
ಸೊರಬ (ಜೂ.02): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾದರೂ ಒಂದೇ ಒಂದು ಗುದ್ದಲಿಪೂಜೆ ನರೆವೇರಿಸದೇ ಜಾಹೀರಾತು ಮತ್ತು ಗ್ಯಾರಂಟಿ ಯೋಜನೆಗಳಿಂದ ನಡೆಯುತ್ತಿರುವ ಸರ್ಕಾರದಿಂದ ರಾಜ್ಯಕ್ಕೆ ದರಿದ್ರ ಹಿಡಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ವಿಧಾನ ಪರಿಷತ್ ಚುನಾವಣೆ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಘಟ ನಾಯಕರ ಸಭೆಯಲ್ಲಿ ಮಾತನಾಡಿ ಕಾಂಗ್ರೆಸ್ ನಾಯಕರು ಲೋಕಸಭಾ ಚುನಾವಣೆಯಲ್ಲಿ ೨೦ ಸ್ಥಾನಗಳ ಗೆಲ್ಲುವ ಹಗಲು ಕನಸು ಕಾಣುತ್ತಿದ್ದಾರೆ.
ಆದರೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಲೋಕಸಭಾ ಚುನಾವಣೆ ಫಲಿತಾಂಶ ಬಳಿಕ ಹೊಸ ದಾಖಲೆ ಸೃಷ್ಟಿಯಾಗುತ್ತದೆ. ಯಾವುದೇ ಅಭಿವೃದ್ಧಿ ಕಾರ್ಯಗಳ ಮಾಡದೇ ಗೆದ್ದೇ ಬಿಟ್ಟಿದ್ದೇವೆ ಎಂಬ ಅಹಂನಲ್ಲಿರುವ ಕಾಂಗ್ರೆಸ್‌ಗೆ ಕನಿಷ್ಠ ಸ್ಥಾನಗಳು ಲಭ್ಯವಾಗಲ್ಲ. ಸರ್ಕಾರ ದಿನದಿಂದ ದಿನಕ್ಕೆ ತನ್ನ ಆಯಸ್ಸು ಕಳೆದುಕೊಳ್ಳುತ್ತಿದೆ ಎಂದು ಲೇವಡಿ ಮಾಡಿದ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿ.ವೈ.ರಾಘವೇಂದ್ರ 3 ಲಕ್ಷ ಅಧಿಕ ಮತಗಳಿಂದ ಜಯಗಳಿಸುತ್ತಾರೆ. ಸೊರಬ ವಿಧಾನಸಭಾ ಕ್ಷೇತ್ರದಿಂದ ೧೮ರಿಂದ ೨೦ ಸಾವಿರ ಮತಗಳ ಲೀಡ್ ಪಡೆಯಲಿದ್ದಾರೆ ಎಂದರು.
ಪರಿಷತ್‌ನಲ್ಲೂ ಗೆಲುವು: ನೈಋತ್ಯ ಪದವೀಧರ ಕ್ಷೇತ್ರದಿಂದ ಡಾ.ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಭೋಜೇಗೌಡ ಗೆಲುವು ನಿಶ್ಚಿತ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಘುಪತಿ ಭಟ್ರಿಗೆ ಪಕ್ಷ ಎಲ್ಲವನ್ನೂ ನೀಡಿದೆ. ಹಾಗಾಗಿ ಪಕ್ಷಕ್ಕೆ ಋಣಿಯಾಗಿರಬೇಕಿತ್ತು. ಬಿಜೆಪಿ ಹಿಂದಿಗಿಂತಲೂ ಅಧಿಕ ಮತಗಳ ಅಂತರದಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸಿ: ವಿಜಯೇಂದ್ರ ಆಗ್ರಹ
ಸಭೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಹಾಲಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ ತಲಕಾಲಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಪ್ರಕಾಶ ಅಗಸನಹಳ್ಳಿ, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಸುಧಾ ಶಿವಪ್ರಸಾದ್, ಪುರಸಭಾ ಸದಸ್ಯರಾದ ಎಂ.ಡಿ. ಉಮೇಶ್, ಮಧುರಾಯ ಜಿ. ಶೇಟ್, ನಟರಾಜ ಉಪ್ಪಿನ, ಜಯಲಕ್ಷ್ಮಿ, ಮುಖಂಡರಾದ ದೇವೇಂದ್ರಪ್ಪ ಚನ್ನಾಪುರ, ಗುರುಕುಮಾರ ಪಾಟೀಲ್, ಚನ್ನವೀರಪ್ಪ, ವಿನಾಯಕ ತವನಂದಿ, ಅಶೋಕ್ ಶೇಟ್, ಆಶಿಕ್ ನಾಗಪ್ಪ ಮುಂತಾದವರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.