ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಶರಣರ ಅರೆಸ್ಟ್ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳು ತುಟಿಕ್ ಪಿಟಿಕ್ ಎನ್ನದೇ ಸೈಲೆಂಟ್ ಮೂಡಿಗೆ ಜಾರಿದ್ದಾರೆ. ಆದ್ರೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೌನ ಮುರಿದಿದ್ದಾರೆ.
ಬೆಂಗಳೂರು/ಚಿತ್ರದುರ್ಗ, (ಸೆಪ್ಟೆಂಬರ್.02): ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಹಿನ್ನೆಲೆಯಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಶರಣರ ಬಂಧನವಾಗಿದೆ. ಮುರುಘಾ ಶ್ರೀ ಬಂಧನ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಅಂತರ ಕಾಪಾಡಿಕೊಂಡಿವೆ.
ವೀರಶೈವ ಲಿಂಗಾಯತರ ಶ್ರದ್ಧಾಕೇಂದ್ರವಾಗಿರುವುದರಿಂದ ಈ ಪ್ರಕರಣ ಮುಂದಿನ ಚುನಾವಣಾ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಆದ್ದರಿಂದ ಯಾವುದೇ ಪರ ವಿರೋಧ ಹೇಳಿಕೆ ನೀಡದೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮೌನಕ್ಕೆ ಜಾರಿದ್ದಾರೆ. ಒಂದು ವೇಳೆ ಏನಾದರೂ ಹೇಳಿಕೆ ನೀಡುವ ಭರದಲ್ಲಿ ಹೆಚ್ಚು ಕಮ್ಮಿಯಾದ್ರೆ, ಇಮೇಜ್‌ಗೆ ಡ್ಯಾಮೇಜ್ ಆಗುತ್ತೆ ಎನ್ನುವ ಭಯ ಹಾಗೂ ಚುನಾವಣೆ ಹೊಸ್ತಿಲಲ್ಲಿ ಇಂತಹ ಸೂಕ್ಷ್ಮ ವಿಚಾರಗಳಿಂದ ದೂರು ಇರುವುದು ಒಳಿತು ಎನ್ನುವುದನ್ನು ಅರಿತುಕೊಂಡಿದ್ದಾರೆ.
Murugha Mutt Shivacharya Case: ಮುರುಘಾ ಶ್ರೀಗಳ ಜಾಮೀನು ಅರ್ಜಿ ವಜಾ
ಈ ಬಗ್ಗೆ ಮಾಧ್ಯಮಗಳು ರಾಜಕೀಯ ನಾಯಕರ ಬಳಿ ಪ್ರತಿಕ್ರಿಯೆ ಕೇಳಿದಾಗ ಕಾನೂನು ಪ್ರಕಾರ ಕ್ರಮ ಅಂತ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಅದರಲ್ಲೂ ಆಡಳಿತಾರೂಢ ಬಿಜೆಪಿ, ಮುರುಘಾ ಶ್ರೀ ಬಂಧನ ಪ್ರಕರಣದಲ್ಲಿ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಏನಾದರೂ ಹೇಳಿಕೆ ಕೊಟ್ರೆ ಇನ್ನೇನು ಆಗಬಹುದು ಎಂದು ಬಹಿರಂಗ ಹೇಳಿಕೆಯಿಂದ ದೂರ ಉಳಿದಿದ್ದು,ಸಾಧ್ಯವಾದಷ್ಟು ಅಂತರ ಕಾಪಾಡಿಕೊಂಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿಯ ಪ್ರಮುಖ ನಾಯಕರು ಈ ಪ್ರಕರಣ ಸಂಬಂಧ ಅಕ್ಷರಶಃ ಮೌನಕ್ಕೆ ಶರಣಾಗಿದ್ದಾರೆ. ಇತ್ತೀಚೆಗೆ ಸಿದ್ದರಾಮೋತ್ಸವದಲ್ಲಿ ಪಾಲ್ಗೊಳ್ಳಲು ದಾವಣಗೆರೆ ಆಗಮಿಸಿದ್ದ ರಾಹುಲ್ ಗಾಂಧಿಯವರನ್ನು ಶಿವಕುಮಾರ್ ಮುರುಘಾ ಮಠಕ್ಕೆ ಕರೆದೊಯ್ದು ಇಷ್ಟ ಲಿಂಗ ದೀಕ್ಷೆ ಕೊಡಿಸಿದ್ದರು. ಅಲ್ಲಿಂದ ಮಠದ ಜತೆಗೆ ಕಾಂಗ್ರೆಸ್ ಸಂಬಂಧ ಇನ್ನಷ್ಟು ಗಟ್ಟಿಯಾಗಿತ್ತು. ಆದ್ರೆ, ಇದೀಗ ಶರಣರು ಫೋಕ್ಸೋ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು, ಕಾಂಗ್ರೆಸ್ ನಾಯಕರಿಗೆ ಏನು ಮಾತನಾಡಬೇಕು ಎನ್ನುವುದು ತಿಳಿಯುತ್ತಿಲ್ಲ. ಇದರಿಂದ ಸೈಲೆಂಟ್ ಮೂಡಿಗೆ ಜಾರಿದ್ದಾರೆ.
