ಜನಸ್ಪಂದನ ಅಂದ್ರೆ ಏನು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡುವ ಮೂಲಕ ಬಿಜೆಪಿ ಜನಸ್ಪಂದನ ಸಮಾವೇಶಕ್ಕೆ ಲೇವಡಿ ಮಾಡಿದ್ದಾರೆ.
ಹುಬ್ಬಳ್ಳಿ, (ಸೆಪ್ಟೆಂಬರ್.10): ಬಿಜೆಪಿ ಜನಸ್ಪಂದನಾ ಕಾರ್ಯಕ್ರಮದ ವಿರುದ್ಧ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು(ಸೆ.10) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಅಡಬಿಟ್ಟಿ ಹಣದಲ್ಲಿ ಮತ್ತು ಲಂಚದ ಹಣದಲ್ಲಿ ಜನಸ್ಪಂದನಾ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಮಳೆ ಬಂದು ಸಾಕಷ್ಟು ಸಮಸ್ಯೆ ಆಗಿದೆ. ಸುಮಾರು 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಬೆಂಗಳೂರಿನಲ್ಲೂ ಸಹ ಮಳೆಯಿಂದಾಗಿ ಸಮಸ್ಯೆಯಾಗಿದೆ. ಪ್ರವಾಹ ಬಂದ್ರೂ ಜಿಲ್ಲಾ ಉಸ್ತುವಾರಿ ಸಚಿವರು ಹೋಗ್ತಿಲ್ಲ. ಇಂತಹ ಕೆಟ್ಟ ಪರಿಸ್ಥಿತಿಗೆ ಬಿಜೆಪಿ ಕಾರಣ. ಸಂಕಷ್ಟದಲ್ಲಿರುವ ಜನರಿಗೆ ಸ್ಪಂದನೆ ಮಾಡೋದು ಬಿಟ್ಟು ಡ್ಯಾನ್ಸ್ ಮಾಡ್ತಿದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜನಸ್ಪಂದನಾ ಸಮಾವೇಶಕ್ಕೆ ಗೈರು: ಸ್ಪಷ್ಟ ಕಾರಣ ಕೊಟ್ಟ ಈಶ್ವರಪ್ಪ
ಉಮೇಶ ಕತ್ತಿಯವರು ಉತ್ತರ ಕರ್ನಾಟಕದ ರಾಜಕಾರಣಿ, ಅವರದ್ದೇ ಪಕ್ಷದ ಪ್ರಭಾವಿ ವಿರಾಜಕಾರಣಿ. ಅವರ ನಿಧನದ ಹಿನ್ನೆಲೆ ಒಂದು ಕಡೆ ಶೋಕಾಚರಣೆ ಮಾಡ್ತೀವಿ ಅಂತಾರೆ ಇನ್ನೊಂದು ಕಡೆ ಡ್ಯಾನ್ಸ್ ಮಾಡ್ತಾರೆ. ಬಿಜೆಪಿಯವರಿಗೆ ಜನರ ಬಗ್ಗೆ ಕಾಳಜಿ ಇಲ್ಲ ದುಡ್ಡು ಹೊಡೆಯೋದ್ದಲ್ಲಿ ಮಾತ್ರ ಕಾಳಜಿ ಇದೆ ಎಂದು ಗುಡುಗಿದರು.
ಬಿಜೆಪಿಯವರು ಪ್ರತಿಯೊಂದು ವಿಷಯದಲ್ಲೂ ಸೇಡಿನ ರಾಜಕೀಯ ಮಾಡ್ತಿದಾರೆ.ದಾವಣಗೆರೆಯಲ್ಲಿ ನಡೆದ ನನ್ನ ಜನ್ಮದಿನಾಚರಣೆ ಪ್ರತ್ಯುತ್ತರವಾಗಿ ಬಿಜೆಪಿ ಜನಸ್ಪಂದನಾ ಕಾರ್ಯಕ್ರಮ ಮಾಡುತ್ತಿದ್ದಾರೆ. ನನ್ನ ಜನ್ಮದಿನಾಚರಣೆಗೆ ಜನ ತಾವಾಗೇ ಬಂದ್ರು ಆದ್ರೆ ಜನಸ್ಪಂದನಕ್ಕೆ ದುಡ್ಡು ಕೊಟ್ಟು ಕರೆಸುತ್ತಿದ್ದಾರೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.
ಪಿಎಸ್ ಐ ಹಗರಣದಲ್ಲಿ ಶಾಸಕ ಬಸವರಾಜ ದಡೇಸಗೂರು ಹಣ ಪಡೆದ ಬಗ್ಗೆ ತಾವೇ ಒಪ್ಪಿಕೊಂಡಿದ್ದಾರೆ. ಆತನ ವಿರುದ್ಧ ಎಫ್ ಐಆರ್ ದಾಖಲು ಮಾಡಿ ತನಿಖೆ ನಡೆಸಬೇಕು. ಪ್ರಿಯಾಂಕ್ ಖರ್ಗೆ ಮಾತನಾಡಿದರೆ ನೋಟೀಸ್ ಕೊಡ್ತಾರೆ ಆದ್ರೆ ಅವರ ಶಾಸಕ ಸ್ವತಃ ಒಪ್ಪಿಕೊಂಡರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.