
ನವಲಗುಂದ (ಮಾ.01): ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜೆ.ಪಿ. ನಡ್ಡಾ ಸೇರಿದಂತೆ ಬಿಜೆಪಿ ರಾಷ್ಟ್ರೀಯ ನಾಯಕರು ಎಷ್ಟುಬೇಕಾದಷ್ಟುಸಲ ರಾಜ್ಯಕ್ಕೆ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟುಸತ್ಯವೋ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಬ್ಬರಿಸಿದರು.
ನವಲಗುಂದದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಿಕ್ಕಿರಿದು ತುಂಬಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಬಿಜೆಪಿ ವಿರುದ್ಧ ಹರಿಹಾಯ್ದರು. ಮಹದಾಯಿ ನೀರು ತರಲು ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು. ಈ ಮೂಲಕ ಬಂಡಾಯ ನೆಲ ನವಲಗುಂದದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮದ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡುವಲ್ಲಿ ಯಶಸ್ವಿಯಾಯಿತು.
ಸರ್ಕಾರ ನಡೆಸುವ ಬಗ್ಗೆ ಸಿದ್ದು ಕಡೆ ಬೊಮ್ಮಾಯಿ ಪಾಠ ಕೇಳಲಿ: ಜಮೀರ್ ಅಹ್ಮದ್
ಕಾರ್ಯಕ್ರಮದಲ್ಲಿ 40 ನಿಮಿಷಕ್ಕೂ ಅಧಿಕ ಕಾಲ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಹಾಗೂ ಮೋದಿ, ಶಾ ವಿರುದ್ಧ ಹರಿಹಾಯ್ದರು. ಲಾಲ್‌ಕೃಷ್ಣ ಅಡ್ವಾಣಿ ಸೇರಿದಂತೆ ಹಿರಿಯ ನಾಯಕರೆಲ್ಲರನ್ನು ಬದಿಗೆ ಸರಿಸಿ ಮೋದಿ ಪ್ರಧಾನಿ ಹುದ್ದೆಗೆ ಏರಿದ್ದಾರೆ. ಇತ್ತೀಚಿಗೆ ಮೋದಿ, ಅಮಿತ್ ಶಾ, ನಡ್ಡಾ ಸೇರಿದಂತೆ ರಾಷ್ಟ್ರೀಯ ನಾಯಕರೆಲ್ಲರೂ ರಾಜ್ಯಕ್ಕೆ ಹಲವಾರು ಬಾರಿ ಬರುತ್ತಿದ್ದಾರೆ. ಇದಕ್ಕೆ ಕಾರಣ ಇಲ್ಲಿನ ಚುನಾವಣೆ. ಈ ಎಲ್ಲ ನಾಯಕರು ಒಂದು ಬಾರಿ ಅಲ್ಲ. ಹಲವಾರು ಬಾರಿ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ನುಡಿದರು.
ಭ್ರಷ್ಟ ಕೆಟ್ಟ ಸರ್ಕಾರ: ರಾಜ್ಯದಲ್ಲಿ ಭ್ರಷ್ಟ, ಕೆಟ್ಟ, ಜನವಿರೋಧಿ ಸರ್ಕಾರ ಇದೆ. ಇಂತಹ ಕೆಟ್ಟಸರ್ಕಾರವನ್ನು ನಾನು ಜೀವನದಲ್ಲೇ ನೋಡಿಲ್ಲ. ಇದನ್ನು ಕಿತ್ತೊಗೆಯಲು ಹಗಲಿರಳು ಶ್ರಮಿಸುತ್ತಿದ್ದೇವೆ. ಕಾಂಗ್ರೆಸ್‌ಗೆ ನವಲಗುಂದ ವಿಧಾನಸಭಾ ಕ್ಷೇತ್ರ ಗಂಡು ಮೆಟ್ಟಿನ ಕ್ಷೇತ್ರ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು. ಈ ಕ್ಷೇತ್ರದಲ್ಲಿ ಮಂತ್ರಿ ಇದ್ದಾರೆ. ರಾಜ್ಯದಲ್ಲಿ 4 ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದೆ. ಆದರೆ, ಇಲ್ಲಿನ ಮಂತ್ರಿಗಳು ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ನಮ್ಮ ಸರ್ಕಾರ ಹೋದ ಮೇಲೆ ಬಡವರಿಗೆ ಸೂರು ಕಲ್ಪಿಸಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರತಿವರ್ಷ 3 ಲಕ್ಷದಂತೆ 5 ವರ್ಷದಲ್ಲಿ 15 ಲಕ್ಷ ಜನರಿಗೆ ಸೂರು ಕಲ್ಪಿಸಿದ್ದೇನೆ ಎಂದರು. ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದರು.
