ಆರೋಪಗಳು ರಾಜಕೀಯ ನೆಲೆಗಟ್ಟಿನಲ್ಲಿರಬೇಕು. ಭಾಷಾ ಬಳಕೆ ಉತ್ತಮವಾಗಿರಬೇಕು ಎಂಬ ಕನಿಷ್ಠ ತಿಳಿವಳಿಕೆ ಇಲ್ಲದ ಸುರೇಶ್‌ಗೌಡರಿಂದ ತಾಲೂಕಿನ ಹಿರಿಯ ರಾಜಕಾರಣಿಗಳ ಸಂಸ್ಕಾರಕ್ಕೆ ಧಕ್ಕೆ ಬಂದಿದೆ ಆರೋಪಿಸಿದ ಎಚ್.ಟಿ.ಕೃಷ್ಣೇಗೌಡ ಹಾಗೂ ಜವರೇಗೌಡ.
ಮಂಡ್ಯ(ಆ.18): ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಟೀಕಿಸುವ ಭರದಲ್ಲಿ ಮಾಜಿ ಶಾಸಕ ಕೆ.ಸುರೇಶ್‌ಗೌಡರು ಕೀಳಮಟ್ಟದ ಪದ ಬಳಕೆ ಮಾಡಿರುವುದನ್ನು ಕಾಂಗ್ರೆಸ್ ಮುಖಂಡರು ಖಂಡಿಸಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಟಿ.ಕೃಷ್ಣೇಗೌಡ ಹಾಗೂ ಜವರೇಗೌಡ, ಆರೋಪಗಳು ರಾಜಕೀಯ ನೆಲೆಗಟ್ಟಿನಲ್ಲಿರಬೇಕು. ಭಾಷಾ ಬಳಕೆ ಉತ್ತಮವಾಗಿರಬೇಕು ಎಂಬ ಕನಿಷ್ಠ ತಿಳಿವಳಿಕೆ ಇಲ್ಲದ ಸುರೇಶ್‌ಗೌಡರಿಂದ ತಾಲೂಕಿನ ಹಿರಿಯ ರಾಜಕಾರಣಿಗಳ ಸಂಸ್ಕಾರಕ್ಕೆ ಧಕ್ಕೆ ಬಂದಿದೆ ಆರೋಪಿಸಿದರು.
ಮಾಜಿ ಶಾಸಕರ ಹೇಳಿಕೆಯಿಂದ ತಾಲೂಕಿನಲ್ಲಿ ಶಾಂತಿ, ಸೌಹಾರ್ದತೆ, ಸೌಜನ್ಯತೆ, ಸಾಮರಸ್ಯಕ್ಕೆ ಅವಮಾನವಾಗಿದೆ. ಸುರೇಶ್‌ಗೌಡರಿಂದ ಚಲುವರಾಯಸ್ವಾಮಿ ಪಾಠ ಕಲಿಯುವ ಅಗತ್ಯವಿಲ್ಲ. ಟೀಕಿಸುವ ಭರದಲ್ಲಿ ಕೀಳುಪದ ಪ್ರಯೋಗಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
undefined
ಭ್ರಷ್ಟಾಚಾರದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಫಸ್ಟ್: ಮಾಜಿ ಶಾಸಕ ಸುರೇಶ್‌ಗೌಡ ವಾಗ್ದಾಳಿ
2008ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲು ಬೆಂಗಳೂರಿನ ಖಾಸಗಿ ಹೋಟೇಲ್‌ನಲ್ಲಿ ಆರ್.ಅಶೋಕ್ ಹಿಡಿಯಲು ಮುಂದಾಗಿದ್ದ ಸುರೇಶ್‌ಗೌಡರಿಗೆ ಎಸ್.ಎಂ.ಕೃಷ್ಣರನ್ನು ಪರಿಚಯಿಸಿ ಕಾಂಗ್ರೆಸ್‌ಗೆ ಕರೆತಂದವರಿಗೆ ವಂಚಿಸಿ ಬಿ.ಫಾರಂ ಕಬಳಿಸಿದ ಭೂಪ. 2008ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪರವಾಗಿ ಚುನಾವಣಾ ಖರ್ಚು ಮಾಡಿದ್ದ ಹಲವರಿಗೆ ಹಣ ನೀಡದೇ ವಂಚಿಸಿದರು ಎಂದು ದೂರಿದರು.
