ಕಾಂಗ್ರೆಸ್‌ ಪಕ್ಷ ಕೊಳ್ಳೆ ಹೊಡೆದ ಹಣ ಎಲೆಕ್ಷನ್‌ಗೆ ಬಳಸುತ್ತಿದೆ: ಸದಾನಂದಗೌಡ

By Kannadaprabha News  |  First Published Nov 8, 2024, 8:29 AM IST

ರಾಜ್ಯ ಉಪ ಚುನಾವಣೆಯ ಹೊಣೆ ಹೊತ್ತ ಕಾಂಗ್ರೆಸ್ ಮುಖಂಡರು ಕೊಳ್ಳೆ ಹೊಡೆದ ಗರಿಷ್ಠ ಹಣವನ್ನು ಈ ಮೂರು ಕ್ಷೇತ್ರಗಳಲ್ಲಿ ಬಳಸಲು ಮುಂದಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆಪಾದಿಸಿದ್ದಾರೆ. 


ಬೆಂಗಳೂರು (ನ.08): ರಾಜ್ಯ ಉಪ ಚುನಾವಣೆಯ ಹೊಣೆ ಹೊತ್ತ ಕಾಂಗ್ರೆಸ್ ಮುಖಂಡರು ಕೊಳ್ಳೆ ಹೊಡೆದ ಗರಿಷ್ಠ ಹಣವನ್ನು ಈ ಮೂರು ಕ್ಷೇತ್ರಗಳಲ್ಲಿ ಬಳಸಲು ಮುಂದಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆಪಾದಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಚುನಾವಣಾ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಮೂರು ಕ್ಷೇತ್ರಗಳ ಚುನಾವಣಾ ಉಸ್ತುವಾರಿಗಳ ಮೇಲೆ ಗಂಭೀರವಾದ ನಿಗಾ ವಹಿಸಬೇಕು. ಚುನಾವಣಾ ಆಯೋಗಕ್ಕೆ ಬೇಕಾದ ಮಾಹಿತಿಗಳನ್ನು ನೀಡಲು ನಾವು ಸಿದ್ಧರಿದ್ದೇವೆ. 

ನಿಗಾ ಇಲ್ಲದಿದ್ದರೆ, ಹಣದ ಪ್ರಭಾವದಿಂದ ಜನಸಾಮಾನ್ಯರ ತಲೆ ಹಾಳು ಮಾಡಿ ಈ ಚುನಾವಣೆಯನ್ನು ಹಣದ ಪ್ರಭಾವದ ಚುನಾವಣೆಯಾಗಿ ಪರಿವರ್ತಿಸಲಿದ್ದಾರೆ. ಇದಕ್ಕೆ ಬಿಜೆಪಿ ಹೆದರುವುದಿಲ್ಲ ಎಂದರು. ಕಾಂಗ್ರೆಸ್ ಪಕ್ಷದ ಚುನಾವಣೆ ಉಸ್ತುವಾರಿ ಪಡೆದವರ ಕುರಿತು ಸ್ವಲ್ಪಮಟ್ಟಿನ ಆತಂಕ ಇದೆ. ಸಂಡೂರಿನಲ್ಲಿ ಮೊನ್ನೆ ತಾನೇ ಜೈಲಿನಿಂದ ಹೊರಗೆ ಬಂದ ಮಾಜಿ ಸಚಿವ ನಾಗೇಂದ್ರ ಅವರ ಉಸ್ತುವಾರಿ ಇದೆ. ಇಡೀ ರಾಜ್ಯದಲ್ಲಿ ರೈತರ ಭೂಮಿಯನ್ನು ಕೊಳ್ಳೆ ಹೊಡೆಯಲು, ವಕ್ಫ್‌ಗೆ ಖಾತೆ ಬದಲಿಸಿ ಆಸ್ತಿ ನುಂಗಿ ನೀರು ಕುಡಿಯಲು ಹೊರಟ ಸಚಿವ ಜಮೀರ್ ಶಿಗ್ಗಾಂವಿ ಉಸ್ತುವಾರಿ ಆಗಿದ್ದಾರೆ. ಚನ್ನಪಟ್ಟಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಚುನಾವಣಾ ಉಸ್ತುವಾರಿ ಇದೆ. ಕಾಂಗ್ರೆಸ್ಸಿಗೆ ಇದೊಂದು ಸವಾಲಿನ ಚುನಾವಣೆ ಎನಿಸಿದೆ ಎಂದು ವಿಶ್ಲೇಷಿಸಿದರು.

