ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಎಂದು ಕಾಂಗ್ರೆಸ್‌ನವರು ಹೊಸ ನಾಟಕ ಪ್ರಾರಂಭಿಸಿದ್ದು, ಲೋಕಾಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸರ್ಕಾರದ ದುಡ್ಡಿನಲ್ಲಿ ಪ್ರಚಾರ ಪಡೆಯಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ದೂರಿದರು.
ಶಿವಮೊಗ್ಗ (ಫೆ.07): ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಎಂದು ಕಾಂಗ್ರೆಸ್‌ನವರು ಹೊಸ ನಾಟಕ ಪ್ರಾರಂಭಿಸಿದ್ದು, ಲೋಕಾಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸರ್ಕಾರದ ದುಡ್ಡಿನಲ್ಲಿ ಪ್ರಚಾರ ಪಡೆಯಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ದೂರಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ದುಡ್ಡಿನಲ್ಲಿ ಹೋರಾಟ ಮಾಡಲಿ. ಆದರೆ, ಸರ್ಕಾರದ ದುಡ್ಡಿನಲ್ಲಿ ಎಲ್ಲ ಶಾಸಕರನ್ನು ದೆಹಲಿ ಪಿಕ್‍ನಿಕ್‍ಗೆ ಕರೆದುಕೊಂಡು ಹೋಗಿ, ಊಟ- ತಿಂಡಿ ಖರ್ಚನ್ನು ಸರ್ಕಾರದಿಂದ ನೀಡಿ ಜನರ ತೆರಿಗೆ ಹಣ ಹಾಳುಮಾಡುತ್ತಿದ್ದಾರೆ ಎಂದು ಆಪಾದಿಸಿದರು. ರಾಜ್ಯಕ್ಕೆ ಕೇಂದ್ರ ನೀಡಬಹುದಾದ ಅನುದಾನದ ಬಗ್ಗೆ ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ.
ಆದರೂ ಕಾಂಗ್ರೆಸ್‍ನವರು ರಾಜಕೀಯ ಪ್ರೇರಿತ ನಾಟಕ ಶುರು ಮಾಡಿದ್ದಾರೆ ಎಂದರು. ಈ ಹಿಂದೆ ಸಿಎಂ, ಡಿಸಿಎಂ ಇಬ್ಬರು ವಿತ್ತ ಸಚಿವೆಯವರನ್ನು ಭೇಟಿಯಾದಾಗ ವಿತ್ತಿಯ ಆಯೋಗದ ಗಮನಕ್ಕೆ ಸರ್ಕಾರ ತಂದಾಗ ಮಾತ್ರ ಕೊಡಲು ಸಾಧ್ಯ ಎಂಬುವುದನ್ನು ಕೂಡ ವಿವರಿಸಿದ್ದಾರೆ. ಹಲವು ಬಾರಿ ವಿತ್ತ ಸಚಿವರಾದ ಮುಖ್ಯಮಂತ್ರಿ ಅವರಿಗೆ ಇದರ ಅರಿವಿಲ್ಲವೇ? ಎಂದು ಕುಟುಕಿದರು. ಕಾಂಗ್ರೆಸ್ ನಾಟಕ ಆಡುವುದನ್ನು ಬಿಟ್ಟು, ರೈತರಿಗೆ ನೀಡಬೇಕಾದ ಹಾಲಿನ ಪ್ರೋತ್ಸಾಹ ಧನ ₹716 ಕೋಟಿ ಬಿಡುಗಡೆ ಮಾಡಲಿ. ಅಧಿಕೃತವಾಗಿ ಶ್ವೇತ ಪತ್ರ ಹೊರಡಿಸಿದರೆ ಕೇಂದ್ರ ಸರ್ಕಾರ ಅದಕ್ಕೆ ಸರಿಯಾದ ಉತ್ತರ ನೀಡುತ್ತದೆ. ಆನಂತರ ಹೋರಾಟ ಮುಂದುವರೆಸಲಿ ಹರಿಹಾಯ್ದರು.
