ಬಜರಂಗ ದಳ ನಿಷೇಧ ಕುರಿತು ಪ್ರಣಾಳಿಕೆಯಲ್ಲಿ ಹೇಳಿರುವ ಅಂಶಕ್ಕೆ ಕಾಂಗ್ರೆಸ್ ಬದ್ಧವಾಗಿದೆ. ಬಜರಂಗ ದಳ ಎಂಬುದು ಒಂದು ಸಂಘಟನೆ. ಅದಕ್ಕೂ ಭಗವಂತ ಹನುಮನಿಗೂ ಹೋಲಿಸುವುದೇ ಸರಿಯಲ್ಲ. ಬಜರಂಗ ದಳಕ್ಕೂ ಹನುಮಂತನಿಗೂ ಯಾವುದೇ ಸಂಬಂಧವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು (ಮೇ.04): ಬಜರಂಗ ದಳ ನಿಷೇಧ ಕುರಿತು ಪ್ರಣಾಳಿಕೆಯಲ್ಲಿ ಹೇಳಿರುವ ಅಂಶಕ್ಕೆ ಕಾಂಗ್ರೆಸ್ ಬದ್ಧವಾಗಿದೆ. ಬಜರಂಗ ದಳ ಎಂಬುದು ಒಂದು ಸಂಘಟನೆ. ಅದಕ್ಕೂ ಭಗವಂತ ಹನುಮನಿಗೂ ಹೋಲಿಸುವುದೇ ಸರಿಯಲ್ಲ. ಬಜರಂಗ ದಳಕ್ಕೂ ಹನುಮಂತನಿಗೂ ಯಾವುದೇ ಸಂಬಂಧವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಾವು ಕೂಡ ಹನುಮನ ಭಕ್ತರೇ. ಬಿಜೆಪಿಯವರು ರಾಜಕೀಯ ಕಾರಣಕ್ಕಾಗಿ ಹನುಮಾನ್ ಚಾಲೀಸಾ ಪಠಿಸಿದರೆ ನಾವು ನಿತ್ಯವೂ ಪಠಿಸುತ್ತೇವೆ. ಬಿಜೆಪಿಯವರು ಎಷ್ಟೇ ಸುಳ್ಳು ಹೇಳಿದರೂ ಕಾಂಗ್ರೆಸ್ ಪಕ್ಷ 141 ಸ್ಥಾನಗಳನ್ನು ಪಡೆಯುವುದು ಖಚಿತ ಎಂದು ಅವರು ಹೇಳಿದರು.
‘ನಾವು ಈ ರಾಜ್ಯದ ಶಾಂತಿಯ ತೋಟ ಕದಡಬಾರದು, ಇಲ್ಲಿನ ಸೌಹಾರ್ದತೆ ನಾಶವಾಗಬಾರದು ಎಂಬ ಅಂಶವನ್ನು ಪ್ರಣಾಳಿಕೆಯಲ್ಲಿ ತಂದಿದ್ದೇವೆ. ಬಜರಂಗದಳಕ್ಕೂ ಹನುಮಂತನಿಗೂ ಸಂಬಂಧವಿಲ್ಲ. ಹನುಮಂತನೇ ಬೇರೆ, ಬಜರಂಗ ದಳವೇ ಬೇರೆ. ಬಜರಂಗ ದಳ ಕೇವಲ ಒಂದು ಸಂಘಟನೆ. ಹೀಗಾಗಿ ಸಂವಿಧಾನ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದೇವೆ. ಇದನ್ನು ಅನಗತ್ಯವಾಗಿ ವಿವಾದ ಮಾಡಿ ವೋಟು ಗಿಟ್ಟಿಸಲು ಯತ್ನಿಸುತ್ತಿದ್ದಾರೆ. ಬಿಜೆಪಿಯವರ ಈ ಪ್ರಯತ್ನ ಫಲ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಚುನಾವಣಾ ಪ್ರಚಾರ ಅಖಾಡಕ್ಕೆ ಸೋನಿಯಾ ಗಾಂಧಿ: 6ರಂದು ಹುಬ್ಬಳ್ಳಿಯಲ್ಲಿ ರ್ಯಾಲಿ
ಮೋದಿಗೆ ಸವಾಲ್: ಪ್ರಧಾನಿ ನರೇಂದ್ರ ಮೋದಿ ಅವರು ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಟೀಕೆ ಮಾಡುವ ಮೊದಲು ಅವರು ರಾಜ್ಯಕ್ಕೆ ನೀಡಿರುವ ಕೊಡುಗೆಗಳು ಏನು ಎಂಬುದನ್ನು ಹೇಳಲಿ. ಬಜರಂಗ ದಳ ನಿಷೇಧ ಕುರಿತ ವಿಚಾರವನ್ನು ಪ್ರಧಾನಿ ಪ್ರಸ್ತಾಪಿಸುತ್ತಿದ್ದಾರೆ. ಇದಕ್ಕೂ ಮುನ್ನ ಅವರು ರಾಜ್ಯಕ್ಕೆ ತಾವು ನೀಡಿರುವ ಕೊಡುಗೆಗಳೇನು ಎಂಬುದನ್ನು ಹೇಳಲಿ. ಮೇಕೆದಾಟು, ಮಹದಾಯಿ ಯೋಜನೆ ಆರಂಭಿಸಲು ಏನಾದರೂ ಕ್ರಮ ಕೈಗೊಂಡಿದ್ದಾರಾ? ಬಿಜೆಪಿಯ ತಾಣ ಎಂದು ಹೇಳಿಕೊಳ್ಳುವ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಏನಾದರೂ ಕ್ರಮ ಕೈಗೊಂಡಿದ್ದಾರಾ? ಜಾಗತಿಕ ಬಂಡವಾಳ ಹೂಡಿಕೆ ವೇಳೆ ಯಾರಾದರೂ ಈ ಭಾಗದಲ್ಲಿ ಬಂಡವಾಳ ಹೂಡಿಕೆ ಮಾಡಿದರಾ? ಎಂಬುದನ್ನು ತಿಳಿಸಲಿ ಎಂದು ಆಗ್ರಹಿಸಿದರು.
