ಬೆಳಗಾವಿ ಎಂದರೆ ಶೆಟ್ಟರಿಗೆ ಸಿಟ್ಟು ಬರ್ತಿತ್ತು: ಚನ್ನರಾಜ ಹಟ್ಟಿಹೊಳಿ

By Kannadaprabha NewsFirst Published Apr 18, 2024, 8:32 AM IST
Highlights

ಶೆಟ್ಟರ್ ಅವರೇ ನೀವು ಬೆಳಗಾವಿಗೆ ಅನ್ಯಾಯ ಮಾಡಿದ್ದಕ್ಕೆ ಉತ್ತರಿಸಬೇಕು. ಮುಖ್ಯಮಂತ್ರಿಯಾಗಿದ್ದಾಗ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಬೆಳಗಾವಿಗೆ ಯೋಜನೆ ತರಲು ಅವಕಾಶವಿತ್ತು. ಕೈಗಾರಿಕೆಯಂತಹ ಉತ್ತಮ ಖಾತೆಯೂ ಇತ್ತು. ಆದರೆ, ನಿಮಗೆ ಕೇವಲ ಹುಬ್ಬಳ್ಳಿ-ಧಾರವಾಡ ಮಾತ್ರ ಕಾಣುತ್ತಿತ್ತು. ಬೆಳಗಾವಿ ಅಸಮಾನತೆಯಿಂದ ಬಳಲುತ್ತಿದೆ: ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ 

ಬೆಳಗಾವಿ(ಏ.18):  ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಬೆಳಗಾವಿ ನನ್ನ ಕರ್ಮಭೂಮಿ ಎನ್ನುತ್ತಿರುವ ಜಗದೀಶ ಶೆಟ್ಟರ್ ಸಚಿವರಾಗಿದ್ದಾಗ ಬೆಳಗಾವಿ ಎಂದರೆ ಸಿಟ್ಟು ಬರುತ್ತಿತ್ತು. ನಾನು ಬೆಳಗಾವಿಗೆ ಇಂಡಸ್ಟ್ರಿಯಲ್ ಕಾರಿಡಾರ್ ಮಾಡೋಣ ಎಂದು ಒತ್ತಾಯಿಸಿದ್ದಕ್ಕೆ ನನ್ನ ಮೇಲೆ ಮುನಿಸಿಕೊಂಡಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಆರೋಪಿಸಿದರು.

ಬೆಳಗಾವಿಯ ಕಣಬರ್ಗಿಯಲ್ಲಿ ಮಂಗಳವಾರ ಸಂಜೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಜಗದೀಶ ಶೆಟ್ಟರ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಬೆಂಗಳೂರಿನಲ್ಲಿ ಉದ್ಯಮಿಗಳ ಸಭೆ ಕರೆದಿದ್ದರು. ಆ ಸಭೆಯಲ್ಲಿ ಉದ್ಯಮಿಯಾಗಿ ನಾನು ಸಹ ಭಾಗವಹಿಸಿದ್ದೆ. ಯಾವುದೇ ಕೈಗಾರಿಕೆ ಸ್ಥಾಪನೆ ಮತ್ತು ಇಂಡಸ್ಟ್ರಿಯಲ್ ಕಾರಿಡಾರ್ ವಿಷಯ ಬಂದಾಗ ಹುಬ್ಬಳ್ಳಿಗೆ ಎನ್ನುತ್ತಿದ್ದರು. ಆ ಸಂದರ್ಭದಲ್ಲಿ ನಾನು, ಇಂಡಸ್ಟ್ರಿಯಲ್ ಕಾರಿಡಾರ್ ಬೆಳಗಾವಿಯಲ್ಲಿ ಸ್ಥಾಪಿಸೋಣ ಎಂದು ಹೇಳಿದೆ. ಇದಕ್ಕೆ ಅವರು ಸರಿಯಾದ ಉತ್ತರವನ್ನೂ ನೀಡದೆ ನನ್ನ ಮೇಲೆ ಮುನಿಸಿಕೊಂಡರು. ಬೆಳಗಾವಿ ಎಂದರೆ ಅವರಿಗೆ ಅಸಡ್ಡೆಯಾಗಿತ್ತು. ಅಂತಹ ಶೆಟ್ಟರ್ ಇಂದು ನಿಮ್ಮ ಮತ ಕೇಳಲು ಬೆಳಗಾವಿ ನನ್ನ ಕರ್ಮ ಭೂಮಿ ಎನ್ನುತ್ತಿದ್ದಾರೆ. ಬೆಳಗಾವಿಗೆ ಅನ್ಯಾಯ ಮಾಡಿರುವ ನಿಮಗೆ ಮತ ನೀಡಲು ಬೆಳಗಾವಿಗರೇನು ಹುಚ್ಚರಾ ಎಂದು ಪ್ರಶ್ನಿಸಿದರು.

