ಆಪಾದನೆ ಬಂದಿದ್ದಕ್ಕೆಲ್ಲಾ ರಾಜೀನಾಮೆ ಕೊಡಬೇಕು ಎನ್ನುವ ನಿಯಮವಿರುವುದಾದರೆ ಮೊದಲು ಪ್ರಧಾನಿ ಮೋದಿಯವರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದ ಕಾಂಗ್ರೆಸ್ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್
ವರದಿ: ರವಿ.ಎಸ್. ಹಳ್ಳಿ. ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಸೆ.01): ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಮರಿಯಡಿಯೂರಪ್ಪ(ಬಿ.ವೈ.ವಿಜಯೇಂದ್ರ) ಇಬ್ಬರೂ ದುರ್ಬಲರು. ಹೀಗಾಗಿಯೇ ಭಾರತೀಯ ಜನತಾ ಪಾರ್ಟಿ ರಾಜಭವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಲೇವಡಿ ಮಾಡಿದ್ದಾರೆ.
ರಾಜ್ಯ ಸರ್ಕಾರವೇ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡುವುದು ಸರಿಯಲ್ಲ. ಹಾಗೆ ಪ್ರತಿಭಟನೆ ಮಾಡುವುದಾದರೆ ಸಿಎಂ, ಡಿಸಿಎಂ ಹಾಗೂ ಎಲ್ಲಾ ಸಚಿವರುಗಳು ರಾಜೀನಾಮೆ ನೀಡಿ ಬಳಿಕ ಪ್ರತಿಭಟನೆ ಮಾಡಲಿ ಎಂಬ ವಿಪಕ್ಷ ನಾಯಕ ಆರ್. ಅಶೋಕ್ ಅವರ ಹೇಳಿಕೆಗೆ ಇಂದು(ಭಾನುವಾರ) ಮಡಿಕೇರಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಬಿ.ಕೆ. ಹರಿಪ್ರಸಾದ್ ಅವರು, ರಾಜ್ಯಪಾಲರು ಯಾವತ್ತಿದ್ದರೂ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು. ಅವರು ಯಾವತ್ತಿಗೂ ಪಕ್ಷಾತೀತವಾಗಿರಬೇಕು. ಪಕ್ಷದ ಪರವಹಿಸಿದರೆ ಅದು ಕಾನೂನು ಬಾಹಿರ ಮತ್ತು ಅಸಂವಿಧಾನಿಕವಾಗುತ್ತದೆ. ರಾಜ್ಯಪಾಲರು ಹೀಗೆ ಅಸಂವಿಧಾನಿಕವಾಗಿ ನಡೆದುಕೊಂಡಿದ್ದರಿಂದ ನಾವು ಪ್ರತಿಭಟನೆ ಮಾಡಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಸಂವಿಧಾನವೇ ಪರಮೋಚ್ಛ. ಅವರು ಒಂದು ರಾಜಕೀಯ ಪಕ್ಷದ ಪರವಹಿಸಿದರಿಂದ ನಾವು ಪ್ರತಿಭಟನೆ ನಡೆಸಿದ್ದೇವೆ ಎಂದರು.
ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ: ಬಿಜೆಪಿಗರ ವಿರುದ್ಧ ಕಾಂಗ್ರೆಸ್ ನಾಯಕ ಗರಂ
ಎಲ್ಲರೂ ರಾಜೀನಾಮೆ ನೀಡಿದ ಬಳಿಕ ಪ್ರತಿಭಟನೆ ಮಾಡಲಿ ಎಂದಿರುವ ಆರ್. ಅಶೋಕ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಹರಿಪ್ರಸಾದ್ ಅವರು, ಆಪಾದನೆ ಬಂದಿದ್ದಕ್ಕೆಲ್ಲಾ ರಾಜೀನಾಮೆ ಕೊಡಬೇಕು ಎನ್ನುವ ನಿಯಮವಿರುವುದಾದರೆ ಮೊದಲು ಪ್ರಧಾನಿ ಮೋದಿಯವರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.
ಚುನಾವಣಾ ಬಾಂಡ್ ಅವ್ಯವಹಾರದಲ್ಲಿ ಸುಪ್ರೀಂ ಕೋರ್ಟ್ ಯಾವ ಶಿಕ್ಷೆ ನೀಡಿದೆ. ಹಾಗೇ ನೋಟು ಅಮಾನ್ಯೀಕರಣದಿಂದ ಎಷ್ಟು ಸಾವು ನೋವಾಯಿತು, ಎಷ್ಟು ನಷ್ಟವಾಯಿತು ಎನ್ನುವುದನ್ನು ಸುಪ್ರಿಂಕೋರ್ಟ್ ಹೇಳಿದೆಯಲ್ಲ. ಹಾಗಾದರೆ ಪ್ರಧಾನಿ ಮೋದಿಯವರು ರಾಜೀನಾಮೆ ನೀಡಬೇಕಲ್ಲವೆ ಎಂದರು.
