ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಡಲ್ಲ: ಮಾಜಿ ಸಚಿವ ಆನಂದ್‌ ಸಿಂಗ್‌

By Kannadaprabha News  |  First Published Oct 2, 2023, 10:03 PM IST

ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ. ವಿಜಯನಗರ ಕ್ಷೇತ್ರದ ಜನರು ನಾಲ್ಕು ಬಾರಿ ಗೆಲುವು ಸಾಧಿಸಲು ಅವಕಾಶ ನೀಡಿದ್ದಾರೆ. ಎಂದಿಗೂ ಅವರಿಗೆ ಋಣಿಯಾಗಿರುವೆ ಎಂದು ಮಾಜಿ ಸಚಿವ ಆನಂದ್‌ ಸಿಂಗ್‌ ತಿಳಿಸಿದರು. 


ಹೊಸಪೇಟೆ (ಅ.02): ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಯಾರೂ ಮುಂದೆ ಬಾರದಿದ್ದರೆ ಸರ್ಕಾರ 150 ಎಕರೆ ಜಮೀನು ನೀಡಿದರೆ ನಾನು ಕಾರ್ಖಾನೆ ಸ್ಥಾಪನೆ ಮಾಡುವೆ. ಈ ಭಾಗದ ರೈತರ ಹಿತಕ್ಕಾಗಿ ಭುವನೇಶ್ವರಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವೆ ಎಂದು ಮಾಜಿ ಸಚಿವ ಆನಂದ್‌ ಸಿಂಗ್‌ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಜಿ.ಎಂ.‌ ಸಿದ್ದೇಶ್ವರ ಸಹೋದರರಿಗೆ 84.16 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಲಾಗಿದೆ. ಹಿಂದಿನ ಸರ್ಕಾರ ಜಮೀನು ಮಂಜೂರು ಮಾಡಿದೆ. ಹಂಪಿ ಶುಗರ್ಸ್ ಹೆಸರಿನಲ್ಲಿ ಕಾರ್ಖಾನೆ ಸ್ಥಾಪನೆ ಮಾಡಲು ಎಲ್ಲ ಸಿದ್ಧತೆಯೂ ನಡೆದಿದೆ. 

ಜಮೀನು ಹಸ್ತಾಂತರ ಮಾಡಿದರೆ ಕಾರ್ಖಾನೆ ಸ್ಥಾಪನೆಯಾಗಲಿದೆ. ಈಗ ಆ ಜಮೀನು ನೀಡಲು ಹಿಂದೇಟು ಹಾಕಲಾಗುತ್ತಿದೆ. ಈ 84 ಎಕರೆ ಜಾಗ, ಆರ್‌ಬಿಎಸ್ಎಸ್ಎನ್ ಮೈನ್ಸ್ ಬಳಿ ಇರುವ ೮೦ ಎಕರೆ ಜಾಗ, ಇನ್ನೂ ಸ್ವಲ್ಪ ಜಾಗ ಸೇರಿ 194 ಎಕರೆ ಜಾಗ ಇದೆ. ಹಾಗಾಗಿ ಈ ಸ್ಥಳ ನೀಡಿದರೆ ಕಾರ್ಖಾನೆ ಸ್ಥಾಪನೆಯಾಗಲಿದೆ. ಈಗ ಈ ಜಾಗ ಬಡವರಿಗೆ ನಿವೇಶನ ನೀಡುತ್ತೇವೆ ಎಂದು ಶಾಸಕ ಎಚ್‌.ಆರ್‌. ಗವಿಯಪ್ಪ ಅವರು ಹೇಳುತ್ತಿದ್ದಾರೆ. ಅವರ ಆಲೋಚನೆಯೂ ಸರಿಯಾಗಿದೆ. ಸೂಕ್ತ ಸ್ಥಳದಲ್ಲಿ ಜಾಗ ನೀಡಿದರೆ ಕಾರ್ಖಾನೆ ಸ್ಥಾಪನೆಯಾಗಲಿದೆ ಎಂದರು.

