
ಕಡೂರು (ಮೇ.17): ನಾನು ಎಂದಿಗೂ ಪಲಾಯನವಾದಿಯಾಗುವುದಿಲ್ಲ. ಕಡೂರಿನಲ್ಲಿದ್ದುಕೊಂಡೇ ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು. ಕಡೂರು ತಾಲೂಕಿನ ಯಗಟಿ ಗ್ರಾಮದ ನಿವಾಸದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ನವರೊಂದಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸೋಲು ಗೆಲುವು ಎರಡೂ ನನಗೆ ಹೊಸದಲ್ಲ. ನನ್ನ ನಾಯಕರಾದ ದೇವೇಗೌಡರ ಜೊತೆ 50 ವರ್ಷದಿಂದ ತುಂಬಾ ಹತ್ತಿರದಿಂದ ಚುನಾವಣಾ ರಾಜಕೀಯವನ್ನು ನೋಡಿದ್ದೇನೆ. ಹಿಂದೆ ಇಂದಿರಾಗಾಂಧಿಯ ವರ ಗರೀಬಿ ಹಟಾವೋ ಎಂಬ ಘೋಷಣೆಯ ಅಲೆಗೆ ವಿರೋಧ ಪಕ್ಷಗಳು ಕೊಚ್ಚಿಹೋಗಿದ್ದವು.
ಈಗ ರಾಜ್ಯದಲ್ಲಿ ಕಾಂಗ್ರೆಸ್ಸಿನ ಗೆಲುವಿಗೆ ಬಿಜೆಪಿ ವಿರೋಧಿ ಅಲೆ ಸಾರ್ವತ್ರಿಕವಾಗಿ ಕಾರಣ ವಾಯಿತು. ವಾಸ್ತವವಾಗಿ ಕಡೂರಿನಲ್ಲಿಯೂ ಇದೇ ಪರಿಸ್ಥಿತಿಯಿದ್ದು ನೂತನ ಶಾಸಕರಾದ ಕೆ.ಎಸ್.ಆನಂದ್ ರವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅವರ ರಚನಾತ್ಮಕ ಕಾರ್ಯಗಳಿಗೆ ನಮ್ಮ ಸಹಕಾರ ಇರುತ್ತದೆ ಎಂದರು. ಈ ಭಾರಿ ಚುನಾವಣೆಯಲ್ಲಿ ಸೋತಿರಬಹುದು. ಆದರೆ ಅದರಿಂದ ಕಾರ್ಯಕರ್ತರು ಹತಾಶರಾಗಬಾರದು. ಕಡೂರಿನಲ್ಲಿ ಸೊನ್ನೆಯಿಂದ ಇಲ್ಲಿ ಪಕ್ಷ ಕಟ್ಟಿದ್ದೇವೆ. ಅದಕ್ಕೆ ಪುನಶ್ಚೇತನ ಮಾಡುವ ಕಾರ್ಯವಾಗಬೇಕಿದೆ.
ಕಮಲ ಹಿಡಿದಾಗಲೇ ಸಿ.ಪಿ.ಯೋಗೇಶ್ವರ್‌ಗೆ ಹೆಚ್ಚು ಸೋಲು!
