65 ವರ್ಷದಿಂದ ನಾಟಕದಲ್ಲೇ ಕಾಂಗ್ರೆಸ್ ಆಡಳಿತ ನಡೆಸಿದೆ: ಸುರ್ಜೇವಾಲಾಗೆ ಸಚಿವ ನಾಗೇಶ್ ತಿರುಗೇಟು

By Suvarna NewsFirst Published Jan 26, 2023, 6:22 PM IST
Highlights

ಕಾಂಗ್ರೆಸ್ ಪಕ್ಷ 65 ವರ್ಷಗಳಿಂದ ದೇಶದಲ್ಲಿ ನಾಟಕ ಮಾಡಿಕೊಂಡೇ ಆಡಳಿತ ಮಾಡಿದೆ ಎಂದು  ಕಾಂಗ್ರೆಸ್‍ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಸಚಿವ ಬಿ.ಸಿ. ನಾಗೇಶ್ ತಿರುಗೇಟು ನೀಡಿದ್ದಾರೆ

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜ.26): ಕಾಂಗ್ರೆಸ್ ಪಕ್ಷ 65 ವರ್ಷಗಳಿಂದ ದೇಶದಲ್ಲಿ ನಾಟಕ ಮಾಡಿಕೊಂಡೇ ಆಡಳಿತ ಮಾಡಿದೆ ಎಂದು ಸಾಕ್ಷರತಾ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕಾಂಗ್ರೆಸ್‍ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ತಿರುಗೇಟು ನೀಡಿದರು. ಕೊಡಗು ಜಿಲ್ಲಾಡಳಿತದಿಂದ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ 74 ನೇ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಬಿಜೆಪಿ ಕರಾವಳಿಯನ್ನು ಕೋಮುದ್ವೇಷದ ವಿಷ ಬೀಜ ಬಿತ್ತುವ ಫ್ಯಾಕ್ಟರಿಯನ್ನಾಗಿ ಮಾಡುತ್ತಿದೆ ಎಂದು ಬುಧವಾರ ಮಂಗಳೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಅವರ ಮಾತಿಗೆ ತಿರುಗೇಟು ನೀಡಿದರು. ಪ್ರಜಾಧ್ವನಿ ಯಾತ್ರೆಯಂತೆ ಕರಾವಳಿಯಲ್ಲಿ ಕರಾವಳಿ ಯಾತ್ರೆ ಮಾಡುತ್ತೇವೆ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ. ನಾಗೇಶ್ ದೇಶದಲ್ಲಿ ಯಾರಿಗೆ ಯಾವ ಯಾತ್ರೆಯನ್ನಾದರೂ ಮಾಡುವುದಕ್ಕೆ ಸ್ವಾತಂತ್ರ್ಯವಿದೆ. ಆದರೆ ಕಾಂಗ್ರೆಸ್ ಕಳೆದ 65 ವರ್ಷಗಳಿಂದ ಇದೇ ರೀತಿಯ ನಾಟಕಗಳನ್ನು ಮಾಡುತ್ತಿದ್ದು, ಇದೇನು ಹೊಸದಲ್ಲ ಎಂದರು.

ಚುನಾವಣೆಗೆ ಇನ್ನೆರಡು ತಿಂಗಳಷ್ಟೇ ಬಾಕಿ ಇರುವುದರಿಂದ ಈಗ ಕಾಂಗ್ರೆಸ್ ಈ ನಾಟಕ ಶುರುಮಾಡಿದೆ. ನಿಜವಾಗಿಯೂ ಸಮಾಜಮುಖಿ ಕೆಲಸ ಮಾಡುವುದಕ್ಕೆ ಯಾವುದೇ ರಾಜಕೀಯ ಅಧಿಕಾರ ಬೇಕಾಗಿಲ್ಲ. ಕಾಂಗ್ರೆಸ್ ಇದುವರೆಗೆ ಒಂದು ಸಮುದಾಯವನ್ನು ಓಲೈಸುತ್ತಾ ದೇಶದ ದೊಡ್ಡ ಸಮುದಾಯವನ್ನು ಕಡೆಗಣಿಸಿತು. ಆ ಮೂಲಕ ಒಂದು ಸಮುದಾಯವನ್ನು ಮತ ಬ್ಯಾಂಕ್ ಆಗಿ ಮಾಡಿಕೊಂಡಿತು. ಇದು ಅರ್ಥವಾಗಿದ್ದರಿಂದ ಜನರು ಅವರನ್ನು ಮನೆಗೆ ಕಳುಹಿಸಿದರು ಎಂದರು. ಅವಶ್ಯಕತೆಗೆ ತಕ್ಕಂತೆ ದೇಶದ ಅಭಿವೃದ್ಧಿ ಕೆಲಸ ಮಾಡಬೇಕಾಗಿತ್ತು. ಆದರೆ ಕಾಂಗ್ರೆಸ್ ಆ ಕೆಲಸ ಮಾಡಲಿಲ್ಲ. ಆದರೆ ಮೋದಿಯವರು ಒಮ್ಮೆ ಪ್ರಧಾನಿಯಾಗುತ್ತಿದ್ದಂತೆ ಆ ಅಭಿವೃದ್ಧಿಯ ಕೆಲಸಕ್ಕೆ ವೇಗ ನೀಡಿದರು. ಕೋವಿಡ್ ಮಹಾ ಮಾರಿಯ ಸಂದರ್ಭದಲ್ಲೂ ದೇಶವನ್ನು ವಿಶ್ವದ 5 ಸ್ಥಾನಕ್ಕೆ ತಂದು ನಿಲ್ಲಿಸಿದರು ಎಂದರು.

