ಲೋಕಸಭಾ ಚುನಾವಣೆ ನಂತರ ರಾಜ್ಯದ ಕಾಂಗ್ರೆಸ್ ಪಕ್ಷ ಅಧಃಪತನವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಆನಂದಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಆನಂದಪುರ (ಅ.02): ಲೋಕಸಭಾ ಚುನಾವಣೆ ನಂತರ ರಾಜ್ಯದ ಕಾಂಗ್ರೆಸ್ ಪಕ್ಷ ಅಧಃಪತನವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಆನಂದಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಅನೇಕ ಸವಾಲಿರುವಂತಹ ಸಮಯದಲ್ಲಿ ದೇಶದ ಹಿತದೃಷ್ಟಿಯಿಂದ ಕಾಂಗ್ರೆಸ್ ವಿರೋಧಿ ಮತಗಳ ಕ್ರೋಢೀಕರಣದಿಂದ ಜೆಡಿಎಸ್ ಮೈತ್ರಿ ಪ್ರತಿಫಲವಾಗಿ ರಾಜ್ಯದ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ. ಅನಂತರ ರಾಜ್ಯದಲ್ಲಿನ ಕಾಂಗ್ರೆಸ್ ಅಧಃಪತನವಾಗಲಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಶಿವಮೊಗ್ಗದಿಂದ ಆನಂದಪುರವರೆಗೆ ₹658 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಆನಂದಪುರ ಪಟ್ಟಣ ಹೊರತುಪಡಿಸಿ, ಬೈಪಾಸ್‌ನಲ್ಲಿ ಹೆದ್ದಾರಿ ಹಾದುಹೋಗಲಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಸುರಕ್ಷ ರಸ್ತೆ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅವಶ್ಯಕತೆ ಇರುವಂತಹ ಪ್ರದೇಶದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡುವುದು ಅನಿವಾರ್ಯ. ಇದರಿಂದ ಸುತ್ತಮುತ್ತಲಿನ ಪ್ರದೇಶಗಳು ಅಭಿವೃದ್ಧಿಗೆ ಹೆದ್ದಾರಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸೋಲಿಸಲು ಬಿಜೆಪಿ-ಜೆಡಿಎಸ್ ಒಂದಾಗಿದೆ: ನಿಖಿಲ್ ಕುಮಾರಸ್ವಾಮಿ
ಬಗರ್‌ಹುಕುಂ ತೆರವು ವಿಚಾರದಲ್ಲಿ ಸರ್ಕಾರದಿಂದ ದ್ವಂದ್ವ ನೀತಿ: ಅನೇಕ ವರ್ಷಗಳಿಂದ ಅರಣ್ಯ ಮತ್ತು ಕಂದಾಯ ಭೂಮಿಯಲ್ಲಿ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ಬಂದಿರುವ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದ ರಾಜ್ಯ ಸರ್ಕಾರ ಈಗ ಅರಣ್ಯ ಇಲಾಖೆಗೆ ಒತ್ತುವರಿ ಮಾಡಿದ ರೈತರನ್ನು ತೆರವುಗೊಳಿಸುವುದಕ್ಕೆ ಪತ್ರ ಬರೆದಿರುವುದು ದ್ವಂದ್ವ ನಿಲುವಿಗೆ ಸಾಕ್ಷಿ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವತಃ ಅರಣ್ಯ ಇಲಾಖೆಯ ಸಚಿವ ಈಶ್ವರ ಖಂಡ್ರೆಯವರೇ ಈ ಪತ್ರ ಬರೆದಿರುವುದು ಬಹಿರಂಗವಾಗಿದೆ. ಈ ಪತ್ರದಿಂದ ಅಧಿಕಾರಿಗಳು ಗೊಂದಲದಲ್ಲಿದ್ದಾರೆ. ಅಧಿಕಾರ ಬಂದ ಮೇಲೆ ರೈತರನ್ನು ಮರೆತಿರುವ ರಾಜ್ಯ ಸರ್ಕಾರ ಒತ್ತುವರಿ ತೆರವು ವಿಷಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಮತ್ತು ತಕ್ಷಣ ಅಧಿಕಾರಿಗಳಿಗೆ ಬರೆದಿರುವ ಪತ್ರವನ್ನು ಹಿಂಪಡೆದು ರೈತರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.
