* ಮುಂದಿನ ಸಿಎಂ ಅಂತರ್ ಯುದ್ಧದ ನಡುವೆ ಡಿಕೆ ಶಿವಕುಮಾರ್ ಮಹತ್ವದ ಸಭೆ
* ಕುತೂಹಲ ಮೂಡಿಸಿದ ಕೆಪಿಸಿಸಿ ಕಾರ್ಯಧ್ಯಕ್ಷರ ಜೊತೆಗಿನ ಸಭೆ
* ಪಕ್ಷದ ಪದಾಧಿಕಾರಿಗಳ ನೇಮಕದ ಬಗ್ಗೆ ಚರ್ಚೆ
ಬೆಂಗಳೂರು, (ಜೂನ್.26): ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಬಹಿರಂಗ ಹೇಳಿಕೆ ಕಾಂಗ್ರೆಸ್‌ನಲ್ಲಿ ಕೆಲ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದರ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಕಾರ್ಯಧ್ಯಕ್ಷರ ಜೊತೆ ಸಭೆ ನಡೆಸಿರುವುದು ಭಾರೀ ಕುತೂಹಲ ಮೂಡಿಸಿದೆ.
ಹೌದು... ಇಂದು (ಶನಿವಾರ) ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಸತಿಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಈಶ್ವರ್ ಖಂಡ್ರೆ ಹಾಗೂ ಧೃವನಾರಾಯಣ್ ಜೊತೆ ಸಭೆ ನಡೆಸಿದರು.
ಸಿಎಂ ಕುರ್ಚಿ ದಂಗಲ್: ಸಿದ್ದು ಬಣಕ್ಕೆ ಸಖತ್ ಟಾಂಗ್ ಕೊಟ್ಟ ಡಿಕೆಶಿ
ಪಕ್ಷ ಸಂಘಟನೆಗಾಗಿ ವಿಭಾಗವಾರು ಉಸ್ತುವಾರಿಗಳನ್ನು ನೇಮಿಸುವುದು, ಜಿಲ್ಲೆ, ಬ್ಲಾಕ್ ಮಟ್ಟದಲ್ಲಿ ಸಕ್ರಿಯರಾಗಿಲ್ಲದ ಪದಾಧಿಕಾರಿಗಳನ್ನು ಬದಲಾವಣೆ ಮಾಡುವ ಕುರಿತು ಚರ್ಚಿಸಲಾಗಿದೆ. ಅಲ್ಲದೇ ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧ ಪಕ್ಷ ಸಂಘಟನೆ ಕುರಿತು ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕೆಪಿಸಿಸಿಗೆ ಕಳೆದ ಎರಡು ವರ್ಷಗಳಿಂದ ಪದಾಧಿಕಾರಿಗಳ ನೇಮಕವಾಗಿಲ್ಲ. ಇತ್ತೀಚೆಗೆ ತಾವು ತಯಾರಿಸಿದ್ದ ಪದಾಧಿಕಾರಿಗಳ ಪಟ್ಟಿಯನ್ನು ಡಿ.ಕೆ.ಶಿವಕುಮಾರ್ ದೆಹಲಿಗೆ ತೆಗೆದುಕೊಂಡು ಅನುಮತಿಗಾಗಿ ಹೈಕಮಾಂಡ್ ಗೆ ಸಲ್ಲಿಸಿದ್ದರು. ಆದರೆ ಅದಕ್ಕೆ ಅನುಮತಿ ನೀಡುವ ಬದಲಾಗಿ, ಕೆಪಿಸಿಸಿ ಕಾರ್ಯಾಧ್ಯಕ್ಷರು, ಹಿರಿಯ ನಾಯಕರ ಜೊತೆ ಮತ್ತೊಮ್ಮೆ ಸಮಾಲೋಚನೆ ನಡೆಸುವಂತೆ ಸಲಹೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಕಾರ್ಯಾಧ್ಯಕ್ಷರ ಸಭೆ ನಡೆಸಿದ್ದಾರೆ ಎನ್ನಲಾಗಿದೆ.