* ಸಿದ್ದರಾಮಯ್ಯ ಪರ ಕಾಂಗ್ರೆಸ್ ಹಿರಿಯ ನಾಯಕ ಸಿಎಂ ಇಬ್ರಾಹಿಂ ಬ್ಯಾಟಿಂಗ್
* ಮನೆಗೆ ಬಂದ ಸೊಸೆಯ ಹಾಗೆ ಸಿದ್ದರಾಮಯ್ಯ ಕೈಗೆ ಕೀಲಿ ಕೈ ಸಿಕ್ಕಿದೆ ಎಂದ ಇಬ್ರಾಹಿಂ
* ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಟಾಂಗ್
ಬೆಂಗಳೂರು, (ಜೂನ್.26): ಮುಂದಿನ ಸಿಎಂ ವಿವಾದಕ್ಕೆ ಸಂಬಂಧಿಸಿದಂತೆ ಬೇರೆ ಪಕ್ಷದಿಂದ ಬಂದು ಕಾಂಗ್ರೆಸ್ ಅನ್ನು ಹಾಳು ಮಾಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರೋಕ್ಷವಾಗಿ ವಲಸಿಗ-ಮೂಲ ಎನ್ನುವ ಹೇಳಿಕೆಗೆ ಸಿಎಂ ಇಬ್ರಾಹಿಂ ಟಾಂಗ್ ಕೊಟ್ಟಿದ್ದಾರೆ.
ಇಂದು (ಶನಿವಾರ) ಪ್ರತಿಕ್ರಿಯಿಸಿರುವ ಅವರು, ಮನೆಗೆ ಬರುವಾಗ ಸೊಸೆ ಹೊಸದಾಗಿಯೇ ಬರುವುದು. ಸೊಸೆಗೆ ನೀನು ವಲಸೆ ಬಂದವಳೆಂದು ಹೇಳಲು ಆಗುತ್ತದೆಯೇ? ಸ್ವಲ್ಪ ದಿನವಾದರೆ ಅವಳ ಕೈಗೆ ಕೀಲಿ ಕೈ ಹೋಗುತ್ತದೆ. ಹಾಗೆಯೇ ಈಗ ಸಿದ್ದರಾಮಯ್ಯ ಕೈಗೆ ಕೀಲಿ ಕೈ ಸಿಕ್ಕಿದೆ. ಹಾಗಾಗಿ ವಲಸಿಗ, ಹೊಸಬ ಎನ್ನುವ ಭೇದಭಾವ ಇಲ್ಲ ಎಂದು ಡಿಕೆಶಿಗೆ ತಿರುಗೇಟು ಕೊಟ್ಟರು.
ಸಿಎಂ ಕುರ್ಚಿ ದಂಗಲ್: ಸಿದ್ದು ಬಣಕ್ಕೆ ಸಖತ್ ಟಾಂಗ್ ಕೊಟ್ಟ ಡಿಕೆಶಿ
ಸಿದ್ದರಾಮಯ್ಯನ್ನು ಮುಖ್ಯಮಂತ್ರಿ ಮಾಡಿದ್ದು ಯಾರು? ಬಳ್ಳಾರಿ ಪಾದಯಾತ್ರೆಯಲ್ಲಿ ಮುಂದೆ ತಂದವರು ಯಾರು? ಇಂತವನೊಬ್ಬ ಇದ್ದಾನೆ ಅಂತ ಹೇಳಿದ್ದೇ ನಾವು. ಸಿದ್ದರಾಮಯ್ಯ ಅವರಿಗೆ ಮೇಕಪ್ ಮಾಡಿದವರೇ ನಾವು. ಅವರು ಹೀರೋ ಇದ್ದರೂ ಹಿನ್ನೆಲೆ ಗಾಯಕರು ಯಾರು? ಸ್ವಲ್ಪ ಕ್ಯಾಸೆಟ್ ತೆಗೆದು ನೋಡಿ. ಹಿನ್ನೆಲೆ ಗಾಯಕ ಯಾವತ್ತೂ ಕಾಣಲ್ಲ ಎಂದು ಹೇಳಿದರು.
1 ರೂ. ಅಕ್ಕಿ, ಮಧ್ಯಾಹ್ನದ ಊಟ ತಂದವರು ಯಾರು? ತಮಿಳುನಾಡಿನಲ್ಲಿ ಎರಡು ದಿನ ಕುಳಿತು ನಾನು ಅಧ್ಯಯನ ಮಾಡಿ ಆ ಯೋಜನೆ ಕೊಟ್ಟಿದ್ದೆ. ಯೋಜನಾ ಆಯೋಗದ ಉಪಾಧ್ಯಕ್ಷನಾಗಿ ಯೋಜನೆ ಕೊಟ್ಟೆ. ಆ ಯೋಜನೆ ಯಶಸ್ವಿಯಾಯಿತು ಎಂದು ಸಿದ್ದರಾಮಯ್ಯ ಸಾಧನೆಯ ಹಿಂದೆ ತಮ್ಮ ಕೆಲಸದ ಬಗ್ಗೆ ತಿಳಿಸಿದರು.
ಮೊದಲು ವಿಧಾನಸಭೆ ಚುನಾವಣೆ ಗೆಲ್ಲಿ. ನಂತರ ಶಾಸಕರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಬಗ್ಗೆ ತೀರ್ಮಾನ ಮಾಡೋಣ. ರಾಷ್ಟ್ರೀಯ ಪಕ್ಷದಲ್ಲಿ ಒಂದು ಪದ್ಧತಿ ಇರುತ್ತದೆ. ಶೇ 90ರಷ್ಟು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಸಿದ್ದರಾಮಯ್ಯಗೆ ಒಳ್ಳೆಯ ಟೀಂ ಸಿಕ್ತು. ಯಡಿಯೂರಪ್ಪಗೆಂದು ಟೀಂ ಸಿಗಲಿಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರ ಇಬ್ಬರೇ ತಂಡ. ಯಡಿಯೂರಪ್ಪಗೆ ಜಾತಿ ಬೆಂಬಲ ಇದೆ. ಅವರನ್ನ ಬಿಜೆಪಿ ಬಿಟ್ಟರೆ ಬರೋದು 40 ಸೀಟು ಮಾತ್ರ ಎಂದು ಇಬ್ರಾಹಿಂ ಅಭಿಪ್ರಾಯ ವ್ಯಕ್ತಪಡಿಸಿದರು,