ಮೋದಿ 10 ವರ್ಷದಲ್ಲಿ ಒಂದಾದ್ರೂ ಅಣೆಕಟ್ಟು ಕಟ್ಟಿದ್ದರೆ ನಾನೇ ಅವರಿಗೆ ನಮಸ್ಕರಿಸಿ ಮತ ಹಾಕುವೆ: ರಾಯರೆಡ್ಡಿ

By Kannadaprabha News  |  First Published Apr 16, 2024, 1:54 PM IST

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರ್ಥಿಕ ನೀತಿ ಗೊತ್ತಿಲ್ಲ. ಮೋದಿ ಅವರಿಂದ ವಿದೇಶಾಂಗ ನೀತಿ ಹದಗೆಟ್ಟಿದೆ. ನಮ್ಮ ರಾಷ್ಟ್ರದ ಉತ್ಪನ್ನಗಳನ್ನು ವಿದೇಶಗಳು ಖರೀದಿಸುತ್ತಿಲ್ಲ. ಮೋದಿ ಆರ್ಥಿಕ ನೀತಿ ಸರಿಯಿಲ್ಲದ ಕಾರಣ ಹಣದುಬ್ಬರ ಆಗುತ್ತಿದೆ: ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ 


ಕುಕನೂರು(ಏ.16): ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ವರ್ಷದಲ್ಲಿ ಒಂದಾದರೂ ಅಣೆಕಟ್ಟು ಕಟ್ಟಿದ್ದರೆ ನಾನೇ ಅವರನ್ನು ಕರೆದು ನಮಸ್ಕರಿಸಿ ಮತ ಹಾಕುವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು.

ತಾಲೂಕಿನ ಬೆಣಕಲ್ಲ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತ ಜರುಗಿದ ಕಾರ್ಯಕರ್ತರದ ಸಭೆಯಲ್ಲಿ ಮಾತನಾಡಿದ ಅವರು, ನನ್ನಲ್ಲಿ ಗೆಜೆಟ್ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ವರ್ಷದಲ್ಲಿ 1 ಲಕ್ಷ 30 ಸಾವಿರ ಕೋಟಿ ಸಾಲ ಮಾಡಿದ್ದಾರೆ. 1952ರಿಂದ 2014ರವರೆಗೆ ಭಾರತದ ಸಾಲ ಬರೀ 52 ಸಾವಿರ ಕೋಟಿ ಇತ್ತು. ನರೇಂದ್ರ ಮೋದಿ ಅವರು ಹತ್ತು ವರ್ಷದಲ್ಲಿ ₹1ಲಕ್ಷ 30 ಸಾವಿರ ಕೋಟಿ ಸಾಲ ಮಾಡಿದ್ದು, ಒಟ್ಟು ಭಾರತದ್ದು 1 ಲಕ್ಷ 82 ಸಾವಿರ ಕೋಟಿ ಸಾಲ ಇದೆ. ಇದಕ್ಕೆಲ್ಲ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರ್ಥಿಕ ನೀತಿ ಗೊತ್ತಿಲ್ಲದೆ ಇರುವುದು. ಮೋದಿ ಅವರಿಂದ ವಿದೇಶಾಂಗ ನೀತಿ ಹದಗೆಟ್ಟಿದೆ. ನಮ್ಮ ರಾಷ್ಟ್ರದ ಉತ್ಪನ್ನಗಳನ್ನು ವಿದೇಶಗಳು ಖರೀದಿಸುತ್ತಿಲ್ಲ. ಮೋದಿ ಆರ್ಥಿಕ ನೀತಿ ಸರಿಯಿಲ್ಲದ ಕಾರಣ ಹಣದುಬ್ಬರ ಆಗುತ್ತಿದೆ. ಮುಂದಿನ ಜೂನ್, ಜುಲೈನಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಮತ್ತೆ ಏರಿಕೆ ಆಗುತ್ತವೆ. ಈಗಾಗಲೇ ಬಂಗಾರದ ಬೆಲೆ ₹76 ಸಾವಿರ ಆಗಿದೆ ಎಂದರು.

Latest Videos

undefined

ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ಸಿನಲ್ಲಿ ಧಗ ಧಗ: ತಾರಕಕ್ಕೇರಿದ ವೈಮನಸ್ಸು..!

