ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸತೀಶ್ ಮೊದಲ 8 ಜನರಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡು ಮೇಲುಗೈ ಸಾಧಿಸಿದ್ದಾರೆ. ಡಿಸಿಎಂ ಸ್ಥಾನ ತಪ್ಪಿದರೂ ನಾಲ್ಕನೇ ಬಾರಿಗೆ ಸತೀಶ್ ಜಾರಕಿಹೊಳಿ ಸಚಿವರಾಗುತ್ತಿದ್ದಾರೆ.
ಅನಿಲ್ ಕಾಜಗಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಳಗಾವಿ
ಬೆಳಗಾವಿ(ಮೇ.20): ಮೌಡ್ಯದ ವಿರುದ್ಧ ಸತತ ಜಾಗೃತಿ, ಬುದ್ಧ-ಬಸವ-ಅಂಬೇಡ್ಕರ್ ಅವರ ವಿಚಾರ ಪರಂಪರೆಯ ಅನುಯಾಯಿ, ಕಿತ್ತೂರು ಕರ್ನಾಟಕ ಭಾಗದ ರಾಜಕೀಯ ತಂತ್ರಗಾರಿಕೆ ಬಲ್ಲವ ಹಾಗೂ ಸರಳ ವ್ಯಕ್ತಿತ್ವದ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ನಾಲ್ಕನೇ ಬಾರಿಗೆ ಮಂತ್ರಿಗಿರಿ ಗಿಟ್ಟಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸತೀಶ್ ಮೊದಲ 8 ಜನರಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡು ಮೇಲುಗೈ ಸಾಧಿಸಿದ್ದಾರೆ. ಡಿಸಿಎಂ ಸ್ಥಾನ ತಪ್ಪಿದರೂ ನಾಲ್ಕನೇ ಬಾರಿಗೆ ಸತೀಶ್ ಜಾರಕಿಹೊಳಿ ಸಚಿವರಾಗುತ್ತಿದ್ದಾರೆ.
ಸಿದ್ದು ಮುಖ್ಯಮಂತ್ರಿ ಪ್ರಮಾಣವಚನ ಹಿನ್ನೆಲೆ: ಧಾರವಾಡ ಇಂದಿರಾ ಕ್ಯಾಂಟೀನ್‌ನಲ್ಲಿ ಹೋಳಿಗೆ ಊಟ ವಿತರಣೆ
ರಾಜ್ಯದಲ್ಲಿ ಯಾವುದೇ ಸರ್ಕಾರ ಬರಲಿ ಜಾರಕಿಹೊಳಿ ಕುಟುಂಬದ ಒಬ್ಬರಾದರೂ ಸಚಿವರು ಇರುತ್ತಿದ್ದರು. ಕಳೆದ ದಶಕದಿಂದ ಜಾರಕಿಹೊಳಿ ಕುಟುಂಬಕ್ಕೆ ಮಂತ್ರಿ ಸ್ಥಾನ ಪಡೆಯುತ್ತಲೇ ಬಂದಿದ್ದಾರೆ. ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಸಿಡಿ ಕೇಸ್‌ನಿಂದ 2021 ಮಾರ್ಚ್ 31 ಮಂತ್ರಿಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷರಾಗಿದ್ದರು. ಕಳೆದ ಎರಡು ವರ್ಷಗಳಿಂದ ಜಾರಕಿಹೊಳಿ ಕುಟುಂಬ ಸಚಿವಸ್ಥಾನದಿಂದ ವಂಚಿತವಾಗಿತ್ತು. ಇದೀಗ ಕಾಂಗ್ರೆಸ್ ಬಹುಮತ ಸಾಧಿಸಿದ್ದು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸತೀಶ್ ಮಂತ್ರಿಗಿರಿ ಗಿಟ್ಟಿಸಿಕೊಂಡು ಸಚಿವಸ್ಥಾನ ಇಲ್ಲವೆಂಬ ಕೊರತೆ ನೀಗಿಸಿದ್ದಾರೆ.
ಸಿದ್ದರಾಮಯ್ಯ ಪ್ರಮಾಣ ವಚನ: ಕಂಠೀರವದಲ್ಲಿ ಯಾರಿಗೆಲ್ಲಿ ಪ್ರವೇಶ?
