ಕೋಲಾರದಲ್ಲಿ ಕೈ-ಕೈ ಮಿಲಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು: ಪತ್ರಕರ್ತರ ಮೇಲೆ ರಮೇಶ್ ಕುಮಾರ್ ಹಲ್ಲೆ

By Govindaraj S  |  First Published Jul 29, 2022, 10:56 PM IST

ಪರ ವಿರೋಧದ ನಡುವೆಯೇ ಕಾಂಗ್ರೆಸ್‌ನಿಂದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ಕೋಲಾರದಲ್ಲಿ ಕಾರ್ಯಕ್ರಮದ ಪೂರ್ವಭಾಗಿ ತಯಾರಿಗಾಗಿ ಕರೆದಿದ್ದ ಸಭೆಯಲ್ಲೂ ಎರಡು ಗುಂಪುಗಳ ನಡುವೆ ಮಾರಾಮರಿ ನಡೆದರೆ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಸಭೆಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಘಟನೆ ಕೂಡಾ ನಡೆಯಿತು. 


ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಜು.29): ಪರ ವಿರೋಧದ ನಡುವೆಯೇ ಕಾಂಗ್ರೆಸ್‌ನಿಂದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ನಡುವೆ ಕೋಲಾರದಲ್ಲಿ ಕಾರ್ಯಕ್ರಮದ ಪೂರ್ವಭಾಗಿ ತಯಾರಿಗಾಗಿ ಕರೆದಿದ್ದ ಸಭೆಯಲ್ಲೂ ಎರಡು ಗುಂಪುಗಳ ನಡುವೆ ಮಾರಾಮರಿ ನಡೆದರೆ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಸಭೆಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಘಟನೆ ಕೂಡಾ ನಡೆಯಿತು. 

Tap to resize

Latest Videos

ಮುಖಂಡರ ನಡುವೆಯೇ ಕಾರ್ಯಕರ್ತರ ನಡುವೆ ಮಾತಿಗೆ ಮಾತು, ಹೇಯ್​ ಓಯ್​ ಎಂದು ಕೂಗಾಟ ಬೈದಾಟ, ಆಕ್ರೋಶಗೊಂಡ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಹರಸಾಹಸ ಪಡುತ್ತಿರುವ ನಾಯಕರು, ಅಲ್ಲಿ ಗಲಾಟೆಯನ್ನು ಮೊಬೈಲ್​ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಮಾಧ್ಯಮದವರ ಮೇಲೆ ಹಲ್ಲೆ ಮಾಡುತ್ತಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್​ ಇಂಥಾದೊಂದು ದೃಶ್ಯಗಳು ನಮಗೆ ಕಂಡು ಬಂದಿದ್ದು, ಕೋಲಾರ ಜಿಲ್ಲಾ ಕಾಂಗ್ರೆಸ್​ ಕಛೇರಿಯಲ್ಲಿ. 

ಜೆಡಿಎಸ್ ಪಕ್ಷದ ಹೆಸರಿನಲ್ಲಿ ಕಟಿಂಗ್ ಶಾಪ್ ಓಪನ್: ಅಭಿಮಾನಿಯಿಂದ ವಿನೂತನ ಕಾರ್ಯಕ್ರಮ

ಹೌದು! ಇವತ್ತು ಕೋಲಾರ ಜಿಲ್ಲಾ ಕಾಂಗ್ರೆಸ್​ ಉಸ್ತುವಾರಿ ನಾರಾಯಣಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್​ 3ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯನವರ 75ನೇ ಜನ್ಮದಿನಾಚರಣೆ ಹಾಗೂ 75ನೇ ಸ್ವತಂತ್ರ್ಯೋತ್ಸವ ಕಾರ್ಯಕ್ರಮದ ಕುರಿತು ಚರ್ಚೆ ನಡೆಸಲು ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು, ಈ ಸಭೆಯಲ್ಲೂ ಕೂಡಾ ಕೋಲಾರ ಜಿಲ್ಲಾ ಕಾಂಗ್ರೆಸ್​ನಲ್ಲಿನ ಗುಂಪುಗಾರಿಕೆ ಭುಗಿಲೆದ್ದಿತ್ತು. ಮಾಜಿ ಸ್ಪೀಕರ್​ ರಮೇಶ್ ಕುಮಾರ್ ಹಾಗೂ ಕೆ.ಹೆಚ್​.ಮುನಿಯಪ್ಪ ಬಣದ ಕಾರ್ಯಕರ್ತರ ನಡುವೆ ಆರಂಭದಲ್ಲಿ ಕುರ್ಚಿ ವಿಚಾರವಾಗಿ ಗಲಾಟೆ ಶುರುವಾಯ್ತು. 

