ಅ.10ರಂದು ಹಿರಿಯೂರಿನಿಂದ ಆರಂಭವಾಗುವ ಯಾತ್ರೆಗೆ ತೆರಳಲಿರುವ ಜಿಲ್ಲೆ 7 ವಿಧಾನಸಭಾ ಕ್ಷೇತ್ರಗಳ 35 ಸಾವಿರ ಕಾರ್ಯಕರ್ತರು: ಕಾಂಗ್ರೆಸ್ ಜಿಲ್ಲಾಧ್ಯಕ್ಷ: ಎಚ್.ಎಸ್.ಸುಂದರೇಶ್
ಶಿವಮೊಗ್ಗ(ಅ.08): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಲ್ಲಿ ಸೆಪ್ಟೆಂಬರ್ 7ರಿಂದ ಆರಂಭಗೊಂಡಿರುವ ಐಕ್ಯತಾ ಯಾತ್ರೆ ಅ.10ರಂದು ಸಂಜೆ 4 ಗಂಟೆಗೆ ಚಿತ್ರದುರ್ಗದ ಹಿರಿಯೂರು ತಲುಪಲಿದೆ. ಈ ಯಾತ್ರೆಯಲ್ಲಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಂದ 5 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ಯಾಕುಮಾರಿಯಿಂದ ಆರಂಭವಾದ ಜೋಡೋ ಯಾತ್ರೆ ಈಗಾಗಲೇ 750 ಕಿ.ಮೀ. ಪಾದಯಾತ್ರೆ ಪೂರ್ಣಗೊಳಿಸಿದ್ದಾರೆ. ಐಕ್ಯತಾ ಯಾತ್ರೆ ಹೋದೆಲ್ಲೆಲ್ಲ ಅಭೂತಪೂರ್ವ ಯಶಸ್ಸು ಸಿಗುತ್ತಿದೆ. ರಾಜ್ಯದಲ್ಲೂ ಐಕ್ಯತಾ ಯಾತ್ರೆಗೆ ನಿರೀಕ್ಷೆಗೆ ಮೀರಿದ ಯಶಸ್ಸು ದೊರಕುತ್ತಿದೆ ಎಂದು ತಿಳಿಸಿದರು.
ಅ.10ರಂದು ಸಂಜೆ 4 ಗಂಟೆಗೆ ಚಿತ್ರದುರ್ಗದ ಹಿರಿಯೂರು ತಾಜಾ ಪ್ಯಾಲೇಸ್ ಬಳಿಯಿಂದ ಪಾದಯಾತ್ರೆ ಪುನರಾರಂಭಗೊಳಲಿದೆ. ಅಂದು ಸಂಜೆ 7ಕ್ಕೆ ಹಿರಿಯೂರಿನ ಬಾಳೆಹಳ್ಳಿ ಹರ್ತಿ ಕೋಟೆ ಗ್ರಾಮದ ದೇವಸ್ಥಾನ ಆಚ್‌ರ್ ಸಮೀಪ ಮುಕ್ತಾಯವಾಗಲಿದೆ. ಇಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಶಿಕಾರಿಪುರ, ಸಾಗರ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅ.11ರಂದು ಸಂಜೆ 4 ಗಂಟೆಗೆ ಸಾಣಿ ಕೆರೆಯಿಂದ ಪಾದಯಾತ್ರೆ ಪುನರಾರಂಭಗೊಳ್ಳಲಿದೆ. ಇಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ ಹಾಗೂ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿಗರಿಗೆ ದ್ವೇಷ ಹುಟ್ಟು ಹಾಕುವುದೇ ಕೆಲಸ: ಸಿದ್ದರಾಮಯ್ಯ
ಅ.12ರಂದು ಸಂಜೆ 4ಕ್ಕೆ ಗಿರಿಯಮ್ಮನಹಳ್ಳಿ ಗ್ರಾಮದಲ್ಲಿ ಪಾದಯಾತ್ರೆ ಆರಂಭಗೊಳ್ಳಲಿದೆ. ಇಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಸೊರಬ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಬೇಕು. ಶಿವಮೊಗ್ಗ ನಗರದಿಂದ 5 ಸಾವಿರ ಜನ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಶಿವಮೊಗ್ಗ ನಗರದಿಂದ ಕಾರ್ಯಕರ್ತರು ತೆರಳು 50 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. 7 ವಿಧಾನಸಭೆ ಕ್ಷೇತ್ರದಿಂದ 35 ಸಾವಿರ ಜನ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಸೆ.7ರಿಂದ ಐಕ್ಯದ ಯಾತ್ರೆ ಪ್ರಾರಂಭಗೊಂಡಿದ್ದು, ಕನ್ಯಾಕುಮಾರಿಯಲ್ಲಿ ಆರಂಭವಾದ ಐಕ್ಯತಾ ಯಾತ್ರೆ ಹಲವಾರು ಪ್ರದೇಶಗಳಲ್ಲಿ ಸಾಗಿದೆ. ಕರ್ನಾಟಕದಲ್ಲಿ ಐಕ್ಯತಾ ಯಾತ್ರೆ ಹಾದುಹೋಗುವ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಭಾಗವಹಿಸಲು ತಿಳಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿರುವ 7 ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರು ತಾವು ಭಾಗವಹಿಸಬೇಕಾದ ದಿನಾಂಕ, ಸ್ಥಳ, ಸಮಯ ನಿಗದಿಗೊಳಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಹಿತಿ ಮಾರ್ಗಸೂಚಿಯನ್ನು ನೀಡಲಾಗಿದೆ ಎಂದು ವಿವರಿಸಿದರು.
