* ಮೇಕೆದಾಟು ಕಾಂಗ್ರೆಸ್ ಪಾದಯಾತ್ರೆಗೆ ಕೊರೋನಾ ರೂಲ್ಸ್ ಅಡ್ಡಿ
* ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ ರಾಜ್ಯ ಸರ್ಕಾರ
* ಪಾದಯಾತ್ರೆ ಮಾಡಿಯೇ ತೀರಲು ಕಾಂಗ್ರೆಸ್ ಸಜ್ಜು
ಬೆಂಗಳೂರು, (ಜ.05): ಮೇಕೆದಾಟು ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ( Mekedatu Padayatre ) ಹಮ್ಮಿಕೊಂಡಿದೆ. ಆದ್ರೆ, ಇತ್ತ ಕೊರೋನಾ ಸೋಂಕು ಹೆಚ್ಚಾಗುತ್ತಿರುವುದಿರಂದ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಸೇರಿದಂತೆ ಟಫ್ ರೂಲ್ಸ್ ಜಾರಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾದಯಾತ್ರೆಗೆ (Congress padayatre) ಅಡ್ಡಿಯಾಗಿದ್ದು, ಉದ್ದೇಶ ಪೂರ್ವಕವಾಗಿಯೇ ಬಿಜೆಪಿ ಸರ್ಕಾರ ವೀಕೆಂಡ್ ಕರ್ಫ್ಯೂ(Weekend Curfew) ಜಾರಿ ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ.
Mekedatu Yojana : ಕಾಂಗ್ರೆಸ್ ಪಾದಯಾತ್ರೆಗೆ ಪೂರ್ವಭಾವಿ ಸಭೆ
ಕೊರೊನಾ ಟಫ್ ರೂಲ್ಸ್ (Corona Rules) ಜಾರಿಯಾದರೂ ನಾವು ಪಾದಯಾತ್ರೆ ಮಾಡೇ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ಅಲ್ಲದೇ ಇನ್ನು ಈ ಬಗ್ಗೆ ವಿರೋಧ ಪಕ್ಷದ ನಾಯಕರ ಸಿದ್ದರಾಮಯ್ಯ ಅವರು ಫೇಸ್‌ಬುಕ್‌ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದು, ಅದು ಈ ಕೆಳಗಿನಂತಿದೆ.
ಸಿದ್ದರಾಮಯ್ಯ ಬರೆದುಕೊಂಡಿದ್ದು ಹೀಗೆ
ನಾವು ಪಾದಯಾತ್ರೆ ಮಾಡಿದರೆ ಈ ಸರ್ಕಾರ ಜನರೆದುರು ಬೆತ್ತಲಾಗಲಿದೆ. ಹೀಗಾಗಿಯೇ ನಾವು ಪಾದಯಾತ್ರೆ ಮಾಡಬಾರದು ಎಂದು ಕೊವಿಡ್ ನಿರ್ಬಂಧಗಳೆಂಬ ಷಡ್ಯಂತ್ರ ರೂಪಿಸಿದ್ದಾರೆ.
ನಮ್ಮ ಪಾದಯಾತ್ರೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಕನಿಷ್ಠ ಅಂತರ ಕಾಪಾಡಿಕೊಂಡು, ಗ್ಲೌಸ್, ಸ್ಯಾನಿಟೈಸರ್ ಬಳಕೆ ಹೀಗೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಾರೆ. ನಾವು ಸರ್ಕಾರದ ನಿಯಮಗಳನ್ನು ಗೌರವಿಸಿ, ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಪಾದಯಾತ್ರೆ ಮಾಡುತ್ತೇವೆ. ಕೊರೊನಾ ಸೋಂಕು ತಡೆಗಟ್ಟುವುದೇ ರಾಜ್ಯ ಸರ್ಕಾರದ ನಿಜವಾದ ಉದ್ದೇಶವಾಗಿದ್ದರೆ ಮುಖ್ಯಮಂತ್ರಿಗಳು ನಿನ್ನೆ ರಾಮನಗರದಲ್ಲಿ, ಇಂದು ನಾಗಮಂಗಲದಲ್ಲಿ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರೇ? ಎಂದು ಪ್ರಶ್ನಿಸಿದರು.
