ಕೊಪ್ಪಳದಲ್ಲಿ ಬಿಜೆಪಿ ಪ್ರಚಾರ ಶುರುವಾಗೋದು ಯಾವಾಗ?

By Kannadaprabha News  |  First Published Apr 8, 2023, 4:15 AM IST

ನಾಲ್ಕಾರು ದಿನಗಳಿಂದ ಬೆಂಗಳೂರಿನಲ್ಲಿಯೇ ಇದ್ದ ಸಂಸದ ಸಂಗಣ್ಣ ಕರಡಿ ಆಗಮನ, ಬೆಂಗಳೂರಿನಲ್ಲಿಯೇ ಬೀಡುಬಿಟ್ಟಿರುವ ಸಿವಿಸಿ, ಬೀಕೋ ಎನ್ನುತ್ತಿರುವ ಬಿಜೆಪಿ ಕಾರ್ಯಾಲಯ. 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಏ.08): ಬಿಜೆಪಿ ಇದುವರೆಗೂ ಯಾವೊಂದು ಕ್ಷೇತ್ರದ ಟಿಕೆಟ್‌ ಘೋಷಣೆ ಮಾಡಿಲ್ಲ. ಆದರೂ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಪ್ರಚಾರ ಶುರುವಾಗಿದೆ. ಆದರೆ, ಜಿಲ್ಲಾ ಕೇಂದ್ರ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಇದುವರೆಗೂ ಪ್ರಚಾರ ಶುರುವಾಗಿಲ್ಲ ಮತ್ತು ಶುರುವಾಗುವ ಲಕ್ಷಣಗಳು ಕಾಣುತ್ತಿಲ್ಲ. ಯಲಬುರ್ಗಾದಲ್ಲಿ ಹಾಲಪ್ಪ ಆಚಾರ್‌ ಅವರು ಕಳೆದೊಂದು ವಾರದಿಂದ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇಲ್ಲಿಯೂ ಟಿಕೆಟ್‌ಗಾಗಿ ಫೈಟ್‌ ಇದ್ದರೂ ಪ್ರಚಾರ ಕಾರ್ಯ ಮುಂದುವರೆಸಿದ್ದಾರೆ. ಅಚ್ಚರಿ ಎಂದರೇ ಇತರೆ ಆಕಾಂಕ್ಷಿಗಳು ಬೆಂಗಳೂರಿನಲ್ಲಿ ಇದ್ದರೂ ಸಹ ಸಚಿವ ಹಾಲಪ್ಪ ಆಚಾರ್‌ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

Tap to resize

Latest Videos

undefined

ಗಂಗಾವತಿಯಲ್ಲಿ ಹಾಲಿ ಶಾಸಕ ಪರಣ್ಣ ಮುನವಳ್ಳಿ ಅವರಿಗೂ ಟಿಕೆಟ್‌ ಘೋಷಣೆಯಾಗಿಲ್ಲ. ಆದರೂ ವಾರ್ಡ್‌ವಾರು ಹಾಗೂ ಗ್ರಾಮಗಳಿಗೆ ಸುತ್ತಾಡಿ ಪ್ರಚಾರ ನಡೆಸುತ್ತಿದ್ದಾರೆ. ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕುಷ್ಟಗಿ ಕ್ಷೇತ್ರದಲ್ಲಿಯೂ ದೊಡ್ಡನಗೌಡ ಪಾಟೀಲ್‌ ಅವರಂತೂ ತಾವೇ ಅಭ್ಯರ್ಥಿ ಎಂದು ಪ್ರಚಾರ ನಡೆಸಿದ್ದಾರೆ.

ಕೊಪ್ಪಳ: ಕಾಂಗ್ರೆಸ್ ಅಭ್ಯರ್ಥಿ ಘೋಷಣೆ, ಬಿಜೆಪಿಯಲ್ಲಿ ಇನ್ನೂ ಗಲಿಬಿಲಿ!

