ಬಿಬಿಎಂಪಿ ಚುನಾವಣೆ ತಂತ್ರಗಾರಿಕೆಗೆ ಕಾಂಗ್ರೆಸ್‌ ಸಮಿತಿ: ಡಿ.ಕೆ.ಶಿವಕುಮಾರ್‌

By Kannadaprabha News  |  First Published Jun 23, 2024, 5:36 PM IST

ಬೆಂಗಳೂರಿನ ಸಮಸ್ಯೆಗಳ ಪತ್ತೆ ಮತ್ತು ನಿವಾರಣೆ ಹಾಗೂ ಬಿಬಿಎಂಪಿ ಚುನಾವಣೆಗೆ ತಯಾರಿ ನಡೆಸುವ ಸಲುವಾಗಿ ಬಿಬಿಎಂಪಿಯ ಮಾಜಿ ಮೇಯರ್‌, ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. 


ಬೆಂಗಳೂರು (ಜೂ.23): ಬೆಂಗಳೂರಿನ ಸಮಸ್ಯೆಗಳ ಪತ್ತೆ ಮತ್ತು ನಿವಾರಣೆ ಹಾಗೂ ಬಿಬಿಎಂಪಿ ಚುನಾವಣೆಗೆ ತಯಾರಿ ನಡೆಸುವ ಸಲುವಾಗಿ ಬಿಬಿಎಂಪಿಯ ಮಾಜಿ ಮೇಯರ್‌, ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಭವನದಲ್ಲಿ ಬಿಬಿಎಂಪಿ ಮಾಜಿ ಮೇಯರ್‌, ಮಾಜಿ ಉಪಮೇಯರ್‌ ಹಾಗೂ ಆಡಳಿತ ಮತ್ತು ವಿರೋಧ ಪಕ್ಷದ ಮಾಜಿ ಅಧ್ಯಕ್ಷರ ಜತೆಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಸಮಸ್ಯೆಗಳು, ಜನರ ಮನಸ್ಥಿತಿಯನ್ನು ಅರಿಯುವ ಸಲುವಾಗಿ ಬಿಬಿಎಂಪಿ ಮಾಜಿ ಮೇಯರ್‌, ಮಾಜಿ ಉಪಮೇಯರ್‌ ಸೇರಿದಂತೆ ಪ್ರಮುಖರ ಜತೆಗೆ ಸಭೆ ನಡೆಸಲಾಗಿದೆ. 

ಬೆಂಗಳೂರಿನ ಮೂಲ ಸಮಸ್ಯೆಗಳ ಕುರಿತಂತೆ ಚರ್ಚೆ ಮಾಡಲಾಗಿದೆ. ಜತೆಗೆ ಬಿಬಿಎಂಪಿ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸುವ ವಿಷಯಗಳ ಬಗ್ಗೆಯೂ ಮಾತನಾಡಲಾಗಿದೆ. ಈ ವೇಳೆ ಮಾಜಿ ಮೇಯರ್‌, ಸದಸ್ಯರು ಹಲವು ವಿಚಾರಗಳನ್ನು ತಿಳಿಸಿದ್ದಾರೆ ಎಂದರು. ಸಾಮಾನ್ಯವಾಗಿ ಕಸ, ರಸ್ತೆ ಗುಂಡಿಗಳಂತಹ ಸಮಸ್ಯೆಗಳ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಾಗುತ್ತಿದೆ. ಅದರ ಬದಲು ಬ್ರ್ಯಾಂಡ್‌ ಬೆಂಗಳೂರು ಅಡಿಯಲ್ಲಿ ಕೈಗೊಂಡಿರುವ ಮತ್ತು ಕೈಗೊಳ್ಳುವ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿ ಹಾಗೂ ಮೂಲ ಸಮಸ್ಯೆಗಳನ್ನು ನಿವಾರಿಸಿ ಚುನಾವಣೆ ಎದುರಿಸುವ ಬಗ್ಗೆ ಚರ್ಚೆ ಮಾಡಲಾಗಿದೆ. 