ಸತೀಶ ಜಾರಕಿಹೊಳಿಗೆ ತಪ್ಪಿದ ಡಿಸಿಎಂ:
ಸಿದ್ದರಾಮಯ್ಯ ಜೆಡಿಎಸ್‌ಗೆ ರಾಜೀನಾಮೆ ನೀಡಿದ ಬಳಿಕ ರಾಜ್ಯದಲ್ಲಿ ನಡೆಸಿದ ಅಹಿಂದಾ ಸಂಘಟನೆಗೆ ಸತೀಶ್ ಜಾರಕಿಹೊಳಿ ಬೆನ್ನೆಲುಬಾಗಿ ನಿಂತಿದ್ದರು. ಅಷ್ಟರ ಮಟ್ಟಿಗೆ ಸಿದ್ದರಾಮಯ್ಯ ಜೊತೆಗೆ ಸತೀಶ್ ಜಾರಕಿಹೊಳಿ ಆಪ್ತತೆ ಹೊಂದಿದ್ದವರು. ಬೆಂಗಳೂರು ನಂತರ ಅತಿದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ಕಾಂಗ್ರೆಸ್ 11 ಸ್ಥಾನ ಪಡೆಯಲು ಲಕ್ಷ್ಮಣ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗೆ ಸತೀಶ್ ಪಾತ್ರವೂ ಮುಖ್ಯವಾಗಿತ್ತು. ಈ ಕಾರಣಕ್ಕೆ ಸಿದ್ದರಾಮಯ್ಯ ನೇತೃತ್ವದ ಈ ಸರ್ಕಾರದಲ್ಲಿ ಸತೀಶ್ ಡಿಸಿಎಂ ಹುದ್ದೆಗೇರುತ್ತಾರೆ ಎಂಬ ಚರ್ಚೆಗಳೂ ತೀವ್ರಗೊಂಡಿದ್ದವು. ಅಲ್ಲದೇ ಅವರ ಬೆಂಬಲಿಗರು ಕೂಡ ಸತೀಶ ಜಾರಕಿಹೊಳಿಗೆ ಡಿಸಿಎಂ ನೀಡಬೇಕು ಎಂದು ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದರು. ಆದರೆ ಸತೀಶ್‌ಗೆ ಡಿಸಿಎಂ ತಪ್ಪಿದ್ದರೂ ಮೊದಲ ಹಂತದಲ್ಲೇ ಸಚಿವರಾಗುತ್ತಿದ್ದಾರೆ.
ನಾಲ್ಕನೇ ಬಾರಿಗೆ ಮಂತ್ರಿಗಿರಿ ಪಟ್ಟ:
1998 ರಲ್ಲಿ ಪರಿಷತ್ ಮೂಲಕ ಸತೀಶ್ ಜಾರಕಿಹೊಳಿ ರಾಜಕೀಯ ಪ್ರವೇಶಿಸಿದ್ದರು. 2004 ರಲ್ಲಿ ಎರಡನೇ ಬಾರಿಗೆ ಪರಷತ್‌ಗೆ ಆಯ್ಕೆ ಆದ ಸತೀಶ್ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಜವಳಿ ಸಚಿವರಾಗಿದ್ದರು. ಕ್ಷೇತ್ರ ಪುನರವಿಂಗಡಣೆ ಬಳಿಕ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸತೀಶ್ 2008 ರಲ್ಲಿ ಯಮಕನಮರಡಿ ಎಸ್‌ಟಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಅಲ್ಲಿಂದ ಇಲ್ಲಿಯತನಕ ಸತತ ನಾಲ್ಕು ಸಲ ಸತೀಶ್ ಆಯ್ಕೆ ಆಗುತ್ತ ಬಂದಿದ್ದಾರೆ. 2013 ರ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಸತೀಶ್ ಅಬಕಾರಿ ಹಾಗೂ ಸಣ್ಣ ಕೈಗಾರಿಕೆ ಸಚಿವರಾಗಿ ಎರಡೂವರೆ ವರ್ಷ ಸೇವೆ ಸಲ್ಲಿಸಿದ್ದಾರೆ. 2020ರಲ್ಲಿ ಎಚ್‌ಡಿಕೆ ನೇತೃತ್ವದ ಮೈತ್ರಿ ಸರ್ಕಾರದಲ್ಲಿ 4 ತಿಂಗಳು ಅರಣ್ಯ ಸಚಿವರಾಗಿದ್ದರು. ಇದೀಗ ನಾಲ್ಕನೇ ಬಾರಿಗೆ ಸತೀಶ್ ಸಚಿವರಾಗುತ್ತಿದ್ದಾರೆ.