Tap to resize

Latest Videos

undefined

ರೈತರ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತರುವೆ: ಸಚಿವ ಪರಮೇಶ್ವರ್

ಕಾರ್ಖಾನೆ ಸ್ಥಾಪನೆಗೆ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಮಾಲೀಕ ಸಿದ್ಧಾರ್ಥ ಮೊರಾರ್ಕ್‌ ಸೇರಿದಂತೆ ಸ್ಥಳೀಯ ಉದ್ಯಮಿಗಳು ಮುಂದೆ ಬಂದರೆ ನಾನು ಸ್ವಾಗತಿಸುವೆ. ಶಾಸಕ ಗವಿಯಪ್ಪ ಅವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್ ಖಾನ್‌ ಅವರು ಸ್ಥಳೀಯ ಉದ್ಯಮಿಗಳನ್ನು ಒಪ್ಪಿಸಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಿದರೆ ಒಳ್ಳೆಯದು. ಸರ್ಕಾರಕ್ಕೆ ಒಪ್ಪಿಸಿ ಸಹಕಾರ ರಂಗದ ಕಾರ್ಖಾನೆ ಸ್ಥಾಪನೆ ಮಾಡಿದರೆ ಉತ್ತಮ. ಒಂದು ವೇಳೆ, ಕಾರ್ಖಾನೆ ಸ್ಥಾಪನೆ ಮಾಡಲು ಯಾರೂ ಮುಂದೆ ಬಾರದಿದ್ದರೆ, ನಾನು ಕಾರ್ಖಾನೆ ಸ್ಥಾಪನೆ ಮಾಡುವೆ ಎಂದರು.

ನನ್ನ ಪಾಲಿಲ್ಲ: ಹಂಪಿ ಶುಗರ್ಸ್‌ ಕಾರ್ಖಾನೆಯಲ್ಲಿ ನನ್ನ ಪಾಲಿಲ್ಲ. ನಾನು ಪಾಲುದಾರನೆಂದು ಪುಕಾರು ಎಬ್ಬಿಸಲಾಗಿದೆ. ನನ್ನ ತಂದೆ ಪೃಥ್ವಿರಾಜ್‌ ಸಿಂಗ್, ಶ್ರೀವೇಣುಗೋಪಾಲ ಕೃಷ್ಣಸ್ವಾಮಿ ಮೇಲೆ ಪ್ರಮಾಣ ಮಾಡಿ ಹೇಳುವೆ. ಇಂತಹ ಹೊಲಸು ಕೆಲಸ ನಾನು ಮಾಡಿಲ್ಲ ಎಂದು ಆನಂದ ಸಿಂಗ್‌ ಸ್ಪಷ್ಟಪಡಿಸಿದರು.

ಪ್ರತಿಷ್ಠೆ ಬೇಡ: ನಾವು ಯಾವತ್ತೂ ದ್ವೇಷದ ರಾಜಕಾರಣ ಮಾಡಿಲ್ಲ, ಮಾಡಲು ಹೋಗುವುದಿಲ್ಲ. ಕೆಲವರು ಅಸೂಯೆಯಿಂದ ಹೀಗೆ ಹೇಳುತ್ತಾರೆ. ಶಾಸಕ ಗವಿಯಪ್ಪ ಅವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಷ್ಠೆಗೆ ತೆಗೆದುಕೊಳ್ಳದೇ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಜಾಗ ನೀಡಲಿ ಎಂದು ಆನಂದ ಸಿಂಗ್‌ ಹೇಳಿದರು.

ನಾನೀಗ ಪಕ್ಕಾ ಉದ್ಯಮಿ: ನಾನೀಗ ಪಕ್ಕಾ ಉದ್ಯಮಿಯಾಗಿರುವೆ. ರಾಜಕಾರಣದಿಂದ ದೂರವೇ ಉಳಿದಿರುವೆ. ಉದ್ಯಮ ನೋಡಿಕೊಂಡು ಹೋಗುತ್ತಿರುವೆ. ಈಗೀಗ ರಾಜಕಾರಣ ಕೂಡ ಸರಿಯಿಲ್ಲ ಎನಿಸತೊಡಗಿದೆ. ಕೊಪ್ಪಳದಿಂದಲೂ ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ಇವೆಲ್ಲ ಬರೀ ಗಾಳಿ ಸುದ್ದಿ ಎಂದು ಸ್ಪಷ್ಟಪಡಿಸಿದರು.

ಎಂದಿಗೂ ಬಿಜೆಪಿ ಬಿಡಲ್ಲ: ಯಾವುದೇ ಕಾರಣಕ್ಕೂ ಪಕ್ಷ ಬಿಡಲ್ಲ. ವಿಜಯನಗರ ಕ್ಷೇತ್ರದ ಜನರು ನಾಲ್ಕು ಬಾರಿ ಗೆಲುವು ಸಾಧಿಸಲು ಅವಕಾಶ ನೀಡಿದ್ದಾರೆ. ಎಂದಿಗೂ ಅವರಿಗೆ ಋಣಿಯಾಗಿರುವೆ ಎಂದರು. ಶಾಸಕ ಗವಿಯಪ್ಪ ಅವರು ಶ್ರೀಮಂತರನ್ನು ಶ್ರೀಮಂತರನ್ನಾಗಿಸಲು ನಾನು ಶಾಸಕರನ್ನಾಗಿಲ್ಲ ಎಂದು ಹೇಳಿದ್ದಾರೆ. ಅವರ ಆಲೋಚನೆ ಒಳ್ಳೆಯದಾಗಿದೆ. ನನ್ನ ಅವಧಿಯಲ್ಲಿ 600 ನಿವೇಶನಗಳನ್ನು ನೀಡಲು ಮಾತ್ರ ಸಾಧ್ಯವಾಗಿದೆ. ನಾನು ಪ್ರಯತ್ನಪಟ್ಟೆ, ಸಫಲವಾಗಲಿಲ್ಲ. ಅವರು ಬಡವರಿಗೆ ನಿವೇಶನ ನೀಡುವ ಆಲೋಚನೆ ಹೊಂದಿದ್ದಾರೆ. ಇದನ್ನು ಸ್ವಾಗತಿಸುವೆ ಎಂದರು.