ಇನ್ನು ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿಯೂ ಹಾಲಿ ಶಾಸಕ ಬಸವರಾಜ ದಢೇಸ್ಗೂರು ಅವರೂ ಟಿಕೆಟ್‌ ಸಿಗುವ ಆತ್ಮವಿಶ್ವಾಸದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಹೀಗಾಗಿ,ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷದ ನಿಯೋಜಿತ ಅಭ್ಯರ್ಥಿಗಳು ಪ್ರಚಾರ ನಡೆಸಿದ್ದರೇ ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಟಿಕೆಟ್‌ ಘೋಷಣೆಯಾಗುವ ಮುನ್ನವೇ ಪ್ರಚಾರ ಕೈಗೊಂಡಿದೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೂ ಯಾರೊಬ್ಬರೂ ಪ್ರಚಾರ ಆರಂಭಿಸಿಲ್ಲ. ಬಿಜೆಪಿ ತಾಲೂಕು ಘಟಕವೂ ಸಹ ಪ್ರಚಾರ ಕೈಗೊಳ್ಳುತ್ತಿಲ್ಲ. ಆಕಾಂಕ್ಷಿಗಳು ಸಹ ಯಾರೊಬ್ಬರು ಟಿಕೆಟ್‌ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿ ಪ್ರಚಾರ ಕೈಗೊಳ್ಳುವ ಸಾಹಸ ಮಾಡುತ್ತಿಲ್ಲ. ಹಾಗೆ ನೋಡಿದರೆ ಚುನಾವಣೆ ಅಧಿಸೂಚನೆ ಹೊರಡುವ ಮುನ್ನ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಚುರುಕಾಗಿಯೇ ಇತ್ತು. ಸಾಲು ಸಾಲು ಕಾರ್ಯಕ್ರಮ ಆಗುತ್ತಿದ್ದವು. ಸಂಸದ ಸಂಗಣ್ಣ ಕರಡಿ ನಾನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಲೇ ಇದ್ದರು. ಆಕಾಂಕ್ಷಿ ಸಿ.ವಿ. ಚಂದ್ರಶೇಖರ ಹಳ್ಳಿ ಹಳ್ಳಿ ಸುತ್ತುತ್ತಿದ್ದರು. ಆದರೆ, ಅಧಿಸೂಚನೆ ಹೊರ ಬೀಳುತ್ತಿದ್ದಂತೆ ಕೊಪ್ಪಳ ವಿಧಾನಸಭಾ ಕ್ಷೇತ್ರ ಸ್ತಬ್ಧವಾಗಿದೆ.

ಸಂಸದ ಸಂಗಣ್ಣ ಕರಡಿ ನಾಲ್ಕಾರು ದಿನಗಳಿಂದ ಬೆಂಗಳೂರಿನಲ್ಲಿಯೇ ಬಿಡಾರ ಹೂಡಿದ್ದರು. ಟಿಕೆಟ್‌ಗಾಗಿ ನಾನಾ ರೀತಿಯಲ್ಲಿ ಫೈಟ್‌ ನಡೆಸಿದ್ದ ಅವರು ಶುಕ್ರವಾರ ರಾತ್ರಿ ವೇಳೆಗೆ ಕೊಪ್ಪಳಕ್ಕೆ ಆಗಮಿಸಿದ್ದಾರೆ. ಟಿಕೆಟ್‌ ಕುರಿತು ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ,ಕೊಪ್ಪಳಕ್ಕೆ ಆಗಮಿಸಿರುವ ಸಂಸದ ಸಂಗಣ್ಣ ಕರಡಿ ಯಾವ ನಡೆ ಅನುಸರಿಸುತ್ತಾರೆ ಎನ್ನುವುದು ಸದ್ಯದ ಕುತೂಹಲ. ಈ ನಡುವೆ ಅವರು ಆಪ್ತರ ಸಭೆ ನಡೆಸಲಿದ್ದಾರೆ ಎನ್ನುವ ವದಂತಿ ಜೋರಾಗಿದೆ. ಆದರೆ, ಇದನ್ನು ಅವರು ತಳ್ಳಿ ಹಾಕಿದ್ದಾರೆ.

ಪ್ರಬಲ ಆಕಾಂಕ್ಷಿ ಸಿ.ವಿ.ಚಂದ್ರಶೇಖರ ಸಹ ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿದ್ದಾರೆ. ಅವರು ಸಹ ಆಗಮಿಸಿ, ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸುತ್ತಿಲ್ಲ. ಪಕ್ಷವೂ ಸಹ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಚಟುವಟಿಕೆ ನಡೆಸುತ್ತಿಲ್ಲ. ಟಿಕೆಟ್‌ ಯಾರಿಗೆ ಆಗುತ್ತದೆ ಎನ್ನುವ ಚಿಂತೆ ಎಲ್ಲರನ್ನು ಕಾಡುತ್ತಿದೆ.

ಕೊಪ್ಪಳದಲ್ಲಿ ಬಿಜೆಪಿ ಟಿಕೆಟ್‌ ಟೆನ್ಶನ್‌: ಟಿಕೆಟ್‌ಗಾಗಿ ಸಂಸದ ಕರಡಿ ಸಂಗಣ್ಣ ಕಸರತ್ತು

ದೆಹಲಿ ತಲುಪಿದ ಹೆಸರು ಯಾವವು?:

ರಾಜ್ಯ ಹೈಕಮಾಂಡ್‌ನಿಂದ ದೆಹಲಿ ತಲುಪಿದ ಆ ಮೂರು ಹೆಸರುಗಳು ಯಾವವು ಎನ್ನುವುದು ಪಕ್ಷದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಈಗಿರುವ ವದಂತಿ ಪ್ರಕಾರ ಸಂಸದ ಸಂಗಣ್ಣ ಕರಡಿ, ಸಿ.ವಿ.ಚಂದ್ರಶೇಖರ ಹಾಗೂ ಗವಿಸಿದ್ದಪ್ಪ ಕರಡಿ ಅಥವಾ ರಾಜಶೇಖರ ಆಡೂರು ಅವರ ಹೆಸರು ಎನ್ನಲಾಗುತ್ತಿದೆ. ಇದ್ಯಾವುದು ಅಧಿಕೃತವಲ್ಲ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!