ಡಬಲ್‌ ಆಗಿದ್ದು ರೈತರ ಆದಾಯವಲ್ಲ, ಸಾಲ: ಮೋದಿ ವಿರುದ್ಧ ಸಿದ್ದು ಟೀಕೆ

By Govindaraj SFirst Published Jun 5, 2022, 3:05 AM IST
Highlights

ನರೇಂದ್ರ ಮೋದಿ ಸರ್ಕಾರದ ಎಂಟು ವರ್ಷಗಳ ಸಾಧನೆ ಎಂದರೆ ಕೃಷಿ ಕ್ಷೇತ್ರದ ಕೊಲೆ. ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿ ರೈತರ ಸಾಲವನ್ನು ದ್ವಿಗುಣಗೊಳಿಸಿದ್ದಾರೆ.

ಬೆಂಗಳೂರು (ಜೂ.05): ನರೇಂದ್ರ ಮೋದಿ ಸರ್ಕಾರದ ಎಂಟು ವರ್ಷಗಳ ಸಾಧನೆ ಎಂದರೆ ಕೃಷಿ ಕ್ಷೇತ್ರದ ಕೊಲೆ. ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿ ರೈತರ ಸಾಲವನ್ನು ದ್ವಿಗುಣಗೊಳಿಸಿದ್ದಾರೆ. ಕೃಷಿ ಕ್ಷೇತ್ರವನ್ನು ಸಂಪೂರ್ಣ ಹಾಳುಗೆಡವಿ ಅದನ್ನು ಕಾರ್ಪೊರೇಟ್‌ ಬಂಡವಾಳ ಶಾಹಿಗಳ ಕಾಲ ಕೆಳಕ್ಕೆ ತಳ್ಳಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. 

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ 8 ವರ್ಷಗಳಲ್ಲಿ ಮೋದಿಯವರು ಹೇಳಿದ ಸುಳ್ಳುಗಳಿಗೆ ಲೆಕ್ಕವೇ ಇಲ್ಲ. ಅವುಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದೂ ಒಂದು. ನ್ಯಾಷನಲ್‌ ಸ್ಯಾಂಪಲ್‌ ಸರ್ವೆಯವರ ಪ್ರಕಾರ 2015-16ರಲ್ಲಿ ಪ್ರತಿ ರೈತ ಕುಟುಂಬದ ವಾರ್ಷಿಕ ಆದಾಯ 96,703 ರು.ಗಳಷ್ಟಿತ್ತು. 2022ಕ್ಕೆ ಇದು ದ್ವಿಗುಣಗೊಳ್ಳಬೇಕಾದರೆ ಸರಾಸರಿ ಕುಟುಂಬದ ಆದಾಯ 1.92 ಲಕ್ಷ ರು.ಗೆ ಏರಿಕೆಯಾಗಬೇಕಿತ್ತು. 

'ಆರ್‌ಎಸ್‌ಎಸ್‌ ಟೀಕಿಸೋದನ್ನ ಸಿದ್ದರಾಮಯ್ಯ ನಿಲ್ಲಿಸದಿದ್ದರೆ ಪರಿಸ್ಥಿತಿ ಸರಿಯಿರಲ್ಲ'

ಇಂದಿನ ಬೆಲೆಗಳಲ್ಲಿ ಹಣದುಬ್ಬರವನ್ನು ಸೇರಿಸಿ ಲೆಕ್ಕ ಹಾಕಿದರೆ 2.5 ರಿಂದ 2.8 ಲಕ್ಷ ರುಪಾಯಿಗಳಾಗಬೇಕು. ಜತೆಗೆ ಕೃಷಿ ಬೆಳವಣಿಗೆ ದರ ಶೇ.10.5 ರಷ್ಟುಇರಬೇಕಿತ್ತು. ಆದರೆ ಪ್ರಸ್ತುತ ಕೇವಲ ಶೇ.2.88 ರಷ್ಟಿದೆ. ಇಷ್ಟೆಲ್ಲಾ ಆದರೂ ಮೋದಿ ಸುಳ್ಳು ಜಾಹೀರಾತು ನೀಡಿ ರೈತರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಎಂಎಸ್‌ಪಿಯಲ್ಲೂ ಅನ್ಯಾಯ: ಬಿಜೆಪಿಯವರು ಮುಗ್ಧ ಜನರಿಗೆ ಮೋದಿ ಸರ್ಕಾರ ಎಂಎಸ್‌ಪಿಯಡಿ ಕರ್ನಾಟಕದ ರೈತರಿಂದ ಸಿಕ್ಕಾಪಟ್ಟೆಖರೀದಿಸಿ ಜನರಿಗೆ ಅನುಕೂಲ ಮಾಡಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ಎಂಎಸ್‌ಪಿಯಲ್ಲೂ ರೈತರಿಗೆ ಅನ್ಯಾಯ ಮಾಡಲಾಗಿದೆ. ಹೀಗಾಗಿ ರೈತರ ದ್ವಿಗುಣ ಮಾಡುವ ಭರವಸೆ ಈಡೇರಿಸುವ ಬದಲು ರೈತರನ್ನು ಸಾಲದ ಸುಳಿಗೆ ಸಿಲುಕಿಸಿದೆ. 