ತಾಲೂಕಿನ ಶರಾವತಿ ಮುಳುಗಡೆ ಸಂತ್ರಸ್ತರಿಗಾಗಿ 2015ರಲ್ಲಿ ಹಿರಿಯರಾದ ಕಾಗೋಡು ತಿಮ್ಮಪ್ಪ ಅವರು 6500 ಹೆಕ್ಟೇರ್ ಭೂಮಿಯನ್ನು ಡಿನೋಟಿಫೈ ಮಾಡಿಸಿದ್ದರು. ಆದರೆ, ಕೆಲವು ತಾಂತ್ರಿಕ ಕಾರಣಕ್ಕಾಗಿ ನ್ಯಾಯಾಲಯ ತಕರಾರು ಮಾಡಿತು. ಈ ಹಿಂದಿನ ಬಿಜೆಪಿ ಸರ್ಕಾರ ಕೂಡ ಸಂತ್ರಸ್ತರಿಗೆ ಭೂಮಿ ಕೊಡಿಸುವ ಪ್ರಯತ್ನ ನಡೆದಿತ್ತು. ಕೇಂದ್ರ ಸರ್ಕಾರಕ್ಕೆ ಯಡಿಯೂರಪ್ಪ ನೇತೃತ್ವದಲ್ಲಿ 9400 ಹೆಕ್ಟೇರ್ ಭೂಮಿಯನ್ನು ಮಂಜೂರು ಮಾಡಿಸುವ ಪ್ರಯತ್ನ ಮಾಡಲಾಗಿತ್ತು. ಈ ನಡುವೆ ರಾಜ್ಯ ಅರಣ್ಯ ಸಚಿವರ ನಿಲುವು ಅನುಮಾನಕ್ಕೆ ಕಾರಣವಾಗಿದೆ. ನಾವು ಹೊಸದಾಗಿ ಒತ್ತುವರಿದಾರರಿಗೆ ಯಾವುದೇ ರೀತಿಯ ಬೆಂಬಲ ನೀಡುವುದಿಲ್ಲ. ಆದರೆ, ರೈತರು ಸಾಗುವಳಿ ಮಾಡಿಕೊಂಡಿರುವುದನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೂಡಲೇ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯಾಗಲಿ: ಕೆ.ಎಸ್.ಈಶ್ವರಪ್ಪ
ಕಾವೇರಿ ವಿಷಯದಲ್ಲಿ ರಾಜಕೀಯ ಬೇಡ: ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಷಯದಲ್ಲಿ ರಾಜಕೀಯ ಬದಿಗಿಟ್ಟು ರಾಜ್ಯದ ಹಿತಕಾಪಾಡಲು ಕೆಲಸ ಮಾಡಬೇಕು. ದೆಹಲಿಯಲ್ಲಿ ಕೇಂದ್ರ ಜಲ ಸಂಪನ್ಮೂಲ ಸಚಿವ ಶೇಖಾವತ್, ಪ್ರಹ್ಲಾದ್ ಜೋಷಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾವೇರಿ ಜಲವಿವಾದಕ್ಕೆ ಸಂಬಂಧಪಟ್ಟಂತೆ ಸಂಸದರು ತಮ್ಮ ಬದ್ಧತೆ ತೋರಿಸಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅನಂತರ ಹೊರಗಡೆ ಮಾಧ್ಯಮಗಳ ಮುಂದೆ ಸಂಸದರು ಕೆಲಸ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ವಾಸ್ತವವಾಗಿ ಕೇಂದ್ರ ಸರ್ಕಾರ ರಾಜ್ಯದ ಪರವಾಗಿದೆ. ಮುಂದಿನ ಚುನಾವಣೆಯಲ್ಲಿ ಮೋದಿ ಸೋಲಿಸಲು ವಿಪಕ್ಷಗಳು ಮಾಡಿಕೊಂಡಿರುವ ಇಂಡಿಯಾ ಒಕ್ಕೂಟದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಕೂಡ ಇದ್ದಾರೆ. ಸೀಟು ಹೊಂದಾಣಿಕೆ ವಿಷಯದಲ್ಲಿ ಸ್ಟಾಲಿನ್ ಮನವೊಲಿಸುವ ಶಕ್ತಿ ಇರುವ ಸಿದ್ದರಾಮಯ್ಯ ಅವರಿಗೆ ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಅವನರನ್ನು ಮನವೊಲಿಸಲು ಸಾಧ್ಯವಿಲ್ಲವೆ ಎಂದು ಪ್ರಶ್ನಿಸಿದರು.