'ಹಿಂದುಳಿದವರನ್ನು ಮತ ಬ್ಯಾಂಕ್‌ ಆಗಿ ಬಳಸಿದ ಕಾಂಗ್ರೆಸ್‌: ಬಿಜೆಪಿಯಿಂದ ಮುಖ್ಯವಾಹಿನಿಗೆ ತರಲು ಪ್ರಯತ್ನ'

By Kannadaprabha News  |  First Published Jan 6, 2022, 5:15 AM IST

*ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯಕಾರಿಣಿ 
*ಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪ 
*ಬಿಜೆಪಿ  ಹಿಂದುಳಿದವರನ್ನು ಮುಖ್ಯವಾಹಿನಿಗೆ ತಂದಿದೆ
 


ಶಿವಮೊಗ್ಗ (ಜ. 6): ಇಷ್ಟುವರ್ಷಗಳ ಕಾಲ ಕಾಂಗ್ರೆಸ್‌ ಹಿಂದುಳಿದ ಮತ್ತು ದಲಿತ ವರ್ಗವನ್ನು ಕೇವಲ ಓಟ್‌ ಬ್ಯಾಂಕ್‌ (Vote Bank) ಆಗಿ ಬಳಸಿಕೊಂಡಿತೇ ವಿನಃ ಎಂದೂ ಹಿಂದುಳಿದ ವರ್ಗಗಳ ಏಳಿಗೆಯನ್ನು ಬಯಸಲಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದರು. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಶುಭಮಂಗಳ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.

ಹಿಂದುಳಿದವರನ್ನು ಮತ ಹಾಕಲು ಮಾತ್ರ ಇದ್ದಾರೆ ಎಂಬಂತೆ ಬಳಸಿಕೊಂಡು ತಾವು ಮಾತ್ರ ಸಿಂಹಾಸನದ ಮೇಲೆ ಕೂತು ಅಧಿಕಾರ ಅನುಭವಿಸಿದರು. ಹಿಂದುಳಿದ ವರ್ಗದ ಅಭಿವೃದ್ಧಿ ಹೋಗಲಿ, ಬದಲಿಗೆ ಇನ್ನಷ್ಟುಕೆಳ ಹಂತಕ್ಕೆ ಅವರನ್ನು ದೂಡಿದರು. ಆದರೆ, ಬಿಜೆಪಿ ಮಾತ್ರ ಹಿಂದುಳಿದವರನ್ನು ಸಮಾಜದವರನ್ನು ಮುಖ್ಯವಾಹಿನಿಗೆ ತರಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ನರೇಂದ್ರ ಮೋದಿ ಅವರೂ ಹಿಂದುಳಿದವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ರಾಜ್ಯದಲ್ಲಿನ ಬಸವರಾಜ ಬೊಮ್ಮಾಯಿ ನೇತೃತ್ವದ ಒಂದು ರೀತಿಯಲ್ಲಿ ಶೋಷಿತರೇ ಆಗಿದ್ದ ಹಿಂದುಳಿದ ವರ್ಗವರಿಗೆ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ನೆರವು ನೀಡಲು ಮುಂದಾಗಿದೆ. ಅವರನ್ನು ಮುಖ್ಯವಾಹಿನಿಗೆ ಕರೆ ತರುತ್ತಿದೆ. ಈ ಕಾರಣಕ್ಕೆ ಬಿಜೆಪಿ ಇಂದು ಎಲ್ಲ ವರ್ಗದವರ ಪಕ್ಷವಾಗಿ ಬೆಳೆದಿದೆ ಎಂದು ವಿಶ್ಲೇಷಿಸಿದರು.

Tap to resize

Latest Videos

ಇದನ್ನೂ ಓದಿ: Thirthahalli: ನಾನು ರಾಜೀನಾಮೆ ಕೊಡುವ ಸ್ಥಿತಿ ತರಬೇಡಿ, ಪೊಲೀಸರಿಗೆ ಗೃಹ ಸಚಿವರ ಮನವಿ