ಬಿಜೆಪಿಯವರು ಸೋಲಿನ ಭೀತಿಯಿಂದ ಐಟಿ, ಇಡಿ, ಸಿಬಿಐ ಸಂಸ್ಥೆಗಳಿಂದ ದಾಳಿ ಮಾಡಿಸ್ತಾರೆ; ಸಂಸದ ಡಿ.ಕೆ. ಸುರೇಶ್!

ಶೆಟ್ಟರ್ ಅವರೇ ನೀವು ಬೆಳಗಾವಿಗೆ ಅನ್ಯಾಯ ಮಾಡಿದ್ದಕ್ಕೆ ಉತ್ತರಿಸಬೇಕು. ಮುಖ್ಯಮಂತ್ರಿಯಾಗಿದ್ದಾಗ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಬೆಳಗಾವಿಗೆ ಯೋಜನೆ ತರಲು ಅವಕಾಶವಿತ್ತು. ಕೈಗಾರಿಕೆಯಂತಹ ಉತ್ತಮ ಖಾತೆಯೂ ಇತ್ತು. ಆದರೆ, ನಿಮಗೆ ಕೇವಲ ಹುಬ್ಬಳ್ಳಿ-ಧಾರವಾಡ ಮಾತ್ರ ಕಾಣುತ್ತಿತ್ತು. ಬೆಳಗಾವಿ ಅಸಮಾನತೆಯಿಂದ ಬಳಲುತ್ತಿದೆ. ಹುಬ್ಬಳ್ಳಿ-ಧಾರವಾಡದ ಮಟ್ಟದಲ್ಲಿ ಬೆಳೆಯಬೇಕೆಂದರೆ ಯುವಕ ಮೃಣಾಲ್‌ ಹೆಬ್ಬಾಳಕರ್ ಅವರಿಗೆ ಮತ ನೀಡಿ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.

ಶಾಸಕ ರಾಜು ಸೇಠ್, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್‌ ಮಾತನಾಡಿದರು. ಸ್ಥಳೀಯ ಮುಖಂಡರಾದ ಪರಶುರಾಮ ವಂಟಮುರಿ, ಮಹೇಶ ಶೀಗೆಹಳ್ಳಿ, ಯಲ್ಲಪ್ಪ ಕುರುಬರ, ಸುಧೀರ್ ಗಡ್ಡಿ, ಬಾವಕಣ್ಣ ಬಂಗ್ಯಾಗೊಳ, ಭೈರಗೌಡ ಪಾಟೀಲ, ಬಾಬು ಟ್ಯಾನಗಿ, ನಾಗರಾಜ ಮೇಸಿ, ಬಸವರಾಜ ಬಡಕನ್ನವರ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಬಂಟರ ಸಂಘದ ಸಭೆ

ಇದಕ್ಕೂ ಮೊದಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕ ರಾಜು ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಬೆಳಗಾವಿ ಬಂಟರ ಸಂಘದ ಸಭೆ ನಡೆಸಿ, ಮತ ಯಾಚಿಸಿದರು. ಬೆಳಗಾವಿ ಅಭಿವೃದ್ಧಿಗೆ ಬಂಟರ ಕೊಡುಗೆ ಶ್ಲಾಘಿಸಿದ ಸಚಿವೆ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಗೆ ಮತ ನೀಡಿ ಇನ್ನಷ್ಟು ಅಭಿವೃದ್ಧಿಗೆ ಕೈ ಜೋಡಿಸುವಂತೆ ಮಾನವಿ ಮಾಡಿದರು.

