
ಹೂವಿನಹಡಗಲಿ (ಜೂ.23): ವಸತಿ ನಿಗಮದಲ್ಲಿನ ಭ್ರಷ್ಟಾಚಾರದ ಕರ್ಮಕಾಂಡವನ್ನು ಕೈ ಶಾಸಕರೇ ಬಯಲು ಮಾಡಿರುವ ಕಾರಣ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಒತ್ತಾಯಿಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ ಅವರು ಸಮಾಜವಾದಿ ಹಿನ್ನೆಲೆಯಲ್ಲಿ ಬೆಳೆದಿದ್ದಾರೆ. ಶಾಸಕರ ಕೆಲಸ ಆಗುತ್ತಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ತಹಸೀಲ್ದಾರ್ ಕಚೇರಿಯಲ್ಲಿ ತಾಂಡವವಾಡುತ್ತಿರುವ ಲಂಚಾವತಾರವನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೇ ಅನಾವರಣಗೊಳಿಸಿ, ರೇಟ್ ಬೋರ್ಡ್ ಹಾಕಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎನ್ನುವುದಕ್ಕೆ ಇನ್ನೆಂಥ ಪುರಾವೆ ಬೇಕು? ಎಂದು ಅವರು ಪ್ರಶ್ನಿಸಿದರು. ಸಚಿವ ಕೃಷ್ಣ ಬೈರೇಗೌಡ, ಶಾಸಕರಾದ ಬಿ.ಆರ್.ಪಾಟೀಲ್, ಬಸವರಾಜ ರಾಯರೆಡ್ಡಿ ಅವರ ಹೇಳಿಕೆಗಳೇ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಸಾಬೀತು ಮಾಡುತ್ತಿವೆ ಎಂದು ಅವರು ದೂರಿದರು.
ವಸತಿಯಲ್ಲೂ ಮುಸ್ಲಿಮರಿಗೆ ಮೀಸಲು: ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ. 15ರಷ್ಟು ಮೀಸಲಾತಿ ನೀಡುವ ರಾಜ್ಯ ಸರ್ಕಾರದ ನಿರ್ಧಾರ ತುಷ್ಟೀಕರಣದ ಪರಮಾವಧಿ ಎಂದು ಮಾಜಿ ಸಿಎಂ ಹಾಗೂ ಸಂಸದ ಜಗದೀಶ ಶೆಟ್ಟರ್ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮುದಾಯ ಬೆಂಬಲ ನೀಡುತ್ತದೆ. ಬೇರೆ ಧರ್ಮದವರು ಬೆಂಬಲ ನೀಡುವುದಿಲ್ಲ ಎನ್ನುವ ಭಯ ಶುರುವಾಗಿದ್ದರಿಂದಲೇ ಕಾಂಗ್ರೆಸ್ಸಿನವರು ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅತಿಯಾದ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ. ಬೇರೆ ಕಡೆ ಆ ಪಕ್ಷ ಅಧಿಕಾರಕ್ಕೆ ಬರುವುದು ದೂರದ ಮಾತು. ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವ ಒಂದೇ ಒಂದು ಉದ್ದೇಶ ಕಾಂಗ್ರೆಸ್‌ನವರು ಹೊಂದಿದ್ದಾರೆ. ಅದೇ ಕಾರಣಕ್ಕೆ ಹಿಂದೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಿದ್ದರು. ಇದೀಗ ವಸತಿ ಇಲಾಖೆ ಮನೆ ಹಂಚಿಕೆಯಲ್ಲೂ ಮೀಸಲಾತಿ ನೀಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಹಿಂದೂಗಳನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಮಂಗಳೂರಲ್ಲಿ ಆಗಿರುವ ಘಟನೆಗಳೇ ಇದಕ್ಕೆ ಸಾಕ್ಷಿ. ಜನರಿಂದ ಆಯ್ಕೆಯಾದ ಸರ್ಕಾರ ವೈಯಕ್ತಿಕವಾಗಿ ಒಂದು ಸಮಾಜವನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ. ಸರ್ಕಾರದಲ್ಲಿರುವ ಸಚಿವರು, ರಾಜ್ಯದಲ್ಲಿನ ಶಾಂತಿ, ಸುವ್ಯವಸ್ಥೆಗೆ ಗಮನ ಹರಿಸುವುದು ಬಿಟ್ಟು ಸಿಎಂ ಕುರ್ಚಿಗೆ ಹೊಡೆದಾಟ ನಡೆಸಿದ್ದಾರೆ. ಅದೇ ರೀತಿ ಸಚಿವ ಸ್ಥಾನ ಉಳಿಸಿಕೊಳ್ಳಲು ಫೈಟ್ ನಡೆಸಿದ್ದಾರೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಂಜೂರಾಗಿರುವ ಕೆಲಸಗಳನ್ನೇ ಮಾಡುತ್ತಾ ಬರುತ್ತಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.