ತಪ್ಪು ಮುಚ್ಚಲು ಕೇಂದ್ರದ ಮೇಲೆ ಸಿದ್ದರಾಮಯ್ಯ ಆರೋಪ: ಮಾಜಿ ಸಿಎಂ ಬೊಮ್ಮಾಯಿ

By Kannadaprabha News  |  First Published Feb 7, 2024, 5:23 AM IST

ರಾಜ್ಯ ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ರಾಜಕೀಯ ಸ್ಟಂಟ್ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. 


ಬೆಂಗಳೂರು (ಫೆ.07): ರಾಜ್ಯ ಸರ್ಕಾರ ತನ್ನ ತಪ್ಪು ಮುಚ್ಚಿಕೊಳ್ಳಲು ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ರಾಜಕೀಯ ಸ್ಟಂಟ್ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹಳೆ ಚಾಳಿ ಬಿಟ್ಟಿಲ್ಲ. ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಆರೋಪ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ರೈತ ವಿರೋಧಿ ಸರಕಾರ ರಾಜ್ಯದಲ್ಲಿದೆ. ಒಂಬತ್ತು ತಿಂಗಳಿಂದ ಒಂದು ರುಪಾಯಿಯನ್ನೂ ಅಭಿವೃದ್ಧಿಗೆ ಬಿಡುಗಡೆ ಮಾಡಿಲ್ಲ ಎಂದು ಕಿಡಿಕಾರಿದರು.

14ನೇ ಹಣಕಾಸು ಆಯೋಗಕ್ಕಿಂತ 15 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಹಣ ಕಡಿಮೆ ಹಂಚಿಕೆ ಆಗಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 15ನೇ ಹಣಕಾಸು ಆಯೋಗ ರಚನೆಯಾದಾಗ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇತ್ತು. ಆಗ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಆಯೋಗಕ್ಕೆ ಸರಿಯಾಗಿ ತಿಳಿಸಿಲ್ಲ. ಹೀಗಾಗಿ 15ನೇ ಹಣಕಾಸು ಆಯೋಗದಲ್ಲಿ ಹಣ ಕಡಮೆಯಾಗಲು ಸಿದ್ದರಾಮಯ್ಯ ಅವರೇ ನೇರ ಕಾರಣ ಎಂದು ಆಪಾದಿಸಿದರು.

Tap to resize

Latest Videos

ಯುಪಿಎ ಅವಧಿಯಲ್ಲಿ 2004-14 ರವರೆಗೆ ತೆರಿಗೆ ಮೂಲಕ 81,795 ಕೋಟಿ ರು. ಬಂದಿತ್ತು. ಎನ್‌ಡಿಎ ಅವಧಿಯಲ್ಲಿ 2,82,791 ಕೋಟಿ ರು. ಹಣ ಬಂದಿದೆ. ಅಭಿವೃದ್ಧಿ ಅನುದಾನ ಯುಪಿಎ ಅವಧಿಯಲ್ಲಿ 60,779 ಕೋಟಿ ರು. ಬಂದಿದೆ. ಮೋದಿ ಅವರ ಅವಧಿಯಲ್ಲಿ 2,08,882 ಕೋಟಿ ರು. ಬಿಡುಗಡೆಯಾಗಿದೆ. ಇದರ ಅವಧಿ ಇನ್ನೂ ಎರಡು ವರ್ಷ ಇದೆ. 2026 ರವರೆಗೆ 2.5 ಲಕ್ಷ ಕೋಟಿ ರು. ಮೀರಿ ತೆರಿಗೆ ಹಂಚಿಕೆ ಬರಲಿದೆ. ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಇದ್ದಾಗ 14ನೇ ಹಣಕಾಸು ಆಯೋಗ ಮಾಡಿದ್ದ ಶಿಫಾರಸ್ಸಿಗಿಂತ 1,51,309 ಕೋಟಿ ರು.ಗಳಿಗಿಂತ ಅಧಿಕವಾಗಿದೆ ಎಂದು ಹೇಳಿದರು.

ಲೋಕಸಭಾ ಚುನಾವಣೆ ಬಳಿಕ 3 ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ಬೀಳಲಿದೆ: ಮಾಜಿ ಸಿಎಂ ಬೊಮ್ಮಾಯಿ

ಕೇಂದ್ರದ ಸೆಸ್ ಕುರಿತ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸೆಸ್ ಎನ್‌ಡಿಎ ಅವಧಿಯಲ್ಲಿ ಆರಂಭವಾಗಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಇದೆ. ಯುಪಿಎ ಅವಧಿಯಲ್ಲಿ ಯಾಕೆ ಅದನ್ನು ತೆಗೆದು ಹಾಕಲಿಲ್ಲ ಎಂದು ಪ್ರಶ್ನಿಸಿದರು.

7ರಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ: ಈ ತಿಂಗಳ 7 ರಂದು ಸಿದ್ದರಾಮಯ್ಯ ಅವರ ಸರ್ಕಾರದ ವೈಫಲ್ಯ ವಿರೋಧಿಸಿ ಬಿಜೆಪಿ ವತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.

click me!