Tap to resize

Latest Videos

ಸಿದ್ದರಾಮಯ್ಯನವರೇ ತೈಲದರ ಏರಿಕೆ ಆದೇಶ ಹಿಂಪಡೆಯಿರಿ: ಶಾಸಕ ಆರಗ ಜ್ಞಾನೇಂದ್ರ

ಅಲ್ಲದೆ, ನಗರ ಸಮಸ್ಯೆಗಳ ಬಗ್ಗೆ ಅರಿತು, ಅದಕ್ಕೆ ಪರಿಹಾರ ಕಂಡು ಕೊಳ್ಳುವ ಕುರಿತಾಗಿ ಹಾಗೂ ಚುನಾವಣೆ ಎದುರಿಸುವ ತಂತ್ರದ ಕುರಿತಂತೆ ಅಧ್ಯಯನ ನಡೆಸಿ, ವರದಿ ನೀಡಲು ಬಿಬಿಎಂಪಿ ಮಾಜಿ ಮೇಯರ್‌ಗಳು ಹಾಗೂ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗುವುದು. ಸಮಿತಿಗಳು ನೀಡುವ ವರದಿಯನ್ನಾಧರಿಸಿ ಮುಖ್ಯಮಂತ್ರಿಗಳು, ಬೆಂಗಳೂರಿನ ಸಚಿವರು, ಶಾಸಕರು ಸಭೆ ನಡೆಸಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ಮಾಡಿ ನಿರ್ಧಾರಕ್ಕೆ ಬರುತ್ತೇವೆ ಎಂದು ತಿಳಿಸಿದರು.

ಬಿಬಿಎಂಪಿ ಚುನಾವಣೆ ನಡೆಸಲು ಈಗಾಗಲೇ ನಿರ್ಧರಿಸಿದ್ದೇವೆ. ಅದಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಗಳನ್ನು ಆರಂಭಿಸಲೂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಚುನಾವಣೆಯನ್ನು ಮಾಡದಿರಲು ಸಾಧ್ಯವೇಯಿಲ್ಲ. ಸರ್ಕಾರವೂ ಚುನಾವಣೆ ಪರವಾಗಿಯೇ ಇದೆ. ಅದಕ್ಕಾಗಿಯೇ 225 ವಾರ್ಡ್‌ಗಳಿಗೆ ಮೀಸಲಾತಿ ನಿಗದಿ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಡಾ। ಜಿ.ಸಿ.ಚಂದ್ರಶೇಖರ್, ಮಂಜುನಾಥ್ ಭಂಡಾರಿ, ಮಾಜಿ ಮೇಯರ್‌ಗಳಾದ ರಾಮಚಂದ್ರಪ್ಪ, ಪಿ.ಆರ್‌.ರಮೇಶ್‌, ಪದ್ಮಾವತಿ, ಸಂಪತ್‌ರಾಜ್‌ ಇದ್ದರು.

ಸರ್ಕಾರದ ವ್ಯವಸ್ಥೆಯಲ್ಲಿ ಮಾದಿಗ ಸಮುದಾಯಕ್ಕೆ ಅವಕಾಶ ಸಿಗಬೇಕು: ಸಂಸದ ಬೊಮ್ಮಾಯಿ

ಸಭೆಯಲ್ಲಿ ಬಿಬಿಎಂಪಿ ವಿಭಜನೆ ಕುರಿತಂತೆ ಚರ್ಚೆ ನಡೆಸಲಾಗಿದೆಯಾದರೂ, ಬಹುತೇಕ ಮಾಜಿ ಮೇಯರ್‌, ಉಪಮೇಯರ್‌ ಮತ್ತು ಸದಸ್ಯರು ಚುನಾವಣೆ ನಡೆಸಿದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಬಿಬಿಎಂಪಿ ವಿಭಜನೆ ಬಗ್ಗೆ ಸಾರ್ವಜನಿಕ ವಲಯದಲ್ಲೂ ಆಕ್ಷೇಪಗಳು ಕೇಳಿಬರುತ್ತಿವೆ. ಪ್ರಮುಖವಾಗಿ ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಒಡೆಯಲಾಗುತ್ತಿದೆ ಎಂದು ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ವಿಭಜನೆಗಿಂತ ಬಿಬಿಎಂಪಿ ಚುನಾವಣೆ ನಡೆಸಿದರೆ, ಪಕ್ಷದ ಬಗ್ಗೆ ಜನರ ವಿಶ್ವಾಸ ಹೆಚ್ಚಲಿದೆ ಎಂದು ಡಿ.ಕೆ.ಶಿವಕುಮಾರ್‌ ಅವರಿಗೆ ತಿಳಿಸಿದರು.ಬಿಬಿಎಂಪಿ ವಿಭಜನೆ ಮಾಡುವ ಬಗ್ಗೆ ಚಿಂತನೆಯಿದೆಯಷ್ಟೇ. ಇನ್ನೂ ಆ ಬಗ್ಗೆ ನಿರ್ಧರಿಸಿಲ್ಲ. ಸುಪ್ರೀಂಕೋರ್ಟ್‌ ಅದಕ್ಕೆ ಒಪ್ಪಿದರಷ್ಟೇ ಆ ಪ್ರಕ್ರಿಯೆ ನಡೆಸಲಾಗುವುದು. ಉಳಿದಂತೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
-ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ರಾಜ್ಯಾಧ್ಯಕ್ಷ

click me!