Latest Videos

ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿ 12ರಿಂದ ನಿಷೇಧಾಜ್ಞೆ ಜಾರಿ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನ.13ರಂದು ಮತದಾನ ನಡೆಯಲಿದೆ. ಶಾಂತಿ ಸುವ್ಯವಸ್ಥೆ, ಮುಕ್ತ ಮತ್ತು ನ್ಯಾಯ ಸಮ್ಮತ ಹಾಗೂ ನಿಷ್ಪಕ್ಷಪಾತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರಂತೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನ.12ರಂದು ಮಂಗಳವಾರ ಸಂಜೆ 6ರಿಂದ ನ.14ರ ಗುರುವಾರ ಬೆಳಿಗ್ಗೆ 6 ಗಂಟೆವರೆಗೆ ವಿವಿಧ ಷರತ್ತುಗಳನ್ನು ವಿಧಿಸಿ, ನಿಷೇಧಾಜ್ಞೆ ಜಾರಿಗೊಳಿಸಿದೆ. ನಿಷೇಧಿತ ಅವಧಿಯಲ್ಲಿ ಯಾವುದೇ ಬಹಿರಂಗ, ಸಾರ್ವಜನಿಕ ಸಭೆ, ಸಮಾರಂಭ, ಜಾಥಾ, ಮೆರವಣಿಗೆ ಇತ್ಯಾದಿಗಳನ್ನು ನಡೆಸುವುದನ್ನು ನಿರ್ಬಂಧಿಸಲಾಗಿದೆ. 

ಲೋಕಾಯುಕ್ತ ಪೊಲೀಸರ ವಿಚಾರಣೆ ಬಳಿಕ ಸಿಎಂ ಸಿದ್ದರಾಮಯ್ಯಗೆ ಈಗ ಇ.ಡಿ. ನೋಟಿಸ್‌?

ಈ ಅವಧಿಯಲ್ಲಿ 5ಕ್ಕಿಂತ ಹೆಚ್ಚು ಜನರ ಗುಂಪುಗೂಡಿ ಓಡಾಡುವುದನ್ನು ನಿಷೇಧಿಸಿದೆ. ಮತದಾನ ಮುಕ್ತಾಯದ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಯಾವುದೇ ಬಹಿರಂಗ ಪ್ರಚಾರ ಸಭೆ, ಸಮಾರಂಭ ಮತ್ತು ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗಿರುತ್ತದೆಯೇ ಹೊರತು ಅಭ್ಯರ್ಥಿಗಳ ಬೆಂಬಲಿಗರು ಚುನಾವಣಾ ಪ್ರಚಾರಕ್ಕಾಗಿ ಮನೆಮನೆ ಮತ ಯಾಚಿಸಲು ಐದು ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ತಿಳಿಸಲಾಗಿದೆ. ನಿಷೇಧಾಜ್ಞೆ ಅವಧಿಯಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಮತ್ತು ಮಾರಕಾಸ್ತ್ರಗಳನ್ನು ಕೊಂಡೊಯ್ಯುವುದಾಗಲಿ ಅಥವಾ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವಂತಿಲ್ಲ. ಯಾವುದೇ ರೀತಿಯ ಪ್ರಚಾರಗಳನ್ನು ಅಂದರೆ ಭಿತ್ತಿ ಪತ್ರ ಹಂಚುವ ಮೂಲಕ ವಾಹನದಲ್ಲಿ ಪ್ರಚಾರ ಮಾಡುವಂತಹ, ಘೋಷಣೆ ಕೂಗುವಂತಹ ಭಾಷಣ ಮಾಡುವಂತಹ ಚಟುವಟಿಕೆಗಳನ್ನು ನಿಷೇಧಿಸಿದೆ.

click me!