ರಾಜ್ಯ ಸರ್ಕಾರ ಮುಸಲ್ಮಾನರ ತುಷ್ಟೀಕರಣಕ್ಕೆ ಮುಂದಾಗಿರುವುದರಿಂದ ರಾಜ್ಯದ ಜನತೆ ತೊಂದರೆ ಅನುಭವಿಸು ವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಚಿಕ್ಕಮಗಳೂರು (ಮೇ.27): ರಾಜ್ಯ ಸರ್ಕಾರ ಮುಸಲ್ಮಾನರ ತುಷ್ಟೀಕರಣಕ್ಕೆ ಮುಂದಾಗಿರುವುದರಿಂದ ರಾಜ್ಯದ ಜನತೆ ತೊಂದರೆ ಅನುಭವಿಸು ವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಪಾಕ್ ಪರ ಆರಂಭವಾದ ಘೋಷಣೆ, ನಂತರ ದಲ್ಲಿ ಲವ್ ಜಿಹಾದ್ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕೊಲೆ ಪ್ರಕರಣ ನಡೆದಿದ್ದರೆ, ಚನ್ನಗಿರಿಯಲ್ಲಿ ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಹಲವು ಮಂದಿ ಪೊಲೀಸರಿಗೆ ಗಾಯಗಳಾಗಿವೆ.
ಇದು ಸರಿಯೇ ಎಂದು ರಾಜ್ಯದ ಜನ ಗೃಹ ಸಚಿವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಈ ರೀತಿ ಮೃದು ಧೋರಣೆ ಕಾನೂನು ಕುಸಿಯಲು ಕಾರಣ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದು ವರ್ಷವಾಗಿದ್ದು ಸಾಧನೆ ಶೂನ್ಯವಾಗಿದೆ. ಅಭಿವೃದ್ಧಿ ಕೆಲಸಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ರಾಜ್ಯದ ಜನತೆ ಭ್ರಮನಿರಸನಗೊಂಡಿದ್ದಾರೆ. ಅಭಿವೃದ್ಧಿ ಕೆಲಸಕ್ಕಾಗಿ ಮುಖ್ಯ ಮಂತ್ರಿಗಳು ಯಾವುದೇ ಗುದ್ದಲಿ ಪೂಜೆ ನೆರವೇರಿಸಿಲ್ಲ. ಗ್ಯಾರಂಟಿ ಗುಂಗಿನಲ್ಲೇ ಮುಳುಗಿದ್ದಾರೆಂದು ಟೀಕಿಸಿದರು. ಲೋಕಸಭಾ ಚುನಾವಣೆ ಫಲಿತಾಂಶ ಬಂದ ಮೇಲೆ ರಾಜ್ಯ ಸರ್ಕಾರಕ್ಕೆ ಅರಿವಾಗಲಿದೆ. ರಾಜ್ಯ ಸರ್ಕಾರ ಎನ್.ಇ.ಪಿ. ರದ್ದುಪಡಿಸಿದ್ದು, ಎಸ್‌ಇಪಿ ಜಾರಿಗೊಳಿಸುವ ಮೂಲಕ ಶಿಕ್ಷಣ ಕ್ಷೇತ್ರ ಹದಗೆಡಿಸಿದ್ದಾರೆಂದು ಕಿಡಿಕಾರಿದರು.
undefined
ವಿಧಾನಪರಿಷತ್ ಚುನಾವಣೆಯಲ್ಲಿ 4 ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸಿದ್ದರೆ, ಜೆಡಿಎಸ್ 2 ಕ್ಷೇತ್ರದಲ್ಲಿ ಕಣದಲ್ಲಿದೆ. ಈ ಎಲ್ಲಾ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಈಗಾಗಲೇ ದಾವಣಗೆರೆ, ಚಿತ್ರದುರ್ಗ, ತುಮಕೂರು, ಮೈಸೂರಿನಲ್ಲಿ ಪ್ರಚಾರ ಕಾರ್ಯ ನಡೆಸಿದ್ದೇನೆ. ಕೆಲವು ಸಮಸ್ಯೆಗಳನ್ನು ಬದಿಗೊತ್ತಿ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾರೆಂದು ತಿಳಿಸಿದರು. ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಆಂತರಿಕ ಸಮೀಕ್ಷೆ ನಡೆಸಿಲ್ಲ, ಅದರ ಅವಶ್ಯಕತೆಯೂ ಇಲ್ಲ. ಮೋದಿ ಹೆಸರಿನ ಮೇಲೆ ವಿಶ್ವಾಸ ಇದೆ. ರಾಜ್ಯದಲ್ಲಿ 28 ಕ್ಕೆ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಚನ್ನಗಿರಿ ಠಾಣೆ, ಸಿಬ್ಬಂದಿ ಮೇಲೆ ದಾಳಿ ಕಾಂಗ್ರೆಸ್ ಆಡಳಿತ ಫಲ: ವಿಜಯೇಂದ್ರ ಆರೋಪ
ರಾಜ್ಯ ಸರ್ಕಾರದ ಆಡಳಿತ ವಿರೋಧಿಸಿ ಬೆಂಗಳೂರಿನಲ್ಲಿ ಮೇ. 28 ರಂದು ಬೃಹತ್ ಹೋರಾಟ ಹಮ್ಮಿಕೊಂಡಿದ್ದೇವೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಪಶುಸಂಗೋಪನಾ ಇಲಾಖೆಗೆ ಒತ್ತುಕೊಟ್ಟಿದ್ದರು. ಕಾಂಗ್ರೆಸ್ ಸರ್ಕಾರ ರೈತರಿಗೆ ನೀಡಬೇಕಿರುವ 28 ಕೋಟಿ ರು. ಬಾಕಿ ಇದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಮಾಜಿ ಸಚಿವರಾದ ಸಿ.ಟಿ.ರವಿ, ವಿ.ಸುನಿಲ್ ಕುಮಾರ್, ಡಿ.ಎನ್.ಜೀವರಾಜ್, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯ ಅರುಣ್, ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿ, ನೈರುತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ, ಮಾಜಿ ಶಾಸಕ ಡಿ.ಎಸ್.ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜಶೆಟ್ಟಿ, ಮಾಜಿ ಅಧ್ಯಕ್ಷ ಎಚ್.ಸಿ. ಕಲ್ಮರುಡಪ್ಪ ಉಪಸ್ಥಿತರಿದ್ದರು.