ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ರಮೇಶ್ ಜಾರಕಿಹೊಳಿ ರಾಜಕೀಯ ಗುದ್ದಾಟಕ್ಕೆ ಜಾತಿ ಬಣ್ಣ, ರಮೇಶ್ ಜಾರಕಿಹೊಳಿ 'ಕೆಟ್ಟ ಹುಳ' ಪದ ಬಳಕೆಗೆ ಕೆರಳಿ ಕೆಂಡವಾದ ಪಂಚಮಸಾಲಿ ಮುಖಂಡರು, ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಯತ್ನಾಳ್ ಅವಹೇಳನ ನಮ್ಮ ಗಮನಕ್ಕೆ ಬಂದಿಲ್ಲ ಎಂದ ಪಂಚಮಸಾಲಿ ಮುಖಂಡರು.
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ(ಜ.24): ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿರೋದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ. ರಾಜಕೀಯ ಬದ್ಧವೈರಿಗಳಾದ ಗೋಕಾಕ ಬಿಜೆಪಿ ಶಾಸಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ರಾಜಕೀಯ ಗುದ್ದಾಟ ಜೋರಾಗಿದೆ.
ರಾಜಕೀಯ ಬದ್ಧವೈರಿಗಳ ಕಾದಾಟಕ್ಕೆ ಸದ್ಯ ಜಾತಿ ಬಣ್ಣ ಬಂದಿದ್ದು ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನಿಗೆ ಬೆಳಗಾವಿ ಜಿಲ್ಲೆಯ ಲಿಂಗಾಯತ ಪಂಚಮಸಾಲಿ ಸಮುದಾಯದ ಮುಖಂಡರು ನಿಂತಿದ್ದಾರೆ. ಮೊನ್ನೆಯಷ್ಟೇ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಳೇಭಾವಿ ಗ್ರಾಮದಲ್ಲಿ ಅಭಿಮಾನಿಗಳ ಸಮಾವೇಶದಲ್ಲಿ ಭಾಗವಹಿಸಿದ್ದ ರಮೇಶ್ ಜಾರಕಿಹೊಳಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಸಮಾಜಕ್ಕೆ ಕೆಟ್ಟ ಹುಳ ಅದು ಅದನ್ನು ಹೇಗಾದರೂ ಮಾಡಿ ತಗೆದುಹಾಕಬೇಕು ಎಂದು ಹೇಳಿಕೆ ನೀಡಿದ್ದರು. ಸದ್ಯ ರಮೇಶ್ ಜಾರಕಿಹೊಳಿಯವರ 'ಕೆಟ್ಟ ಹುಳ' ಹೇಳಿಕೆಯನ್ನು ಲಿಂಗಾಯತ ಪಂಚಮಸಾಲಿ ಸಮುದಾಯದ ಬೆಳಗಾವಿ ಜಿಲ್ಲಾ ಮುಖಂಡರು ಖಂಡಿಸಿದ್ದಾರೆ. ಇಂದು ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಬೆಳಗಾವಿ ಜಿಲ್ಲಾ ಘಟಕದ ಮುಖಂಡರು ರಮೇಶ್ ಜಾರಕಿಹೊಳಿ ವಿರುದ್ಧ ಮುಗಿಬಿದ್ದಿದ್ದಾರೆ.
ಯಾವುದೇ ಕಾರಣಕ್ಕೂ ಕೋಲಾರದಿಂದ ಸಿದ್ದು ಸ್ಪರ್ಧಿಸಲ್ಲ: ಬಿಎಸ್‌ವೈ ಹೊಸ ಬಾಂಬ್!
ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಪಂಚಮಸಾಲಿ ಸಮುದಾಯದ ಬೆಳಗಾವಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಆರ್.ಕೆ.ಪಾಟೀಲ್ , 'ಯಾವುದೇ ಸಮುದಾಯದ ಹೆಣ್ಣು ಮಗಳಿರಲಿ ಅವದ ಬಗ್ಗೆ ಈ ರೀತಿ ಮಾತನಾಡೋದು ಸರಿಯಲ್ಲ. ಪಂಚಮಸಾಲಿ ಸಮಾಜ ಬೆಳಗಾವಿ ಜಿಲ್ಲಾ ಘಟಕ ಅದನ್ನು ಖಂಡಿಸುತ್ತದೆ. ಇವರು ರಾಜಕಾರಣ ಏನೇ ಮಾಡಲಿ ಆದ್ರೆ ಈ ರೀತಿ ಕೀಳು ಶಬ್ದ ಬಳಸಬಾರದು. ಇದು ಪುನರಾವರ್ತನೆ ಆದ್ರೆ ಪಂಚಮಸಾಲಿ ಸಮಾಜ ಉಗ್ರ ಪ್ರತಿಭಟನೆ ಮಾಡುತ್ತೆ. ರಮೇಶ್ ಜಾರಕಿಹೊಳಿ ಕ್ಷಮೆಯಾಚನೆ ಮಾಡಬೇಕೆಂದು ಆಗ್ರಹ ಮಾಡ್ತೇವೆ. ಪಂಚಮಸಾಲಿ ಸಮಾಜದ ಮಹಿಳೆ ಅಂತಾ ನಾವು ಹೇಳುತ್ತಿಲ್ಲ. ಯಾರೇ ಆದರೂ ಈ ರೀತಿ ಮಾತನಾಡೋದು ತಪ್ಪು' ಎಂದರು. ಇನ್ನು ಈ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವಹೇಳನ ಹೇಳಿಕೆ ವಿಚಾರ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, 'ಇದು ನಮ್ಮ ಗಮನಕ್ಕೆ ಬಂದಿಲ್ಲ' ಎಂದು ಜಾರಿಕೊಂಡರು. ಅಲ್ಲದೇ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಚಿವ ಮುರುಗೇಶ್ ನಿರಾಣಿ ಪರಸ್ಪರ ನಿಂದಿಸಿದ ಹೇಳಿಕೆ ವಿಚಾರವಾಗಿ 'ಸ್ವಾಮೀಜಿಗಳು ಇಬ್ಬರನ್ನು ಕರೆದು ಮಾತನಾಡೋದಾಗಿ ಹೇಳಿದ್ದಾರೆ' ಎಂದರು.
ಗೋಕಾಕ್‌ನ ಕಾಂಗ್ರೆಸ್, ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು ಹೇಳಿದ್ದೇನು ಗೊತ್ತಾ?
ಇನ್ನು ರಮೇಶ್ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಅದರಲ್ಲೂ ಪಂಚಮಸಾಲಿ ಸಮುದಾಯದ ಮತಗಳು ಹೆಚ್ಚಿವೆ. ಈ ಮಧ್ಯೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ 'ಕೆಟ್ಟ ಹುಳ' ಹೇಳಿಕೆ ವಿಚಾರ ಮುಂದಿಟ್ಟುಕೊಂಡು ರಮೇಶ್ ಜಾರಕಿಹೊಳಿ ವಿರುದ್ಧ ಗೋಕಾಕ ಕಾಂಗ್ರೆಸ್, ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು ಹಾಗೂ ಪಂಚಮಸಾಲಿ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಸಿ.ಬಿ.ಗಿಡ್ಡನವರ, ಗೋಕಾಕ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪ್ರಕಾಶ್ ಬಾಗೋಜಿ ಜಂಟಿ ಸುದ್ದಿಗೋಷ್ಠಿ ನಡೆಸಿ ರಮೇಶ್ ಜಾರಕಿಹೊಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಜೆಡಿಎಸ್ ಗೋಕಾಕ ತಾಲೂಕು ಅಧ್ಯಕ್ಷ ಸಿ.ಬಿ.ಗಿಡ್ಡನವರ, '1999ರಿಂದ ರಮೇಶ್ ಜಾರಕಿಹೊಳಿ ದುಡ್ಡು ನೀಡಿಯೇ ಆರಿಸಿ ಬಂದಿದ್ದಾರೆ. 2023ರಲ್ಲಿ ಒಂದು ರೂಪಾಯಿ ಖರ್ಚು ಮಾಡಲ್ಲ ಅಂತಾ ತಮ್ಮ ಮನೆ ದೇವರು ಅಥವಾ ತಂದೆ ತಾಯಿ ಮೇಲೆ ಆಣೆ ಮಾಡಲಿ ನೋಡೋಣ ಅಂತಾ ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲದೇ ಬೇರೆ ಕ್ಷೇತ್ರಕ್ಕೆ ಬಂದು ಅಭಿವೃದ್ಧಿ ಬಗ್ಗೆ ಭಾಷಣ ಮಾಡೋರು ತಮ್ಮ ಕ್ಷೇತ್ರದ ಬಗ್ಗೆ ಅವಲೋಕನ ಮಾಡಲಿ ಎಂದಿದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ವಿರುದ್ಧ 4 ಬಾರಿ ಚುನಾವಣೆಗೆ ಸ್ಪರ್ಧಿಸಿ ಸೋತಿರುವ ಅಶೋಕ್ ಪೂಜಾರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಅಶೋಕ್ ಪೂಜಾರಿ ನಾವು ಎಲ್ಲರೂ ಒಗ್ಗೂಡಿ ಹೋರಾಟ ಮಾಡಿದ್ದೇವೆ. ನಮ್ಮಿಬ್ಬರದ್ದು ಸ್ಟ್ಯಾಂಡ್ ಒಂದೇ ಆದ್ರೆ ರೂಟ್ ಬೇರೆ ಬೇರೆ ಇದೆ. ರಮೇಶ್ ಜಾರಕಿಹೊಳಿ ವಿರುದ್ಧ ಪಕ್ಷಾತೀತವಾಗಿ ಎಲ್ಲರೂ ಹೋರಾಡಬೇಕು. ಪಕ್ಷಾತೀತವಾಗಿ ಒಂದೇ ಕ್ಯಾಂಡಿಡೇಟ್ ಮಾಡಿ ಹೋರಾಟ ಮಾಡ್ತೀವಿ' ಎಂದು ಸಿ.ಬಿ.ಗಿಡ್ಡನವರ ತಿಳಿಸಿದ್ದಾರೆ. ಇದೇ ವೇಳೆ ಅಶೋಕ್ ಪೂಜಾರಿಗೆ ಟಿಕೆಟ್ ಕೊಟ್ರೆ ಹೊಂದಾಣಿಕೆ ಆಗಲ್ಲ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪ್ರಕಾಶ್ ಬಾಗೋಜಿ ತಿಳಿಸಿದ್ದಾರೆ. ಜಾರಕಿಹೊಳಿರವರ ಮನೆಗೆ ಹಿಂಬಾಗಿಲಿನಿಂದ ಹೋಗದೇ ಇರುವ ವ್ಯಕ್ತಿಗೆ ಟಿಕೆಟ್ ಕೊಟ್ರೆ ಮಾತ್ರ ನಾವು ಒಂದಾಗುತ್ತೇವೆ. ಗೋಕಾಕ ಪರಿಸ್ಥಿತಿ ಬಂದಾಗ ಬಿಜೆಪಿಯವರು ಬಂದರೂ ಅವರನ್ನ ಕರೆದುಕೊಂಡು ಚುನಾವಣೆ ಎದುರಿಸುತ್ತೇವೆ' ಎಂದಿದ್ದಾರೆ.
