ಕಾಂಗ್ರೆಸ್‌ ಬಂಡಾಯ ತೀವ್ರ: 2ನೇ ಟಿಕೆಟ್‌ ಪಟ್ಟಿ ಪ್ರಕಟ ಬೆನ್ನಲ್ಲೇ ತಲೆನೋವು

By Kannadaprabha News  |  First Published Apr 8, 2023, 5:22 AM IST

ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಅಸಮಾಧಾನ ಇನ್ನಷ್ಟು ತೀವ್ರಗೊಂಡಿದೆ.


ಬೆಂಗಳೂರು (ಏ.08): ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಅಸಮಾಧಾನ ಇನ್ನಷ್ಟು ತೀವ್ರಗೊಂಡಿದೆ. ಉಡುಪಿ ಟಿಕೆಟ್‌ ಆಕಾಂಕ್ಷಿ ಕೃಷ್ಣಮೂರ್ತಿ ಆಚಾರ್ಯ ಹಾಗೂ ಕಿತ್ತೂರು ಟಿಕೆಟ್‌ ಆಕಾಂಕ್ಷಿ ಮಾಜಿ ಸಚಿವ ಡಿ.ಬಿ.ಇನಾಮದಾರ ಸೊಸೆ ಲಕ್ಷ್ಮೀ ಇನಾಮದಾರ ಅವರು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, ಚಿತ್ರದುರ್ಗದಲ್ಲಿ ಮಾಜಿ ಎಂಎಲ್‌ಸಿ ರಘು ಆಚಾರ್‌ ಅವರು ಜೆಡಿಎಸ್‌ನಿಂದ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. 

ಹಾನಗಲ್‌ನಲ್ಲಿ ಮಹೋಹರ ತಹಶೀಲ್ದಾರ್‌ ಅವರು ಕಾಂಗ್ರೆಸ್‌ ತೊರೆದು ಶುಕ್ರವಾರ ಜೆಡಿಎಸ್‌ ಸೇರಿದ್ದಾರೆ. ಶಿರಸಿ-ಸಿದ್ದಾಪುರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ವೆಂಕಟೇಶ ಹೆಗಡೆ ಹೊಸಬಾಳೆ, ಮಂಡ್ಯದ ಕೆ.ಕೆ.ರಾಧಾಕೃಷ್ಣ ಅವರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, ಬಾದಾಮಿ ಹಾಗೂ ನರಗುಂದಗಳಲ್ಲಿ ಟಿಕೆಟ್‌ ವಂಚಿತರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಬಾದಾಮಿಯಿಂದ ಸಿದ್ದು ಸ್ಪರ್ಧೆಗೆ ಆಗ್ರಹ ಕೇಳಿ ಬಂದಿದೆ.

Tap to resize

Latest Videos

ಬಿಜೆಪಿ ಅಭ್ಯರ್ಥಿ ಗೆಲ್ಲಿಸುವುದೇ ನಮ್ಮ ಗುರಿ: ಸಚಿವ ಮುನಿರತ್ನ

ಏ.17ರಂದು ರಘು ಆಚಾರ್‌ ನಾಮಪತ್ರ ಸಲ್ಲಿಕೆ: ಚಿತ್ರದುರ್ಗದಲ್ಲಿ ಕಾಂಗ್ರೆಸ್‌ ಟಿಕೆಟ್‌ ತಪ್ಪಿದ್ದಕ್ಕೆ ತೀವ್ರ ಅಸಮಾಧಾನಗೊಂಡಿರುವ ವಿಧಾನ ಪರಿಷತ್‌ ಮಾಜಿ ಸದಸ್ಯ ರಘು ಆಚಾರ್‌, ಏ.14ರಂದು ಮಧ್ಯಾಹ್ನ 12.7ಕ್ಕೆ ಜೆಡಿಎಸ್‌ ಸೇರುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್‌ ನಾಯಕರ ಮನವೊಲಿಕೆಗೆ ಬಗ್ಗದ ಆಚಾರ್‌, ಏ.17ರಂದು ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಈ ಮಧ್ಯೆ, ಹಾನಗಲ್‌ನಿಂದ ಕಾಂಗ್ರೆಸ್‌ ಟಿಕೆಟ್‌ ತಪ್ಪಿದ್ದಕ್ಕಾಗಿ ಅಸಮಾಧಾನಗೊಂಡಿದ್ದ ಮಾಜಿ ಶಾಸಕ ಮನೋಹರ್‌ ತಹಸೀಲ್ದಾರ್‌, ಶುಕ್ರವಾರ ಜೆಡಿಎಸ್‌ಗೆ ಸೇರ್ಪಡೆಯಾದರು. ಅವರು ಜೆಡಿಎಸ್‌ನಿಂದ ಸ್ಪರ್ಧಿಸುವ ಸಾಧ್ಯತೆಯಿದೆ.