ಮತಾಂತರ ಎಂಬುದು ದಲಿತ ವರ್ಗದ ಸಮಸ್ಯೆ ಮಾತ್ರವಲ್ಲ, ಅದು ಈಗ ಹಿಂದುಳಿದವರ ಬಳಿಗೆ ಬಂದು ನಿಂತಿದೆ. ಹೀಗಾಗಿ, ದೊಡ್ಡ ಪಿಡುಗಾಗಿರುವ ಈ ಬಲವಂತದ ಮತಾಂತರವನ್ನು ನಿಷೇಧಿಸುವುದು ಅನಿವಾರ್ಯ. ಆ ಕೆಲಸವನ್ನು ನಾವು ಮಾಡಿಯೇ ಮಾಡುತ್ತೇವೆ. ಮತಾಂತರವಾಗಿಯೂ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿರುವ ಜಾತಿಗಳ ಜನರನ್ನು ನಾವು ನೋಡುತ್ತಿದ್ದೇವೆ. ಇನ್ನುಮುಂದೆ ಅವರಿಗೆ ಮೂಲ ಜಾತಿಯ ಸೌಲಭ್ಯ ಪಡೆಯಲು ಯಾವುದೇ ಅವಕಾಶ ಇರುವುದಿಲ್ಲ. ಆಮಿಷವೊಡ್ಡಿ ಮತಾಂತರ ಮಾಡಿದವರಿಗೆ ಇಲ್ಲಿಯವರೆಗೂ ಶಿಕ್ಷೆ ಎಂಬುದು ಇರಲಿಲ್ಲ. ಆದರೆ, ಈಗ ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ ಕಾಯ್ದೆಯಲ್ಲಿ ಮತಾಂತರ ಮಾಡಿದರೆ ಶಿಕ್ಷೆ ಖಚಿತ ಎಂದು ಸ್ಪಷ್ಟಪಡಿಸಲಾಗಿದೆ ಎಂದರು.

ಬಿಜೆಪಿ ಆಡಳಿತ ವ್ಯವಸ್ಥೆಯಲ್ಲಿ ಎಲ್ಲ ಜಾತಿ ಜನಾಂಗದವರ ರಕ್ಷಣೆ ಖಚಿತ. ಯಾರೂ ಯಾವುದಕ್ಕೂ ಅಂಜಬೇಕಾಗಿಲ್ಲ. ನಮ್ಮದು ದೇಶ ಕಟ್ಟುವ ಸಿದ್ಧಾಂತ. ಇಲ್ಲಿ ರಾಷ್ಟ್ರೀಯತೆಗೆ ಹೆಚ್ಚು ಒತ್ತು. ಹಿಂದೂ ಧರ್ಮವೆಂದರೆ ಕೇವಲ ಜಾತಿಯಲ್ಲ, ಅದೊಂದು ಸಂಸ್ಕೃತಿ. ಎಲ್ಲ ಜಾತಿಗಳ ರಕ್ಷಣೆ ಇಲ್ಲಿ ಆಗುತ್ತದೆ. ರಾಜ್ಯದಲ್ಲಿ 17 ಜನ ಹಿಂದುಳಿದ ವರ್ಗಗಳಿಗೆ ಸೇರಿದ ಶಾಸಕರಿದ್ದಾರೆ. ಸಂಸದರು, ವಿಧಾನ ಪರಿಷತ್ತು, ಗ್ರಾಪಂ, ಜಿಪಂ, ತಾಪಂ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗದವರು ಆಯ್ಕೆಯಾಗಿದ್ದಾರೆ. ಈ ಎಲ್ಲರ ಸಹಕಾರದಲ್ಲಿ ಹಿಂದುಳಿದ ವರ್ಗಗಳನ್ನು ಮತ್ತಷ್ಟುಗಟ್ಟಿಯಾಗಿ ಬಿಜೆಪಿ ಮಾಡುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Anti Conversion Bill: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಗೃಹ ಸಚಿವ ಜ್ಞಾನೇಂದ್ರ ವಿರುದ್ಧ ದೂರು ದಾಖಲು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ನಮ್ಮ ಪುರಾಣ ಕತೆಗಳಲ್ಲಿ, ಇತಿಹಾಸದಲ್ಲಿ ಸಾಧನೆ ಮಾಡಿದವರು, ಶೌರ್ಯ ಮೆರೆದವರು ಎಲ್ಲರೂ ಹಿಂದುಳಿದ ವರ್ಗದವರೇ ಆಗಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಟಿದ್ದಾರೆ. ಸಂಗೀತ, ನೃತ್ಯ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಯಾರೂ ನಾವು ಹಿಂದುಳಿದವರು ಎಂದು ಹೇಳಲಿಲ್ಲ. ಯಾವ ಕೀಳರಿಮೆಯೂ ಅವರಲ್ಲಿ ಇರಲಿಲ್ಲ. ಇದೇ ರೀತಿ ಈಗಲೂ ಹಿಂದುಳಿದ ವರ್ಗಗಳಿಗೆ ಯಾವ ಕೀಳರಿಮೆಯೂ ಬೇಡ ಎಂದರು. ಶ್ರೀ ಕೃಷ್ಣನನ್ನು ನೋಡಲು ಹೋದ ಕನಕದಾಸರಿಗೆ ಯಾರೋ ಏನೋ ಹೇಳಿದರು ಎಂದು ಒಳಗೆ ಬಿಡಲಿಲ್ಲ. ಆದರೆ, ಕನಕದಾಸರು ಶ್ರೀ ಕೃಷ್ಣನನ್ನೇ ತಮ್ಮತ್ತ ತಿರುಗಿಸಿಕೊಂಡರು. ಇಂತಹ ಪವಿತ್ರ ಸ್ಥಾನಕ್ಕೆ ಹೋಗಲ್ಲ ಎನ್ನುವ ರಾಜಕಾರಣಿಗಳು ನಮ್ಮಲ್ಲಿದ್ದಾರೆ. ಅವರೆಲ್ಲ ಮಣ್ಣು ಪಾಲಾಗುತ್ತಾರೆ ಎಂದು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ವ್ಯಂಗ್ಯವಾಡಿದರು.

