ಒಳಮೀಸಲಾತಿ ಹಂಚಿಕೆಯ ಶಿಫಾರಸು ವರದಿಯನ್ನು ಬೇಗ ಕೊಡಿ: ಸಚಿವ ಮಧು ಬಂಗಾರಪ್ಪ

Kannadaprabha News   | Kannada Prabha
Published : Jun 23, 2025, 10:24 AM IST
Madhu bangarappa

ಸಾರಾಂಶ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಹಂಚಿಕೆಯ ಶಿಫಾರಸುಗಳ ವರದಿಯನ್ನು ಬೇಗನೇ ಸರ್ಕಾರಕ್ಕೆ ಸಲ್ಲಿಸುವಂತೆ ನಿವೃತ್ತ ನ್ಯಾಯ ಮೂರ್ತಿ ನಾಗಮೋಹನ ದಾಸ್ ಅವರಿಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಮನವಿ ಮಾಡಿದರು.

ಶಿವಮೊಗ್ಗ (ಜೂ.23): ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಹಂಚಿಕೆಯ ಶಿಫಾರಸುಗಳ ವರದಿಯನ್ನು ಬೇಗನೇ ಸರ್ಕಾರಕ್ಕೆ ಸಲ್ಲಿಸುವಂತೆ ನಿವೃತ್ತ ನ್ಯಾಯ ಮೂರ್ತಿ ನಾಗಮೋಹನ ದಾಸ್ ಅವರಿಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಮನವಿ ಮಾಡಿದರು. ನಗರದ ಮಲ್ಲಿಗೇನಹಳ್ಳಿಯ ಸನ್ನಿಧಿ ಪಾಲನಾ ನವೀಕರಣ ಕೇಂದ್ರದಲ್ಲಿ ಸಂವಿಧಾನ ಓದು ಅಭಿಯಾನ ಕರ್ನಾಟಕ, ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ ಶಿಕ್ಷಣ ಇಲಾಖೆಯಲ್ಲಿ ಸದ್ಯ 51 ಸಾವಿರ ಶಿಕ್ಷಕರ ಕೊರತೆ ಇದೆ. ಅದರಲ್ಲಿ 18 ಸಾವಿರ ಶಿಕ್ಷಕರ ನೇಮಕಕ್ಕೆ ಸರ್ಕಾರದ ಒಪ್ಪಿಗೆ ದೊರೆತಿದೆ. ಒಳಮೀಸಲಾತಿ ಹಂಚಿಕೆ ವರ್ಗೀಕರಣ ಕಾರ್ಯ ಪೂರ್ಣಗೊಂಡಲ್ಲಿ ನೇಮಕಾತಿಗೆ ಚಾಲನೆ ದೊರೆಯಲಿದೆ. ಸದ್ಯ ಅತಿಥಿ ಶಿಕ್ಷಕರ ನೇಮಕದ ಮೂಲಕ ಆ ಕೊರತೆ ನೀಗಿಸಿಕೊಳ್ಳಲಾಗಿದೆ ಎಂದರು. ಸಂವಿಧಾನದ ಅರಿವನ್ನು ಮೂಡಿಸುವ ಉದ್ದೇಶದಿಂದಲೇ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಓದುವುದನ್ನು ನಾನು ಶಿಕ್ಷಣ ಸಚಿವನಾದ ಮೇಲೆ ಕಡ್ಡಾಯವನ್ನಾಗಿ ಮಾಡಿದ್ದೇನೆ. ಶಿಕ್ಷಕರು ಕಡ್ಡಾಯವಾಗಿ ಸಂವಿಧಾನ ಪೀಠಿಕೆ ಓದಿಸಬೇಕು. ಮತ್ತು ಕ್ರಮೇಣ ಅರ್ಥ ಮಾಡಿಸಬೇಕು. ಡಿಡಿಪಿಐ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಸಂವಿಧಾನ ಓದು ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಭಾಗವಹಿಸುವುದೇ ಒಂದು ಪುಣ್ಯದ ಕೆಲಸ. ಇದು ನಮ್ಮ ಕರ್ತವ್ಯವೂ ಹೌದು. ನೆಲ, ಜಲ, ಭಾಷೆ, ಧರ್ಮ ಎಲ್ಲವೂ ಸೇರಿಯೇ ಭಾರತವಾಗಿದೆ. ಇದರ ರಕ್ಷಣೆಗೆ ಸಂವಿಧಾನವೇ ನಿಂತುಕೊಂಡಿದೆ. ಸಂವಿಧಾನವನ್ನು ನಾವು ರಕ್ಷಿಸಬೇಕಾದ ಸಂದರ್ಭ ಬಂದಿರುವುದು ವಿಷಾದನೀಯ. ಆದರೆ ಭಾರತೀಯರಿಗೆ ಸಂವಿಧಾನವೇ ಶ್ರೇಷ್ಟ ಗ್ರಂಥ ಎಂದರು. ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಮಾತನಾಡಿ, ಸಂವಿಧಾನದ ಓದು ಪ್ರಜಾಪ್ರಭುತ್ವದ ಅರಿವನ್ನು ವಿಸ್ತರಿಸುತ್ತದೆ ಎಂದರು.

