ಭರವಸೆ ಈಡೇ​ರಿ​ಸುವ ಹೊಣೆ ಕಾಂಗ್ರೆಸ್‌ ಮೇಲಿ​ದೆ: ಕಾಗೋಡು ತಿಮ್ಮ​ಪ್ಪ

By Kannadaprabha NewsFirst Published May 17, 2023, 9:43 PM IST
Highlights

ಕಾಂಗ್ರೆಸ್‌ ಪಕ್ಷ ಜನರಿಗೆ ನೀಡಿದ ಭರವಸೆಯಿಂದ ಮತದಾರರು ಪಕ್ಷವನ್ನು ಗೆಲ್ಲಿಸಿದ್ದಾರೆ. ಈ ಭರವಸೆಗಳನ್ನು ಈಡೇರಿಸುವ ಹೊಣೆಗಾರಿಕೆ ಕಾಂಗ್ರೆಸ್‌ ಪಕ್ಷದ ಮೇಲಿದೆ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. 

ಸಾಗರ (ಮೇ.17): ಕಾಂಗ್ರೆಸ್‌ ಪಕ್ಷ ಜನರಿಗೆ ನೀಡಿದ ಭರವಸೆಯಿಂದ ಮತದಾರರು ಪಕ್ಷವನ್ನು ಗೆಲ್ಲಿಸಿದ್ದಾರೆ. ಈ ಭರವಸೆಗಳನ್ನು ಈಡೇರಿಸುವ ಹೊಣೆಗಾರಿಕೆ ಕಾಂಗ್ರೆಸ್‌ ಪಕ್ಷದ ಮೇಲಿದೆ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ವರ್ಷ ಆಡಳಿತ ನಡೆಸಿದ ಬಿಜೆಪಿ ಜನವಿರೋಧಿಯಾಗಿತ್ತು. ಆಡಳಿತ ವಿರೋಧಿ ಅಲೆಯೂ ಕಾಂಗ್ರೆಸ್‌ ಗೆಲುವಿಗೆ ಕಾರಣವಾಗಿದೆ. ಪಕ್ಷದ ಕಾರ್ಯಕರ್ತರು ವಿಶೇಷ ಶ್ರಮವಹಿಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಪಕ್ಷವು ನೀಡಿದ ಭರವಸೆಯನ್ನು ಈಡೇರಿಸುತ್ತದೆ. ಸ್ವಲ್ಪ ಕಾಲಾವಕಾಶ ಹಿಡಿಯಬಹುದು ಎಂದು ಹೇಳಿದರು.

ಈ ಚುನಾವಣೆಯಲ್ಲಿ ಎಲ್ಲ ಜಾತಿ ಧರ್ಮದವರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದ್ದಾರೆ. ಪಕ್ಷದ ಎಲ್ಲ ಹಂತದ ಮುಖಂಡರಿಗೂ, ಪದಾಧಿಕಾರಿಗಳಿಗೂ, ಕಾರ್ಯಕರ್ತರಿಗೂ, ಮಹಿಳಾ ಕಾರ್ಯಕರ್ತರಿಗೂ ಪಕ್ಷವು ಕೃತಜ್ಞತೆ ಸಲ್ಲಿಸುತ್ತದೆ ಎಂದರು. ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಬಿಜೆಪಿ ಆಡಳಿತದಿಂದ ಜನರು ರೋಸಿ ಹೋಗಿದ್ದರಿಂದ ಬದಲಾವಣೆ ಬಯಸಿದ್ದರು. ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು. ಹಣವಿಲ್ಲದೇ ಕೆಲಸವಾಗುವುದಿಲ್ಲ ಎಂಬ ಮನಸ್ಥಿತಿಗೆ ಜನರು ಬಂದಿದ್ದರು. ಪ್ರತಿಯೊಂದು ಕಾಮಗಾರಿಯೂ ಕಳಪೆಯಾಗಿದೆ. ಆಡಳಿತ ಜನಸ್ನೇಹಿ ಆಗದಿರುವುದು ಬಿಜೆಪಿಯ ಹೀನಾಯ ಸೋಲಿಗೆ ಕಾರಣವೆಂದು ವಿಶ್ಲೇಷಿಸಿದರು.

ಕಮಲ ಹಿಡಿದಾಗಲೇ ಸಿ.ಪಿ.ಯೋಗೇಶ್ವರ್‌ಗೆ ಹೆಚ್ಚು ಸೋಲು!

