
ಬೆಂಗಳೂರು(ಜೂ.14): ವಿಧಾನ ಪರಿಷತ್ತಿನ 2 ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆ ಫಲಿತಾಂಶ ನಾಳೆ(ಜೂ.15) ಪ್ರಕಟವಾಗಲಿದೆ. ಒಟ್ಟು 49 ಅಭ್ಯರ್ಥಿಗಳ ಭವಿಷ್ಯ ನಾಳೆ ಬಯಲಾಗಿದೆ. ಜೂನ್ 13 ರಂದು ನಡೆದಿದ್ದ ಚುನಾವಣೆಯಲ್ಲಿ ಶೇಕಡಾ 74.39 ರಷ್ಟು ಮಂದಿ ಮತದಾನ ಮಾಡಿದ್ದರು.
ವಿಧಾನಪರಿಷತ್ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಸೇರದಂತೆ ಘಟಾನುಘಟಿಗಳು ಸ್ಪರ್ಧಿಸಿದ್ದರು. ವಾಯುವ್ಯ ಪದವೀಧರ, ದಕ್ಷಿಣ ಪದವೀಧರ, ವಾಯುವ್ಯ ಶಿಕ್ಷಕರು ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು.
ಮತ ಎಣಿಕೆಯು ಜೂ. 15 ರಂದು ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದೆ. ಬೆಳಗ್ಗೆ 7.45ಕ್ಕೆ ಮತ ಪೆಟ್ಟಿಗೆಗಳನ್ನು ಹೊರ ತೆಗೆದು, 8 ಗಂಟೆ ವೇಳೆಗೆ ಎಣಿಕೆ ಕಾರ್ಯ ಆರಂಭಿಸಲಾಗುತ್ತದೆ. ಚುನಾವಣೆ ಫಲಿತಾಂಶಕ್ಕಾಗಿ ಇದೀಗ ರಾಜಕೀಯ ಪಕ್ಷಗಳು ಮಾತ್ರವಲ್ಲ, ರಾಜ್ಯದ ಜನತೆಯೂ ಕಾಯುತ್ತಿದ್ದಾರೆ.
ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯಿಂದ ಬಸವರಾಜ ಹೊರಟ್ಟಿ, ಕಾಂಗ್ರೆಸ್‌ನಿಂದ ಬಸವರಾಜ ಗುರಿಕಾರ ಹಾಗೂ ಜೆಡಿಎಸ್‌ನಿಂದ ಶ್ರೀಶೈಲ ಗಡದಿನ್ನಿ ಹಾಗೂ ನಾಲ್ವರು ಪಕ್ಷೇತರರು ಸೇರಿದಂತೆ ಒಟ್ಟು ಏಳು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದರಲ್ಲಿ ಹೊರಟ್ಟಿ ಹಾಗೂ ಬಸವರಾಜ್ ಗುರಿಕಾರ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ.
ಪ್ರತಿ ಮತ ಎಣಿಕೆ ಕೇಂದ್ರಗಳಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಭದ್ರತೆ ವಿಚಾರದಲ್ಲೂ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. ಯಾವುದೇ ಅಹಿತಕರ ಘಟನೆ ಅವಕಾಶ ನೀಡದಿರಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮತ ಎಣಿಕೆ ಕೇಂದ್ರಗಳಲ್ಲಿ ಮೊಬೈಲ್ ಹಾಗೂ ಶಾಹಿ ಪೆನ್‌ಗಳನ್ನು ತೆಗೆದುಕೊಂಡು ಹೋಗಲು ಅವಕಾಶ ಇರುವುದಿಲ್ಲ. ಇದೇ ರೀತಿ ನೀರಿನ ಬಾಟಲ್ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿರುತ್ತದೆ. ಮಾಸ್ಕ್ ಧರಿಸಿಕೊಂಡು ಬರುವುದು ಕಡ್ಡಾಯವಾಗಿದ್ದು, ನಿಗದಿತ ಪಾರ್ಕಿಂಗ್ ಸ್ಥಳದಲ್ಲಿ ಮಾತ್ರ ವಾಹನ ನಿಲುಗಡೆಗೆ ಅವಕಾಶವಿರುತ್ತದೆ. ಅಭ್ಯರ್ಥಿಗಳು ಹಾಗೂ ಮತ ಎಣಿಕೆ ಏಜೆಂಟರುಗಳಿಗೆ ಪಾವತಿ ಆಧಾರದ ಮೇಲೆ ಊಟೋಪಹಾರದ ವ್ಯವಸ್ಥೆ ಮಾಡಲಾಗಿರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.