'ಅಶೋಕ ಪೂಜಾರಿ ನಸೀಬನಲ್ಲಿ MLA ಆಗೋದೇ ಇಲ್ಲ'
ಇನ್ನು ರಮೇಶ್ ಜಾರಕಿಹೊಳಿ ವಿರುದ್ದ 4 ಬಾರಿ ಸ್ಪರ್ಧಿಸಿರುವ ಅಶೋಕ ಪೂಜಾರಿ ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮತ್ತೋರ್ವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪ್ರಕಾಶ್ ಭಾಗೋಜಿ, 'ಅಶೋಕ ಪೂಜಾರಿ ನಸೀಬನಲ್ಲಿ ಎಂಎಲ್‌ಎ ಆಗೋದೇ ಇಲ್ಲ' ಎಂದು ವ್ಯಂಗ್ಯವಾಡಿದ್ದಾರೆ. 15 ವರ್ಷಗಳಿಂದ ಅಶೋಕ್ ಪೂಜಾರಿ ಎಡಗೈ ಬಲಗೈ ಆಗಿ ಸಿ.ಬಿ.ಗಿಡ್ಡನವರ ಹಾಗೂ ತಾವು ಕೆಲಸ ಮಾಡಿದ್ದೇವೆ. ರಮೇಶ್ ಜಾರಕಿಹೊಳಿ ವಿರುದ್ಧ ಅಶೋಕ್ ಪೂಜಾರಿ 4 ಬಾರಿ ಸ್ಪರ್ಧಿಸಿದ್ದಾರೆ. ಕೆಲವು ಬಾರಿ ಸ್ವಲ್ಪ ಅಂತರದಿಂದ ಸೋತಿದ್ರೆ ಕೆಲವು ಬಾರಿ ಹೆಚ್ಚಿನ ಅಂತರದಲ್ಲಿ ಸೋತಿದ್ದೇವೆ. ಅಮಿತ್ ಶಾ ಗೋಕಾಕ್‌ಗೆ ಬಂದರೂ ಅಶೋಕ್ ಪೂಜಾರಿಗೆ ಗೆಲ್ಲಕ್ಕಾಗಲಿಲ್ಲ ಅಂದ್ರೆ ಇನ್ಯಾವತ್ತೂ ಗೆಲ್ಲಕ್ಕಾಗಲ್ಲ. ರಮೇಶ್ ಜಾರಕಿಹೊಳಿ ಸಹೋದರ ಜೊತೆ ಸೇರಿ ನಾವು ಗೋಕಾಕ ಗೆಲ್ಲುತ್ತೇವೆ ಅಂದ್ರೆ ಅದು ಎಂದೂ ಸಾಧ್ಯ ಇಲ್ಲ ಎಂದು ಪರೋಕ್ಷವಾಗಿ ಸತೀಶ್ ಜಾರಕಿಹೊಳಿ ಬಗ್ಗೆ ಟೀಕಿಸಿದ್ದಾರೆ. 'ಒಬ್ಬ ಸಹೋದರ ಇನ್ನೊಬ್ಬ ಸಹೋದರನ ಸೋಲಿಸಲು ಸಾಧ್ಯವಿಲ್ಲ. ಜಾರಕಿಹೊಳಿ ಸಹೋದರರು ಯಾವುದೇ ಪಕ್ಷದಲ್ಲಿದ್ದರೂ ಹೊಂದಾಣಿಕೆ ರಾಜಕಾರಣ ಮಾಡ್ತಾರೆ. ಅವರ ಕ್ಷೇತ್ರ ಅಂತಾ ಬಂದಾಗ ಅವರು ಪಕ್ಷ ನೋಡಲ್ಲ. ನಮ್ಮ ಸಹೋದರ ಆರಿಸಿ ಬರಬೇಕು ಅಂತಾ ನೋಡುತ್ತಾರೆ. ಪಕ್ಷಕ್ಕೆ ದುಡಿಯಬೇಕು ಎಂಬ ಭಾವನೆ ಅವರಲ್ಲಿ ಯಾರಿಗೂ ಇಲ್ಲ. ಅವರು ದುಡ್ಡು ಹಂಚದೇ ಆರಿಸಿ ಬರ್ತೀನಿ ಅಂತಾರೆ.