ಈ ವೇಳೆ ಮಾತನಾಡಿದ ಬಂಟರ ಸಂಘದ ಪದಾಧಿಕಾರಿಗಳು ಬೆಂಬಲದ ಭರವಸೆ ನೀಡಿದರು. ಸಭೆಯಲ್ಲಿ ಬಂಟರ ಸಂಘದ ಗೌರವಾಧ್ಯಕ್ಷ ವಿಠ್ಠಲ ಹೆಗ್ಡೆ, ಪ್ರಮುಖರಾದ ರತ್ನಾಕರ್ ಶೆಟ್ಟಿ, ವಿಜಯ್ ಶೆಟ್ಟಿ, ರವೀಂದ್ರ ಶೆಟ್ಟಿ, ಪ್ರಣಯ್ ಶೆಟ್ಟಿ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬೆಳೆಯುತ್ತಿರುವ ಬೆಳಗಾವಿಗೆ ಕೆಲಸ ಮಾಡುವ ಸಂಸದ ಬೇಕು

ಬೆಳಗಾವಿ: ವೇಗವಾಗಿ ಬೆಳೆಯುತ್ತಿರುವ ಬೆಳಗಾವಿಗೆ ನಗರಕ್ಕೆ ಅಷ್ಟೇ ವೇಗವಾಗಿ ಕೆಲಸ ನಿರ್ವಹಿಸುವ ಸಂಸದ ಬೇಕು.‌ ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಅವರನ್ನು ಗೆಲ್ಲಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಮನವಿ ಮಾಡಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಮೊಬೈಲ್ ಬಿಲ್ 5000 ದಾಟುತ್ತಿತ್ತು, ಕಾಂಗ್ರೆಸ್ ಕುಟುಕಿದ ಮೋದಿ!

ಇಲ್ಲಿನ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಮಂಗಳವಾರ ನಡೆದ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಸಚಿವರು, ಬೆಳಗಾವಿ ಎಲ್ಲಾ ದಿಕ್ಕಿನಲ್ಲಿ ಬೆಳೆಯುತ್ತಿದೆ. ಬೆಳೆಯುತ್ತಿರುವ ಬೆಳಗಾವಿಗೆ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ತರಬೇಕಾಗಿದೆ. ಇಲ್ಲಿನ ಯುವಕರಿಗೆ ಉದ್ಯೋವಕಾಶ ಕಲ್ಪಿಸಬೇಕಿದೆ. ಹೀಗಾಗಿ ಉತ್ಸಾಹದಿಂದ ಕೆಲಸ ಮಾಡುವ ಸಂಸದ ಬೇಕು. ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರಿಗೆ ಬೆಳಗಾವಿ ಮೇಲೆ ಅಭಿಮಾನವೂ ಇಲ್ಲ. ಕೆಲಸ ಮಾಡುವ ಹಸಿವೂ ಇಲ್ಲ. ಅಂತಹವರನ್ನು ತಿರಸ್ಕರಿಸಿ, ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕ ಫಿರೋಜ್ ಸೇಠ್ ಮಾತನಾಡಿದರು. ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್‌, ಆಮ್ ಆದ್ಮಿ ಪಕ್ಷದ ಗಿರೀಶ್ ಬಾಳೆಕುಂದ್ರಿ, ದಿನೇಶ ಬಾಳೆಕುಂದ್ರಿ, ಆರ್.ಪಿ. ಪಾಟೀಲ ಮೊದಲಾದವರು ಮಾತನಾಡಿದರು. ಈ ವೇಳೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್, ಮಾಜಿ ಸಚಿವ ‌ಶಶಿಕಾಂತ ನಾಯಕ, ಬೆಳಗಾವಿ ಬಾರ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎಸ್. ಕಿವುಡಸಣ್ಣನವರ, ಮಾಜಿ ಮೇಯರ್ ಎನ್.ಬಿ. ನಿರ್ವಾಣಿ, ಮಾಜಿ ಉಪ ಮೇಯರ್ ಜ್ಯೋತಿ ಭಾವಿಕಟ್ಟಿ, ಮಾಜಿ ಕಾರ್ಪೋರೇಟರ್ ಅನುಶ್ರೀ ದೇಶಪಾಂಡೆ, ಪುಷ್ಪ ಪರ್ವತರಾವ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

click me!