ಸರ್ಕಾರಿ ಜಾಗ ಕಬಳಿಸಿ ಕಾಂಪೌಂಡ್ ನಿರ್ಮಿಸಿದ್ದನ್ನು ವಿರೋಧಿಸಿದ್ದಕ್ಕೆ ಚಲುವರಾಯಸ್ವಾಮಿ ಅವರ ಮೇಲೆ ವೈಯಕ್ತಿಕ ದ್ವೇಷ ಸಾರುವ ಸುರೇಶ್‌ಗೌಡರ ಭೂ ಕಬಳಿಕೆ ಹೊರ ತೆಗೆಯಲು ಜಿಲ್ಲೆಯ ಕಂದಾಯ ಅಧಿಕಾರಿಗಳು ಮುಂದಾಗಬೇಕು. ತಮ್ಮ ಶಾಸಕತ್ವದ ಅವಧಿಯಲ್ಲಿ ಕೇವಲ ಮೂರ್ನಾಲ್ಕು ಮಂದಿ ಗುತ್ತಿಗೆದಾರರಿಗೆ ಕಾಮಗಾರಿ ನೀಡಿ, ವಂಚಿಸಿರುವ ಪ್ರಕರಣದ ಬಗ್ಗೆ ತನಿಖೆಯಾಗಬೇಕು. ಈ ಬಗ್ಗೆ ತನಿಖೆ ನಡೆಸಲು ಜಿಲ್ಲಾಡಳಿತಕ್ಕೆ ಉಸ್ತುವಾರಿ ಸಚಿವರು ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಏರ್‌ಲಿಫ್ಟ್ ಮೂಲಕ ಹಣ ಸಾಗಿಸ್ತಿದೆ: ಜೆಡಿಸ್ ನಾಯಕ ಆರೋಪ
ಜಮೀನು ಒತ್ತುವರಿ ಸಮಿತಿಯ ಅರ್ಜಿಗಳ ವಿಲೇವಾರಿ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿರುವುದು ಕಂಡು ಬಂದಿದೆ. ಅಕ್ರಮದ ವಾರಸುದಾರರಾಗಿರುವ ನೀವು ಚುನಾವಣೆಯಲ್ಲಿ ಸೋತು ಹತಾಶರಾಗಿ ಇನ್ನೊಬ್ಬರ ಮೇಲೆ ಸುಳ್ಳು ಆರೋಪ ಮಾಡಿದರೆ ಜನತೆ ನಂಬುವುದಿಲ್ಲ ಎಂದರು.
ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ತಿಮ್ಮರಾಯಿಗೌಡ ಮಾತನಾಡಿ, ಮಾಜಿ ಶಾಸಕರು ನಾಲಿಗೆ ನಿಯಂತ್ರಣ ತಪ್ಪಿ ಮಾತನಾಡಬಾರದು. ರಾಜಕೀಯ ಎದುರಾಳಿಗೆ ಬಳಸುವ ಕೀಳು ಭಾಷೆ, ಮತದಾರರಿಗೆ ಮಾಡಿದ ದ್ರೋಹವಾಗುತ್ತದೆ. ನಿಮ್ಮ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳಿಗೆ ಕಮಿಷನ್ ಪಡೆದಿಲ್ಲವೆಂದು ಕಾಲಭೈರವೇಶ್ವರ ಸನ್ನಿಧಿಯಲ್ಲಿ ಆಣೆ ಮಾಡಲು ಸಿದ್ದರಿದ್ದೀರಾ ಎಂದು ಸವಾಲು ಹಾಕಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪ್ರಸನ್ನ, ರಾಜೇಗೌಡ, ಸಿ.ಎಂ.ದ್ಯಾವಪ್ಪ, ನವೀನ್ ಇದ್ದರು.