ನಂತರ ಸಭೆಯಲ್ಲಿ ಹಾಕಲಾಗಿದ್ದ ಬ್ಯಾನರ್​ನಲ್ಲಿ ಪೋಟೋ ಇಲ್ಲಾ ಅನ್ನೋ ಕಾರಣಕ್ಕೆ ಸಭೆಯಲ್ಲಿ ಉಪಸ್ಥಿತರಿದ್ದ ರಮೇಶ್​ ಕುಮಾರ್​ ಸೇರಿದಂತೆ ಕೋಲಾರ ಉಸ್ತುವಾರಿ ನಾರಾಯಣಸ್ವಾಮಿ ಸೇರಿ ಹಲವು ಶಾಸಕರ ಎದುರಲ್ಲೇ ಎರಡೂ ಬಣದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಶುರುವಾಯ್ತು. ನೋಡ ನೋಡುತ್ತಿದ್ದಂತೆ ಸಭೆಯಲ್ಲಿ ಗದ್ದಲ, ಗೊಂದಲ, ತಳ್ಳಾಟ ನೂಕಾಟ ಜೊತೆಗೆ ಸಭೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ವೇಳೆ ಕಾರ್ಯಕರ್ತರನ್ನು ಮಾಧಾನ ಪಡಿಸುವಲ್ಲಿ ವೇದಿಕೆ ಮೇಲಿದ್ದ ನಾಯಕರುಗಳು ಸುಸ್ತಾಗಿ ಹೋದರು. 

ನಂತರ ರಮೇಶ್​ ಕುಮಾರ್​ ಹಾಗೂ ಕೋಲಾರ ಉಸ್ತುವಾರಿ ನಾರಾಯಣಸ್ವಾಮಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಏನೇ ಭಿನ್ನಾಭಿಪ್ರಾಯ ಇದ್ದರು ಪಕ್ಷದಲ್ಲಿ ಸಂಬಂಧಪಟ್ಟವರಿಗೆ ದೂರು ನೀಡಿ ಎಂದರು, ಅಲ್ಲದೆ ಪಕ್ಷದಲ್ಲಿ ಶಿಸ್ತು ಉಲ್ಲಂಘಿಸುವವರ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವುದಾಗಿ ನಾರಾಯಣಸ್ವಾಮಿ ಹೇಳಿದರು. ಇನ್ನು ಸಭೆ ಆರಂಭದಿಂದಲೂ ಕೂಡಾ ರಮೇಶ್ ಕುಮಾರ್​ ಹಾಗೂ ಕೆ.ಹೆಚ್.ಮುನಿಯಪ್ಪ ಗುಂಪುಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇತ್ತು, ಸಭೆ ಆರಂಭದಿಂದಲೂ ಬೂದಿ ಮುಚ್ಚಿದ ಕೆಂಡದಂತಿತ್ತು.