ತಮ್ಮದೇ ಸರ್ಕಾರದ ನಿಯಮಗಳನ್ನು ಗೌರವಿಸದ ಮುಖ್ಯಮಂತ್ರಿಯನ್ನು ಬೇರೆ ಎಲ್ಲಾದರೂ ನೋಡಿದ್ದೀರ? ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ ನಲ್ಲಿ ಚುನಾವಣಾ ರ‌್ಯಾಲಿಯಲ್ಲಿ ಭಾಗವಹಿಸುವವರಿದ್ದರು, ರೈತರ ಪ್ರತಿಭಟನೆ ಇಂದಾಗಿ ಸಭೆ ರದ್ದಾಯಿತು. ಒಂದು ವೇಳೆ ಯಾವುದೇ ಅಡ್ಡಿ ಆಗದೆ ಇದ್ದರೆ ಅವರು ಸಭೆ ಮಾಡುತ್ತಿರಲಿಲ್ಲವೇ? ಬಿಜೆಪಿ ಅವರು ಪ್ರಚಾರ ಸಭೆ ಮಾಡಿದರೆ ಕೊರೊನಾ ಬರೋದಿಲ್ವಾ? ಎಂದು ಟಾಂಗ್ ಕೊಟ್ಟರು.
ರಾಜ್ಯದ ಯಾವೊಬ್ಬ ವ್ಯಕ್ತಿಗೂ ಕೊರೊನಾ ಬರಬಾರದು ಎಂಬುದು ನಮ್ಮ ಆಶಯವೂ ಹೌದು. ಆದರೆ ಸರ್ಕಾರ ನಿಬಂಧನೆಗಳನ್ನು ಹೇರಿರುವ ಹಿಂದೆ ಬೇರೆಯೇ ಉದ್ದೇಶ ಇದೆ. ಅವರ ಈ ಷಡ್ಯಂತ್ರವನ್ನು ಬಯಲು ಮಾಡುತ್ತೇವೆ ಎಂದಿದ್ದರೆ.
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮೇಕೆದಾಟು ಯೋಜನೆ ಜಾರಿಮಾಡಬಾರದು ಎಂದು ಪ್ರತಿಭಟನೆಗೆ ಕೂತಿರುವುದೇ ರಾಜ್ಯ ಮತ್ತು ಕೇಂದ್ರದ ಬಿಜೆಪಿ ನಾಯಕರ ಬೆಂಬಲದ ಮೇರೆಗೆ. ಬಿಜೆಪಿಯವರು ತಮಿಳುನಾಡಿನಲ್ಲಿ ತಮ್ಮ ಪಕ್ಷದ ಬಲವರ್ಧನೆ ರಾಜ್ಯದ ಹಿತಾಸಕ್ತಿ ಬಲಿಕೊಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಒಮ್ಮೆ ಮೇಕೆದಾಟು ವಿಚಾರ ಪ್ರಸ್ತಾಪ ಮಾಡಿದ್ದು ಬಿಟ್ಟರೆ ಬಿಜೆಪಿಯವರು ಈವರೆಗೆ ಎಲ್ಲಿಯೂ ಮೇಕೆದಾಟು ಬಗ್ಗೆ ಮಾತನಾಡಿಲ್ಲ, ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರಿಸಿಲ್ಲ. ಬಿಜೆಪಿಯವರು ಈ ಯೋಜನೆಯ ಬಗ್ಗೆ ತಮ್ಮ ನಿಲುವು ಏನೆಂದು ಮೊದಲು ಸ್ಪಷ್ಟಪಡಿಸಲಿ ಆಗ್ರಹಿಸಿದರು.
