ಸುಳ್ಳೇ ಬಿಜೆಪಿಯ ಮನೆ ದೇವರು: ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

By Kannadaprabha News  |  First Published Mar 5, 2023, 11:31 PM IST

ಚುನಾವಣೆಗಳಲ್ಲಿ ಜನರಿಗೆ ಕೊಟ್ಟಭರವಸೆಗಳನ್ನು ಈಡೇರಿಸಲಾಗದ ಮತ್ತು ಸುಳ್ಳುಗಳಿಂದಲೇ ಸೌಧ ಕಟ್ಟುವ ಬಿಜೆಪಿಯದ್ದು ಸುಳ್ಳೇ ಮನೆ ದೇವರು ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಆರೋಪಿಸಿದರು. 


ಚಿಕ್ಕಮಗಳೂರು (ಮಾ.05): ಚುನಾವಣೆಗಳಲ್ಲಿ ಜನರಿಗೆ ಕೊಟ್ಟಭರವಸೆಗಳನ್ನು ಈಡೇರಿಸಲಾಗದ ಮತ್ತು ಸುಳ್ಳುಗಳಿಂದಲೇ ಸೌಧ ಕಟ್ಟುವ ಬಿಜೆಪಿಯದ್ದು ಸುಳ್ಳೇ ಮನೆ ದೇವರು ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಆರೋಪಿಸಿದರು. ತಾಲೂಕಿನ ಕೈಮರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ 4 ವರ್ಷ ಆಡಳಿತ ನಡೆಸಿರುವ ಬಿಜೆಪಿ ನೇತೃತ್ವದ ಸರ್ಕಾರ ಜನರಿಗೆ ಕೊಟ್ಟಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಅದೇ ರೀತಿಯಲ್ಲಿ 9 ವರ್ಷ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯೂ ಸಾಮಾನ್ಯ ಜನರು, ವಿದ್ಯಾರ್ಥಿಗಳು, ನಿರುದ್ಯೋಗಿಗಳಿಗೆ ಮತ್ತು ಬಡವರಿಗೆ ಸ್ಪಂದಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಕೊಟ್ಟಯಾವುದೇ ಭರವಸೆಗಳನ್ನು ಈಡೇರಿಸಿಲ್ಲ ಎಂದು ಕಿಡಿಕಾರಿದರು.

ಚುನಾವಣೆ ಸಂದರ್ಭದಲ್ಲಿ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದರು. ವರ್ಷಕ್ಕೆ 2 ಕೋಟಿಯಂತೆ 9 ವರ್ಷಕ್ಕೆ 18 ಕೋಟಿ ಉದ್ಯೋಗ ಕೊಡಬೇಕಿತ್ತು. ಆದರೆ, ಅವರಿಂದ ಲಕ್ಷ ಉದ್ಯೋಗವನ್ನು ಕೊಡಲು ಸಾಧ್ಯವಾಗಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ 15 ಲಕ್ಷ ರು.ಗಳನ್ನು ಪ್ರತಿಯೊಬ್ಬರ ಖಾತೆಗೆ ಜಮಾ ಮಾಡುವುದಾಗಿ ಹೇಳಿದರು. ಆದರೆ, ಒಂದಾಣಿಯನ್ನು ಜಮಾ ಮಾಡಲಿಲ್ಲ ಎಂದು ಪ್ರಧಾನಿ ಮೋದಿ ಅವರ ವಿರುದ್ಧ ಹರಿಹಾಯ್ದರು. ಒಂದು ಲಕ್ಷ ಉದ್ಯೋಗ ಸೃಷ್ಟಿಗಾಗಿ ಬೆಂಗಳೂರಿನಲ್ಲಿ ಆಪಲ್‌ ಕಂಪನಿ ಸ್ಥಾಪನೆಗೆ ಅವಕಾಶ ನೀಡುತ್ತಿರುವುದಾಗಿ ರಾಜ್ಯ ಸರ್ಕಾರದ ಮಂತ್ರಿಯೊಬ್ಬರು ಹೇಳಿದ್ದಾರೆ. 