ಮೌನ ಮುರಿದ ಸಿದ್ದರಾಮಯ್ಯ
ಶ್ರೀಗಳ ಬಂಧನದ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೌನ ಮುರಿದಿದ್ದು, ಚಿತ್ರದುರ್ಗದ ಮುರುಘಾ ಮಠದ ಸ್ವಾಮಿಗಳ ವಿರುದ್ಧದ ಆರೋಪ ಗಂಭೀರ ಸ್ವರೂಪದ್ದಾಗಿದೆ. ಪೊಲೀಸರು ಯಾವುದೇ ಒತ್ತಡಕ್ಕೊಳಗಾಗದೆ ಸಂತ್ರಸ್ತ ವಿದ್ಯಾರ್ಥಿನಿಯರ ದೂರಿನ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಸಂಗತಿಯನ್ನು ಬಹಿರಂಗಗೊಳಿಸಬೇಕು ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಕುಮಾರಸ್ವಾಮಿ ಹೇಳಿದ್ದಿಷ್ಟು
ಸರ್ಕಾರ ಜವಾಬ್ದಾರಿಯುತವಾಗಿ ಕಾನೂನಾತ್ಮಕ ನಿರ್ಧಾರ ತೆಗೆದುಕೊಂಡಿದೆ. ಈ ರೀತಿಯ ಘಟನೆ ನಡೆಯಬಾರದಿತ್ತು ಅನ್ನೊದು ನನ್ನ ಅಭಿಪ್ರಾಯ. ಇದರಲ್ಲಿ ಕೆಲವು ಸೂಕ್ಷ್ಮ ವಿಚಾರಗಳಿವೆ. ಮೊದಲೇ ನಮ್ಮ ರಾಜ್ಯ ಭಾವನಾತ್ಮಕ ವಿಷಯಗಳಲ್ಲಿ ನಾವು ನಮ್ಮದೇ ಆದ ಆಚಾರ ವಿಚಾರಗಳನ್ನ ಅಳವಡಿಸಿಕೊಂಡು ಬಂದಿರುವರು. ಹಾಗಾಗಿ ನಾನು ಚರ್ಚೆ ಮಾಡ್ದೆ ಇರೋದು ಸೂಕ್ತ ಎಂದಿದ್ದಾರೆ.
ಶ್ರೀಗಳ ಬಂಧನದ ಬಗ್ಗೆ ನಾನಿ ಚರ್ಚೆ ಮಾಡದಿರೋದೆ ಸೂಕ್ತ. ಸರ್ಕಾರ ಜವಾಬ್ದಾರಿಯುತವಾಗಿ ಏನೇನು ತೀರ್ಮಾನ ಮಾಡಬೇಕೋ ಮಾಡಲಿ. ಇಂತಹ ವಿಚಾರಗಳಲ್ಲಿ ನಾವು ಚರ್ಚೆ ಮಾಡದೆ ಇರೋದೆ ಸೂಕ್ತ. ಸರ್ಕಾರದ ಮಟ್ಟದಲ್ಲಿ ಏನ್ ತನಿಖೆ ಮಾಡಬೇಕೋ ಮಾಡಲಿ. ತನಿಖೆ ವಿಳಂಬದ ಬಗ್ಗೆ ಸರ್ಕಾರಕ್ಕೆ ಸಂಬಂಧಿಸಿದ್ದು, ನಾನು ಹೆಚ್ಚು ಚರ್ಚೆ ಮಾಡಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.