ಮಹದಾಯಿ ನೀರೇಕೆ ಬಂದಿಲ್ಲ?: ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವಿದೆ. ಆದರೂ ಮಹದಾಯಿ ನೀರು ಮಾತ್ರ ಬರುತ್ತಿಲ್ಲ. ಅರಣ್ಯ, ಪರಿಸರ ಕ್ಲಿಯರೆನ್ಸ್ ಕೊಡಿಸಲು ಬಿಜೆಪಿ ಸಾಧ್ಯವಾಗಿಲ್ಲ. ಇನ್ನೂ ಇವರೇನು ನೀರು ತರುತ್ತಾರೆ ಎಂದು ಪ್ರಶ್ನಿಸಿದ ಅವರು, ಮಹದಾಯಿಗಾಗಿ ಮೋದಿ ಅವರ ಬಳಿ ಸರ್ವ ಪಕ್ಷಗಳ ನಿಯೋಗ ತೆಗೆದುಕೊಂಡು ಹೋಗಿದ್ದಾಗ, ಈ ವಿಚಾರದಲ್ಲಿ ಮೋದಿ ಮಾತ್ರ ಜಪ್ಪಯ್ಯ ಅಂದರೂ ಆ ಬಗ್ಗೆ ಚಕಾರ ಎತ್ತಲಿಲ್ಲ. ಬಿ.ಎಸ್. ಯಡಿಯೂರಪ್ಪ ರಕ್ತದಲ್ಲಿ ಪತ್ರ ಬರೆದು ಕೊಡುತ್ತೇನೆ ಎಂದರು. ಆದರೆ ನೀರು ಕೊಟ್ಟರಾ? ಎಂದು ಪ್ರಶ್ನಿಸಿದರು.
ಸಂವಿಧಾನ ಬದ್ಧವಾಗಿ ಕೆಲಸ ಮಾಡುವ ಪಕ್ಷ ಕಾಂಗ್ರೆಸ್: ಡಿ.ಕೆ.ಶಿವಕುಮಾರ್
ರಾಜ್ಯ ಸರ್ಕಾರ ಭ್ರಷ್ಟಾಚಾರ ಕಡಿಮೆ ಮಾಡಿದರೆ ಅಕ್ಕಿ ಫ್ರೀಯಾಗಿ ನೀಡಬಹುದು. ಆದರೆ, ಭ್ರಷ್ಟಾಚಾರ ಮಾತ್ರ ನಿಲ್ಲಿಸದೇ, ಅಕ್ಕಿ ಕಡಿಮೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ನೀಡಲಿದೆ. ಈ ಸಂಬಂಧ ನಿಮಗೆಲ್ಲಾ ಗ್ಯಾರಂಟಿ ಬರಲಿ ಎಂಬ ಕಾರಣಕ್ಕೆ ಗ್ಯಾರಂಟಿ ಕಾರ್ಡ್‌ನಲ್ಲಿ ಡಿಕೆಶಿ ಹಾಗೂ ನನ್ನ ಸಹಿ ಇದೆ. ಆದ್ದರಿಂದ ಅಪ್ರಚಾರ, ಸುಳ್ಳು ಭರವಸೆಗೆ ಮೋಸ ಹೋಗದೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು. ಇದು ಶೇ. 40ರಷ್ಟು ಕಮಿಷನ್ ಸರ್ಕಾರ ಎಂದು ಹೀಗೆಳೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.