ಬೆಂಗಳೂರು ನಗರದ 30% ಜನರಿಗೆ ಈಗಲೂ ಕಾವೇರಿ ನೀರು ಸಿಗುತ್ತಿಲ್ಲ. ಸುಮಾರು ಎರಡೂವರೆ ಕೋಟಿ ಜನರಿಗೆ ಅನುಕೂಲವಾಗುವ ಇಂತಹ ಮಹತ್ವದ ಯೋಜನೆ ಜಾರಿ ಮಾಡದೆ ಸರ್ಕಾರ ಕಾಲಾಹರಣ ಮಾಡುತ್ತಿದೆ. ಇದನ್ನು ವಿರೋಧಿಸುವುದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯ. ಕೊರೊನಾ ಮೂರನೇ ಅಲೆಯ ನಿರೀಕ್ಷೆ ಇದ್ದರೂ ಸರಿಯಾದ ತಪಾಸಣೆ ನಡೆಸದೆ, ಅಂತರರಾಷ್ಟ್ರೀಯ ವಿಮಾನ ಸಂಚಾರ ತಡೆಯದೆ, ಮಾಸ್ಕ್ ಬಳಕೆ ಕಟ್ಟುನಿಟ್ಟು ಮಾಡದೆ ಈಗ ವಿರೋಧ ಪಕ್ಷವೊಂದು ತನ್ನ ಜವಾಬ್ದಾರಿ ನಿರ್ವಹಿಸಲು ಹೊರಟಾಗ ದುರುದ್ದೇಶದಿಂದ ನಿರ್ಬಂಧಗಳನ್ನು ಹೇರಿರುವುದು ಖಂಡನೀಯ. ನಾವು ಪಾದಯಾತ್ರೆ ಘೋಷಣೆ ಮಾಡಿದ್ದು ಸರ್ಕಾರ ಕೊವಿಡ್ ನಿರ್ಬಂಧಗಳನ್ನು ಹೇರಿದ ಮೇಲಲ್ಲ. ತಿಂಗಳ ಮೊದಲೇ ದಿನಾಂಕ ನಿಗದಿ ಮಾಡಿ, ಅಗತ್ಯ ತಯಾರಿ ಮಾಡಿಕೊಂಡಿದ್ದೇವೆ ಎಂದಿದ್ದಾರೆ.
ನಮ್ಮನ್ನೇ ಗುರಿಮಾಡಿ ನಿಯಮ ಹೇರಿದರೆ ನಾವು ಹೆದರಿ ಪಾದಯಾತ್ರೆ ಕೈಬಿಡೋಕಾಗುತ್ತಾ? 144 ಸೆಕ್ಷನ್ ಹೇರಿದರೆ ಐದಕ್ಕಿಂತ ಹೆಚ್ಚು ಮಂದಿ ಸೇರಬಾರದು ಎಂದಿದೆಯಲ್ವಾ? ನಾನು, ಡಿ.ಕೆ ಶಿವಕುಮಾರ್, ರಾಮಲಿಂಗಾರೆಡ್ಡಿ, ಧ್ರುವನಾರಾಯಣ ಸೇರಿ ನಾಲ್ಕೇ ಮಂದಿ ನಡೆದುಕೊಂಡು ಹೋಗ್ತೇವೆ. ಆಗಲೂ ನಮ್ಮನ್ನು ತಡೆಯುತ್ತಾರಾ? ಬಲಪ್ರಯೋಗ ಮಾಡಿದರೆ ನಮ್ಮ ಸಂವಿಧಾನದತ್ತ ಹಕ್ಕುಗಳನ್ನು ಉಲ್ಲಂಘನೆ ಮಾಡಿದ ಹಾಗಾಗುವುದಿಲ್ಲವೇ? ಎಂದು ಪ್ರಶ್ನಿಸಿದರು.