Yogi- Modi Karnataka Visit: ಮಾಸ್ ಮೋದಿ ಮತ್ತು ಸಂನ್ಯಾಸಿ ಯೋಗಿಯ ಮೂಲಕ ರಾಜ್ಯ ವಿಧಾನಸಭಾ ಚುನಾವಣೆ ಗೆಲ್ಲಲು ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ.
ಬೆಂಗಳೂರು (ಸೆ. 02): ಅಷ್ಟದಿಕ್ಕುಗಳಲ್ಲಿ ಅಷ್ಟ ಚಕ್ರವ್ಯೂಹ, ಆ ಚಕ್ರವ್ಯೂಹದಲ್ಲಿ ಬಂಧಿಯಾಗಿರುವ ರಾಜ್ಯ ಬಿಜೆಪಿಗೆ ಪ್ರಧಾನಿ ಮೋದಿ (PM Narendra Modi) ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಬೂಸ್ಟರ್....! ಇದು ಕರ್ನಾಟಕ ಕುರುಕ್ಷೇತ್ರ ಗೆಲ್ಲಲು ಕೇಸರಿ ಪಡೆಯ ಬತ್ತಳಿಕೆಯಿಂದ ಸಿಡಿಯಲಿರುವ ಅತೀ ದೊಡ್ಡ ಅಸ್ತ್ರ. ಇಡೀ ಚುನಾವಣೆಯ ದಿಕ್ಕನ್ನೇ ಬದಲಿಸುವ ತಾಕತ್ತಿರುವ ಎರಡು ಬ್ರಹ್ಮಾಸ್ತ್ರಗಳು, ಕೇಸರಿ ಪಾಳಯದ ಇಬ್ಬರು ಮಹಾರಥಿಗಳು ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಾಸ್ ಮೋದಿ ಮತ್ತು ಸಂನ್ಯಾಸಿ ಯೋಗಿಯ ಮೂಲಕ ರಾಜ್ಯ ವಿಧಾನಸಭಾ ಚುನಾವಣೆ (Assembly Elections 2023) ಗೆಲ್ಲಲು ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ.
ಗುರುವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಧರ್ಮಸ್ಥಳ ಸಂಸ್ಥೆಯ ಕ್ಷೇಮವನ ಪ್ರಕೃತಿ ಚಿಕಿತ್ಸಾ ಕೇಂದ್ರ ಉದ್ಘಾಟನೆಗಾಗಿ ರಾಜ್ಯಕ್ಕೆ ಆಗಮಿಸಿದ್ದರು. ಇತ್ತ ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಮತ್ತು ಎಂಆರ್‌ಪಿಎಲ್‌ನ ಸುಮಾರು 3,800 ಕೋಟಿ ರೂಪಾಯಿಗಳ 8 ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನೆರವೇರಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಸುಮಾರು 1 ಲಕ್ಷ ಫಲಾನುಭವಿಗಳು ಹಾಗೂ 1 ಲಕ್ಷ ಮಂದಿ ಕಾರ್ಯಕರ್ತರು ಸೇರಿದಂತೆ ಸುಮಾರು ಎರಡು ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಜತೆಗೇ ರಾಜ್ಯ ಬಿಜೆಪಿ ನಾಯಕರ ಜೊತೆ ಪ್ರಧಾನಿ ಸಭೆ ನಡೆಸಿ ಚುನಾವಣಾ ಸಿದ್ಧತೆಗೂ ಚಾಲನೆ ನೀಡುವ ಸಾಧ್ಯತೆಯಿದೆ.
ಭರ್ಜರಿ ಭಾಷಣಗಳು, ಭರಪೂರ ಭರವಸೆಗಳು ಏನಾದವು? ಮಂಗಳೂರಿಗೆ ಬರುತ್ತಿರುವ ಮೋದಿಗೆ ಕೈ ಪ್ರಶ್ನೆ
ರಾಜ್ಯ ಬಿಜೆಪಿ ನಾಯಕರ ವಿಶೇಷ ಸಭೆ: ಶುಕ್ರವಾರ ಮಂಗಳೂರಿಗೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಜ್ಯ ಬಿಜೆಪಿ ನಾಯಕರು ವಿಶೇಷ ಸಭೆ ನಡೆಸುವ ನಿರೀಕ್ಷೆಯಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಸಭೆಯನ್ನು ಆಯೋಜಿಸಲಾಗಿದ್ದು, ಅದರಲ್ಲಿ ಕೆಲವೊಂದು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಯೋಗಿ-ಮೋದಿ ತಾಕತ್ತು: ಮಾಸ್ ಮೋದಿ ಮತ ಬೇಟೆಯ ಬ್ರಹ್ಮಾಸ್ತ್ರವಾದ್ರೆ, ರಾಜ್ಯದಲ್ಲಿ ಒಕ್ಕಲಿಗರ ಒಲವು ಗಿಟ್ಟಿಸಲು ಬಿಜೆಪಿ ಬಳಿ ಇರುವ ಅಸ್ತ್ರವೇ ಸಂನ್ಯಾಸಿ ಯೋಗಿ. ಪ್ರಧಾನಿ ಮೋದಿ ಮತ್ತು ಸಂನ್ಯಾಸಿ ಯೋಗಿ, ಈ ಯಶೋ ಜೋಡಿಯ ತಾಕತ್ತೇನು ಅನ್ನೋದು ಈಗಾಗಲೇ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಾಬೀತಾಗಿದೆ.
ಹಾಗಾದ್ರೆ ಯುಪಿ ಫಲಿತಾಂಶ ಕರ್ನಾಟಕದಲ್ಲೂ ಮರುಕಳಿಸುತ್ತಾ? ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಲು ಬಿಜೆಪಿಗೆ ಮೋದಿ-ಯೋಗಿ ಶಕ್ತಿ ಎಷ್ಟು ಅನಿವಾರ್ಯ? ಪ್ರಧಾನಿ ಮೋದಿ ಹಾಗೂ ಯೋಗಿ ಎಂಟ್ರಿ ಕರ್ನಾಟಕ ಕುರುಕ್ಷೇತ್ರದಲ್ಲಿ ಕೇಸರಿ ಪಡೆಯ ಹಣೆಬರಹವನ್ನೇ ಬದಲಿಸಿ ಬಿಡುತ್ತಾ? ಕರ್ನಾಟಕದಲ್ಲಿ ಮತ್ತೆ ಅಧಿಕಾರ ಹಿಡಿಯಲು ಬಿಜೆಪಿಗೆ ಮಾಸ್ ಮೋದಿ ಹಾಗೂ ಸನ್ಯಾಸಿ ಯೋಗಿಯ ಶಕ್ತಿ ಎಷ್ಟು ಅನಿವಾರ್ಯ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್