ಇದನ್ನೂ ಓದಿ: Panchamasali 2A ಮೀಸಲಿಗೆ ಹಿಂದುಳಿದ ಜಾತಿಗಳ ವಿರೋಧ: ಆಯೋಗಕ್ಕೆ ಮನವಿ!

ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ನೆ.ಲ. ನರೇಂದ್ರಬಾಬು ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದುಳಿದ ವರ್ಗಗಳ ರಕ್ಷಣೆಗಾಗಿಯೇ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಸ್ತಿತ್ವಕ್ಕೆ ಬಂದಿದೆ. ಇದು ಪ್ರತಿ ಗ್ರಾಮ ಪಂಚಾಯಿತಿ, ಶಕ್ತಿ ಕೇಂದ್ರಗಳು, ಬೂತ್‌ ಮಟ್ಟದಲ್ಲಿ ಕಾರ್ಯನಿರ್ವಹಿಸಲಿದೆ. ಸರ್ಕಾರದ ಯಾವುದೇ ಯೋಜನೆಗಳು ಹಿಂದುಳಿದ ವರ್ಗಗಳ ಕಟ್ಟಕಡೆಯ ಪ್ರಜೆಗೂ ತಲುಪಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ. ಮತ್ತು ಇದನ್ನು ಪ್ರಚಾರ ಮಾಡುವುದೇ ಮೋರ್ಚಾದ ಬಹುದೊಡ್ಡ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಶೇ. 100 ರಷ್ಟುಹಿಂದುಳಿದ ವರ್ಗಗಳ ಕಲ್ಯಾಣ ಆಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಶಾಸಕರಾದ ಡಿ.ಎಸ್‌. ಅರುಣ್‌, ರುದ್ರೇಗೌಡ, ಶಾಸಕರಾದ ಹರತಾಳು ಹಾಲಪ್ಪ, ಮಾಜಿ ಶಾಸಕ ಭಾನುಪ್ರಕಾಶ್‌, ಅಶ್ವತ್ಥನಾರಾಯಣ್‌, ಯಶ್‌ಪಾಲ್‌ ಸುವರ್ಣ, ಅರುಣ್‌ಜೀ, ಆರ್‌.ಕೆ. ಸಿದ್ಧರಾಮಣ್ಣ, ಟಿ.ಡಿ. ಮೇಘರಾಜ್‌, ದತ್ತಾತ್ರಿ, ಮೇಯರ್‌ ಸುನಿತಾ ಅಣ್ಣಪ್ಪ, ಚನ್ನಬಸಪ್ಪ, ಜ್ಯೋತಿ ಪ್ರಕಾಶ್‌, ಗುರುಮೂರ್ತಿ, ವಿವೇಕಾನಂದ, ಮಾಲತೇಶ್‌, ಮೊದಲಾದವರಿದ್ದರು. ಅಶೋಕ್‌ ಮೂರ್ತಿ ಸ್ವಾಗತಿಸಿದರು.
ಅಹಲ್ಯಬಾಯಿ, ಶಿವಾಜಿ, ಸಂಗೊಳ್ಳಿ ರಾಯಣ್ಣ, ಭಕ್ತ ಕನಕದಾಸ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ ಹೀಗೆ ಹಿಂದುಳಿದ ವರ್ಗಗಳ ಎಲ್ಲಾ ಜಾತಿಗಳ ಶರಣರು ಭಾರತೀಯ ಸಂಸ್ಕೃತಿಯನ್ನು ಕಟ್ಟಿಬೆಳೆಸಿದ್ದಾರೆ ಎಂದು ಕೆ.ಎಸ್‌. ಈಶ್ವರಪ್ಪ ಹೇಳಿದರು

click me!