Tap to resize

Latest Videos

ಜಾತಿ, ಧರ್ಮದ ವಿಷಯದಲ್ಲಿ ಕಾಂಗ್ರೆಸ್‌ ದ್ವೇಷದ ರಾಜಕಾರಣ: ರಮೇಶ್‌ ಜಾರಕಿಹೊಳಿ

ಆದರೆ, ಆಪಲ್‌ ಕಂಪನಿ ಕೇಳಿದರೆ ಅದು ಸುಳ್ಳು ಎಂದು ಹೇಳಿದೆ. ಅಂದರೆ, ಚುನಾವಣೆ ಸಮೀಪಿಸುತ್ತಿದ್ದಂತೆ ಮುಖ್ಯಮಂತ್ರಿ ಒಳಗೊಂಡಂತೆ ಮಂತ್ರಿಗಳು, ಮುಖಂಡರು ಸುಳ್ಳು ಹೇಳುತ್ತಾರೆ. ಕಾರಣ ಅವರಿಗೆ ಸುಳ್ಳೇ ಮನೆ ದೇವರು ಎಂದು ಟೀಕಿಸಿದರು. ಸುಳ್ಳು ಹೇಳುವವರ ಗುಂಪಿನಲ್ಲಿ ಈ ಕ್ಷೇತ್ರದ ಶಾಸಕ ರವಿ ಇದ್ದಾರೆ. ಅವರ ಗುಂಪಿನಲ್ಲಿ ಸ್ಯಾಂಟ್ರೋ ರವಿ, ಬ್ರೋಕರ್‌ ರವಿ ಸೇರಿದಂತೆ ಹಲವರು ಇದ್ದಾರೆ. ಸುಳ್ಳುಗಳು ಮತ್ತು ಭಾವನಾತ್ಮಕ ವಿಚಾರಗಳ ಮೂಲಕ ರಾಜಕಾರಣ ಮಾಡುತ್ತಿರುವ ಶಾಸಕ ರವಿ ಸೋಲಿಸಲು ನೀವೆಲ್ಲರೂ ಶಪಥ ಮಾಡಬೇಕಾಗಿದೆ ಎಂದು ಹೇಳಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ದುರಾಡಳಿತದಿಂದ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ, ದವಸಧಾನ್ಯಗಳ ಬೆಲೆಗಳು ಗಗನಕ್ಕೇರಿವೆ. ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜನರ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಮತ್ತು ಮಕ್ಕಳ ಅಕ್ಷರ ಕಲಿಕೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ಕುಟುಂಬಕ್ಕೆ ಪ್ರತಿ ತಿಂಗಳು 200 ಯೂನಿಟ್‌ ಉಚಿತ ವಿದ್ಯುತ್‌, ಪ್ರತಿ ಕುಟುಂಬದ ಒಬ್ಬ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರು.ಗಳನ್ನು ನೀಡಲು ಮತ್ತು ಕುಟುಂಬದ ಪ್ರತಿ ಸದಸ್ಯನಿಗೆ ತಲಾ ಹತ್ತು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ಕಾಂಗ್ರೆಸ್‌ ಭರವಸೆಯೊಂದಿಗೆ ಗ್ಯಾರಂಟಿ ಕಾರ್ಡ್‌ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಬಿಜೆಪಿಗೆ ಗೊತ್ತು ಗುರಿ ಇಲ್ಲ: ವಿಧಾನ ಪರಿಷತ್‌ ಸದಸ್ಯ ಮತ್ತು ಚಿಕ್ಕಮಗಳೂರು ಉಸ್ತುವಾರಿ ಮಂಜುನಾಥ ಭಂಡಾರಿ ಮಾತನಾಡಿ, ಬಿಜೆಪಿಗೆ ಗೊತ್ತು ಗುರಿ ಇಲ್ಲ. ಕೇವಲ ಧರ್ಮ, ಜಾತಿ, ದೇವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಾರೆ. ಅವರಿಗೆ ಜನರ ಸಮಸ್ಯೆ, ಬೆಲೆ ಏರಿಕೆಯ ಪರಿಣಾಮಗಳಿಂದಾಗುತ್ತಿರುವ ಸಂಕಷ್ಟಗಳು ಗೊತ್ತಿಲ್ಲ ಎಂದು ಛೇಡಿಸಿದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಲೆನಾಡು ಮತ್ತು ಕರಾವಳಿಯ ಜನರ ಅಭಿವೃದ್ಧಿಗಾಗಿ ಹತ್ತು ಯೋಜನೆಗಳನ್ನು ಜಾರಿಗೆ ತರಲಾಗುವುದು. ಬಂಟರು ಮತ್ತು ಬಿಲ್ಲವರ ಸರ್ವಾಂಗಿಣ ಅಭಿವೃದ್ಧಿಗಾಗಿ ಆ ಸಮುದಾಯಕ್ಕೆ ವಾರ್ಷಿಕ 250 ಕೋಟಿ ರು.ಗಳನ್ನು ತೆಗೆದಿರಿಸಲು ಕಾಂಗ್ರೆಸ್‌ ಪಣ ತೊಟ್ಟಿದೆ. ಈ ಬಾರಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ದೇಶದೆಲ್ಲೆಡೆ ಕಾಂಗ್ರೆಸ್‌ ಪಕ್ಷ ಧೂಳಿಪಟ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್‌, ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್‌, ಬಿ.ಎಂ.ಸಂದೀಪ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಜಿಲ್ಲಾ ಉಸ್ತುವಾರಿ ಗಫರ್‌, ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಡಾ.ಡಿ.ಎಲ್‌. ವಿಜಯಕುಮಾರ್‌, ಕೆಪಿಸಿಸಿ ಮಹಿಳಾ ಕಾಂಗ್ರೆಸ್‌ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕ ಬಿ.ಎಚ್‌.ಹರೀಶ್‌, ಕೆಪಿಸಿಸಿ ವಕ್ತಾರ ಎಚ್‌.ಎಚ್‌.ದೇವರಾಜ್‌, ಕೆಪಿಸಿಸಿ ಸದಸ್ಯ ಎ.ಎನ್‌.ಮಹೇಶ್‌, ಜಿಲ್ಲಾ ಕಾಂಗ್ರೆಸ್‌ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಸೈಯಾದ್‌ ಹನೀಫ್‌, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸಬನಾ ಸುಲ್ತಾನ್‌, ಮುಖಂಡ ಎಚ್‌.ಡಿ.ತಮ್ಮಯ್ಯ, ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಪಿ.ಮಂಜೇಗೌಡ, ಸಖರಾಯಪಟ್ಟಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಮಹಡಿಮನೆ ಉಪಸ್ಥಿತರಿದ್ದರು.

click me!