"ಯಾವ ಸಿಎಂ ಕೂಡ ಬೇಡ ಅನ್ನಲಾರ"; ರಾಜಸ್ಥಾನದಲ್ಲಿ ಅದಾನಿ ಹೂಡಿಕೆ ಬಗ್ಗೆ ರಾಹುಲ್ ಪ್ರತಿಕ್ರಿಯೆ
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಕೆ.ಬಿ.ಪ್ರಸನ್ನ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನ ಕುಮಾರ್, ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್, ಸದಸ್ಯರಾದ ಎಚ್.ಸಿ. ಯೋಗೀಶ್, ಯಮುನಾ ರಂಗೇಗೌಡ, ಮೆಹಕ್ ಶರೀಫ್, ಚಂದ್ರಶೇಖರ್, ಚಂದ್ರಭೂಪಾಲ, ಇಕ್ಕೇರಿ ರಮೇಶ್, ದೀಪಕ್ ಸಿಂಗ್, ಚಂದನ್, ಮಧು, ರಂಗೇಗೌಡ, ಆಸೀಫ್ ಇದ್ದರು.
ಕಾಂಗ್ರೆಸ್‌ಗೆ ದೊರೆತ ಜನಬೆಂಬಲ ಬಿಜೆಪಿ ಸಹಿಸುತ್ತಿಲ್ಲ: ಟೀಕೆ
ದೇಶದಲ್ಲಿ ಜೋಡೋ ಯಾತ್ರೆ ಆರಂಭವಾಗಿನಿಂದಲೂ ಬಿಜೆಪಿಯವರು ದೇಶ ವಿಭಜನೆ ಮಾಡಿ ಈಗ ಜೋಡೋ ಯಾತ್ರೆ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆರೆ ರಾಷ್ಟ್ರಗಳ ಬಗ್ಗೆ ಅಷ್ಟೊಂದು ಪ್ರೇಮವಿದ್ದರೆ ಭಾರತದೊಂದಿಗೆ ಪಾಕಿಸ್ತಾನ, ಆಷ್ಘಾನಿಸ್ತಾನ, ಬಾಂಗ್ಲಾದೇಶಗಳನ್ನು ಜೋಡಿಸಲು ಹೋರಾಟ ಮಾಡಲಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ತಿರುಗೇಟು ನೀಡಿದರು.
ದೇಶದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಎಲ್ಲರ ಮನಸ್ಸು ಹೊಡೆದು ಹೋಗಿದೆ. ಹೊಡೆದು ಹೋಗಿರುವ ಮನಸ್ಸುಗಳನ್ನು ಜೋಡಿಸುವಂತ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಐಕ್ಯತಾ ಯಾತ್ರೆ ನೋಡಿ ಬಿಜೆಪಿಗೆ ನಡುಕ ಹುಟ್ಟಿಸಿದೆ. ಕಾಂಗ್ರೆಸ್‌ಗೆ ದೊರಕುತ್ತಿರುವ ಜನಬೆಂಬಲ ಕಂಡು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ, ಈ ಕಾರಣಕ್ಕಾಗಿ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.