ಬಿಜೆಪಿಯಲ್ಲಿ ಮೋದಿಯಿಂದ ಹಿಡಿದು ಎಲ್ಲರೂ ಸುಳ್ಳು ಹೇಳುವವರಿದ್ದಾರೆ. ಮೋದಿ ಸುಳ್ಳು ಹೇಳುವ ಟ್ರೈನಿಂಗ್ ನೀಡುತ್ತಾರೆ. ಜಾತಿ, ಧರ್ಮದ ಹೆಸರಿನಲ್ಲಿ ಮತ ಕೇಳುತ್ತಾರೆ. ಬಡತನದಿಂದ ಇದ್ದ ಭಾರತೀಯರನ್ನು ಕಾಂಗ್ರೆಸ್ ಹಂತ ಹಂತವಾಗಿ ಜನಪರ ಯೋಜನೆ ಮೂಲಕ ಉತ್ತಮ ಮಟ್ಟಕ್ಕೆ ತಂದಿದೆ. ರಾಷ್ಟ್ರದಲ್ಲಿ 560 ಅಣೆಕಟ್ಟು ಕಟ್ಟಿದೆ. ಬಿಜೆಪಿ ಒಂದಾದರೂ ಕಟ್ಟಿದೆಯಾ ತೋರಿಸಿರಿ, ನಾನೇ ಅವರಿಗೆ ನಮಸ್ಕರಿಸುವೆ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೋದಿ ಎಂದೂ ಮಾತನಾಡುವುದಿಲ್ಲ. ಶತ್ರುರಾಷ್ಟ್ರ ಪಾಕಿಸ್ತಾನದ ಹೆಸರು ಹೇಳಿ ರಾಜಕಾರಣ ಮಾಡುತ್ತಾರೆ. ಮೊಟ್ಟ ಮೊದಲಿಗೆ ಪಾಕಿಸ್ತಾನಿಯರನ್ನು ಇಂದಿರಾ ಗಾಂಧಿ ಎದುರಿಸಿ ಹಿಮ್ಮೆಟ್ಟಿಸಿದ್ದರು. ಅಲ್ಲದೆ ಇಂದಿರಾ ಹಲವಾರು ಯೋಜನೆ ತಂದು ಜನರ ಸ್ಥಿತಿ ಸುಧಾರಿಸಿದ್ದರು. ಮೋದಿಯಿಂದ ಭಾರತದ ಅಭಿವೃದ್ಧಿ ಆಗಿಲ್ಲ, ಅವರಿಂದ ಆಡಳಿತ ವೈಖರಿ ಸಂಪೂರ್ಣ ವಿಫಲ ಆಗಿದೆ ಎಂದರು.

ಮೋದಿ ಬರೋ ಮೊದಲು ದೇಶಕ್ಕೆ ಭದ್ರತೆ ಇರಲಿಲ್ವಾ?: ಸಚಿವ ಶಿವರಾಜ ತಂಗಡಗಿ

ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯವರು ಬಿಟ್ಟಿ ಭಾಗ್ಯ ಅನ್ನುತ್ತಿದ್ದಾರೆ. ಅವು ಬಿಟ್ಟಿ ಭಾಗ್ಯ ಅಲ್ಲ, ಜನರ ಭಾಗ್ಯಗಳು. ಗ್ಯಾರಂಟಿ ಯೋಜನಗೆ ₹55 ಸಾವಿರ ಕೋಟಿ, ರೈತರ ಪಂಪಸೆಟ್ ವಿದ್ಯುತ್ ಗೆ ₹18 ಸಾವಿರ ಕೋಟಿ, ಅಂಗನವಾಡಿ, ಬಿಸಿಯೂಟ, ಮಾಶಾಸನ ಹೀಗೆ ನಾನಾ ಯೋಜನೆಗೆ ₹11 ಸಾವಿರ ಕೋಟಿ ಒಟ್ಟು 88 ಸಾವಿರ ಕೋಟಿಯನ್ನು ಜನರಿಗಾಗಿ ಮೀಸಲಿಟ್ಟಿದ್ದೇವೆ. ರಾಜ್ಯ ಸರ್ಕಾರದಲ್ಲಿ ಉಳಿದ ಅಭಿವೃದ್ಧಿ ಕಾರ್ಯಕ್ಕೆ ಬರವಿಲ್ಲ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಎಂದಿಗೂ ಸಾಧ್ಯವಿಲ್ಲ ಎಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಚಂಡೂರು, ಯಂಕಣ್ಣ ಯರಾಶಿ, ಮಂಜುನಾಥ ಕಡೇಮನಿ, ಗವಿಸಿದ್ದಪ್ಪ ಜಂತ್ಲಿ, ಅಶೋಕ ತೋಟದ, ಬಸವರಾಜ ಮಾಸೂರು, ಜಂಬಣ್ಣ, ಶಿವಕುಮಾರ ಆದಾಪೂರ ಇತರರಿದ್ದರು.

click me!