ಇದೇ ವೇಳೆ, ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಟಿಕೆಟ್‌ ತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ವೆಂಕಟೇಶ ಹೆಗಡೆ ಹೊಸಬಾಳೆ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ, ಮಂಡ್ಯದಲ್ಲಿ ಪಿ.ರವಿಕುಮಾರ್‌ ಗಣಿಗ ಅಭ್ಯರ್ಥಿಯಾಗಿರುವುದಕ್ಕೆ ಅಸಮಾಧಾನಗೊಂಡಿರುವ ಕೆ.ಕೆ.ರಾಧಾಕೃಷ್ಣ ಮತ್ತು ಎಂ.ಎಸ್‌.ಆತ್ಮಾನಂದ, ಶುಕ್ರವಾರ ಪ್ರತ್ಯೇಕವಾಗಿ ತಮ್ಮ ಬೆಂಬಲಿಗರ ಸಭೆ ನಡೆಸಿದರು. ಅಲ್ಲದೆ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ, ಶಾಂತಿ ಮಾತುಕತೆಗೆ ಆಗಮಿಸಿದ ಗಾಣಿಗ ಅವರ ಕಾರಿಗೆ ರಾಧಾಕೃಷ್ಣ ಅವರ ಬೆಂಬಲಿಗರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆಯೂ ನಡೆಯಿತು.

ಕಡೂರಿನಲ್ಲಿ ವೈ.ಎಸ್‌.ವಿ.ದತ್ತಾಗೆ ಟಿಕೆಟ್‌ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ದತ್ತಾ ಅಭಿಮಾನಿಗಳು, ತಾಲೂಕಿನ ಯಗಟಿ ಗ್ರಾಮದ ಅವರ ನಿವಾಸದ ಮುಂದೆ ಸಭೆ ನಡೆಸಿ, ಪಕ್ಷೇತರರಾಗಿ ನಿಲ್ಲಲು ಆಗ್ರಹಿಸಿದರು. ಈ ವೇಳೆ ದತ್ತಾ ಮಾತನಾಡಿ, ಏ.10ರಂದು ತಮ್ಮ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ, ಗಂಗಾವತಿಯಲ್ಲಿ ಟಿಕೆಟ್‌ ತಪ್ಪಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ವಿಪ ಮಾಜಿ ಸದಸ್ಯ ಎಚ್‌.ಆರ್‌.ಶ್ರೀನಾಥ ಅವರು, ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರ ನಡೆಸದಿರಲು ತೀರ್ಮಾನಿಸಿದ್ದಾರೆ.

ಕಾಂಗ್ರೆಸ್‌ಗೆ ರಾಜೀನಾಮೆ: ಕಿತ್ತೂರಿನಲ್ಲಿ ಟಿಕೆಟ್‌ ಸಿಗದಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಡಿ.ಬಿ.ಇನಾಮದಾರ ಸೊಸೆ ಲಕ್ಷ್ಮೀ ಇನಾಮದಾರ, ಕಾಂಗ್ರೆಸ್‌ಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಡುತ್ತಲೇ ಅವರು ತಮ್ಮ ರಾಜೀನಾಮೆ ನಿರ್ಧಾರ ಪ್ರಕಟಿಸಿದರು. ಉಡುಪಿಯಲ್ಲಿ ಟಿಕೆಟ್‌ ತಪ್ಪಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಮುಖಂಡ ಕೃಷ್ಣಮೂರ್ತಿ ಆಚಾರ್ಯ, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ತಮ್ಮ ಅಳಿಯ, ಮಾಜಿ ಶಾಸಕ ರಫೀಕ್‌ ಅಹಮದ್‌ಗೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಕೈ ತಪ್ಪಿರುವುದಕ್ಕೆ ಅಸಮಾಧಾನಗೊಂಡಿರುವ ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಎಸ್‌.ಷಫಿ ಅಹಮದ್‌ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.

