ತೇಜಸ್ವಿ ಯಾದವ್ ಬಿಹಾರದ ಉಪಮುಖ್ಯಮಂತ್ರಿಯಾಗಲು ಯಾವ ಅರ್ಹತೆ ಇದೆ. 9ನೇ ಕ್ಲಾಸ್ ಓದಿದರೆ ಗುಮಾಸ್ತನಾಗಲು ಸಾಧ್ಯವಿಲ್ಲ. ಆದರೆ ಸಿಎಂ, ಡೆಪ್ಯೂಟಿ ಸಿಎಂ ಆಗಬಹುದು. ಇದು ಯಾಕೆ? ತೇಜಸ್ವಿ ಯಾದವ್ ವಿರುದ್ಧ ಪ್ರಶಾಂಕ್ ಕಿಶೋರ್ ವಾಗ್ದಾಳಿ
ಪಾಟ್ನ(ಅ.08): ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದರೆ ಅತ್ತ ಚುನಾವಣ ತಂತ್ರಗಾರ, ರಾಜಕೀಯ ನಾಯಕ ಪ್ರಶಾಂತ್ ಕಿಶೋರ್ ಬಿಹಾರದಲ್ಲಿ ಪಾದಯಾತ್ರೆ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಈ ಪಾದಯಾತ್ರೆಯಲ್ಲಿ ಪ್ರಶಾಂತ್ ಕಿಶೋರ್ ನೀಡಿರುವ ಹೇಳಿಕೆ ಇದೀಗ ಬಿಹಾರ ಉಪ ಮುಖ್ಯಮಂತ್ರಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ಗೆ ಇರಿಸು ಮುರಿಸು ತಂದಿದೆ. ಲಾಲು ಪ್ರಸಾದ್ ಯಾದವ್ ಪುತ್ರ ಅನ್ನೋ ಕಾರಣಕ್ಕೆ 9ನೇ ಕ್ಲಾಸ್ ಓದಿದ ತೇಜಸ್ವಿ ಯಾದವ್ ಬಿಹಾರದ ಉಪಮುಖ್ಯಮಂತ್ರಿಯಾಗಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಧರ್ಮಪುರದಲ್ಲಿ ಆಯೋಜಿಸಿದ ಸಾರ್ವಜನಿಕ ರ್ಯಾಲಿಯನ್ನುದ್ದೇಶಿ ಮಾತನಾಡಿದ ಪ್ರಶಾಂತ್ ಕಿಶೋರ್, ಬಿಹಾರದ ಮೈತ್ರಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಜನಸಾಮಾನ್ಯರ ಮಕ್ಕಳು 9ನೇ ತರಗತಿ ಓದಿದಿದ್ದರೆ ಗುಮಾಸ್ತನಾಗಲು ಸಾಧ್ಯವಿಲ್ಲ. ಆದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಶಾಸಕ 9ನೇ ತರಗತಿ ಫೇಲ್ ಆಗಿದ್ದರೂ ಅತ್ಯುನ್ನತ ಹುದ್ದೆ ಸಿಗುತ್ತಿದೆ. ಈ ವ್ಯವಸ್ಥೆಯನ್ನು ಬದಲಾಯಿಸಬೇಕು. ಇನ್ನು ಎಷ್ಟು ದಿನ ರಾಜಕಾರಣಿಗಳ ಮಕ್ಕಳು ಯಾವುದೇ ಅರ್ಹತೆ ಇಲ್ಲದೆ ಹುದ್ದೆ ಅಲಂಕರಿಸುವ ಪದ್ಧತಿ ಇರಬೇಕು. ಇದನ್ನು ಜನಸಾಮಾನ್ಯರು ಬದಲಾಯಿಸಬೇಕು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಕಾಂಗ್ರೆಸ್ ಸೇರಲು ತಂತ್ರಗಾರ ಪ್ರಶಾಂತ್ ಕಿಶೋರ್ ನಿರಾಕರಿಸಿದ್ದೇಕೆ..?