ಹಾಲಪ್ಪ ಅವರ ಅವಧಿಯಲ್ಲಿ ಒಂದೂ ಹಾಸ್ಟೆಲ್‌ ಆಗಿಲ್ಲ, ಕಾಲೇಜೂ ಆಗಿಲ್ಲ. ಗಣಪತಿಕೆರೆ ಪಾಚಿ ತೆಗೆದು ಕೆರೆ ಹಬ್ಬ ಮಾಡಿದರು. ಅಭಿವೃದ್ಧಿ ಹೆಸರಲ್ಲಿ ಲೂಟಿ ನಡೆಯಿತು. ನಗರಸಭೆಯಲ್ಲಿ ಜನರ ಕೆಲಸ ಆಗದೇ ವ್ಯವಹಾರ ದಂಧೆ ಆರಂಭವಾಯಿತು. ಇವೆಲ್ಲವುಗಳಿಂದ ಜನರು ರೋಸಿಹೋಗಿದ್ದಾರೆ. ಜನರಿಗೆ ಗೌರವ ಕೊಟ್ಟು ಕೆಲಸ ಮಾಡುವ ಆಡಳಿತವನ್ನು ಕಾಂಗ್ರೆಸ್‌ ಮಾಡುತ್ತದೆ ಎಂದು ಹೇಳಿದರು. ಪಕ್ಷದ ಪ್ರಮುಖರಾದ ಹೊಳಿಯಪ್ಪ, ಮಕ್ಬುಲ್‌ ಅಹಮದ್‌, ವಿ.ಶಂಕರ್‌, ಮೈಕಲ್‌ ಡಿಸೋಜ, ಷಣ್ಮುಖ, ಕೃಷ್ಣಮೂರ್ತಿ ಹೆಗ್ಗೋಡು, ಮಂಜೂರಾಲಿಖಾನ್‌, ಗಿರೀಶ್‌ ಕೋವಿ, ಗಣಪತಿ ಹೆನಗೆರೆ, ಪಿ.ಕೆ.ನಾರಾಯಣ ಮತ್ತಿತರರು ಹಾಜರಿದ್ದರು.

ಸೋದರ ಸವಾಲ್‌ ಗೆದ್ದ ಮಧು ಬಂಗಾರಪ್ಪಗೆ ಹೆಚ್ಚಿದ ಸಚಿವ ಸ್ಥಾನದ ನಿರೀಕ್ಷೆ

‘90 ದಿನ​ಗ​ಳೊ​ಳಗೆ ಭರ​ವಸೆ ಈಡೇ​ರ​ಲಿ​ದೆ’: ಕಾಂಗ್ರೆಸ್‌ ಪಕ್ಷದ ಮೇಲೆ ಈಗ ಹೆಚ್ಚು ಜವಾಬ್ದಾರಿ ಬಿದ್ದಿದೆ. ಜನರು ತುಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಾಗೋಡು ತಿಮ್ಮಪ್ಪನವರ ಮಾರ್ಗದರ್ಶನದಲ್ಲಿ, ಶಾಸಕ ಬೇಳೂರು ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುವುದು. ರಾಜ್ಯದಲ್ಲಿಯೂ ಭ್ರಷ್ಟಾಚಾರ ಮಿತಿಮೀರಿತ್ತು. ಗುತ್ತಿಗೆದಾರರು ಬಿಜೆಪಿ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು. ಶೇ.40 ರಷ್ಟುಕಮಿಷನ್‌ ವಿಚಾರವನ್ನು ಪ್ರಧಾನಿ ಮೋದಿ ಅವರ ಗಮನಕ್ಕೂ ತಂದರು. ಮೋದಿ ಅವರಿಂದಲೂ ನ್ಯಾಯ ಸಿಗಲಿಲ್ಲ. ಕಾಂಗ್ರೆಸ್‌ ಪಕ್ಷ ನೀಡಿದ ಭರವಸೆಗಳನ್ನು 90 ದಿನದೊಳಗೆ ಈಡೇರಿಸುತ್ತದೆ ಎಂದು ಕಾಗೋಡು ತಿಮ್ಮಪ್ಪ ವಿಶ್ವಾಸ ವ್ಯಕ್ತ​ಪ​ಡಿ​ಸಿ​ದ​ರು.

click me!