ಕುವೆಂಪು ವಿವಿಯಲ್ಲಿ 74ನೇ ಗಣರಾಜ್ಯೋತ್ಸವ ಆಚರಣೆ, ಧ್ವಜಾರೋಹಣ 

ಇದೇ ಸಂದರ್ಭ ರಾಜ್ಯದಲ್ಲಿ ವಿದ್ಯಾರ್ಥಿಗಳ ಕಲಿಕೆ ಮತ್ತು ಶಿಕ್ಷಣದ ಸುಧಾರಣೆಗಾಗಿ ಸದ್ಯದಲ್ಲೇ 2000 ಪ್ರೌಢಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು ಎಂದರು. ಪ್ರೌಢಶಾಲಾ ಶಿಕ್ಷಕರ ಜೊತೆಗೆ 750 ಪಿಯು ಕಾಲೇಜುಗಳ ಉಪನ್ಯಾಸಕರ ನೇಮಕವೂ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯನ್ನೂ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದರು. ಗಣರಾಜ್ಯೋತ್ಸವದ ಬಳಿಕ ಮಡಿಕೇರಿಯ ರಾಜಾಸೀಟಿಗೆ ಭೇಟಿ ನೀಡಿದ ಸಚಿವ ನಾಗೇಶ್ ಗ್ರೇಟರ್ ರಾಜಾಸೀಟ್ ಪರಿಶೀಲನೆಯನ್ನು ಮಾಡಿದರು. ಫೆಬ್ರವರಿ 10 ರಂದು ಕೊಡಗು ಜಿಲ್ಲೆಗೆ ಸಿ.ಎಂ ಬಸವರಾಜ ಬೊಮ್ಮಾಯಿ ಅವರು ಆಗಮಿಸುತ್ತಿದ್ದು, ಅಂದು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ನೂತನವಾಗಿ ನಿರ್ಮಾಣ ಮಾಡಲಾಗಿರುವ ಗ್ರೇಟರ್ ರಾಜಾಸೀಟನ್ನು ಅವರು ಉದ್ಘಾಟಿಸಲಿರುವುದರಿಂದ ಇದರ ಕಾಮಗಾರಿಯನ್ನು ಹೇಗೆ ಮಾಡಲಾಗಿದೆ ಎನ್ನುವುದನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ASSEMBLY ELECTION: ಭ್ರಷ್ಟಾಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಾಮೀಲು: ಸಿದ್ದರಾಮಯ್ಯ ಆರೋಪ

ಇದಕ್ಕೂ ಮೊದಲು ಕೊಡಗು ಜಿಲ್ಲಾಡಳಿತದಿಂದ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 74 ನೇ ಗಣರಾಜ್ಯೋತ್ಸವದಲ್ಲಿ ಸಚಿವ ಬಿ.ಸಿ. ನಾಗೇಶ್, ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆಯನ್ನು ಹಾಡಿ ಗೌರವ ಸಲ್ಲಿಸಲಾಯಿತು. ಬಳಿಕ ತೆರೆದ ವಾಹನದಲ್ಲಿ ತೆರೆದ ಕೊಡಗು ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಪಥಸಂಚಲನದ ಸಿದ್ಧತೆ ವೀಕ್ಷಿಸಿ ಬಳಿಕ ಪಥ ಸಂಚಲನಕ್ಕೆ ಚಾಲನೆ ನೀಡಿದರು. ನಂತರ ಪೊಲೀಸ್ ಅಧಿಕಾರಿ ಚನ್ನನಾಯಕ್ ನೇತೃತ್ವದಲ್ಲಿ ಪೊಲೀಸ್, ಸಶಸ್ತ್ರ ಪೊಲೀಸ್ ಪಡೆ, ಅಗ್ನಿ ಶಾಮಕದಳ, ಎನ್‍ಸಿಸಿ, ಸ್ಕೌಡ್ಸ್ ಅಂಡ್ ಗೈಡ್ಸ್ ಸೇರಿದಂತೆ ವಿವಿಧ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಗೌರವ ಧ್ವಜ ವಂದನೆ ಸ್ವೀಕರಿಸಿದ ಸಚಿವ ಬಿ.ಸಿ. ನಾಗೇಶ್ ಬಳಿಕ ಗಣರಾಜ್ಯೋತ್ಸವ ಕುರಿತು ಸಂದೇಶ ನೀಡಿದರು. ಈ ವೇಳೆ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ ನಾಗೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

click me!