ತಿರುಚಿ, ಪ್ರಚೋದಿಸಲು ಷಡ್ಯಂತ್ರ: ನಮ್ಮ ಅಂಶವನ್ನು ತಿರುಚಿ, ಪ್ರಚೋದಿಸಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಬಿಜೆಪಿಯವರು ಮುಂದಾಗಿದ್ದಾರೆ. ನಾವು ಹನುಮಂತನ ಭಕ್ತರು. ರಾಮನ ತಂದೆ ದಶರಥ ಮಹಾರಾಜನ ದೇವಾಲಯ ಎಲ್ಲೂ ಇಲ್ಲ. ಆದರೆ ರಾಮನ ಬಂಟ ಹನುಮಂತನ ದೇವಾಲಯ ಎಲ್ಲಾ ಹಳ್ಳಿಗಳಲ್ಲೂ ಇದೆ. ಕಾರಣ ಆಂಜನೇಯ ಸೇವಕ. ನಾವು ಆಂಜನೇಯನ ಪ್ರವೃತ್ತಿಯವರು. ಬಿಜೆಪಿಯವರು ನಾನು ಬಜರಂಗಿ ಎಂದು ಆಂದೋಲನ ಮಾಡುವ ಮುನ್ನ, ರಾಜ್ಯದ ಜನರ ಹೊಟ್ಟೆಗೆ ಏನು ಕೊಟ್ಟಿದ್ದಾರೆ ಎಂದು ಉತ್ತರಿಸಲಿ ಎಂದು ಹೇಳಿದರು.
ರಾಜ್ಯಕ್ಕೆ ಏನು ಕೊಟ್ಟಿದ್ದಾರೆ?: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿಯವರು ರಾಜ್ಯಕ್ಕೆ ಯಾವ ಕೊಡುಗೆ ನೀಡಿದ್ದಾರೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ 1 ಲಕ್ಷದವರೆಗೂ ಸಾಲ ಮನ್ನಾ ಮಾಡಿದೆಯಾ? ಎಲ್ಲರ ಬ್ಯಾಂಕ್ ಖಾತೆಗೆ 15 ಲಕ್ಷ ನೀಡುತ್ತೇವೆ ಎಂದಿದ್ದರು, ನೀಡಿದ್ದಾರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಮಾಡಿದ್ದಾರಾ? ಅವರು ಕೊಟ್ಟಭರವಸೆಗಳೆಲ್ಲವೂ ಹುಸಿಯಾಗಿವೆ. ಮೋದಿ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದರು. ಈಗ ಅವರದೇ ಸರ್ಕಾರ ಭ್ರಷ್ಟಾಚಾರ ಮಾಡಿದ್ದು, ಈಗ ಅದರ ಬಗ್ಗೆ ಮಾತನಾಡುತ್ತಿದ್ದಾರಾ? ಭ್ರಷ್ಟಾಚಾರ ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರಾ? ಅವರದೇ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಶಾಸಕರ ವಿರುದ್ಧವೂ ಕ್ರಮ ಕೈಗೊಳ್ಳಲಿಲ್ಲ. ಅವರು ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ಸರ್ಕಾರದ ಭ್ರಷ್ಟಾಚಾರವನ್ನು ಮೌನವಾಗಿದ್ದುಕೊಂಡು ಒಪ್ಪಿಕೊಂಡಿದ್ದಾರೆ ಎಂದು ದೂರಿದರು.
ಭೀಮಾ ತೀರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಗೆ ‘ಪಕ್ಷೇತರ’ನ ಸೆಡ್ಡು?
ಶಾಂತಿ ಭಂಗದ ಸಂಘಟನೆಗಳು: ಗುರುವಾರ ಸಂಜೆ ಹನುಮಾನ್ ಚಾಲೀಸಾ ಪಠಿಸಲು ಕೆಲ ಸಂಘಟನೆಗಳು ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ದಿನನಿತ್ಯ ಹನುಮಾನ್ ಚಾಲೀಸಾ ಪಠಣೆ ಮಾಡುತ್ತೇವೆ. ನಾವು ಸಮಾಜದಲ್ಲಿ ಶಾಂತಿ ಭಂಗ ಮಾಡುವ ಸಂಘಟನೆಗಳ ಬಗ್ಗೆ ಮಾತನಾಡಿದ್ದು, ಯಾವ ಸಂಘಟನೆಗಳು ಸಮಾಜದ ಶಾಂತಿಗೆ ಭಂಗ ಮಾಡುತ್ತವೆಯೋ ಅಂತಹ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.