ಕಾರ್ಯಕರ್ತರೇ ಬಿಜೆಪಿ ಆಸ್ತಿ: ಬಾಲಚಂದ್ರ ಜಾರಕಿಹೊಳಿ
ಆದ್ರೆ ಅವರು ದುಡ್ಡು ಹಂಚಿಯೇ ಆರಿಸಿ ಬಂದಿದ್ದಾರೆಂಬುದಕ್ಕೆ ನಮ್ಮ ಬಳಿ ದಾಖಲೆ ಕೊಡ್ತೀನಿ. ಒಬ್ಬ ಹೆಣ್ಣುಮಗಳಿಗೆ ಯಾವ ರೀತಿ ಮಾತನಾಡಬೇಕು ಕಲಿತುಕೊಳ್ಳಬೇಕು. ಒಬ್ಬ ಶಾಸಕಿ ಎರಡೂವರೆ ಲಕ್ಷ ಜನ ಪ್ರತಿನಿಧಿಸುತ್ತಾರೆ, ರಾಜ್ಯದ ಮಂತ್ರಿ ಆದವರು ಶಾಸಕಿ ಬಗ್ಗೆ ಗೌರವ ಕೂಡುವ ಕಾಮನ್ ಸೆನ್ಸ್ ಇಲ್ಲ. ಸುಳ್ಳು ಹೇಳಲು ಅವರು ನಿಸ್ಸೀಮರು. ಸಿಡಿ ರಿಲೀಸ್ ಆದಾಗ ನಾನವನಲ್ಲ ನಾನವನಲ್ಲ ಅಂದ್ರು, ಬಳಿಕ ಅದು ನಾನೇ ಅಂತಾ ಹೇಳಿದ್ರು. ನಮ್ಮ ರಮೇಶ್ ಅಣ್ಣಾ ಹಂಗಲ್ಲ ಹಿಂಗಲ್ಲ ಅಂತಾ ಮಹಿಳೆಯರು ಪ್ರತಿಭಟನೆ ಮಾಡಿದ್ರು. ನಮ್ಮ ಅಣ್ಣಾ ಅಂತವನಲ್ಲ ಎಂದು ಪ್ರತಿಭಟನೆ ನಡೆಸಿದ ಮಹಿಳೆಯರ ಕ್ಷಮೆಯಾಚನೆ ಮಾಡಬೇಕು. ತೋಲ್ಬಳ, ಹಣಬಲ ಬಿಟ್ಟು ನೀವು ಏನ್ ಮಾಡಲ್ಲ. ತಮ್ಮ ಸಕ್ಕರೆ ಕಾರ್ಖಾನೆ ದಿವಾಳಿ ಆಗಿದೆ ಅಂತಾ ಒಂದೆಡೆ ಘೋಷಣೆ ಮಾಡ್ತಾರೆ.
ಆದ್ರೆ ಕಾರ್ಖಾನೆ ದಿವಾಳಿ ಆಗಿಲ್ಲ ಈ ವರ್ಷವೇ ನಡೆಯುತ್ತಿದೆ. ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದೀರಿ. ತಮ್ಮ ವಿರುದ್ಧ ಪ್ರತಿಭಟನೆ ಮಾಡವರ ವಿರುದ್ಧ ಸುಳ್ಳು ಕೇಸ್ ಹಾಕೋದು ಮಾಡ್ತಾರೆ. ಕಾಂಗ್ರೆಸ್ ನನಗೆ ಟಿಕೆಟ್ ಕೊಟ್ರೆ ಇವರನ್ನು ಮನೆಗೆ ಕಳಿಸುವೆ' ಎಂದು ತಿಳಿಸಿದ್ದಾರೆ.