* ಇಡಿ, ಐಟಿ ಮುಂದಿಟ್ಟುಕೊಂಡು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿರುವ ಬಿಜೆಪಿ
* ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು. ದೇಶದಲ್ಲಿ ಕಾನೂನು ಉಳಿದಿಲ್ಲ
* 40 ಪರ್ಸೆಂಟ್ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮಿತಿಮೀರಿದೆ
ಮಂಗಳೂರು(ಜೂ.15): ಸಿಬಿಐ, ಇಡಿ, ಐಟಿ ಸಂಸ್ಥೆಗಳು ಬಿಜೆಪಿಯ ಮುಂಚೂಣಿ ಘಟಕಗಳಾಗಿ ಮಾರ್ಪಟ್ಟಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡಿ, ಐಟಿ ಮುಂದಿಟ್ಟುಕೊಂಡು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿರುವ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು. ದೇಶದಲ್ಲಿ ಕಾನೂನು ಉಳಿದಿಲ್ಲ. ಪ್ರತಿಭಟನೆ ವೇಳೆ ಕಾಂಗ್ರೆಸ್ ಮುಖಂಡರಾದ ದಿನೇಶ್ ಗುಂಡೂರಾವ್, ಎಚ್‌ಕೆ ಪಾಟೀಲ್, ಡಿಕೆ ಸುರೇಶ್ ಅವರ ಮೇಲೆ ಪೊಲೀಸರಿಂದ ಕೈ ಮಾಡಿಸುವ ಮೂಲಕ ಪೊಲೀಸ್ ರಾಜ್ ಮಾಡಿದ್ದಾರೆ ಎಂದು ಹರಿಹಾಯ್ದರು.
2015ರಲ್ಲೇ ನ್ಯಾಶನಲ್ ಹೆರಾಲ್ಡ್ ಪ್ರಕರಣ ಮುಕ್ತಾಯವಾಗಿತ್ತು. ಮತ್ತೆ ಆ ಪ್ರಕರಣ ಕೈಗೆತ್ತಿಕೊಂಡು ಕಿರುಕುಳ ನೀಡಲು ಮುಂದಾಗಿರುವುದು ಅಕ್ಷಮ್ಯ, ರಾಜಕೀಯ ಷಡ್ಯಂತ್ರ. ಇಂಥ ನೂರಾರು ಪ್ರಕರಣಗಳನ್ನು ಹಾಕಿದರೂ ಅದನ್ನು ಎದುರಿಸುವ ಶಕ್ತಿ ಕಾಂಗ್ರೆಸ್‌ಗಿದೆ ಎಂದು ಸಲೀಂ ಅಹ್ಮದ್ ಹೇಳಿದರು.
ಮಂಗಳೂರು ವಿವಿ ಕಾಲೇಜಿನಲ್ಲಿ ಸಾವರ್ಕರ್ ಫೋಟೋ: ಎರಡು ಗುಂಪುಗಳ ಮಧ್ಯೆ ಮಾರಾಮಾರಿ
ಬೂತ್ ಮಟ್ಟದಿಂದಲೇ ಕೇಡರ್: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತೀ ಹೆಚ್ಚು 78 ಲಕ್ಷ ಸದಸ್ಯತ್ವ ಆಗಿದೆ. ಪಕ್ಷವನ್ನು ಬೂತ್ ಮಟ್ಟದಿಂದಲೇ ಕೇಡರ್ ಆಧಾರಿತವನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಬೂತ್ ಮಟ್ಟದಿಂದಲೇ ನ್ಯಾನೋ ಮ್ಯಾನೇಜ್‌ಮೆಂಟ್ ತಂತ್ರ ಕಾರ್ಯರೂಪಕ್ಕೆ ಬರಲಿದೆ. ಬ್ಲಾಕ್, ಪಂಚಾಯ್ತಿ ಮಟ್ಟದಲ್ಲಿ ಕಮಿಟಿ ರಚನೆಯಾಗಲಿದ್ದು, ಪಕ್ಷವನ್ನು ತಳಮಟ್ಟದಿಂದ ಸದೃಢಗೊಳಿಸಲಾಗುತ್ತಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ದ.ಕ. ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ, ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು.ಟಿ. ಖಾದರ್, ಮಾಜಿ ಸಚಿವ ರಮಾನಾಥ ರೈ, ಎಂಎಲ್ಸಿ ಮಂಜುನಾಥ ಭಂಡಾರಿ, ರಕ್ಷಿತ್ ಶಿವರಾಂ, ಐವನ್ ಡಿಸೋಜ ಇದ್ದರು.
ಸಂಕಲ್ಪ ಶಿಬಿರದಿಂದ ಹೋರಾಟ ನಿರ್ಣಯ
ಪಕ್ಷದ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳೊಂದಿಗೆ ಆಂತರಿಕವಾಗಿ ನಡೆದ ನವ ಸಂಕಲ್ಪ ಶಿಬಿರದ ಕುರಿತು ಮಾಹಿತಿ ನೀಡಿದ ಸಲೀಂ ಅಹ್ಮದ್, ಶಿಬಿರದಲ್ಲಿ ಆರು ಕಮಿಟಿಗಳು ಪ್ರಸ್ತುತಪಡಿಸಿದ ವಿಚಾರಗಳನ್ನು ಮುಂದಿಟ್ಟು ಎಲ್ಲವನ್ನು ಕ್ರೋಢೀಕರಿಸಿ ಕೆಪಿಸಿಸಿಗೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಪ್ರತಿ ತಾಲೂಕುಗಳ ಸಮಸ್ಯೆಗಳನ್ನು ಚರ್ಚಿಸಿ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಗುವುದು. 40 ಪರ್ಸೆಂಟ್ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮಿತಿಮೀರಿದ್ದು, ಅವರ ಜನವಿರೋಧಿ ನೀತಿಗಳನ್ನು ಜನರ ಮುಂದಿಡಲಿದ್ದೇವೆ. ಅದಕ್ಕಾಗಿ ತಳ ಮಟ್ಟದಿಂದ ಕಾರ್ಯಕರ್ತರನ್ನು ಬಲಿಷ್ಠಗೊಳಿಸಲಾಗುತ್ತಿದೆ ಎಂದರು.