
ಕಾರವಾರ, ಉತ್ತರಕನ್ನಡ (ಆ.19): ಬಾಂಗ್ಲಾ ಮಾದರಿಯಲ್ಲಿ ಮೇಲೆ ದಾಳಿ ನಡೆಯುತ್ತೆ ಎಂಬ ಐವನ್ ಡಿಸೋಜಾ ಹೇಳಿಕೆ ಸರಿಯಲ್ಲ ಎಂದು ಮಾಜಿ ಸಚಿವ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳದಿದ್ದರೆ ಬಾಂಗ್ಲಾ ಮಾದರಿಯಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂಬ ಐವನ್ ಡಿಸೋಜಾ ಹೇಳಿಕೆ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಐವನ್ ಡಿಸೋಜಾ ಜವಾಬ್ದಾರಿಯುತವಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಅಂತವರು ಈ ರೀತಿಯ ಹೇಳಿಕೆ ನೀಡಿರುವುದು ನಂಬಲು ಸಾಧ್ಯವಿಲ್ಲ. ಬೇರೆ ರಾಷ್ಟ್ರಗಳಿಗೆ ಹೋಲಿಕೆ ಮಾಡುವ ಪರಿಸ್ಥಿತಿ ನಮ್ಮ ದೇಶದಲ್ಲಿಲ್ಲ. ರಾಜ್ಯಪಾಲರ ವಿರುದ್ಧ ಹೋರಾಟಕ್ಕೆ ರಾಜಭವನ ಮುತ್ತಿಗೆ ಹಾಕೋದಾಗಿ ಹೇಳಿದ್ದರೆ ಬೇಜಾರಿಲ್ಲ. ಬಾಂಗ್ಲಾ ಮಾದರಿಯಲ್ಲಿ ದಾಳಿ ಮಾಡಿ ರಾಜ್ಯಪಾಲರನ್ನ ಓಡಿಸುತ್ತೇವೆ ಎಂಬಂತ ಹೇಳಿಕೆ ಸರಿಯಲ್ಲ. ಅವರು ತಮ್ಮ ಮಾತುಗಳನ್ನು ಸುಧಾರಿಸಿಕೊಳ್ಳಬೇಕು ಎಂದರು.
ಸಿಎಂ ಸಿದ್ದರಾಮಯ್ಯರ ಮೇಲೆ ಕೇಸ್ ಮಾಡಿದ್ರೆ ರಾಜ್ಯದ ಏಳು ಕೋಟಿ ಜನ ಸಹಿಸೊಲ್ಲ: ಎಂಬಿ ಪಾಟೀಲ್
ಇನ್ನು ಮಾಧ್ಯಮಗಳಲ್ಲಿ ರಾಜಕಾರಣಿಗಳು ವಿವಾದಾತ್ಮ ಹೇಳಿಕೆ ಕೊಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದಕ್ಕೆಲ್ಲ ಮಾಧ್ಯಮಗಳು ನೀಡುತ್ತಿರುವ ಪ್ರಚಾರವೇ ಕಾರಣ. ತಮ್ಮ ಹೇಳಿಕೆ ಮಾಧ್ಯಮಗಳಲ್ಲಿ ಬರುತ್ತದೆ ಎಂಬ ಕಾರಣಕ್ಕೆ ಉದ್ರೇಕದಲ್ಲಿ ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ಹೀಗಾಗಿ ಮಾಧ್ಯಮದವರು ಇಂತಹ ಹೇಳಿಕೆಗಳನ್ನು ಪರಿಶೀಲಿಸಿ ಪ್ರಸಾರ ಮಾಡಿದರೆ ಯಾವುದೇ ತೊಂದರೆ ಇಲ್ಲ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್‌ಗೆ ಅನುಮತಿ ಸೂಚಿಸಿದ್ದನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಐವನ್ ಡಿಸೋಸಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ರಾಷ್ಟ್ರಪತಿಗಳು ರಾಜ್ಯಪಾಲರನ್ನು ವಾಪಸ್ ಕರೆಸಬೇಕು ಇಲ್ಲವಾದಲ್ಲಿ ಬಾಂಗ್ಲಾ ಪ್ರಧಾನಿಗೆ ಆದ ಸ್ಥಿತಿ ರಾಜ್ಯಪಾಲರಿಗೂ ಆಗಬಹುದು ಎಂದು ಎಚ್ಚರಿಕೆ ನೀಡಿದ್ದರು. ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.