ಶಾಸಕ ಗವಿಯಪ್ಪ ಮುಂದೆ ಬಂದರೆ, ಅವರ ಜತೆಗೂಡಿ ಸಕ್ಕರೆ ಕಾರ್ಖಾನೆ ಹಾಕುವೆ. ರೈತರ ಒಳಿತಿಗಾಗಿ ಕೆಲಸ ಮಾಡಬೇಕು. ಈ ಭಾಗದ ರೈತರಿಗೆ ಅನುಕೂಲವಾಗುವ ಕಾರ್ಯ ಮಾಡೋಣ ಎಂದರು. ಜಿಂದಾಲ್‌, ಬಿಎಂಎಂ ಕಾರ್ಖಾನೆಗಳಿಗೆ ಸರ್ಕಾರಿ ಜಮೀನು ನೀಡಿಲ್ಲವೆ? ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಹಿಂದಿನ ಸರ್ಕಾರ ಜಮೀನು ನೀಡಿದೆ. ಇದು ರೈತರ ಪರವಾದ ಕಾರ್ಯವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೆಡಿಕಲ್‌ ಕಾಲೇಜು ಸ್ಥಾಪನೆ ಮಾಡಲಿ: ಮೆಡಿಸಿಟಿ ಸ್ಥಾಪನೆಗಾಗಿ 50 ಎಕರೆ ಜಾಗ ಗುರುತಿಸಲಾಗಿದೆ. ಜಿಲ್ಲಾಸ್ಪತ್ರೆಗೆ ಐದು ಎಕರೆ ಜಾಗ ಮಾತ್ರ ಹಸ್ತಾಂತರ ಆಗಿದೆ. ಉಳಿದ ಜಾಗ ಹಸ್ತಾಂತರ ಮಾಡಿಕೊಂಡು ಮೆಡಿಕಲ್ ಕಾಲೇಜ್, ನರ್ಸಿಂಗ್‌ ಕಾಲೇಜು, ವೈದ್ಯರ ವಸತಿಗೃಹಕ್ಕೆ ಬಳಕೆ ಮಾಡಿಕೊಳ್ಳಬೇಕು. ಈ ಕಾರ್ಯ ಆಗಬೇಕು. ಜಿಲ್ಲೆಯ ಪ್ರಗತಿಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಸೋಲಿಸಲು ಬಿಜೆಪಿ-ಜೆಡಿಎಸ್ ಒಂದಾಗಿದೆ: ನಿಖಿಲ್ ಕುಮಾರಸ್ವಾಮಿ

ಗವಿಯಪ್ಪ ಪರ ಪ್ರಚಾರ ಮಾಡಿರುವೆ: ಗವಿಯಪ್ಪ ಅವರ ಪರ ನಾನು 2004ರಲ್ಲಿ ಪ್ರಚಾರ ಮಾಡಿರುವೆ. ಆಗ ನಾನು ಸಮಾಜಸೇವಕನಾಗಿದ್ದೆ. ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು. ನನಗೆ ರಾಜಕಾರಣ ಕೂಡ ಹೊಸತಾಗಿತ್ತು. ಕ್ಷೇತ್ರದ ಜನರು ನನ್ನನ್ನು ನಾಲ್ಕು ಬಾರಿ ಆಯ್ಕೆ ಮಾಡಿದ್ದರೂ ನಾನು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಮೊದಲೇ ಹೇಳಿದ್ದೆ. ಬಿಜೆಪಿ ನಾಯಕರಿಗೂ ತಿಳಿಸಿದ್ದೆ. ಹಾಗಾಗಿ ಸಿದ್ಧಾರ್ಥ ಸಿಂಗ್‌ಗೆ ಟಿಕೆಟ್‌ ನೀಡಲಾಯಿತು ಎಂದರು.

click me!