ಇನ್ನು ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ಪ್ರಾಸ್ಯಿಕ್ಯೂಸನ್‌ಗೆ ಸಂಬಂಧಿಸಿದಂತೆ ನಾಳೆ ಹೈಕೋರ್ಟ್‌ನಲ್ಲಿ ತೀರ್ಪು ಬರಲಿದ್ದು ಏನಾಗಬಹುದು ಎಂಬ ನಿರೀಕ್ಷೆ ಇದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್ ಅವರು, ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಹೀಗೆ ಬರಬೇಕು ಎಂದು ನಾವು ನೀವು ಹೇಳಲು ಆಗುವುದಿಲ್ಲ. ಆದರೆ ಹೈಕೋರ್ಟ್ ಇಲ್ಲದಿದ್ದರೆ ಸುಪ್ರೀಂಕೋರ್ಟ್ ಇದೆಯಲ್ಲ ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ರಾಜ್ಯದ ತೆರಿಗೆ ಹಣವನ್ನು ಲೂಟಿ ಮಾಡಿದವರು ಯಾರೇ ಆಗಲಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದರು.
ಕುಮಾರಸ್ವಾಮಿ ಕ್ಷುಲ್ಲಕ ರಾಜಕಾರಣ ಮಾಡೋದನ್ನ ಬಿಟ್ಟು, ಸರಿಯಾಗಿ ಮಂತ್ರಿಗಿರಿ ನಿಭಾಯಿಸಲಿ: ಪೊನ್ನಣ್ಣ ವಾಗ್ದಾಳಿ
ಕೋವಿಡ್ ಕಾಲದ ಹಗರಣದ ಕುರಿತು ನಡೆದಿರುವ ತನಿಖಾ ವರದಿಯನ್ನು ಸಮಿತಿಯು ಸಿಎಂ ಅವರಿಗೆ ಸಲ್ಲಿಕೆ ಮಾಡಿರುವುದಕ್ಕೆ ಸಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದರು. ಸಿಎಂ ಅವರು ಆದಷ್ಟು ಬೇಗನೇ ವರದಿಯನ್ನು ಬಹಿರಂಗ ಪಡಿಸಲಿ. ಯಾರು ತಪ್ಪಿತಸ್ಥರು ಇದ್ದಾರೋ ಅವರಿಗೆ ಶಿಕ್ಷೆ ಕೊಡಿಸುವ ಕೆಲಸವಾಗಲಿ ಎಂದರು.
ಕಾಂಗ್ರೆಸ್ ಮೇಲಿನ ಹಗರಣಗಳನ್ನು ಮುಚ್ಚುವುದಕ್ಕೆ, ಬಿಜೆಪಿಯನ್ನು ಕಟ್ಟಿಹಾಕುವುದಕ್ಕೆ ಮಾಡುತ್ತಿರುವ ತಂತ್ರವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಬಿಜೆಪಿಯನ್ನು ಕಟ್ಟಿಹಾಕುವುದಕ್ಕೆ ಮಾಡಿಸಿರುವ ತನಿಖಾ ವರದಿ ಇದಲ್ಲ. ಯಾರೇ ತಪ್ಪು ಮಾಡಿರಲಿ, ಯಾವ ಪಕ್ಷದವರೇ ಆಗಿರಲಿ ಶಿಕ್ಷೆ ಆಗಲೇ ಬೇಕು. ರಾಜ್ಯದ ಜನಸಾಮಾನ್ಯರು ರಕ್ತ, ಬೆವರು ಸುರಿಸಿ ಕಟ್ಟಿದ ತೆರಿಗೆಯ ಹಣ ಅದು. ಅದನ್ನು ಲೂಟಿ ಹೊಡೆದವರಿಗೆ ಶಿಕ್ಷೆ ಆಗಬೇಕು. ಹಾಗೆ ನೋಡಿದರೆ ಬಿಜೆಪಿಯವರದು ಹಗರಣಗಳ ಸರಮಾಲೆಯೇ ಇದೆ. ನರೇಂದ್ರ ಮೋದಿಯವರಿಂದ ಹಿಡಿದು ಯಡಿಯೂರಪ್ಪನವರೆಗೂ ಆಗಿರುವ ಹಗರಣಗಳ ನೋಡಿದಾಗ ನಾಚಿಕೆ ಪಡಬೇಕು ಅವರು. ಈಗ ಆಪರೇಷನ್ ಕಮಲಕ್ಕೆ ಬಿಜೆಪಿ ಕುಖ್ಯಾತಿ ಆಗುತ್ತಿದೆ ಎಂದು ಬಿಜೆಪಿ ವಿರುದ್ಧ ಹರಿಪ್ರಸಾದ್ ಹರಿಹಾಯ್ದರು.