ಆದರೆ ಕುರ್ಚಿ ವಿಚಾರವಾಗಿ ಶುರುವಾದ ಗಲಾಟೆ ಸಭೆಯಲ್ಲಿ ಹೊತ್ತಿ ಉರಿಯಲು ಆರಂಭವಾಯಿತು. ಈ ವೇಳೆ ವೇದಿಕೆ ಮೇಲಿದ್ದ ರಮೇಶ್​ ಕುಮಾರ್​ ಆದಿಯಾಗಿ ನಾಯಕರುಗಳು ಪರಿಸ್ಥಿತಿಯನ್ನು ನಿಯಂತ್ರಣ ಮಾಡಲಾಗದೆ ಹೋದರು. ಈ ವೇಳೆ ಸಭೆಯಲ್ಲಿ ನಡೆಯುತ್ತಿದ್ದ ಗಲಾಟೆಯ ಚಿತ್ರೀಕರಣ ಮಾಡುತ್ತಿದ್ದ ಪತ್ರಕರ್ತರ ಮೇಲೆ ಮಾಜಿ ಸ್ಪೀಕರ್​ ರಮೇಶ್ ಕುಮಾರ್​ ಏಕಾಏಕಿ ಎದ್ದು ನಿಂತು ಹಲ್ಲೆ ಮಾಡಿ, ವೇದಿಕೆ ಮೇಲಿಂದ ಪತ್ರಕರ್ತರನ್ನು ತಳ್ಳಿದರು. 

ಈ ವೇಳೆ ರಮೇಶ್​ ಕುಮಾರ್ ಪತ್ರಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದಂತೆ ಅಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಪತ್ರಕರ್ತರ ಮೇಲೆ ಹರಿಹಾಯ್ದರು. ಅಲ್ಲಿದ್ದ ಪತ್ರಕರ್ತರೆಲ್ಲಾ ಸಭೆಯಿಂದ ಹೊರ ನಡೆದರು. ಈ ವೇಳೆ ಪತ್ರಕರ್ತರ ಸಂಘದ ಅಧ್ಯಕ್ಷರು ಸೇರಿ ಪತ್ರಕರ್ತರು ಮಾಜಿ ಸ್ಪೀಕರ್​ ಹಾಗೂ ಪ್ರಬುದ್ದ ರಾಜಕಾರಣಿ ಎನಿಸಿಕೊಂಡಿದ್ದ ರಮೇಶ್​ ಕುಮಾರ್​ ಪರ್ತಕರ್ತರ ಮೇಲಿನ ಹಲ್ಲೆಗೆ ಖಂಡನೆ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದರು. 

‘ಡಿಸಿಸಿ’ ಸಾಲ ವಿತರಣೆ ವೇಳೆ ಕಾಂಗ್ರೆಸ್‌ ಶಾಸಕರನ್ನು ದೂರವಿಡಿ: ಬಿಜೆಪಿ ನಾಯಕರು

ಈ ವೇಳೆ ಸ್ಥಳಕ್ಕೆ ಬಂದ ಎಂಎಲ್​ಸಿ ಅನಿಲ್​ ಕುಮಾರ್, ಶಾಸಕ ನಂಜೇಗೌಡ ಹಾಗೂ ಕೋಲಾರ ಉಸ್ತುವಾರಿ ನಾರಾಯಣಸ್ವಾಮಿ ಪತ್ರಕರ್ತರ ಕ್ಷಮೆ ಕೇಳಿ ಪತ್ರಕರ್ತರನ್ನು ಸಮಾಧಾನ ಪಡಿಸಿದರು. ಒಟ್ಟಾರೆ ಕೋಲಾರ ಜಿಲ್ಲಾ ಕಾಂಗ್ರೆಸ್​ನಲ್ಲಿ ಎರಡು ಗುಂಪುಗಳ ನಡುವಿನ ವಿವಾದ ದಿನದಿಂದ ದಿನಕ್ಕೆ ಅತಿರೇಕಕ್ಕೆ ಹೋಗುತ್ತಿದೆ. ಬೀದಿ ಬೀದಿಯಲ್ಲಿ ಎರಡೂ ಗುಂಪಿನ ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯ ಭುಗಿಲೇಳುತ್ತಿದೆ. ಕಾಂಗ್ರೆಸ್ ಹೈಕಮಾಂಡ್​ ಕೂಡಲೇ ಕೋಲಾರ ಜಿಲ್ಲಾ ಕಾಂಗ್ರೆಸ್​ನ ಗುಂಪುಗಾರಿಕೆಗೆ ಶಮನ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್​ ಬಾರಿ ನಷ್ಟ ಅನುಭವಿಸೋದರಲ್ಲಿ ಅನುಮಾನವಿಲ್ಲ.

click me!