ಬಿಹಾರದಿಂದ ಗರಿಷ್ಠ ಮಂದಿ ವಲಸೆ ಹೋಗುತ್ತಿದ್ದಾರೆ. ಕಾರ್ಮಿಕರಿಂದ ಹಿಡಿದು ಎಲ್ಲಾ ಕ್ಷೇತ್ರದ ಕೆಲಸಗಾರರು ಇತರ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ಬದಲಾಯಿಸಲು ಸಾಧ್ಯವಿದೆ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಕೈಗಾರೆಕೆ, ಹೂಡಿಕೆಗಳು ಬರಬೇಕು. ಅದಕ್ಕೂ ಪೂರಕ ವ್ಯವಸ್ಥೆ ಮಾಡಬೇಕು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.ನಮಗೆ ಅಧಿಕಾರ ನೀಡಿದರೆ ಈ ಎಲ್ಲಾ ಚಿತ್ರಣ ಬದಲಿಸುತ್ತೇವೆ. ಬಿಹಾರದಿಂದ ವಲಸೆ ಹೋಗಿ ಇತರ ರಾಜ್ಯದಲ್ಲಿರುವ ಕೆಲಸಗಾರರು ತಮ್ಮ ಕುಟುಂಬದ ಜೊತೆ ಕಳೆಯಲು ಅವಕಾಶ ಸಿಗಲಿದೆ. ಬಿಹಾರದಲ್ಲೇ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಕಿಶೋರ್ ಹೇಳಿದ್ದಾರೆ.
ರಾಜಕೀಯ ತಂತ್ರಗಾರನಿಂದ ಬಿಹಾರದಲ್ಲಿ 3500 ಕಿಮೀ ನಡಿಗೆ
ಬಿಹಾರದಲ್ಲಿ ಜೆಡಿಯುನ ನಿತೀಶ್ ಕುಮಾರ್ ಹಾಗೂ ಆರ್‌ಜೆಡಿಯ ಲಾಲುಪ್ರಸಾದ್ ಯಾದವ್ ವಿರುದ್ಧ ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವ ಹವಣಿಕೆಯಿಂದ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ 3500 ಕಿ.ಮೀ. ಪಾದಯಾತ್ರೆ ಆರಂಭಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಡೀ ದೇಶದಲ್ಲಿ ಪಾದಯಾತ್ರೆ ನಡೆಸುತ್ತಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಒಂದು ಕಾಲದಲ್ಲಿ ರಾಜಕೀಯ ಸಲಹೆಗಾರನಾಗಿದ್ದ ಪ್ರಶಾಂತ್ ಕಿಶೋರ್ ತಮ್ಮ ತವರು ರಾಜ್ಯವಾದ ಬಿಹಾರಕ್ಕೆ ಸೀಮಿತಗೊಳಿಸಿ ಪಾದಯಾತ್ರೆ ಆರಂಭಿಸಿದ್ದಾರೆ.
ಕಾಂಗ್ರೆಸ್‌ಗೆ ನನಗಿಂತ ಮುಖ್ಯವಾಗಿ ಬೇಕಿರುವುದು ನಾಯಕತ್ವ: ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್ ಅವರ 3500 ಕಿ.ಮೀ. ಪಾದಯಾತ್ರೆಯು ಸುಮಾರು 12ರಿಂದ 18 ತಿಂಗಳು ನಡೆಯುವ ಸಾಧ್ಯತೆಯಿದ್ದು, ಬಿಹಾರದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ತೆರಳಲಿದೆ. ಇದಕ್ಕೆ ‘ಜನ ಸುರಾಜ್’ ಎಂದು ಹೆಸರಿಡಲಾಗಿದ್ದು, ಮಹಾತ್ಮ ಗಾಂಧೀಜಿಯವರ ಹುಟ್ಟುಹಬ್ಬದ ದಿನ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಿಂದ ಆರಂಭಗೊಂಡಿದೆ. ಈಗಾಗಲೇ ರಾಜಕೀಯ ಪ್ರವೇಶಿಸಿರುವ ಪ್ರಶಾಂತ್ ಕಿಶೋರ್, ಈ ಯಾತ್ರೆಯಲ್ಲಿ ತಮಗೆ ಸಿಗುವ ಜನಬೆಂಬಲವನ್ನು ನೋಡಿಕೊಂಡು ಬಿಹಾರದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ಹೊಂದಿದ್ದಾರೆ.