
ಬೆಂಗಳೂರು(ಮಾ.03): ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳೇ ನೀಡಿದ್ದ ಅನುದಾನಕ್ಕೆ ಸಚಿವ ಎಂಟಿಬಿ ನಾಗರಾಜು ತಡೆಯೊಡ್ಡಿ ಕ್ಷೇತ್ರದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಸ್ಥಳೀಯ ಶಾಸಕ ಶರತ್ ಬಚ್ಚೆಗೌಡ ವಿಧಾನಸೌಧದ ಆವರಣದಲ್ಲಿ ಗುರುವಾರ ರಾತ್ರಿಯಿಂದ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ.
ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ಸಹ ಶಾಸಕ ಶರತ್ ಬಚ್ಚೆಗೌಡ ಅವರನ್ನು ಭೇಟಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ ಖರ್ಗೆ ಸೇರಿದಂತೆ ವಿವಿಧ ನಾಯಕರು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.
ಪ್ರತಿಭಟನೆ ಮಾಡಲು ಶಾಸಕರಿಗೆ ಯಾವುದೇ ನೈತಿಕತೆ ಇಲ್ಲ: ಸಚಿವ ಎಂಟಿಬಿ ನಾಗರಾಜ್ ಆಕ್ರೋಶ
ಈ ವೇಳೆ ಮಾತನಾಡಿದ ಶರತ್ ಬಚ್ಚೇಗೌಡ, ಅಭಿವೃದ್ಧಿ ವಿಚಾರದಲ್ಲಿ ಹೊಸಕೋಟೆ ಕ್ಷೇತ್ರಕ್ಕೆ ತಾರತಮ್ಯವಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಖುದ್ದು 10 ಕೋಟಿ ರು. ಅನುದಾನಕ್ಕೆ ಸಹಿ ಹಾಕಿದ್ದರು. ಆದರೆ, ಸಚಿವ ಎಂ.ಟಿ.ಬಿ.ನಾಗರಾಜು ಅವರು ತಾಲ್ಲೂಕಿಗೆ ಬಂದಿದ್ದ ಅನುದಾನವನ್ನ ತಡೆ ಹಿಡಿದಿದ್ದಾರೆ. ಇದನ್ನು ಪ್ರಶ್ನಿಸಿದ ಕ್ಷೇತ್ರದ ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿ ಚಾಚ್‌ರ್ ಮಾಡಿಸಿ ದೌರ್ಜನ್ಯ ನಡೆಸಿದ್ದಾರೆ. 10 ಕೋಟಿ ರು.ನಿಂದ ನನ್ನ ಹಾಗೂ ನನ್ನ ಕ್ಷೇತ್ರದ ಹಣೆಯ ಬರಹ ಬದಲಾಗುವುದಿಲ್ಲ. ಆದರೆ, ನಾನು ಕ್ಷೇತ್ರದ ಶಾಸಕನಾದ ದಿನದಿಂದ ಕ್ಷೇತ್ರಕ್ಕೆ ಒಂದು ರುಪಾಯಿ ಅನುದಾನ ಕೈತಪ್ಪದಂತೆ ನೋಡಿಕೊಂಡಿದ್ದೇನೆ. ಈಗಲೂ ಅದೇ ಕಾರಣಕ್ಕಾಗಿ ಅಹೋರಾತ್ರಿ ಹೋರಾಟ ಮಾಡುತ್ತಿದ್ದೇನೆ. ಸಚಿವರು ಇಂತಹ ಕೀಳು ಮಟ್ಟದ ವರ್ತನೆ ಬಿಟ್ಟು ತಾವೂ ಅಭಿವೃದ್ಧಿ ಮಾಡಲಿ, ನಾನೂ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಮುಂದಿನ ನಿರ್ಧಾರವನ್ನು ಜನ ಮಾಡುತ್ತಾರೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನಪರ ಆಡಳಿತ: ಶಾಸಕ ಶರತ್ ಬಚ್ಚೇಗೌಡ
ಮುಖ್ಯಮಂತ್ರಿ ಅವರು ಕೊಟ್ಟ ಮಾತಿನ ಮೇಲೆ ನಂಬಿಕೆ ಇಲ್ಲದಂತಾಗಿದೆ. ತಡೆಹಿಡಿದಿರುವ ಅನುದಾನ ಬಿಡುಗಡೆಗೆ ಮುಖ್ಯಕಾರ್ಯದರ್ಶಿ ಅವರಿಗೆ ಮನವಿ ಮಾಡಿದ್ದೇನೆ. ಅವರು ಹೊರಗಿದ್ದು, ಬಂದ ಬಳಿಕ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಜವಾಬ್ದಾರಿಯುತ ವ್ಯಕ್ತಿಗಳು ಅನುದಾನ ಬಿಡುಗಡೆ ಬಗ್ಗೆ ಭರವಸೆ ನೀಡಲಿ. ಅಲ್ಲಿಯವರೆಗೂ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ.
ಹೊಸಕೋಟೆ ಕ್ಷೇತ್ರದ ಅನುದಾನಕ್ಕೆ ತಡೆಯೊಡ್ಡಿಲ್ಲ ಎನ್ನುವುದಾದರೆ ಸಚಿವ ಎಂ.ಟಿ.ಬಿ. ನಾಗರಾಜು ಅವರು ಧರ್ಮಸ್ಥಳದ ಮಂಜುನಾಥಸ್ವಾಮಿಯ ಮುಂದೆ ಆಣೆ ಮಾಡಲಿ. ನಾನೂ ಬರುತ್ತೇನೆ. ಆಗ ನಾನು ಅವರು ಜನನಾಯಕ ಎಂದು ಒಪ್ಪುತ್ತೇನೆ. ಸಚಿವರಾಗಿ ರಾಜ್ಯಕ್ಕೆ ಇವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಕ್ಷೇತ್ರದ ಜನರಿಗೆ ವಂಚಿಸಿದಾಗಲೇ ಜನ ಅವರನ್ನು ತಿರಸ್ಕರಿಸಿದ್ದಾರೆ. ಅವರ ಹಣೆಬರಹವನ್ನು ಮತ್ತೆ ಜನರೇ ನಿರ್ಧರಿಸುತ್ತಾರೆ ಅಂತ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.