ಭಾರತ ದೇಶವನ್ನು ತಿಳಿಯದೇ ಭಾರತ ಸಂವಿಧಾನ ತಿಳಿಯಲು ಸಾಧ್ಯವಿಲ್ಲ. ಸಂವಿಧಾನ ತಿಳಿಯದೇ ಅದರ ಮೂಲ ತತ್ವವನ್ನು ಅರಿಯಲು ಸಾಧ್ಯವಾಗುವುದಿಲ್ಲ. ಅಧಿಕಾರ, ನ್ಯಾಯಾಂಗ, ಕಾರ್ಯಾಂಗದ ವ್ಯಾಪ್ತಿಗಳು ಅದರ ಸ್ವೇಚ್ಛಾಚಾರ ಇವುಗಳನ್ನೆಲ್ಲಾ ಸಂವಿಧಾನದ ಮೂಲಕವೇ ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಸಂಸ್ಕೃತಿ, ಉಪಸಂಸ್ಕೃತಿ, ಧರ್ಮ, ಜಾತಿ, ಆರ್ಥಿಕ, ಸಾಮಾಜಿಕ ಸಂಬಂಧಗಳು ಇವೆಲ್ಲವೂ ಸಂವಿಧಾನದ ಓದಿನಿಂದ ಮನನವಾಗುತ್ತವೆ. ಸಂವಿಧಾನ ಅರ್ಥ ಮಾಡಿಕೊಳ್ಳುವುದರಿಂದ ಸಹಿಷ್ಣುತೆ ಹೆಚ್ಚುತ್ತದೆ ಎಂದರು.

ಸಮ ಸಮಾಜದ ನಿರ್ಮಾಣ ಭಾರತೀಯತೆ, ಮಾನವೀಯತೆ ಈ ಮುಂತಾದ ಅಂಶಗಳನ್ನಿಟ್ಟುಕೊಂಡೇ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದ್ದಾರೆ. ಸಂವಿಧಾನದ ಆಶಯಗಳು ಕಟ್ಟಕಡೆಯ ಮನುಷ್ಯರನ್ನು ತಲುಪಬೇಕು. ಸಂವಿಧಾನ ಎಲ್ಲಾ ಮನುಷ್ಯರು ಸಮಾನರು ಎಂಬ ತತ್ವದ ಅಡಿಯಲ್ಲಿಯೇ ರೂಪುಗೊಂಡಿದೆ ಎಂದರು. ಸಂಯೋಜಕ ಮತ್ತು ಕಾರ್‍ಯಕ್ರಮ ಆಯೋಜಕ ಕೆ.ಪಿ.ಶ್ರೀಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನ ಓದು ಅಧ್ಯಯನ ಶಿಬಿರದಿಂದ ಭಾರತ ಸಂವಿಧಾನದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಸಂವಿಧಾನ ಓದು ಇಂದು ಅನಿವಾರ್ಯವಾಗಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ
ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