2014 ರಿಂದ 2019ರ ವೇಳೆ ರೈತರ ಸಾಲದ ಪ್ರಮಾಣ ಶೇ.53 ರಷ್ಟು ಹೆಚ್ಚಾಗಿದೆ. ಕಳೆದ ಮೂರು ವರ್ಷದಲ್ಲಿ ಮತ್ತಷ್ಟು ಹೆಚ್ಚಾಗಿದೆ. ರೈತರು ತಮ್ಮ ಮನೆಗಳಲ್ಲಿನ ಚಿನ್ನವನ್ನು ಅಡ ಇಟ್ಟು ಸಾಲ ತರುತ್ತಿದ್ದಾರೆ. ಬೆಳೆ ಬಂದಾಗ ಬೆಲೆ ಸಿಗುತ್ತಿಲ್ಲ. ಸರ್ಕಾರದ ಭ್ರಷ್ಟಾಚಾರದಿಂದಾಗಿ ಕಳಪೆ ಔಷಧ, ಬೀಜ, ಗೊಬ್ಬರ ಮಾರುಕಟ್ಟೆಯಲ್ಲಿ ತುಂಬಿದೆ. ಇದನ್ನು ನಿಯಂತ್ರಣ ಮಾಡುವ ಶಕ್ತಿಯಾಗಲಿ, ಉದ್ದೇಶವಾಗಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

MLC Election: 'ಸಿದ್ದರಾಮಯ್ಯ, ಡಿಕೆಶಿಗೆ ಮುಜುಗರ ತಪ್ಪಿಸಲು ರಾಜೀನಾಮೆ'

ಕಾರ್ಪೊರೇಟ್‌ ಕಂಪೆನಿಗಳಿಗೆ ಅನುಕೂಲ: ಕೊರೋನಾ ಅಟ್ಟಹಾಸ ಮಾಡುತ್ತಿದ್ದಾಗ ಮೋದಿಯವರು ಕರಾಳ ಕೃಷಿ ಕಾಯ್ದೆಗಳನ್ನು ತಂದು ಅದಾನಿ, ಅಂಬಾನಿಗಳಂಥ ಬೃಹತ್‌ ಕಾರ್ಪೊರೇಟ್‌ ಬಂಡವಾಳಿಗರಿಗೆ ಅನುಕೂಲ ಮಾಡಿಕೊಡಲು ಹೊರಟರು. ರೈತರು ನಡೆಸಿದ ಹೋರಾಟದಿಂದಾಗಿ ಕಾಯ್ದೆಗಳನ್ನು ವಾಪಸ್ಸು ಪಡೆದರು. ಆದರೆ ನಮ್ಮ ರಾಜ್ಯದಲ್ಲಿ ಎಪಿಎಂಸಿಗಳು ಸಂಪೂರ್ಣ ಮುಳುಗಿ ಹೋಗುತ್ತಿದ್ದರೂ ಎಪಿಎಂಸಿ ಕಾಯ್ದೆಯನ್ನು ಹಿಂಪಡೆದಿಲ್ಲ. ಫಲವತ್ತಾದ ಭೂಮಿ ಬಂಡವಾಳಿಗರ ಕೈ ಸೇರುತ್ತಿದ್ದರೂ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯನ್ನು ಹಿಂದಕ್ಕೆ ಪಡೆದಿಲ್ಲ ಎಂದು ದೂರಿದ್ದಾರೆ.

click me!