಹೂಗುಚ್ಛದ ಬದಲು ಪುಸ್ತಕ ಕೊಡಿ ಎಂದು ಸೂಚನೆ ನೀಡಿದ್ದರು. ಆದರೆ, ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನೂತನ ಯುವ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾಜಿ ಸಿಎಂ ಬೊಮ್ಮಾಯಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಸಭೆ, ಸಮಾರಂಭದಲ್ಲಿ ಹಾರ ತುರಾಯಿ, ಹೂಗುಚ್ಛದ ಬೇಡ ಎಂದಿದ್ದಾರೆ. ನಾನು ಹೊಸದಾಗಿ ಶಾಸಕನಾಗಿದ್ದೇನೆ, ಕ್ಷೇತ್ರದ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ನನಗೆ ಹಾರ, ತುರಾಯಿ, ಹೂಗುಚ್ಛ, ಶಾಲು ನನಗೆ ಹಾಕುವ ಬದಲು ಕ್ಷೇತ್ರದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಈ ಹಣ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ನನ್ನ ಸೋಲಿಗೆ ಪಕ್ಷದ ಕೆಲ ಮುಖಂಡರೇ ಕಾರಣ: ಮಾಜಿ ಸಚಿವ ಸೋಮಣ್ಣ
ಕೆಲ ಜನಪ್ರತಿನಿಧಿಗಳು ಶಾಲು, ಹಾರ, ಹೂಗುಚ್ಛ ಹಾಕಿಸಿಕೊಳ್ಳುವುದೇ ಒಂದು ಖಯಾಲಿ ಮಾಡಿಕೊಂಡಿದ್ದಾರೆ. ಇಂಥ ಸಮಯದಲ್ಲಿ ಮೊದಲ ಬಾರಿಗೆ ಶಾಸಕರಾಗಿರುವ ಎಚ್.ಎಂ.ಗಣೇಶ್‌ಪ್ರಸಾದ್ ಕಾರ್ಯಕರ್ತರು, ಮುಖಂಡರು ದುಂದು ವೆಚ್ಚ ಮಾಡಿ ಹಾರ, ತುರಾಯಿ, ಶಾಲು, ನೆನಪಿನ ಕಾಣಿಕೆ ತಂದು ನನಗೆ ನೀಡಬೇಡಿ ಎಂದು ಕೇಳಿ ಕೊಂಡಿದ್ದಾರೆ. ಈ ದುಂದು ವೆಚ್ಚ ಮಾಡದೆ, ನಿಮ್ಮೂರಿನ ಸರ್ಕಾರಿ ಶಾಲೆಗಳಿಗೆ ಅದೇ ಹಣ ನೀಡಿದರೆ ಶಾಲೆಯ ಸಣ್ಣ ಪುಟ್ಟಖರ್ಚಿಗೆ ಸಹಕಾರಿಯಾಗುತ್ತದೆ ಅಲ್ಲದೆ ನಿಮ್ಮೂರಿನ ಮಕ್ಕಳಿಗೂ ನೆರವಾಗಿದೆ ಎಂದು ಹೇಳಿಕೊಂಡಿರುವುದಕ್ಕೆ ಕ್ಷೇತ್ರದ ಪ್ರಜ್ಞಾವಂತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.