ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿದ್ದು, ಗ್ಯಾರಂಟಿಯೇ ಬೆಲೆ ಏರಿಕೆಗೆ ಮೂಲ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದ್ದಾರೆ.
ಬೆಂಗಳೂರು (ಜೂ.23): ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿದ್ದು, ಗ್ಯಾರಂಟಿಯೇ ಬೆಲೆ ಏರಿಕೆಗೆ ಮೂಲ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದ್ದಾರೆ. ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್‌ನ ಸಂಸದರು, ಸಚಿವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಸೆಯೇ ದುಃಖಕ್ಕೆ ಮೂಲ ಎಂದು ಗೌತಮ ಬುದ್ಧ ಹೇಳಿದ್ದಂತೆ ಗ್ಯಾರಂಟಿಗಳಿಗೆ ಹಣ ಹೊಂದಿಸುವುದೇ ಬೆಲೆ ಏರಿಕೆಗೆ ಕಾರಣ. ಗ್ಯಾರಂಟಿಗಳಿಗೆ ಹಣ ಹೊಂದಿಸುವುದಕ್ಕಾಗಿ ರಾಜ್ಯ ಸರ್ಕಾರವು ಜನರನ್ನು ದೋಚುತ್ತಿದೆ. ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ.
ಅಂತೆಯೇ ಪೆಟ್ರೋಲ್, ಡೀಸೆಲ್ ಬೆಲೆಯೂ ಹೆಚ್ಚಳ ಮಾಡಲಾಗಿದೆ. ಬೆಲೆ ಏರಿಕೆಗೆ ಗ್ಯಾರಂಟಿಗಳೇ ಕಾರಣ ಎಂದು ವಾಗ್ದಾಳಿ ನಡೆಸಿದರು. 2006ರಲ್ಲಿ ಬಿಜೆಪಿ-ಜೆಡಿಎಸ್ ಸರ್ಕಾರ ರಚನೆಯಾಗಿದ್ದರಿಂದಲೇ ಈ ನಾಡಿಗೆ ಕುಮಾರಸ್ವಾಮಿ ಪರಿಚಯವಾದರು. ಆಗ ನನಗಿಂತ ಹಿರಿಯರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನಗೆ ಸಹಕಾರ ನೀಡಿ, ಮುಕ್ತವಾಗಿ ಅಧಿಕಾರ ನಡೆಸಲು ಅವಕಾಶ ಕೊಟ್ಟಿದ್ದರು. ಅಂದು ಮೈತ್ರಿ ಮುಂದುವರೆಸಬೇಕು ಎನ್ನುವುದು ಸ್ವಂತ ಇಚ್ಛೆಯಾಗಿತ್ತು. ಆದರೆ, ಕೆಲವರ ಕುತಂತ್ರದಿಂದ ಅಧಿಕಾರ ಹಸ್ತಾಂತರ ಆಗಲಿಲ್ಲ. ಅದು ನನ್ನ ತಪ್ಪಲ್ಲ. ನಾವು ಆವತ್ತು ಅಧಿಕಾರದಲ್ಲಿ ಮುಂದುವರಿದಿದ್ದರೆ ಇವತ್ತು ಕಾಂಗ್ರೆಸ್ ಇರುತ್ತಿರಲಿಲ್ಲ. ಸಂಪೂರ್ಣ ನೆಲಕಚ್ಚಿ ಹೋಗುತ್ತಿತ್ತು ಎಂದರು.
ಎಚ್‌ಡಿಕೆಗೆ ಮುಖಂಡರಿಂದ ಅಭಿನಂದನೆ: ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ರಾಜ್ಯದ ಜೆಡಿಎಸ್ ಅಧ್ಯಕ್ಷ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗುಳೇದಗುಡ್ಡ ಭಾಗದ ಅವರ ಅನೇಕ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಗಿ ಅಭಿನಂದನೆಗಳನ್ನು ಸಲ್ಲಿಸಿದರು. ಅಲ್ಲದೇ, ಗುಳೇದಗುಡ್ಡ ಖಣದಿಂದ ತಯಾರಿಸಿದ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ದಕ್ಷಿಣ ಭಾರತದಲ್ಲೇ ಕರ್ನಾಟಕ ಬಿಜೆಪಿ ಭದ್ರಕೋಟೆ: ಬಿ.ವೈ.ವಿಜಯೇಂದ್ರ
ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಕುಮಾರಸ್ವಾಮಿಯವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ಪಟ್ಟಣದ ಪುರಸಭೆ ಸದಸ್ಯ ಸಂತೋಷ ನಾಯನೇಗಲಿ, ಶರಣಪ್ಪ ಮಾವಿನಮರದ, ಪ್ರಕಾಶ ಕೋಟಿ, ನಂದೆಪ್ಪಣ್ಣ ನಂದಿಕೇಶ್ವರ, ಸಮರ್ಥ ಜಾಲಗೇರಿ, ತೋಪೇಶ ಬದಾಮಿ, ಪ್ರಕಾಶ ಕಳ್ಳಿಗುಡ್ಡ, ಹುಚ್ಚೇಶ ಹದ್ದನ್ನವರ್, ಬಸವರಾಜ ಚೊಳಚಗುಡ್ಡ, ಮಲ್ಲು ಹಡಪದ, ನಂದು ಪಾಟೀಲ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಭಾಗವಸಿದ್ದರು.