ಕಾಂಗ್ರೆಸ್ ಗ್ಯಾರಂಟಿ ತಾತ್ಕಾಲಿಕ, ಚುನಾವಣಾ ಗಿಮಿಕ್ಸ್‌: ಬಿ.ವೈ.ವಿಜಯೇಂದ್ರ

By Kannadaprabha News  |  First Published Apr 27, 2024, 9:26 AM IST

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ತಾತ್ಕಾಲಿಕವಾಗಿದ್ದು. ಮುಂದಿನ ದಿನಗಳಲ್ಲಿ ಈ ಯೋಜನೆಗಳು ಮುಂದುವರೆಯುವುದಿಲ್ಲ. ಕೇವಲ ಚುನಾವಣಾ ಗಿಮಿಕ್ಸ್‌ಗಾಗಿ ರೂಪಿತವಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. 


ಸೊರಬ (ಏ.27): ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ತಾತ್ಕಾಲಿಕವಾಗಿದ್ದು. ಮುಂದಿನ ದಿನಗಳಲ್ಲಿ ಈ ಯೋಜನೆಗಳು ಮುಂದುವರೆಯುವುದಿಲ್ಲ. ಕೇವಲ ಚುನಾವಣಾ ಗಿಮಿಕ್ಸ್‌ಗಾಗಿ ರೂಪಿತವಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಪಟ್ಟಣದ ಕೆಇಬಿ ಕಾಲೋನಿಯಿಂದ ತಾಲೂಕು ಬಿಜೆಪಿಯಿಂದ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿ ಉದ್ಘಾಟಿಸಿ ನಂತರ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಮತಯಾಚಿಸಿ ಮಾತನಾಡಿದರು. ಈಗಾಗಲೇ ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಚುನಾವಣೆ ನಂತರ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣ ಇಲ್ಲದ ದುಸ್ಥಿತಿ ಎದುರಾಗಲಿದೆ.

ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ. ಹಾಗಾಗಿ ಮತದಾರರು ಕಾಂಗ್ರೆಸ್‌ನ ಯಾವುದೇ ಗ್ಯಾರಂಟಿಗೆ ಮರುಳಾಗದೇ ದೇಶದ ಭವಿಷ್ಯದ ದೃಷ್ಠಿಯಿಂದ ಮತ್ತು ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಮೋದಿವರನ್ನು ಬೆಂಬಲಿಸುವ ಮೂಲಕ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಕರನೀಡಿದರು. ನುಡಿದಂತೆ ನಡೆದಿದ್ದೇವೆ ಎಂದು ಜಾಹೀರಾತು ನೀಡುವ ಕಾಂಗ್ರೆಸ್ ಸರ್ಕಾರ ರಾಜ್ಯದ ಬಡ ಜನತೆಗೆ ೧ ಕೆಜಿ ಅಕ್ಕಿ ಕೊಡಲು ಸಾಧ್ಯವಾಗಿಲ್ಲ. ಪಡಿತರಿಗೆ ಈಗ ನೀಡುತ್ತಿರುವ ೫ ಕೆಜಿ ಅಕ್ಕಿ ಕೇಂದ್ರ ಸರ್ಕಾರದ್ದು. ಎಸ್ಸಿ/ಎಸ್ಟಿಗೆ ನ್ಯಾಯುತವಾಗಿ ನೀಡಬೇಕಿದ್ದ ಅನುದಾನದ ಹಣ ಬೇರೆ ಯೋಜನೆಗಳಿಗೆ ಬಳಸಿ ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ವಂಚಿಸುತ್ತಿದೆ ಎಂದು ಆರೋಪಿಸಿದರು.

Latest Videos

undefined

ಗೆಲುವು ನನ್ನದೇ, 2ನೇ ಸ್ಥಾನಕ್ಕೆ ಬಿಜೆಪಿ-ಕಾಂಗ್ರೆಸ್ ಪೈಪೋಟಿ: ಕೆ.ಎಸ್‌.ಈಶ್ವರಪ್ಪ

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆಯೇ ಹೊರತು ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಂಡಿಲ್ಲ. ಸೊರಬ ತಾಲೂಕಿನಲ್ಲಿ ನೀರಾವರಿ ಯೋಜನೆಗಳಿಗೆ ಒತ್ತು ನೀಡಿದ್ದ ಯಡಿಯೂರಪ್ಪನವರು. ಜಿಲ್ಲೆ ಮತ್ತು ತಾಲೂಕು ಅಭೂತಪೂರ್ವ ಅಭಿವೃದ್ಧಿ ಕಾಣಲು ಬಿಜೆಪಿ ಸರ್ಕಾರವೇ ಬರಬೇಕಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಶಾಸಕರು ಪುಕ್ಕಟ್ಟೆ ಉದ್ದುದ್ದ ಭಾಷಣ ಬೀಗಿಯುತ್ತಾರೆಯೇ ಹೊರತು ಅಭಿವೃದ್ಧಿಯಲ್ಲಿ ಶೂನ್ಯ ಸಂಪಾದನೆಯಲ್ಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೆಸರು ಹೇಳದೇ ತರಾಟೆಗೆ ತೆಗೆದುಕೊಂಡರು.

ಕಳೆದ ೧೦ ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ದೃಷ್ಠಿಯಿಂದ ತಂದೆ ಯಡಿಯೂರಪ್ಪರನ್ನು ೧೦ ಹೆಜ್ಜೆ ಹಿಂದಿಕ್ಕಿ ಮುನ್ನಡೆದಿದ್ದಾರೆ. ಈಗಾಗಲೇ ವಿಮಾನ ನಿಲ್ದಾಣ ಪ್ರಾರಂಭಗೊಂಡಿದೆ. ಜಿಲ್ಲೆಗೆ ಪ್ರತಿನಿತ್ಯ ೨೦ ರಿಂದ ೨೫ ರೈಲುಗಳು ಆಗಮಿಸಿ, ನಿರ್ಗಮಿಸುತ್ತವೆ. ರಾಘವೇಂದ್ರ ಅವರು ರೈಲ್ವೆ ಯೋಜನೆಯನ್ನು ಶಿಕಾರಿಪುರದ ಮೂಲಕ ಆನವಟ್ಟಿ, ರಾಣೆಬೆನ್ನೂರು ತಾಲೂಕಿಗೆ ಜೋಡಿಸುವ ಕನಸ್ಸು ಹೊತ್ತಿದ್ದು, ಈ ಮೂಲಕ ವಾಣಿಜ್ಯ ವ್ಯವಹಾರಗಳು ನಡೆಯುತ್ತವೆ. ಕೈಗಾರಿಕೆಗಳು ಸ್ಥಾಪನೆಯಾಗುತ್ತವೆ. ಇದರಿಂದ ನಿರುದ್ಯೋಗ ಯುವಕರಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ. ಈಗಾಗಲೇ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಜೆಪಿ ೩ ಲಕ್ಷ ಅಂತರದ ಗೆಲುವು ಸಾಧಿಸುತ್ತದೆ. ಸೊರಬ ತಾಲೂಕಿನಲ್ಲಿ ಕನಿಷ್ಟ ೨೦ ರಿಂದ ೨೫ ಸಾವಿರ ಅಧಿಕ ಮತಗಳು ಚಲಾವಣೆಯಾಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಚ್.ಹಾಲಪ್ಪ ಮಾತನಾಡಿ, ಎಸ್.ಬಂಗಾರಪ್ಪ ಮಗಳಾಗಿ, ಡಾ.ರಾಜ್‌ಕುಮಾರ್ ಸೊಸೆಯಾಗಿ, ನಟ ಶಿವರಾಜ್‌ಕುಮಾರ್ ಪತ್ನಿಯಾಗಿ ಗೀತಾರನ್ನು ಗೌರವಿಸುತ್ತೇನೆ. ಡಾ.ರಾಜ್ ಕುಟುಂಬ ರಾಜಕಾರಣಕ್ಕೆ ಬಂದ ಇತಿಹಾಸವಿಲ್ಲ. ಆದರೆ ರಾಜಕೀಯದ ಪರಿಜ್ಞಾನ ಇಲ್ಲದ, ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲದ, ಸಾಮಾನ್ಯ ಜನರ ನಾಡಿ ಮಿಡಿತ ಗೊತ್ತಿಲ್ಲದ ಹಾಗೆಯೇ ತಾಲೂಕಿನಲ್ಲಿ ಎಷ್ಟು ಹೋಬಳಿ ಅಥವಾ ಕಾಂಗ್ರೆಸ್‌ನ ಅಧ್ಯಕ್ಷರು ಯಾರು ಎನ್ನುವ ಪರಿವೇ ಇಲ್ಲದ ಗೀತಾರವರು ಕಾಂಗ್ರೆಸ್ ಅಭ್ಯರ್ಥಿಯಾಗಿರುವುದು ಆ ಪಕ್ಷದ ದುಸ್ಥಿತಿ ಎತ್ತಿ ತೋರಿಸುತ್ತದೆ. ಆದ್ದರಿಂದ ಕಾಂಗ್ರೆಸ್ ಸೋಲು ಗ್ಯಾರಂಟಿ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವು ನಿಶ್ಚಿತ. ಕೇಂದ್ರದಲ್ಲಿ ಸಚಿವರಾಗುವುದು ಖಚಿತ ಎಂದರು.

ಬಳ್ಳಾರಿಯನ್ನು ಜೀನ್ಸ್‌ ರಾಜಧಾನಿ ಮಾಡುವ ಮಾತಿಗೆ ಬದ್ಧ: ರಾಹುಲ್ ಗಾಂಧಿ

ಇದಕ್ಕೂ ಮೊದಲು ಶಿರಾಳಕೊಪ್ಪ ರಸ್ತೆಯ ಮೆಸ್ಕಾಂ ಕಚೇರಿ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ಶ್ರೀ ರಂಗನಾಥ ದೇವಸ್ಥಾನದ ವರೆಗೆ ಬೈಕ್ ರ‍್ಯಾಲಿ ನಡೆಸಲಾಯಿತು. ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲುಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್, ಮುಖಂಡರಾದ ಪಾಣಿ ರಾಜಪ್ಪ, ಎ.ಎಲ್. ಅರವಿಂದ, ಗೀತಾ ಮಲ್ಲಿಕಾರ್ಜುನ, ಜಾನಕಪ್ಪ ಯಲಸಿ, ಸಂಜಯಗೌಡ, ಹರೀಶ್, ರವಿಕುಮಾರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಹೊಳಿಯಮ್ಮ, ಎಂ.ಆರ್. ಪಾಟೀಲ್ ಮೊದಲಾದವರು ಹಾಜರಿದ್ದರು.

click me!