ಹಲವೆಡೆ ಪ್ರತಿಭಟನೆ: ಭೀಮಸೇನ್‌ ಚಿಮ್ಮನಕಟ್ಟಿಗೆ ಟಿಕೆಟ್‌ ನೀಡಿರುವುದಕ್ಕೆ ಬಾದಾಮಿಯಲ್ಲಿ ಮಹೇಶ ಹೊಸಗೌಡರು ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಸ್ಪರ್ಧೆಗೆ ಆಗ್ರಹಿಸಿ ಅವರ ಅಭಿಮಾನಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ಅರ್ಧ ಗಂಟೆ ರಸ್ತೆ ತಡೆ ನಡೆಸಿ, ಸಿದ್ದರಾಮಯ್ಯನವರು ಇಲ್ಲಿಂದಲೇ ಸ್ಪರ್ಧಿಸಬೇಕು. ಅಲ್ಲಿಯವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು, ನರಗುಂದದಲ್ಲಿ ಡಾ.ಸಂಗಮೇಶ ಕೊಳ್ಳಿಯವರಿಗೆ ಟಿಕೆಟ್‌ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರ ಅಭಿಮಾನಿಗಳು, ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

'ಮೋದಿ, ನಿನ್ನ ಗೋರಿ ತೋಡ್ತೇವೆ ಅಂತಾರೆ: ಬಿಜೆಪಿ ಯಶಸ್ಸಿನಿಂದ ಕಾಂಗ್ರೆಸ್‌ ತೀವ್ರ ಹತಾಶ

11 ಕ್ಷೇತ್ರಗಳಲ್ಲಿ ಬಂಡಾಯ ಬಿಸಿ
1. ಚಿತ್ರದುರ್ಗ ರಘು ಆಚಾರ್‌ (ಜೆಡಿಎಸ್‌ನಿಂದ ಸ್ಪರ್ಧೆ)
2. ಹಾನಗಲ್‌ ಮನೋಹರ್‌ ತಹಸೀಲ್ದಾರ್‌ (ಜೆಡಿಎಸ್‌ನಿಂದ ಸ್ಪರ್ಧೆ)
3. ಶಿರಸಿ-ಸಿದ್ದಾಪುರ ವೆಂಕಟೇಶ ಹೆಗಡೆ ಹೊಸಬಾಳೆ (ಸ್ವತಂತ್ರ ಸ್ಪರ್ಧೆ)
4. ಮಂಡ್ಯ ಕೆ.ಕೆ.ರಾಧಾಕೃಷ್ಣ (ಸ್ವತಂತ್ರ ಸ್ಪರ್ಧೆ)
5. ಕಡೂರು ವೈ.ಎಸ್‌.ವಿ.ದತ್ತ (ಏ.10ರಂದು ನಿರ್ಧಾರ)
6. ಗಂಗಾವತಿ ಎಚ್‌.ಆರ್‌.ಶ್ರೀನಾಥ್‌ (ತಟಸ್ಥ)
7. ಕಿತ್ತೂರು ಲಕ್ಷ್ಮೀ ಇನಾಮದಾರ (ರಾಜೀನಾಮೆ)
8. ಉಡುಪಿ ಕೃಷ್ಣಮೂರ್ತಿ ಆಚಾರ್ಯ (ರಾಜೀನಾಮೆ, ಸ್ವತಂತ್ರ ಸ್ಪರ್ಧೆ)
9. ತುಮಕೂರು ರಫೀಕ್‌ ಅಹಮದ್‌ (ಷಫಿ ಅಹಮದ್‌ ರಾಜೀನಾಮೆ)
10. ಬಾದಾಮಿ ಮಹೇಶ ಹೊಸಗೌಡರು (ಪ್ರತಿಭಟನೆ)
11. ನರಗುಂದ ಡಾ.ಸಂಗಮೇಶ ಕೊಳ್ಳಿ (ಪ್ರತಿಭಟನೆ)

click me!