ಸದ್ಯದಲ್ಲೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ಲೋಕಸಭೆ ಚುನಾವಣೆಗಳು ಎದುರಿಗಿವೆ. ಅದರಲ್ಲಿ ನಮ್ಮ ಪಕ್ಷ ದೊಡ್ಡ ಸಾಧನೆ ಮಾಡುವ ನಿಟ್ಟಿನಲ್ಲಿ ಪ್ರತೀ ಕಾರ್ಯಕರ್ತರು ಕೆಲಸ ಮಾಡಬೇಕು. ದೇವೇಗೌಡರು, ಸಂಸದ ಪ್ರಜ್ವಲ್ ನಮ್ಮ ಜೊತೆಯಿದ್ದಾರೆ. ಯಾವುದೇ ಹತಾಶೆಗೆ ಕಾರಣವಿಲ್ಲ. ಯಾರೂ ಯಾರನ್ನೂ ದೂಷಿಸುವ ಅಗತ್ಯವಿಲ್ಲ. ಈ ಚುನಾವಣೆಯನ್ನು ಸಮರ್ಥವಾಗಿಯೇ ಎದುರಿಸಿದ್ದೇವೆ. ಅದಕ್ಕೆ ಸಹಕಾರ ಕೊಟ್ಟದೇವೇಗೌಡರ ಕುಟುಂಬ ಮತ್ತು ಪಕ್ಷದ ಪ್ರತೀ ಕಾರ್ಯಕರ್ತನಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ನನ್ನ ನಿರ್ಧಾರ ಅಚಲ: ಕ್ಷೇತ್ರದ ಜನರು ಮತ್ತು ಕಾರ್ಯಕರ್ತರಿಗೆ ಪತ್ರ ಬರೆವ ಮುಖೇನ ಅರಿಕೆ ಮಾಡಿಕೊಂಡು ಭಾವನಾತ್ಮಕವಾಗಿ ಪತ್ರ ಓದಿದ ದತ್ತ, ನನಗೆ ಕ್ಷೇತ್ರದ ಜನತೆ ನೀಡಿರುವ ಪ್ರೀತಿಗೆ ಪ್ರತಿಯಾಗಿ ನನ್ನ ಕೊನೆಯುಸಿರು ಇರುವವರೆಗೂ ಎಲ್ಲರಲ್ಲೂ ಒಂದಾಗಿ ನನ್ನ ನೆಲದಲ್ಲಿಯೇ ಮಣ್ಣಾಗುತ್ತೇನೆ. ನನ್ನ ಅನೇಕ ತಪ್ಪುಗಳಿಗೆ ಜನರು ಸರಿಯಾದ ಶಿಕ್ಷೆ ನೀಡಿದ್ದಾರೆ. ತಪ್ಪು ಮಾಡಿದ ನಾನು ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇನೆ.
ಸಿದ್ಧಾಂತದ ಸೋಲಲ್ಲ, ವೈಯಕ್ತಿಕ ಸೋಲು, ಜನಾದೇಶಕ್ಕೆ ತಲೆ ಬಾಗುತ್ತೇನೆ: ಸಿ.ಟಿ.ರವಿ
ಜೂನ್ 24 ನನ್ನ ಜನ್ಮದಿನ. ಅಂದಿನಿಂದ ಕ್ಷೇತ್ರದ ಪ್ರತಿ ಹಳ್ಳಿಗೆ ಪಾದಯಾತ್ರೆ ಮೂಲಕ ತೆರಳಿ ನನ್ನ ತಪ್ಪುಗಳಿಗಾಗಿ ಕ್ಷಮೆ ಕೋರುತ್ತೇನೆ. ಪಾದಯಾತ್ರೆಯಲ್ಲಿ ಹಳ್ಳಿಗಳಲ್ಲಿ ಗ್ರಾಮವಾಸ ್ತವ್ಯವನ್ನೂ ಮಾಡುವೆ. ಈ ಸಂಕಲ್ಪ ಯಾವುದೇ ಚುನಾವಣಾ ದೃಷ್ಟಿಯಿಂದ ಅಲ್ಲ. ಕೇವಲ ನನ್ನ ಆತ್ಮಾವಲೋಕನ ಮಾತ್ರ. ಎಲ್ಲ ವಿವರಗಳನ್ನು ತಮಗೆ ತಿಳಿಸುತ್ತೇನೆ ಎಂದು ಘೋಷಣೆ ಮಾಡಿದರು. ಕೂಡಲೇ ಕಾರ್ಯಕರ್ತರು ತಪ್ಪು ಮಾಡಿದ್ಯಾರೋ ನೀವು ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಸರಿಯಲ್ಲ. ಇದನ್ನು ಕೈಬಿಡಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು. ಸಂಸದ ಪ್ರಜ್ವಲ್ ಅವರಿಗೆ ಅಡ್ಡ ನಿಂತು ಇದಕ್ಕೆ ನೀವೂ ಒಪ್ಪಬಾರದು ಎಂದು ಆಗ್ರಹಿಸಿದರು. ಆದರೆ ದತ್ತ ನನ್ನ ಸಂಕಲ್ಪ ಅಚಲ ಎಂದು ನುಡಿದು ಹೊರ ಹೊರಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.