undefined
ಸಂಸದ ಡಿ.ಕೆ.ಸುರೇಶ್ ಹೇಳಿಕೆಯಲ್ಲಿ ರಾಜಕೀಯ ಮಾಡಲ್ಲ: ಕೆ.ಎಸ್.ಈಶ್ವರಪ್ಪ
ಸರ್ಕಾರಕ್ಕೆ ಗೋಶಾಪ ತಟ್ಟುತ್ತದೆ: ರಾಜ್ಯ ಸರ್ಕಾರ ರೈತರಿಂದ ಖರೀದಿ ಮಾಡುತ್ತಿದ್ದ ಹಾಲಿನ ದರವನ್ನು ಕಡಿತಗೊಳಿಸಿರುವುದನ್ನು ವಿರೋಧಿಸಿ, ಮಂಗಳವಾರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗೋವುಗಳ ಸಮೇತ ಪ್ರತಿಭಟನೆ ನಡೆಯಿತು. ಈ ಹಿಂದೆ ರೈತರಿಗೆ ₹42 ನೀಡುತ್ತಿದ್ದರು. ಈಗ ₹33ಕ್ಕೆ ಇಳಿಸಲಾಗಿದೆ. ಇದಲ್ಲದೇ, ಭತ್ತ, ಮೆಕ್ಕೆಜೋಳ, ಕಬ್ಬು ಇತ್ಯಾದಿ ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದರು. ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು. ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳಿದ ಸರ್ಕಾರ ಈಗ 4 ಗಂಟೆ ಕೂಡ ವಿದ್ಯುತ್ ನೀಡುತ್ತಿಲ್ಲ.
ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿದೆ. ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಘೋಷಿಸಬೇಕು. ಇಲ್ಲದಿದ್ದರೆ ರೈತ ಮೋರ್ಚಾ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ರೈತರಿಗೆ ನೀಡಬೇಕಾಗಿದ್ದ ಹಾಲಿನ ಪ್ರೋತ್ಸಾಹಧನ ₹716 ಕೋಟಿಗಳನ್ನು ಇನ್ನೂ ನೀಡಿಲ್ಲ. ಇದರಿಂದ ಬೇಸತ್ತ ರೈತರು ಹಾಲನ್ನು ಕೊಡುವುದನ್ನೇ ನಿಲ್ಲಿಸಿದ್ದಾರೆ. ಏಕಕಾಲದಲ್ಲಿ ಕಾಂಗ್ರೆಸ್ ಸರ್ಕಾರ ರೈತರಿಗೆ ಮತ್ತು ಗೋವುಗಳಿಗೂ ದ್ರೋಹ ಮಾಡುತ್ತಿದೆ.
ಈಶ್ವರಾನಂದಪುರಿ ಶ್ರೀಗೆ ಅವಮಾನ ಕುರಿತು ಸಿಎಂ ತನಿಖೆಗೆ ಸೂಚಿಸಲಿ: ಈಶ್ವರಪ್ಪ ಆಗ್ರಹ
ಇವರಿಗೆ ಗೋವಿನ ಶಾಪ ತಟ್ಟುತ್ತದೆ. ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಬಿದ್ದುಹೋಗುತ್ತದೆ ಎಂದು ಭವಿಷ್ಯ ನುಡಿದರು. ರೈತರ ತೆರಿಗೆ ಹಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಕಾಂಗ್ರೆಸ್ ಶಾಸಕರು ದೆಹಲಿಗೆ ಹೋಗುತ್ತಿದ್ದಾರೆ. ಇದಕ್ಕಾಗಿ ಜಾಹಿರಾತು ನೀಡುತ್ತಿದ್ದಾರೆ. ಜಾಹಿರಾತಿನಲ್ಲಿ ಗಾಂಧೀಜಿ ಪೋಟೋ ಹಾಕಿದ್ದಾರೆ. ಗಾಂಧೀಜಿ ಅವರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಜೈಲಿಗೆ ಹೋದವರೆಲ್ಲಾ ಹೀಗೆ ಗಾಂಧೀಜಿ ಅವರನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ದುರಾದೃಷ್ಟಕರ ಎಂದರು.